ಕಾರ್ತಿಕ ಮಾಸ ಸಮೀಪಿಸುತ್ತಿದೆ. ಈ ಮಾಸದ ಸೋಮವಾರಗಳಂದು ಶಿವಧ್ಯಾನ, ಶಿವ ಸ್ಮರಣೆ – ಪೂಜೆಗಳು ಉತ್ತಮವೆಂದು ನಂಬಿಕೆ ಇದೆ. ಈ ನಿಮಿತ್ತ ಶಿವ ಸ್ತೋತ್ರಗಳನ್ನು ಕಲೆಹಾಕಿ ಅಭ್ಯಾಸ ಮಾಡುವುದು ಒಳಿತಲ್ಲವೆ?
ಓಂಕಾರಂ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ |
ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ ||1||
ಭಾವಾರ್ಥ: ಅಕಾರ – ಉಕಾರ – ಮಕಾರ ಹಾಗೂ ಅನುಸ್ವಾರದಿಂದ ಕೂಡಿರುವ ಓಂಕಾರವನ್ನು ಯೋಗಿಗಳು ಅನುದಿನವೂ ಧ್ಯಾನಿವರು. ಬೇಡಿದ್ದನ್ನು ದಯಪಾಲಿಸುವ ಹಾಗೂ ಮೋಕ್ಷವನ್ನು ಕರುಣಿಸುವ ‘ಓಂ’ಕಾರ ಸ್ವರೂಪಿ (ಶಿವ)ಗೆ ನನ್ನ ನಮಸ್ಕಾರಗಳು.
ನಮಂತಿ ಋಷಯೋ ದೇವಾ ನಮಂತ್ಯಪ್ಸರಸಾಂಗಣಾಃ |
ನರಾ ನಮಂತಿ ದೇವೇಶಂ ನಕಾರಾಯ ನಮೋ ನಮಃ ||2||
ಭಾವಾರ್ಥ: ಯಾವ ಮಹಾದೇವನಿಗೆ ಋಷಿಗಳೂ ಅಪ್ಸರೆಯರೂ ಗಣಗಳೂ ಮಾನವರೂ ನಮಿಸುತ್ತಾರೋ ಅಂತಹಾ ‘ನ’ಕಾರ ಸ್ವರೂಪಿಗೆ ನನ್ನ ನಮಸ್ಕಾರಗಳು.
ಮಹಾದೇವಂ ಮಹಾತ್ಮಾನಂ ಮಹಾಧ್ಯಾನ ಪರಾಯಣಮ್ |
ಮಹಾಪಾಪಹರಂ ದೇವಂ ಮಕಾರಾಯ ನಮೋನಮಃ ||3||
ಭಾವಾರ್ಥ: ಮಹಾದೇವನೂ, ಮಹಾತ್ಮನೂ, ಮಹಾಧ್ಯಾನದಲ್ಲಿ ನಿರತನಾದವನೂ ಮಹಾಪಾಪಗಳನ್ನು ಪರಿಹರಿಸುವವನೂ ‘ಮ’ಕಾರ ಸ್ವರೂಪಿಯೂ ಆಗಿರುವ ಮಹಾದೇವನಿಗೆ ನನ್ನ ನಮಸ್ಕಾರಗಳು.
ಶಿವಂ ಶಾಂತಂ ಜಗನ್ನಾಥಂ ಲೋಕಾನುಗ್ರಹ ಕಾರಕಂ |
ಶಿವಮೇಕಪದಂ ನಿತ್ಯಂ ಶಿಕಾರಾಯ ನಮೋ ನಮಃ ||4||
ಭಾವಾರ್ಥ: ಮಂಗಲದಾಯಕನೂ, ಶಾಂತ ಸ್ವರೂಪಿಯೂ, ಜಗತ್ತಿನ ದೊರೆಯೂ, ಲೋಕಕ್ಕೆ ಅನುಗ್ರಹ ನೀಡುವ ದಯಾರೂಪಿಯೂ, ನಿತ್ಯ ಮಂಗಲದಾಯಕವಾಗಿರುವ ಶಿವವೆಂಬ ಒಂದೇ ಶಬ್ದದವನೂ ಆಗಿರುವ ‘ಶಿ’ಕಾರ ಸ್ವರೂಪಿಗೆ ನನ್ನ ನಮಸ್ಕಾರಗಳು.
ವಾಹನಂ ವೃಷಭೋ ಯಸ್ಯ ವಾಸುಕಿಃ ಕಂಠಭೂಷಣಮ್ |
ವಾಮೇ ಶಕ್ತಿಧರಂ ದೇವಂ ವಕಾರಾಯ ನಮೋ ನಮಃ ||5||
ಭಾವಾರ್ಥ: ಯಾರ ವಾಹನವು ವೃಷಭವಾಗಿದೆಯೋ, ಯಾರ ಕಂಠಮಾಲೆಯಾಗಿ ವಾಸುಕಿಯು ಅಲಂಕರಿಸಿದೆಯೋ, ಯಾರ ವಾಮಭಾಗದಲ್ಲಿ ಶಕ್ತಿ ದೇವತೆ ನೆಲೆಯಾಗಿರುವಳೋ ಅಂತಹಾ ‘ವ’ಕಾರ ಸ್ವರೂಪಿಗೆ ನನ್ನ ನಮಸ್ಕಾರಗಳು.
ಯತ್ರ ಯತ್ರ ಸ್ಥಿತೋ ದೇವಃ ಸರ್ವ ವ್ಯಾಪೀ ಮಹೇಶ್ವರಃ |
ಯೋ ಗುರುಃ ಸರ್ವ ದೇವಾನಾಂ ಯಕಾರಾಯ ನಮೋ ನಮಃ ||6||
ಭಾವಾರ್ಥ: ಯಾವ ದೇವರು ಸರ್ವ ವ್ಯಾಪಿಯಾಗಿ ಎಲ್ಲೆಲ್ಲೂ ಇರುವನೋ ಆ ದೇವ ಮಹೇಶ್ವರನು ಸಮಸ್ತ ದೇವತೆಗಳಿಗೂ ಗುರುವಾಗಿರುವನು. ಆಂತಹಾ ‘ಯ’ಕಾರ ಸ್ವರೂಪಿಗೆ ನನ್ನ ನಮಸ್ಕಾರಗಳು.
ಷಡಕ್ಷರಮಿದಂ ಸ್ತೋತ್ರಂ ಯಃ ಪಠೇತ್ ಶಿವ ಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||7||
ಭಾವಾರ್ಥ: ಯಾರು ಶಿವನ ಸನ್ನಿಧಿಯಲ್ಲಿ ಈ ಪುಣ್ಯದಾಯಕವಾದ ಶಿವಷಡಕ್ಷರಿ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವರೋ ಅವರು ಶಿವಲೋಕವನ್ನು ಸೇರಿ ಶಿವನೊಡನೆ ಆನಂದವನ್ನು ಅನುಭವಿಸುವರು.
Thank you very much for sharing this beautiful post about the SHIVA.
LikeLike