ಹಣತೆ ಎಂಬ ರೂಪಕ…

ಮನುಷ್ಯನೂ ಹಣತೆಯಂತೆ ಬಾಳಬೇಕು ಎನ್ನುತ್ತಾರೆ ಪ್ರಾಜ್ಞರು. ಇತರರಿಗಾಗಿ ಬಾಳುವುದರಲ್ಲೆ ಸಾರ್ಥಕತೆ ಅಡಗಿದೆ. ಹಾಗೆಂದು ತನ್ನ ಆಂತರ್ಯದ ಪುಷ್ಟಿಗೆ ಗಮನ ಕೊಡದೆ ಇರಬಾರದು. ಹಣತೆ ತನ್ನ ಅಸ್ತಿತ್ವ ಸೂಚಿಯಾದ ಬತ್ತಿಯನ್ನು ಸುಟ್ಟುಕೊಳ್ಳುವಂತೆ, ನಾವು ನಮ್ಮ ಮಿಥ್ಯಾಹಂಕಾರವನ್ನು ಸುಟ್ಟುಕೊಳ್ಳಬೇಕು. ಆಗ ಮಾತ್ರ ನಮ್ಮಿಂದ ಬೆಳಕು ಹೊಮ್ಮಲು ಸಾಧ್ಯ ~ ಸಾ.ಹಿರಣ್ಮಯಿ

ಮೇಲ್ನೋಟಕ್ಕೆ ಹಣತೆ, ಬೆಳಕು ನೀಡುವ ಒಂದು ಆಕರ ಮಾತ್ರ. ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದರೆ ಈ ಪುಟ್ಟ ಹಣತೆಯು ಹೋರಾಟಕ್ಕೆ ರೂಪಕವಾಗಿ ನಿಲ್ಲುತ್ತದೆ. ಜೀವನ ಪ್ರೀತಿಗೆ, ಬದುಕಬೇಕಾದ ರೀತಿಗೆ ಆದರ್ಶವಾಗಿ ಉಳಿಯುತ್ತದೆ. ಹಣತೆಯ ದೀಪಕ್ಕೆ ಬೆಂಕಿಯ ಗುಣಗಳೇ ಇದ್ದರೂ ಉಪಯೋಗ ಮಾತ್ರ ಸಂಪೂರ್ಣ ಭಿನ್ನ. ಹಣತೆಯ ಬೆಳಕನ್ನು ದೇವರ ಮುಂದಿಡಲು, ಕೋಣೆ ಬೆಳಗಲು ಮಾತ್ರ ಬಳಸಲಾಗುತ್ತದೆ. ಹಾಗೆಯೇ ನಮ್ಮೊಳಗಿನ ಬೆಂಕಿಯನ್ನ ಹಣತೆಯ ರೂಪದಲ್ಲಿ ಸಾಕ್ಷಾತ್ಕರಿಸಿಕೊಂಡು ಭಗವದ್ಭಕ್ತಿಗೆ, ನಮ್ಮ ಹೃದಯದ ಕೋಣೆ ಬೆಳಗಲಿಕ್ಕೆ ಬಳಸಬೇಕು.  ಹಣತೆಯು ಬೆಂಕಿಯ ಮೊಗ್ಗಿನಂತೆ. ಅಷ್ಟೊಂದು ನಾಜೂಕು, ಮಂದ ಹಾಗೂ ಆಹ್ಲಾದಕರ. ಹಣತೆಯು ಬೆಳಕಿನ ಬೀಜದ ಹಾಗೆ. ಒಂದು ಬೀಜದಿಂದ ಹಲವು ಮರಗಳು ಹುಟ್ಟಬಹುದಾದಂತೆ, ಒಂದು ಹಣತೆಯಿಂದ ಹಲವು ಮನೆಗಳನ್ನು ಬೆಳಗಬಹುದು.

`ಸೂರ್ಯ ಚಂದ್ರರೂ ಕಂತಿಹೋದಾಗ ಪುಟ್ಟದೊಂದು ಹಣತೆ ತಾನು ಬೆಳಕು ನೀಡುವೆನೆಂದು ಮುಂದೆ ಬರುತ್ತದೆ. ಬತ್ತಿಯನ್ನು ಸುಟ್ಟುಕೊಳ್ಳುತ್ತಾ ತನ್ನ ಸುತ್ತಲಿನ ಕತ್ತಲನ್ನು ಹೊಡೆದೋಡಿಸುತ್ತದೆ’ ಎನ್ನುವ ಮಾತಿದೆ. ಆದರೆ ಹಣತೆಗೆ ತನ್ನಿಂದಲೇ ಬೆಳಕು ಅನ್ನುವ ಅಹಂಕಾರವಿಲ್ಲ. ಅದು ತನ್ನಲ್ಲಿರುವ ಬತ್ತಿ, ಎಣ್ಣೆಗಳು ಅನುವು ಮಾಡಿಕೊಡುವಷ್ಟೇ ಉರಿಯುತ್ತದೆ. ತನ್ನಿಂದ ಇಡಿಯ ಜಗತ್ತೆ ಬೆಳಗಿಬಿಡುತ್ತದೆ ಎನ್ನುವ ಹುಸಿ ನಂಬಿಕೆಯಿಲ್ಲ. ತನ್ನ ಬೆಳಕು ಒಂದು ನಿರ್ದಿಷ್ಟ ವ್ಯಾಪ್ತಿಯವರೆಗೆ ಹರಡಿಕೊಳ್ಳುತ್ತದೆಯೆಂದು ಅದಕ್ಕೆ ಗೊತ್ತಿದೆ. ಹಣತೆ ಅಷ್ಟು ಸುಲಭಕ್ಕೆ ಸೋಲೊಪ್ಪುವುದಿಲ್ಲ. ಗಾಳಿ ಬೀಸಿದಾಗೆಲ್ಲ ತೊನೆದಾಡುತ್ತಾ ಅದು ಹಾದು ಹೋಗಲು ಅವಕಾಶ ಕೊಟ್ಟು ತನ್ನನ್ನು ಉಳಿಸಿಕೊಳ್ಳಲು ಯತ್ನಿಸುತ್ತದೆ. ಇನ್ನೇನು, ಎಣ್ಣೆ ತೀರುತ್ತಿದೆ ಎನ್ನುವಾಗ ತನ್ನೆಲ್ಲ ಶಕ್ತಿಯನ್ನೂ ಒಗ್ಗೂಡಿಸಿ, ತನ್ನ ಮಿತಿಯ ಅತಿ ಹೆಚ್ಚಿನ ಬೆಳಕು ಚೆಲ್ಲಿ , ವಿಧಿಯನ್ನೊಪ್ಪಿಕೊಂಡು ನಂದಿಹೋಗುತ್ತದೆ.

ಮನುಷ್ಯನೂ ಹಣತೆಯಂತೆ ಬಾಳಬೇಕು ಎನ್ನುತ್ತಾರೆ ಪ್ರಾಜ್ಞರು. ಇತರರಿಗಾಗಿ ಬಾಳುವುದರಲ್ಲೆ ಸಾರ್ಥಕತೆ ಅಡಗಿದೆ. ಹಾಗೆಂದು ತನ್ನ ಆಂತರ್ಯದ ಪುಷ್ಟಿಗೆ ಗಮನ ಕೊಡದೆ ಇರಬಾರದು. ಹಣತೆ ತನ್ನ ಅಸ್ತಿತ್ವ ಸೂಚಿಯಾದ ಬತ್ತಿಯನ್ನು ಸುಟ್ಟುಕೊಳ್ಳುವಂತೆ, ನಾವು ನಮ್ಮ ಮಿಥ್ಯಾಹಂಕಾರವನ್ನು ಸುಟ್ಟುಕೊಳ್ಳಬೇಕು. ಆಗ ಮಾತ್ರ ನಮ್ಮಿಂದ ಬೆಳಕು ಹೊಮ್ಮಲು ಸಾಧ್ಯ.

ಹಣತೆ ಮಾಡುವ ಕೆಲಸವನ್ನೇ ಎಲ್ಲ ದೀಪಗಳೂ ಮಾಡುತ್ತವೆ. ಹೀಗಿದ್ದೂ `ಹಣತೆ’ಗೇ ಯಾಕೆ ಹೆಚ್ಚಿನ ಮನ್ನಣೆ? ಇದಕ್ಕೆ ಕಾರಣವಿದೆ. ಹಣತೆಯನ್ನು ತಯಾರಿಸುವುದು ಮಣ್ಣು ಮತ್ತು ನೀರಿನ ಮಿಶ್ರಣದಿಂದ. ಅನಂತರ ಅದನ್ನು ಬೆಂಕಿಯಲ್ಲಿ ಸುಟ್ಟು ಹದ ಮಾಡಲಾಗುತ್ತದೆ. ಅನಂತರ ಹಣತೆ ಗಾಳಿಯ ಸಹಾಯದಿಂದ (ಆಮ್ಲಜನಕ) ತನ್ನ ಅವಕಾಶದಲ್ಲಿ ಉರಿಯುತ್ತದೆ. ಮಾನವ ದೇಹವೂ ಪಂಚಭೂತಗಳಿಂದ ಆದುದು. ಆದ್ದರಿಂದ ಮಾನವ ದೇಹವನ್ನು ಹಣತೆಯೊಂದಿಗೆ ಹೋಲಿಸಿ, ಅದರಂತೆ ಲೋಕೋಪಯೋಗಿಯಾಗಿ ಬೆಳಗಬೇಕು ಎನ್ನುವುದು ಈ ಸಾಮ್ಯದ ಆಶಯ.

ದೀಪಾವಳಿಗೆ ಸಾಲು ದೀಪ ಹಚ್ಚುವಾಗ ವಿದ್ಯುದ್ದೀಪಗಳನ್ನು ಬಳಸುವುದು ಇತ್ತೀಚಿನ ವಾಡಿಕೆ. ಅದರಂತೆಯೇ ಕೆಲವರು ಅಲಂಕಾರಿಕ ಮುಂಬತ್ತಿಗಳನ್ನೂ ಉಪಯೋಗಿಸುತ್ತಾರೆ. ಆದರೆ ಇದು ಹಬ್ಬದ ನೈಜ ಆಶಯವನ್ನು ನೆರವೇರಿಸುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಮುಂಬತ್ತಿಯಾಗಲೀ ಸೀರಿಯಲ್ ಸೆಟ್ ಆಗಲೀ ಹಣತೆಯ ಆದರ್ಶವನ್ನು ಪ್ರತಿಬಿಂಬಿಸಲಾರವು. ಹಬ್ಬವನ್ನು ಆಚರಿಸುವಾಗ ಅದರ ಹಿಂದಿನ ದ್ದೇಶವನ್ನೂ ಅದು ಏನನ್ನು ಸಂಕೇತಿಸುತ್ತದೆ ಎಂಬುದನ್ನೂ ಅರಿತುಕೊಂಡಿರಬೇಕು.

ಹಣತೆ ಹಚ್ಚಬೇಕು ಸರಿ, ದೀಪಾವಳಿಯಲ್ಲಿ ಅದಕ್ಕೇಕೆ ಪ್ರಾಶಸ್ತ್ಯ? ಈ ಪ್ರಶ್ನೆ ಸಹಜವೇ. ಆಶ್ವಯುಜ – ಕಾರ್ತಿಕ ಮಾಸಗಳಲ್ಲಿ ರುಳು ಸುದೀರ್ಘ. ಹಗಲು ಸಣ್ಣ. ಬೇಗನೆ ಸಂಜೆಯಾಗುತ್ತದೆ. ಚಳಿಯೂ ವಿಪರೀತ. ಹೀಗಿರುವಾಗ ಸಾಲು ಹಣತೆ ಹಚ್ಚಿಟ್ಟರೆ ಬೆಳಕಿಗೆ ಬೆಳಕೂ, ದೀಪಗಳ ಇರುವಿನಿಂದ ಹಿತವಾದ ಕಾವೂ ಒದಗುತ್ತವೆ. ದೀಪಾವಳಿಯಲ್ಲಿ ದೀಪ ಹಚ್ಚುವ ಪೃಥೆ ಆರಂಭವಾದರೆ, ಮುಂದೆ ಕಾರ್ತಿಕದುದ್ದಕ್ಕೂ ಮನೆ ಮುಂದೆ `ನಾಲ್ಕು ಹಣತೆ’ಯಾದರೂ ಹಚ್ಚಿಡಬೇಕೆಂದು ಸಂಪ್ರದಾಯ ಹೇಳುತ್ತದೆ.

Leave a Reply