ಭಗವದ್ಗೀತೆ ಹೇಳುವ ಮೂರು ಬಗೆಯ ಸುಖಗಳು

ಕೃಷ್ಣ, ಸುಖವು “ಆತ್ಮ ಬುದ್ಧಿ ಪ್ರಸಾದಜಮ್” ಎಂದಿದ್ದಾನೆ. ಇದರ ಅರ್ಥ, “ಸುಖ ಆತ್ಮಪ್ರಸಾದ – ಅಂದರೆ, ಸುಖ ಹೊರಗಿನಿಂದ ಬರುವುದಲ್ಲ, ಒಳಗಿನಿಂದ ಚಿಮ್ಮುವಂಥದ್ದು” ಎಂದು.

ಕೃಷ್ಣ ಅರ್ಜುನನಿಗೆ ಮೂರು ಬಗೆಯ ಸುಖಗಳನ್ನು ಹೀಗೆ ವಿವರಿಸುತ್ತಾನೆ : ಬಳಕೆಯಿಂದ ಖುಷಿಕೊಡುವಂಥದು, ದುಃಖವನ್ನು ನೀಗಿಸುವಂಥದು, ಮೊದಲು ವಿಷದಂತೆ ಅಪ್ರೀಯವಾಗಿ ಕೊನೆಗೆ ಅಮೃತದಂತೆ ಹಿತ ನೀಡುವಂಥದು. ಈ ಬಗೆಯ ಸುಖಗಳು ಸಾತ್ವಿಕ. ಇವು ಭಗವಂತನ ಕರುಣೆಯಿಂದ ಬರುವಂಥದು.

ನಾವು ಆತ್ಯಂತಿಕವಾಗಿ ಬಯಸುವುದೇ ಸುಖವನ್ನು. ನಮ್ಮೆಲ್ಲ ಪ್ರಯತ್ನಗಳೂ ಜಂಜಡಗಳೂ ಸುಖವನ್ನು ಹೊಂದುವುದಕ್ಕಾಗಿಯೇ ಇವೆ. ನಮ್ಮ ಜ್ಞಾನವೂ ಸಂಪಾದನೆಯೂ ಲೌಕಿಕಾಲೌಕಿಕಗಳೂ ಸುಖವನ್ನು ಹೊಂದಲು ನಾವು ಬಳಸುವ ಮಾರ್ಗಗಳೇ ಆಗಿವೆ. 

ಆದರೆ ನಿಜವಾದ ಸುಖ ಯಾವುದು?
ಸುಖದಲ್ಲೂ ಮೂರು ವಿಧಗಳಿವೆ. ಸಾತ್ವಿಕ, ರಾಜಸ ಮತ್ತು ತಾಮಸ.

ಯಾವುದಾದರೂ ಒಂದು ವಸ್ತು / ವಿಷಯ ಪ್ರಾರಂಭದಿಂದಲೇ ಸುಖವಾಗಿ ಕಾಣಿಸಿದರೆ ಅದು ಸಾತ್ವಿಕ ಸುಖವಲ್ಲ. ಕಷ್ಟಪಡದೆ ಅನಾಯಾಸವಾಗಿ ಪಡೆಯುವುದು ಮೋಹದ ಸುಖ. ಸಾತ್ವಿಕ ಸುಖ ಮೊದಲು ಕಷ್ಟ ರೂಪದಲ್ಲಿರುತ್ತದೆ. ಇದಕ್ಕೆ ಉತ್ತಮ ದೃಷ್ಟಾಂತ ಸಮುದ್ರಮಥನ. ಅಲ್ಲಿ ಮೊದಲು ಬಂದಿದ್ದು ಅಮೃತವಲ್ಲ, ವಿಷ. ಅಮೃತ ಸಿಕ್ಕಿದ್ದು ಕೊನೆಯಲ್ಲಿ. ಹಾಲಾಹಲವನ್ನು ಸಹಿಸಿದ ಮೇಲೆ ಅಮೃತದ ಉಣಿಸು.
ಕೃಷ್ಣ, ಸುಖವು “ಆತ್ಮ ಬುದ್ಧಿ ಪ್ರಸಾದಜಮ್” ಎಂದಿದ್ದಾನೆ. ಇದರ ಅರ್ಥ, “ಸುಖ ಆತ್ಮಪ್ರಸಾದ – ಅಂದರೆ, ಸುಖ ಹೊರಗಿನಿಂದ ಬರುವುದಲ್ಲ, ಒಳಗಿನಿಂದ ಚಿಮ್ಮುವಂಥದ್ದು” ಎಂದು. ಕೃಷ್ಣ ಹೇಳುವ ಮೂರು ಬಗೆಯ ಸುಖಗಳು ನಿಜವಾಗಿಯೂ ಸುಖವನ್ನೇ ತರುವಂಥವು. ಇವು ಸಾತ್ವಿಕ ಸುಖಕ್ಕೆ ಸೇರುತ್ತವೆ.

ಮೊದಲು ಅಮೃತದಂತೆ ರೋಚಕವಾಗಿದ್ದು, ಪರಿಣಾಮದಲ್ಲಿ ವಿಷವಾಗುವ ಸುಖ, ವಾಸ್ತವದಲ್ಲಿ ದುಃಖವೇ ಆಗಿರುತ್ತದೆ. ಇಂಥಾ ಸುಖ, ‘ರಾಜಸ’ . ಇದು ಬಾಹ್ಯಸುಖ. ಇದು ಹೊರಗಿನ ವಿಷಯಗಳಿಂದ ನಮ್ಮ ಇಂದ್ರಿಯಗಳು ಅನುಭವಿಸುವ ಐಹಿಕ ಸುಖ. ಇದು ತಾತ್ಕಾಲಿಕ ಮತ್ತು ದುಃಖದಾಯಕ.

ಹಾಗೆಯೇ, ಆರಂಭದಲ್ಲೂ, ಅಂತಿಮವಾಗಿಯೂ ನಶೆಯಂತೆ ಗುಂಗು ಹಿಡಿಸಿ ಮೈಮರೆಸುವಂಥ ಸುಖ, ‘ತಾಮಸ’ ಎನಿಸುತ್ತದೆ.
ಇದು ವ್ಯಕ್ತಿಯನ್ನು ವಾಸ್ತವದಿಂದ ಭ್ರಮೆಗೆ ತಳ್ಳಿ, ಮೋಹದ ಬಲೆಯಲ್ಲಿ ಬೀಳಿಸಿ, ಬುದ್ಧಿಗೇಡಿಯನ್ನಾಗಿಸುತ್ತದೆ. ವಾಸ್ತವವಾಗಿ, ಇದರಲ್ಲಿ ಮೊದಲೂ ಸುಖವಿಲ್ಲ, ಕೊನೆಗೂ ಸುಖವಿಲ್ಲ.

(ಆಧಾರ : ಭಗವದ್ಗೀತೆ; 18ನೇ ಅಧ್ಯಾಯ; 35ರಿಂದ40ರವರೆಗಿನ ಶ್ಲೋಕಗಳು)

Leave a Reply