ಶಂಕರರ ನಿರ್ವಾಣ ಷಟಕ ಮತ್ತು ಸರಳ ಅರ್ಥ ವಿವರಣೆ

ಶಂಕರರ ನಿರ್ವಾಣ ಷಟಕ ನೇತಿ ತತ್ತ್ವದ ಅತ್ಯುನ್ನತ ರಚನೆ. ಈ ರಚನೆಯ ಶ್ಲೋಕಗಳು ಮತ್ತು ಅವುಗಳ ಸರಳಾರ್ಥವನ್ನಿಲ್ಲಿ ಕೊಡಲಾಗಿದೆ…
 

lach
ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ
ನ ಚ ಶ್ರೋತ್ರ ಜಿಹ್ವಾ ನ ಚ ಘ್ರಾಣನೇತ್ರಮ್ |
ನ ಚ ವ್ಯೋಮ ಭೂಮಿರ್-ನ ತೇಜೋ ನ ವಾಯುಃ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 1 ||

ಮನೋಬುದ್ಧಿಯಹಂಕಾರಚಿತ್ತಾನಿ ನಾಹಂ…. ಅರ್ಥಾತ್ ಮನಸ್ಸು, ಬುದ್ಧಿ, ಚಿತ್ತ, ಅಹಂಕಾರಗಳು ನಾನಲ್ಲ. ಶಂಕರರು ಹೀಗೆನ್ನುತ್ತಾರೆ. ಅದನ್ನವರು ಅನುಭವದಿಂದ ಅರಿತು ಹೇಳುತ್ತಿದ್ದಾರೆ. ಮೊದಲು ಅವರು ತಾವು ಏನಾಗಿಲ್ಲವೋ ಅದನ್ನು ಹೇಳುತ್ತಿದ್ದಾರೆ. ಅನಂತರವಷ್ಟೆ ಅವರು ತಾವು ಯಾರೆಂದು ಹೇಳುತ್ತಾರೆ. ಇದೇ `ನೇತಿ’ ವಿಧಾನ.

ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣ ನೇತ್ರೇ…. ಅಂದರೆ – “ನಾನು ಕಿವಿಯೂ ಅಲ್ಲ, ನಾಲಗೆಯೂ ಅಲ್ಲ, ಮೂಗು ಕೂಡ ಅಲ್ಲ, ಕಣ್ಣುಗಳೂ ಅಲ್ಲ”. ಇಲ್ಲಿ ಶಂಕರರು ಮೊದಲು ಆಂತರ್ಯದ ಮಾತುಗಳನ್ನಾಡಿದರು, ಈಗ ಬಾಹ್ಯದ ಮಾತುಗಳನ್ನು ಆಡುತ್ತಿದ್ದಾರೆ. ಅಭಿವ್ಯಕ್ತಗೊಂಡ ಈ ಜಗತ್ತು ದ್ವೈತವನ್ನು ಪ್ರತಿನಿಧಿಸುತ್ತದೆ. ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣ ನೇತ್ರೇ…. ಅಂದರೆ- ನಾನು ಕಿವಿಯೂ ಅಲ್ಲ, ನಾಲಗೆಯೂ ಅಲ್ಲ, ಮೂಗು ಕೂಡ ಅಲ್ಲ, ಕಣ್ಣುಗಳೂ ಅಲ್ಲ.

ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ…… “ನಾನು ಆಕಾಶವೂ ಅಲ್ಲ, ಭೂಮಿಯೂ ಅಲ್ಲ, ಬೆಂಕಿಯಲ್ಲ, ಗಾಳಿಯೂ ಅಲ್ಲ”. ಈ ದೇಹದ ಹೊರಗೆ ಹರಡಿಕೊಂಡಿರುವ ಈ ಅನಂತ – ಅಸೀಮ ವಿಸ್ತಾರವೇನಿದೆ, ಶಂಕರರು ಅದನ್ನು ಮನಸಿನಲ್ಲಿಟ್ಟುಕೊಂಡು ಹೇಳುತ್ತಿದ್ದಾರೆ – “ಈ ಮನೋದೈಹಿಕ ಉಪಕರಣದ ಮೂಲಕ ಯಾವುದೆಲ್ಲವನ್ನು ನೋಡಲು, ಅನುಭವಿಸಲು ಸಾಧ್ಯವಾಗುತ್ತದೆಯೋ ಅವುಗಳಲ್ಲಿ ಕೂಡ ನಾನಿಲ್ಲ. ನಾನು ಆಕಾಶವಲ್ಲ, ಭೂಮಿಯಲ್ಲ, ಬೆಂಕಿಯಲ್ಲ, ಗಾಳಿಯೂ ಅಲ್ಲ.”
 
ಅಹಂ ಪ್ರಾಣ ಸಂಙ್ಞೋ ನ ವೈಪಂಚ ವಾಯುಃ
ನ ವಾ ಸಪ್ತಧಾತುರ್-ನ ವಾ ಪಂಚ ಕೋಶಾಃ |
ನವಾಕ್ಪಾಣಿ ಪಾದೌ ನ ಚೋಪಸ್ಥ ಪಾಯೂ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 2 ||

ನ ಚ ಪ್ರಾಣ ಸಂಜ್ಞೋ ನ ವೈ ಪಂಚ ವಾಯುಃ ನ ವಾ ಸಪ್ತಧಾತುರ್ನ ಪಂಚಕೋಶಾಃ.. ಇದರರ್ಥ – “ನಾನು ಪ್ರಾಣ ವಾಯುವಲ್ಲ, ಪಂಚ ಪ್ರಾಣಗಳಲ್ಲ, ಶರೀರದ ಸಪ್ತ ಧಾತುಗಳು ನಾನಲ್ಲ, ಪಂಚ ಕೋಶಗಳೂ ಅಲ್ಲ. ಜೀವದ ಶಕ್ತಿಯಾದ ಪ್ರಾಣ ವಾಯುವೂ ನಾನಲ್ಲ. ಹಾಗೆಯೇ ಶರೀರದಲ್ಲಿ ಬೇರೆ ಬೇರೆ ಕಾರ್ಯಗಳನ್ನು ನಿರ್ವಹಿಸುವ ಪ್ರಾಣದ ಪಂಚ ಪ್ರಕಾರಗಳಾದ ಪ್ರಾಣಾಪಾನ ಸಮಾನ ಉದಾನ ವ್ಯಾನಗಳೂ ಅಲ್ಲ.”

ನ ವಾಕ್ ಪಾಣಿಪಾದೌ ನ ಚೋಪಸ್ಥಪಾಯು: ….. ಶಂಕರರು ತಾವು ಮಾತು (ಸಂಭಾಷಣೆ), ಕೈ ಕಾಲು, ಜನನೇಂದ್ರಿಯ, ಮಲದ್ವಾರಗಳೂ ಅಲ್ಲವೆನ್ನುತ್ತಿದ್ದಾರೆ. ನಮ್ಮ ಗಂಟಲಲ್ಲಿ ಶಬ್ದ ಹೊರಡಿಸುವ ಧ್ವನಿ ಪೆಟ್ಟಿಗೆಯಿಂದ ಸಂಭಾಷಣೆ ಸಾಧ್ಯವಾಗುತ್ತದೆ.  ಶಂಕರರು ತಾವು ಅದೂ ಅಲ್ಲವೆಂದು ಹೇಳುತ್ತಾರೆ. ಜೊತೆಗೇ ಅವರು ಹೇಳುತ್ತಾರೆ, “ಕೈ ಕಾಲುಗಳು, ಜನನೇಂದ್ರಿಯ, ಮಲದ್ವಾರಗಳು ಸೇರಿದಂತೆ ಪಂಚ ಕರ್ಮೇಂದ್ರಿಯಗಳೂ ನಾನಲ್ಲ” ಎಂದು.
 
ನ ಮೇ ದ್ವೇಷರಾಗೌ ನ ಮೇ ಲೋಭಮೋಹೋ
ಮದೋ ನೈವ ಮೇ ನೈವ ಮಾತ್ಸರ್ಯಭಾವಃ |
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 3 ||

ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ, ಮದೋ ನೈವ ಮೇ ನೈವ ಮಾತ್ಸರ್ಯಭಾವಃ … “ನಾನು ರಾಗದ್ವೇಷಗಳಲ್ಲ, ಲೋಭಮೋಹಗಳಲ್ಲ, ನಾನು ಮದಮತ್ಸರಗಳೂ ಆಗಿಲ್ಲ…” – ಸಾಗರದಂಚಲ್ಲಿ ಅಲೆಗಳು ಏಳುವಂತೆಯೇ ರಾಗದ್ವೇಷಗಳು, ಮೋಭಮೋಹಗಳು, ಮದಮತ್ಸರಗಳು ನನ್ನಿಂದ ಹೊಮ್ಮುತ್ತವೆ. ನಾನು ಅದಕ್ಕೆಲ್ಲ ಸಾಕ್ಷಿ ಮಾತ್ರನಾಗಿದ್ದೇನೆ.

ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ…. “ನಾನು ಧರ್ಮಾರ್ಥ ಕಾಮ ಮೋಕ್ಷಗಳೂ ಅಲ್ಲ…” ಅದು ಧರ್ಮವಿರಲಿ ಅಥವಾ ಸಂಪತ್ತು; ಯಾವುದೇ ಕಾಮನೆಯಿರಲಿ ಅಥವಾ ಬಯಕೆಗಳು.. ನಾನು ಈ ಯಾವುದರಲ್ಲೂ ಅಸಕ್ತನಲ್ಲ. ನಾನು ಇವುಗಳಲ್ಲಿ ಮುಳುಗಿದವನಲ್ಲ. ನಾನು ಕೇವಲ ನೋಡುಗನು. ನಾನು ಈ ಯಾವುದರಿಂದಲಾದರೂ ಬಂಧಿಸಲ್ಪಡುವೆನೇ, ಸಿಲುಕಿಕೊಳ್ಳುವೆನೇ ಎಂದು ಗಮನಿಸುವವನು.
 
ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಧಂ ನ ವೇದಾ ನ ಯಙ್ಞಃ |
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 4 ||

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ.. “ನಾನು ಪುಣ್ಯವೂ ಅಲ್ಲ ಪಾಪವೂ ಅಲ್ಲ; ಸುಖವೂ ಅಲ್ಲ, ದುಃಖವೂ ಅಲ್ಲ…” ಶಂಕರರಂತೂ ಹೇಳುತ್ತಿದ್ದಾರೆ, ಸುಖದುಃಖಗಳೆರಡೂ ಸುಳ್ಳೆಂದು. ಏನು ಉಳಿಯುತ್ತದೆಯೋ ಅದು ಸತ್ಯ ಎಂದಾಗುತ್ತದೆ. ಆ ಸತ್ಯ ಯಾವುದು ಹಾಗಾದರೆ? ಶೋಧಕರ, ಸಾಧಕರ ಹುಡುಕಾಟವೇ ಇದನ್ನು ಕಂಡುಕೊಳ್ಳುವುದಾಗಿದೆ. ಬಹುಶಃ ಅದನ್ನು ಹುಡುಕಿಕೊಳ್ಳಲೆಂದೇ ನಾವೂ ಇಲ್ಲಿದ್ದೇವೆ.

ಅಹಂ ಭೋಜನಂ ನೈವ ಭೌಜ್ಯಂ ನ ಭೋಕ್ತಾ…. ಇದರರ್ಥ-  “ನಾನು ತಿನ್ನಲ್ಪಡುವುದೂ ಅಲ್ಲ, ತಿನ್ನುವಿಕೆಯೂ ಅಲ್ಲ, ತಿನ್ನುವವನು ಕೂಡ ಅಲ್ಲ” ಎಂದು.

ಶಂಕರರು ಮೊದಲು ಸುಖದುಃಖಗಳೆಂಬ ಸ್ಥೂಲ ಅನುಭವಗಳ ಬಗ್ಗೆ ಹೇಳಿದರು. ಈಗ ಸೂಕ್ಷ್ಮ ಅನುಭವಗಳ ಬಗ್ಗೆ ಹೇಳುತ್ತಿದ್ದಾರೆ. ಅವರು ಹೇಳುತ್ತಿದ್ದಾರೆ, ಯಾವುದು ತಿನ್ನಲ್ಪಡುತ್ತದೆಯೋ- ಭೋಜನವೋ ಅದು ನಾನಲ್ಲ; ಯಾರು ತಿನ್ನುತ್ತಿದ್ದಾನೋ- ಭೋಕ್ತನೋ ಅದು ಕೂಡ ನಾನಲ್ಲ ಎಂದು. ಅಷ್ಟು ಮಾತ್ರವಲ್ಲ, ತಿನ್ನುವಿಕೆ, ತಿನ್ನುವಾಗಿನ ಆನಂದ – ಭೌಜ್ಯವೂ ನಾನಲ್ಲವೆಂದು ಶಂಕರರು ಹೇಳುತ್ತಿದ್ದಾರೆ.
 
ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ
ವಿಭೂತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್ |
ನ ವಾ ಬಂಧನಂ ನೈವ ಮುಕ್ತಿ ನ ಬಂಧಃ |
ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 5 ||

ಅಹಂ ನಿರ್ವಿಕಲ್ಪೋ ನಿರಾಕಾರರೂಪಃ “ಭೂತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್..
ನಾನು ನಿರ್ವಿಕಲ್ಪನೂ ನಿರಾಕಾರನೂ ಅಗಿದ್ದುಕೊಂಡು ಎಲ್ಲೆಡೆ, ಎಲ್ಲ ಇಂದ್ರಿಯಗಳಲ್ಲಿ ಸೇರಿಕೊಂಡಿದ್ದೇನೆ. – ಯಾವುದಕ್ಕೆ ರೂಪವಿರುತ್ತದೆಯೋ, ಆಕಾರವಿರುತ್ತದೆಯೋ ಅದು ಎಲ್ಲೆಡೆ ವ್ಯಾಪಿಸಲು ಸಾಧ್ಯವಿಲ್ಲ. ಏಕೆಂದರೆ ರೂಪಾಕಾರಗಳು ಒಂದು ಮಿತಿಯನ್ನು ಉಂಟುಮಾಡಿಬಿಡುತ್ತವೆ. ಯಾವುದಕ್ಕೆ ಸೀಮೆ ಇರುವುದಿಲ್ಲವೋ ಅದು ಎಲ್ಲೆಡೆ ಹರಡಿಕೊಳ್ಳಬಲ್ಲದು.
 
ನ ಮೃತ್ಯುರ್ -ನ ಶಂಕಾ ನ ಮೇ ಜಾತಿ ಭೇದಃ
ಪಿತಾ ನೈವ ಮೇ ನೈವ ಮಾತಾ ನ ಜನ್ಮ |
ನ ಬಂಧುರ್-ನ ಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 6 ||

ನ ಮೇ ಮೃತ್ಯು ಶಂಕಾ ನ ಮೇ ಜಾತಿಭೇದಃ….. ಅರ್ಥಾತ್, “ನಾನು ಮೃತ್ಯು ಭಯವಾಗಿಲ್ಲ, ನಾನು ಜಾತಿಗಳ ಭಿನ್ನತೆಯಲ್ಲ’ ಶಂಕರರೀಗ ಮತ್ತೂ ಸೂಕ್ಷ್ಮ ವಿಚಾರಕ್ಕೆ ಇಳಿಯುತ್ತಿದ್ದಾರೆ.

ಶಂಕರರು ಹೇಳುತ್ತಿದ್ದಾರೆ, ಉಳಿದೆಲ್ಲ ವಿಷಯ ಬಿಡಿ, ನಾನು ಮರಣ ಸಮಯದಲ್ಲಿ ಉಂಟಾಗುವ ಭಯವೂ ಅಲ್ಲವೆಂದು; ಏಕೆಂದರೆ ಮೃತ್ಯು ಭಯ ಕೂಡ ಒಂದು ಪೂರ್ವಾಧಾರಿತ ಕಲ್ಪನೆಯಷ್ಟೆ ಅನ್ನುತ್ತಾರೆ ಅವರು.

ಹಾಗೆಯೇ ನಾನು ಜಾತಿಭೇದವೂ ಅಲ್ಲ. ಜಾತಿ ಭೇದವೆಂದರೆ ಎಲ್ಲ ಬಗೆಯ ಭೇದ. ಅದು ಲಿಂಗ ಭೇದವಿರಬಹುದು, ಸ್ತ್ರೀ – ಪುರುಷ ಭೇದ ಇರಬಹುದು, ಧರ್ಮ ಅಥವಾ ಜಾತಿಗೀತಿಗಳ ಭೇದವಿರಬಹುದು, ಅಥವಾ ಇನ್ಯಾವುದೇ ಭೇದವಿರಬಹುದು..ನಾನು ಈ ಎಲ್ಲ ಬಗೆಯ ಭೇದಗಳನ್ನು, ಆದ್ಯತೆಗಳನ್ನು, ವಿಶ್ವಾಸಗಳನ್ನು, ಧಾರಣೆ ಹಾಗೂ ಕಲ್ಪನೆಗಳನ್ನು ಮೀರಿದವನಾಗಿದ್ದೇನೆ.
ಪಿತಾ ನೈವ ಮೇ ಮಾತಾ ನ ಜನ್ಮ.. “ನನಗೆ ತಂದೆಯಿಲ್ಲ, ತಾಯಿಯೂ ಇಲ್ಲ, ನಾನು ಜನಿಸಿಯೇ ಇಲ್ಲ…” ಶಂಕರರ ಮಾತಿನ ಓಘ ಸ್ಥೂಲದಿಂದ ಸೂಕ್ಷ್ಮಕ್ಕೆ, ಸೂಕ್ಷ್ಮದಿಂದ ಅತಿ ಸೂಕ್ಷ್ಮಕ್ಕೆ ಸಾಗುತ್ತಿದೆ….

ನ ಬಂಧುರ್ನ ಮಿತ್ರಂ ಗುರೂರ್ನೈವ ಶಿಷ್ಯಃ…. ನಾನು ಬಂಧುವೂ ಅಲ್ಲ, ಗೆಳೆಯನೂ ಅಲ್ಲ, ಗುರುವೂ ಅಲ್ಲ, ಶಿಷ್ಯನೂ ಅಲ್ಲ.. ನಾನು ಯಾರ ಸಂಬಂಧಿಯೂ ಅಲ್ಲ, ಸಹೋದರನೂ ಅಲ್ಲ. ಅವೆಲ್ಲ ಇರಲಿ, ನಾನು ಯಾರಿಗೂ ಗುರುವಲ್ಲ, ಶಿಷ್ಯ ಕೂಡ ಅಲ್ಲ.
ನೇತಿ ಧ್ಯಾನವೆಂದರೆ ಇದು. ಒಂದೊಂದಾಗಿಯೇ ಎಲ್ಲವನ್ನು ಕಳಚಿ ನೋಡುತ್ತ, ಅರಿಯುತ್ತ, ಅನುಭವಿಸುತ್ತ ಇದು ನಾನಲ್ಲವೆಂದು ಮುನ್ನಡೆಯುತ್ತ, ಎಲ್ಲವನ್ನೂ ಬಿಚ್ಚಿ ಬಿಚ್ಚಿ ನೋಡಿ ಅಲ್ಲಗಳೆಯುತ್ತಾ ಹೋದಮೇಲೆ ಆತ್ಯಂತಿಕವಾಗಿ ಏನು ಉಳಿಯುತ್ತದೆಯೋ ಅದು ನಾನು.

ಶಂಕರರು ಅದನ್ನು ಹೀಗೆ ಹೇಳುತ್ತಾರೆ – ಚಿದಾನಂದರೂಪಶ್ಶಿವೋಹಮ್ ಶಿವೋಹಮ್….. “ನಾನು ಸತ್ ಚಿತ್ ಆನಂದರೂಪಿಯಾದ ಶಿವನಾಗಿದ್ದೇನೆ; ಸಚ್ಚಿದಾನಂದ ರೂಪ ವಿಶುದ್ಧ ಸತ್ಯ ನಾನಾಗಿದ್ದೇನೆ” ಎಂದು. 
 

 

1 Comment

Leave a Reply