ಸ್ವಾಮಿ ರಾಮತೀರ್ಥ : ಅಲ್ಲಮ ಇಕ್ಬಾಲರ ಪದ್ಯ

ರಾಮ ತೀರ್ಥರು (1873-1906) ನಿಧನರಾದಾಗ ಅವರ ಬಗ್ಗೆ ಉರ್ದು ಕವಿ ಇಕ್ಬಾಲರು ಬರೆದ ಗಜಲ್… | ಅನುವಾದ : ಪುನೀತ್ ಅಪ್ಪು

ಸಾಗರದೊಡಲಿನಿಂದ ಸಿಡಿದೆದ್ದಿರುವ
ಓ ಅಶಾಂತ ಬಿಂದುವೇ
ಎಲ್ಲೋ ಅಡಗಿದ್ದ ಮುತ್ತಾಗಿದ್ದೆ ನೀನು
ಇಂದು ಔನ್ನತ್ಯಕ್ಕೇರಿರುವ ಅನರ್ಘ್ಯ ರತ್ನವಾಗಿರುವೇ !

ಆಹಾ! ಅದೆಷ್ಟು ಅದ್ಭುತವಾಗಿ
ಬಯಲುಗೊಳಿಸಿದೆ ಭವದ ರಹಸ್ಯಗಳನು,
ನಾನಾದರೋ ಜಗದ
ರಂಗು ರಂಗಿನಲಿ ಬಂಧಿಯಾಗಿರುವೆ !

ಬಂಧನಗಳ ನಾಶಗೈದಿಟ್ಟ ಬದುಕು
ಪುನರುತ್ಥಾನದ ವೈಭವವಾಯಿತು,
ಆರಿಹೋದ ಬೆಂಕಿಯ ಕಿಡಿ
ಅದೋ ಅಝಾರನ ಮಂದಿರವಾಯಿತು !

ಅಸ್ತಿತ್ವದ ನಿರಾಕರಣೆಯೇ
ಬೆಳಗುವ ಹೃದಯವೊಂದರ ಚಮತ್ಕಾರ,
‘ಇಲ್ಲ’ ವೆಂಬ ನದಿಯೊಳಡಗಿರುವ ರತ್ನವೇ
ಇಲ್ಲಾಲ್ಲಾಹುವೆಂಬ ನಿರಾಕಾರ !

ಕುರುಡುಗಣ್ಣುಗಳಿಗೆ
ಪರಾತ್ಪರ ತತ್ತ್ವಗಳೆಂದಿಗೂ ಕಾಣ ಸಿಗದು,
ಚಲನೆಯನ್ನು ಕಳೆದುಕೊಂಡ ಕ್ಷಣದಿಂದ
ಪಾದರಸವೂ ಬೆಳ್ಳಿಯಾಗುವುದು !

ಭವದ ಚಿಹ್ನೆಗಳನೊಡೆದು ಜನರ ಎಬ್ಬಿಸಿರುವುದು ಅಬ್ರಹಾಮನ ಪ್ರೀತಿಯೊಂದೇ,
ದಿಕ್ಕುತಪ್ಪಿದ ಮನವ ದಡ ಸೇರಿಸುವುದು
ತಸ್ನಮಿನ ಪ್ರವಾಹವೊಂದೇ !

ಉರ್ದು ಮೂಲ : ಅಲ್ಲಾಮ ಇಕ್ಬಾಲ್ | ಅನುವಾದ : ಪುನೀತ್ ಅಪ್ಪು

Leave a Reply