ದೀಪಾವಳಿ : ಹಬ್ಬಕ್ಕೊಂದು ಕಥೆ, ಕತೆಗೊಂದು ಹಬ್ಬ!

ನಮ್ಮ ದೇಶದಲ್ಲಿ ಹಬ್ಬಕ್ಕೊಂದು ಕಥೆ, ಕಥೆಗೊಂದು ಹಬ್ಬ ಸಾಮಾನ್ಯ. ದೀಪಾವಳಿಯೂ ಇದರಿಂದ ಹೊರತಲ್ಲ. ಪ್ರಾಚೀನ ಕಾಲದಿಂದಲೂ ದೀಪಾವಳಿ ಆಚರಣೆಯಲ್ಲಿದೆ. ಅದರ ರೀತಿ ನೀತಿಯಲ್ಲಿ ಬದಲಾವಣೆಯಾಗಿವೆಯಷ್ಟೆ… ಅದರ ಹಿನ್ನೆಲೆಯ ಕತೆಗಳೂ…! ~ ಸ.ಹಿರಣ್ಮಯಿ

ದೀಪಾವಳಿ ಹಬ್ಬದ ಆಚರಣೆಗೆ ಹಲವು ಹಿನ್ನೆಲೆ.  ಇದಕ್ಕೆ ರಾಮ ಅಯೋಧ್ಯೆಗೆ ಮರಳಿದ ಅವಧಿಯೆಂಬ ಸಡಗರವಿದೆ. ಕಂಟಕಪ್ರಾಯನಾಗಿದ್ದ ನರಕಾಸುರನನ್ನು ಶ್ರೀಕೃಷ್ಣನು ಸತ್ಯಭಾಮೆಯೊಡಗೂಡಿ ಸಂಹರಿಸಿದ ದಿನವೆಂಬ ಸಂಭ್ರಮವಿದೆ. ವಾಮನ, ತ್ರಿವಿಕ್ರಮನಾಗಿ ಬಲಿಯನ್ನು ಗೆದ್ದ ಕಥೆಯಿದೆ. ವೃಂದಾವನದಲ್ಲಿ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದ ದಿನವೆಂಬ ಕಾರಣವೂ ಇದೆ!

ದೀಪಾವಳಿ ಕೇವಲ ಒಂದು ನಿರ್ದಿಷ್ಟ ಕಾರಣವನ್ನು ಇಟ್ಟುಕೊಂಡು ಆಚರಿಸುವಂತಹದ್ದಲ್ಲ. ಇದು ಹಲವು ಹಬ್ಬಗಳ ಮೊತ್ತ. ದೀಪಾವಳಿಯನ್ನು ಹಬ್ಬಗಳ ರಾಜ ಎನ್ನಬಹುದು. ದಸರೆಯ ಆಚರಣೆಗಳನ್ನು ಗಮನಿಸಿದರೆ ಇದು ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತದೆ ಗಮನಿಸಿ. ದಶಮಿಯನ್ನು ರಾವಣ ದಹನದ ಮೂಲಕ ಆಚರಿಸುತ್ತಾರಲ್ಲವೆ? ಅದು ಆತನ ಸಂಹಾರವನ್ನು ಸಂಕೇತಿಸುತ್ತದೆ. ರಾವಣನನ್ನು ಕೊಂದು ಶ್ರೀರಾಮನು ಅಯೋಧ್ಯೆಗೆ ಮರಳುವ ವೇಳೆಗೆ ಆಶ್ವಯುಜ ಮಾಸ ಕೊನೆ ಮುಟ್ಟುತ್ತಿರುತ್ತದೆ. ಅವನು ವನವಾಸ ಮುಗಿಸಿ ರಾಜ್ಯ ತಲುಪಿಕೊಂಡ ದಿನ ಪ್ರಜೆಗಳು ದೀಪ ಬೆಳಗಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಈ ದಿನವೇ ದೀಪಾವಳಿಗೆ ಮುನ್ನುಡಿ ಬರೆಯುತ್ತದೆ.

ಹೆಣ್ಣಿನಿಂದ ಮಾತ್ರ ಸಾವು ಬರಲಿ ಎಂದು ವರ ಪಡೆದಿದ್ದ ನರಕಾಸುರ ಭೂಮಿಯ ರಾಣಿಯರನ್ನೆಲ್ಲ ತಂದು ಸೆರೆಯಿಟ್ಟಿರುತ್ತಾನೆ. ದ್ವಾಪರಯುಗದಲ್ಲಿ ಕೃಷ್ಣ, ಸತ್ಯಭಾಮೆಯನ್ನು ಮುಂದಿಟ್ಟುಕೊಂಡು ಅವನ ಸಾವಿಗೆ ಕಾರಣನಾಗುತ್ತಾನೆ. ಕೃಷ್ಣ-ಭಾಮೆಯರು ಅಭ್ಯಂಜನ ಸ್ನಾನ ಮಾಡಿ ಈ ಸಂಹಾರ ಕಾರ್ಯಕ್ಕೆ ಹೊರಡುತ್ತಾರೆ. ನರಕಾಸುರನನ್ನು ಕೊಲ್ಲುತ್ತಾರೆ. ಈ ದಿನವೇ ನರಕ ಚತುರ್ದಶಿ. ಅದರ ಹಿಂದಿನ ದಿನ ನೀರು ತುಂಬುವ ಹಬ್ಬವನ್ನು ಆಚರಿಸುವುದು ಈ `ತೈಲಾಭ್ಯಂಜನ’ದ ಹಿನ್ನೆಲೆಯಿಟ್ಟುಕೊಂಡೇ.

ಅಮಾವಾಸ್ಯೆಯ ದಿನ ಲಕ್ಷ್ಮೀಪೂಜೆ ಮಾಡುವುದು ವಾಡಿಕೆ. ಅನಂತರದ ದಿನ ದಕ್ಷಿಣ ಭಾರತೀಯರಿಗೆ `ಬಲಿಪಾಡ್ಯಮಿ’ಯಾಗಿಯೂ ಉತ್ತರ ಭಾರತೀಯರಿಗೆ `ಗೋಪಾಡ್ಯಮಿ’ಯಾಗಿಯೂ ಹೆಚ್ಚು ಪ್ರಚಲಿತ. ಬಲಿಮಹರಾಜ ದಕ್ಷಿಣ ಪ್ರಾಂತದವನು ಎಂಬುದು ನಂಬಿಕೆ. ಈತನ ಸುತ್ತಲಿನ ಕಥೆಗಳು ದಕ್ಷಿಣದ ದೀಪಾವಳಿಯನ್ನು ಅವನ ಹೆಸರಿಗೆ ಬರೆಯುವಂತೆ ಮಾಡಿವೆ.

ಶ್ರೀ ಕೃಷ್ಣನ ಲೀಲಾ ಭೂಮಿಯಾದ ಉತ್ತರ ಪ್ರಾಂತದಲ್ಲಿ ಗೋಪಾಡ್ಯಮಿಯ ಆಚರಣೆಗೂ ಒಂದು ಹಿನ್ನೆಲೆಯಿದೆ. ಶ್ರೀಕೃಷ್ನನು ಗೋವರ್ಧನ ಗಿರಿಯ ಪೂಜೆಗೆ ಪ್ರೇರೇಪಣೆ ನೀಡಿದ್ದು, ಇಂದ್ರ ಕೋಪಿಸಿಕೊಂಡು ಮಳೆ ಸುರಿಸಿದ್ದು, ಕೃಷ್ಣ ಗಿರಿಯನ್ನೇ ಎತ್ತಿ ಗೋವುಗಳನ್ನೂ, ಗೋಪಾಲಕರನ್ನೂ ಕಾಪಾಡಿದ್ದು- ಇವೆಲ್ಲವೂ ಇದಕ್ಕೆ ಹಿನ್ನೆಲೆಯಾಗಿ ಒದಗುತ್ತವೆ.

ಹಬ್ಬದ ಈ ಹಿನ್ನೆಲೆಗಳು ಹಿರಿಯರಿಗೆ ಹೊಸತೇನಲ್ಲ. ಈ ದಿನ ಮಕ್ಕಳಿಗೂ ಇದನ್ನು ದಾಟಿಸಲೆಂದು ನೆನಪಿಸಲು ಇದನ್ನು ಪ್ರಕಟಿಸಿದ್ದೇವೆ. ಹಬ್ಬದ ಸಂಭ್ರಮ ಮುಂದಿನ ತಲೆಮಾರಿಗೆ ತಲುಪಿದರೆ ಸಾಲದು, ಅದರ ಕಥನಗಳೂ ತಿಳಿದಿರಬೇಕು; ಅಲ್ಲವೆ?

Leave a Reply