ಹೆದರಿ ಕುಳಿತರೆ ಕಾರ್ಯಸಾಧನೆಯಾಗುವುದಿಲ್ಲ : ಭರ್ತೃಹರಿಯ ನೀತಿ ಶತಕ

ಪ್ರಾರಭ್ಯತೇ ನ ಖಲು ವಿಘ್ನಭಯೇನ ನೀಚೈಃ
ಪ್ರಾರಭ್ಯ ವಿಘ್ನನಿಹತಾ ವಿರಮಂತಿ ಮಧ್ಯಾಃ |
ವಿಘೈರ್ಮುಹುರ್ಮುಹುರಪಿ ಪ್ರತಿಹನ್ಯಮಾನಾಃ
ಪ್ರಾರಬ್ಧಮುತ್ತಮಗುಣಾ ನ ಪರಿತ್ಯಜಂತಿ ||

ಅರ್ಥ: ಅಡೆ – ತಡೆಗಳು ಬರಬಹುದು ಎಂಬ ಭಯದಿಂದ ಕೆಲವರು ಒಳ್ಳೆಯ ಕೆಲಸಗಳನ್ನು ಆರಂಭಿಸುವುದೇ ಇಲ್ಲ. ಇವರು ಕನಿಷ್ಠರು. ಮಧ್ಯಮರು ಕೆಲಸವನ್ನೇನೋ ಆರಂಭಿಸುತ್ತಾರೆ. ಮಧ್ಯದಲ್ಲಿ ವಿಘ್ನವೇನಾದರೂ ಬಂದರೆ ಕೈಗೆತ್ತಿಕೊಂಡ ಕೆಲಸವನ್ನು ಅರ್ಧದಲ್ಲಿಯೇ ನಿಲ್ಲಿಸಿ ಬಿಡುತ್ತಾರೆ. ಆದರೆ ಉತ್ತಮರು ಪ್ರಾರಂಭ ಮಾಡಿದ ಕೆಲಸದಲ್ಲಿ ಪದೇ ಪದೇ ವಿಘ್ನಗಳು ಬರುತ್ತಿದ್ದರೂ ಫಲ ಸಿಗುವವರೆಗೂ ವಿಚಲಿತರಾಗದೇ ಕೆಲಸವನ್ನು ಮಾಡಿ ಮುಗಿಸುತ್ತಾರೆ.

ತಾತ್ಪರ್ಯ: ನಮ್ಮ ಪಾಲಿಗೆ ಬಂದ ಕೆಲಸಗಳನ್ನು ಸರಿಯಾಗಿ ನಿರ್ವಹಿಸುವುದೇ ನೈಜಧರ್ಮ. ಕರ್ಮದಿಂದ ವಿಮುಖರಾಗುವುದು ಪಲಾಯನದ ಲಕ್ಷಣ. ಅದು ಚಂಚಲ ಮನಸ್ಸಿನವರ ಸ್ವಭಾವ.

ಮನುಷ್ಯರೆಲ್ಲರೂ ಕಾಯಕ ಮಾಡಲೇಬೇಕು. ಹೀಗೆ ಮಾಡುವಾಗ ಯಾರು ಹೇಗೆ ಮಾಡುತ್ತಾರೆ ಅನ್ನುವ ಆಧಾರದ ಮೇಲೆ ಭರ್ತೃಹರಿಯು ಜನರನ್ನು ಉತ್ತಮ, ಮಧ್ಯಮ ಮತ್ತು ನೀಚ ಎಂದು ಮೂರು ವಿಧವಾಗಿ ವಿಂಗಡಿಸಿದ್ದಾನೆ.

ಮುಂದೆ ವಿಘ್ನಗಳು ಬರಬಹುದು ಎಂದು ಭಾವಿಸಿಯೇ ಅನೇಕರು ಯಾವ ಕೆಲಸಗಳನ್ನು ಆರಂಭಿಸುವುದೇ ಇಲ್ಲ. ಇಂತಹವರು ಏನನ್ನೂ ಮಾಡಲಾರರು. ನಾವು ಮಾಡುವ ಪ್ರತಿ ಕೆಲಸದಲ್ಲಿಯೂ ಸ್ವಲ್ಪಮಟ್ಟಿನ “ರಿಸ್ಕ್” ಇದ್ದೇ ಇರುತ್ತದೆ. ವಿಘ್ನಗಳಿಗೆ ಹೆದರಿ ಸುಮ್ಮನೆ ಕೈ ಕಟ್ಟಿ ಕುಳಿತರೆ ಸಂಸಾರ ಸರಿಯಾಗಿ ಸಾಗುವುದಿಲ್ಲ.

ಕನಿಷ್ಠರಿಗಿಂತ ಸ್ವಲ್ಪ ಮುಂದುವರಿದವರು ಕೆಲವರು ಇರುತ್ತಾರೆ. ಇಂತಹವರು ಕೆಲಸವನ್ನೇನೋ ಮಾಡುತ್ತಾರೆ. ಆದರೆ ಮಧ್ಯದಲ್ಲಿ ಅನಿವಾರ್ಯವಾದ ಒಂದೆರಡು ಅಡ್ಡಿಗಳು ಎದುರಾದರೂ “ಬೇಡಪ್ಪ ಈ ಕೆಲಸ” ಎಂದು ಕೆಲಸವನ್ನು ಮಧ್ಯದಲ್ಲಿಯೇ ನಿಲ್ಲಿಸಿ ತಾವೇ ಬುದ್ಧಿವಂತರೆಂದು ಬೀಗುತ್ತಾರೆ. ಇಂತಹವರು ಆರಂಭಿಸಿದ ಕೆಲಸಗಳಿಗೆ ಯಾವ ಅರ್ಥವೂ ಇರುವುದಿಲ್ಲ. ಈ ದಿಶೆಯಲ್ಲಿ ವಿಚಾರಿಸಿದರೆ ಸಣ್ಣ ಕೆಲಸವನ್ನು ಮಾಡಿ ಮುಗಿಸಲಿಕ್ಕೂ ಸಾಧ್ಯವಾಗದು. ಈ ವಿಘ್ನಗಳು ಸಾಧಕರನ್ನು ಹೆದರಿಸಲಿಕ್ಕಾಗಿಯೇ ಎದುರಾಗುವ ಹೆಬ್ಬಂಡೆಗಳು, ಪೆಡಂಭೂತಗಳು. ಅವು ಎದುರಾದಾಗ ಇನ್ನಷ್ಟು ಗಟ್ಟಿಯಾದ ಸಂಕಲ್ಪ ಶಕ್ತಿಯಿಂದ ಹಿಡಿದ ಕೆಲಸಗಳನ್ನು ಮಾಡಿ ಮುಗಿಸಬೇಕು.

ಈ ನಿಟ್ಟಿನಲ್ಲಿ ಉತ್ತಮರು ಅನುಕರಣೀಯರಾಗಿ, ಆದರ್ಶಪ್ರಾಯರಾಗಿ ಇದ್ದಾರೆ. ವಿಘ್ನಗಳು ಪುನಃ ಪುನಃ ಬಂದು ಡಿಕ್ಕಿ ಹೊಡೆದರೂ ಸಹ ತಾವು ಆರಂಭಿಸಿದ ಕೆಲಸವನ್ನು ಕೈ ಬಿಡುವುದಿಲ್ಲ. ಈ ಛಲವೇ ಅವರ ಬಲ. ಅದು ಮಹಾಪುರುಷರ ಯಶಸ್ಸಿನ ರಹಸ್ಯ ಹಾಗೂ ಅದುವೇ ಅಭಿನಂದನೀಯವಾದ ಮತ್ತು ನಿಜವಾದ ಯಶಸ್ಸು.

ಒಟ್ಟಿನಲ್ಲಿ, ಹೆದರಿ ಕುಳಿತರೆ ಕೆಲಸ ನಡೆಯುವುದಿಲ್ಲ, ಧೈರ್ಯ ಮಾಡಬೇಕು, ಮುನ್ನುಗ್ಗಿದರಷ್ಟೆ ಸಾಧನೆ ಸಾಧ್ಯ ಎನ್ನುವುದು ಸಾರಾಂಶ. 

Leave a Reply