ಪೂರ್ವದ ಋಷಿಗಳಲ್ಲಿ ನಮಗೆ ಒಂದಷ್ಟು ಪುರುಷ ಋಷಿಗಳ ಹೆಸರು ಗೊತ್ತೇ ಇದೆ. ಆದರೆ ಸ್ತ್ರೀ ಋಷಿಯರ ಹೆಸರು ತಿಳಿದಿದೆಯೆ? ಮಂತ್ರದ್ರಷ್ಟಾರರೂ ಆದ ಬ್ರಹ್ಮವಾದಿನಿಯರಲ್ಲಿ ಕೆಲವರ ಹೆಸರನ್ನು, ಅವರು ರಚಿಸಿದ ಮಂತ್ರ / ಸೂಕ್ತಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ~ ಗಾಯತ್ರಿ
ಶೌನಕ ಮಹರ್ಷಿಗಳು ರಚಿಸಿದ ಬೃಹದ್ದೇವತಾ ಮಹತ್ಕೃತಿಯಲ್ಲಿ ಹಲವು ಬ್ರಹ್ಮವಾದಿನಿಯರ ಉಲ್ಲೇಖವಿದ್ದು, ಅದು ಹೀಗಿದೆ:
ಘೋಷಾ ಗೋಧಾ, ವಿಶ್ವವಾರಾ, ಅಪಾಲೋಪನಿಷನ್ನಿಷತ್ |
ಬ್ರಹ್ಮಜಾಯಾ ಜುಹೂರ್ನಾಮ ಅಗಸ್ತ್ಯಸ್ಯ ಸ್ವಸಾದಿತಿಃ ||
ಇಂದ್ರಾಣೀ ಚೇಂದ್ರಮಾತಾ ಚ ಸರಮಾ ರೋಮಶೋರ್ವಶೀ |
ಲೋಪಾಮುದ್ರಾ ಚ ನದ್ಯಶ್ಚ ಯಮೀ ನಾರೀ ಚ ಶಶ್ವತೀ ||
ಶ್ರೀರ್ಲಾಕ್ಷಾ ಸಾರ್ಪರಾಜ್ಞೀ ವಾಕ್ ಶ್ರದ್ಧಾ ಮೇಧಾ ಚ ದಕ್ಷಿಣಾ |
ರಾತ್ರೀ ಸೂರ್ಯಾ ಚ ಸಾವಿತ್ರೀ ಬ್ರಹ್ಮವಾದಿನ್ಯ ಈರಿತಾಃ || 2.82 – 84 ||
ಈ ಬ್ರಹ್ಮವಾದಿನಿಯರು ರಚಿಸಿರುವ ಸೂಕ್ತಗಳು ಋಗ್ವೇದದಲ್ಲಿವೆ.
ಇವರಲ್ಲಿ ಮೊದಲನೆಯವಳು ಮತ್ತು ಮುಖ್ಯವಾದವಳು ಘೋಷಾ. ಋಗ್ವೇದದ ಹತ್ತನೆಯ ಮಂಡಲದ ಮೂವತ್ತೊಂಬತ್ತು ಮತ್ತು ನಲವತ್ತನೆಯ ಸೂಕ್ತವನ್ನು ಇವಳು ರಚಿಸಿದ್ದಾಳೆ. ಇವುಗಳಲ್ಲಿ ಅಶ್ವಿನೀದೇವತೆಗಳ ಸ್ತುತಿಯಿದೆ.
ಗೋಧಾ ಎಂಬ ಬ್ರಹ್ಮವಾದಿನಿಯು ಋಗ್ವೇದದ ಹತ್ತನೆಯ ಮಂಡಲದ ನೂರಾಮೂವತ್ತನಾಲ್ಕನೆ ಸೂಕ್ತದ ಎರಡು ಮಂತ್ರಗಳನ್ನು ರಚಿಸಿದ ಋಷಿ. ಅವುಗಳಲ್ಲಿ ಅವಳು ಇಂದ್ರನ ಪ್ರಾರ್ಥನೆ ಮಾಡಿದ್ದಾಳೆ.
ವಿಶ್ವವಾರಾ ಎಂಬಾಕೆ ಐದನೆ ಮಂಡಲದ ಇಪ್ಪತ್ತೆಂಟನೆ ಸೂಕ್ತವನ್ನು ರಚಿಸಿದ್ದಾಳೆ. ಇದರ ವಸ್ತು ಅಗ್ನಿ ದೇವನ ಪ್ರಾರ್ಥನೆ.
ಅಪಾಲಾ ಎಂಬ ಋಷಿ ಎಂಟನೆ ಮಂಡಲದ ತೊಂಬತ್ತೊಂದನೆ ಸೂಕ್ತವನ್ನು ರಚಿಸಿದ್ದಾಳೆ.
ಉಪನಿಷತ್ ಮತ್ತು ನಿಷತ್ ಎಂಬಿಬ್ಬರು ಬ್ರಹ್ಮವಾದಿನಿಯರು ರಚಿಸಿರುವ ಏಳು ಮಂತ್ರಗಳು ಖಿಲಸೂಸೂಕ್ತಗಳಲ್ಲಿವೆ.
ಬ್ರಹ್ಮನ ಹೆಂಡತಿ (ಬ್ರಹ್ಮಜಾಯಾ) ಜುಹೂ ಹತ್ತನೆ ಮಂಡಲದ ನೂರಾಒಂಬತ್ತನೆ ಸೂಕ್ತವನ್ನು ರಚಿಸಿದ್ದಾಳೆ.
ಅಗಸ್ತ್ಯನ ಸಹೋದರಿಯಾಗಿದ್ದ ಬ್ರಹ್ಮವಾದಿನಿಯೊಬ್ಬಳು (ಹೆಸರು ನಮೂದಾಗಿಲ್ಲ) ಹತ್ತನೆ ಮಂಡಲದ ಅರವತ್ತನೆ ಸೂಕ್ತದ ಆರನೆ ಮಂತ್ರವನ್ನು ರಚಿಸಿದ್ದಾಳೆ.
ಆದಿತ್ಯರ ಮಾತೆಯಾದ ಅದಿತಿ, ಋಗ್ವೇದದ ಅನೇಕ ಮಂತ್ರಗಳಿಗೆ ದೇವತೆ. ಹಾಗೆಯೇ ಕೆಲವು ಮಂತ್ರಗಳಿಗೆ ಋಷಿಯೂ ಆಗಿದ್ದಾಳೆ. ಋಗ್ವೇದದ ನಾಲ್ಕನೆ ಮಂಡಲದಿಂದ ಹದಿನೆಂಟನೆ ಸೂಕ್ತ ಮತ್ತು ಹತ್ತನೆ ಮಂಡಲದ ಎಪ್ಪತ್ತೆರಡನೆಯ ಸೂಕ್ತಗಳು ಈಕೆಯಿಂದ ರಚಿಸಲ್ಪಟ್ಟವು.
ಇಂದ್ರಪತ್ನಿ ಇಂದ್ರಾಣಿ ಕೂಡಾ ಒಬ್ಬ ಋಷಿ. ಹತ್ತನೆ ಮಂಡಲದ ಎಂಬತ್ತಾರನೆ ಸೂಕ್ತದ ಕೆಲವು ಮಂತ್ರಗಳನ್ನೂ ನೂರಾನಲವತ್ತೈದನೆಯ ಸೂಕ್ತವನ್ನೂ ಈಕೆಯದೆಂದು ಹೇಳಲಾಗುತ್ತದೆ. ಹತ್ತನೆ ಮಂಡಲದ ನೂರಾಐವತ್ತೊಂಬತ್ತನೆ ಸೂಕ್ತದ ಹೆಸರು ಶಚೀ. (ಶಚೀ – ಇಂದ್ರಾಣಿಯ ಮತ್ತೊಂದು ಹೆಸರು).
ಹತ್ತನೆ ಮಂಡಲದ ನೂರಾಎಂಟನೆ ಸೂಕ್ತದ ಕೆಲವು ಮಂತ್ರಗಳು ಸರಮಾ ಹೆಸರಲ್ಲಿವೆ. ಸರಮೆಯನ್ನು ದೇವಶುನೀ – ದೇವಲೋಕದಲ್ಲಿದ್ದ ಹೆಣ್ಣುನಾಯಿ ಎನ್ನಲಾಗಿದೆ.
ಋಗ್ವೇದದ ಮೊದಲ ಮಂಡಲದಲ್ಲಿ ಬರುವ ನೂರಾಇಪ್ಪತ್ತಾರನೇ ಮಂತ್ರದ ದ್ರಷ್ಟಾರಳು ರೋಮಷಾ ಎಂಬ ಋಷಿ.
ಋಗ್ವೇದದ ತೊಂಬತ್ತೈದನೆಯ ಸೂಕ್ತವು ಊರ್ವಶೀ – ಪುರೂರವರ ಸಂವಾದವನ್ನು ಹೊಂದಿದೆ. ಅಪ್ಸರೆಯಾದ ಊರ್ವಶಿ ಈ ಸಂವಾದದಲ್ಲಿ ಆಡಿದ ಜ್ಞಾನಧಾರೆಯಂಥ ಮಾತುಗಳನ್ನು ಮಂತ್ರವೆಂದೇ ಪರಿಗಣಿಸಿ, ಅವಳನ್ನೂ ಬ್ರಹ್ಮವಾದಿನಿ ಎಂದು ಕರೆಯಲಾಗಿದೆ.
ಅಗಸ್ತ್ಯಪತ್ನಿ ಲೋಪಾಮುದ್ರಾ ಕೂಡಾ ಋಷಿಯಾಗಿದ್ದು, ಈ ಋಷಿದಂಪತಿಗಳ ರಚನೆ ಋಗ್ವೇದದ ಹತ್ತನೆ ಮಂಡಲದ ನೂರಾಎಪ್ಪತ್ತೊಂಬತ್ತನೆ ಸೂಕ್ತದಲ್ಲಿದೆ.
ವಿಶ್ವಾಮಿತ್ರ ಋಷಿಯು ವಿಪಾಶಾ ಮತ್ತು ಶತದ್ರೀ ನದಿಗಳೊಡನೆ ನಡೆಸಿದ ಸಂವಾದ ಋಗ್ವೇದದ ಮೂರನೆ ಮಂಡಲದ ಮೂವತ್ತಮೂರನೆ ಸೂಕ್ತವಾಗಿದೆ. ಆದ್ದರಿಂದ ಈ ಎರಡು ನದೀದೇವತೆಗಳೂ ಬ್ರಹ್ಮವಾದಿನಿಯರೆಂದು ಪರಿಗಣಿಸಲ್ಪಟ್ಟಿದ್ದಾರೆ.
ಯಮ – ಯಮೀ ಸಂವಾದವು ಹತ್ತನೇ ಮಂಡಲದ ಹತ್ತನೇ ಸೂಕ್ತವಾಗಿದ್ದು, ಈ ಕಾರಣದಿಂದ ಯಮಿಯನ್ನು ಬ್ರಹ್ಮವಾದಿನಿ ಎಂದು ಕರೆಯಲಾಗಿದೆ.
ಅಂಗೀರಸನ ಮಗಳೂ ಆಸಂಗನ ಹೆಂಡತಿಯೂ ಆಗಿದ್ದ ಶಶ್ವತೀ ಎನ್ನುವವಳು ಎಂಟನೇ ಮಂಡಲದಲ್ಲಿ ಬರುವ ಒಂದು ಮಂತ್ರಕ್ಕೆ (1.34) ಋಷಿಯಾಗಿದ್ದಾಳೆ.
ಖಿಲಸೂಕ್ತದಲ್ಲಿ ಬರುವ ಶ್ರೀಸೂಕ್ತದ ರಚಯಿತ್ರಿಯರು ಶ್ರೀ ಮತ್ತು ಸ್ತ್ರೀ ಎಂಬ ಋಷಿಗಳು. ಲಾಕ್ಷಾ ಎಂಬಾಕೆಯೂ ಖಿಲಸೂಕ್ತದ ಒಬ್ಬ ಋಷಿಯೆಂದು ಬೃಹದ್ದೇವತಾ ಗ್ರಂಥವು ಹೇಳುತ್ತದೆ.
ಸರ್ಪರಾಜ್ಞಿಯಾದ ಕದ್ರೂ ಹತ್ತನೆ ಮಂಡಲದ ನೂರಾಎಂಬತ್ತೊಂಬತ್ತನೇ ಸೂಕ್ತದ ರಚಯಿತ್ರೀ. ಇದೇ ಮಂಡಲದ ನೂರಾಇಪ್ಪತ್ತೈದನೆಯ ಸೂಕ್ತವನ್ನು ಅಭೃಂಣನ ಮಗಳಾದ ವಾಕ್ ಎಂಬುವವಳು (ವಾಗಂಭೃಣೀ ಸೂಕ್ತ) ರಚಸಿದ್ದಾಳೆ.
ಹತ್ತನೆ ಮಂಡಲದ ನೂರಾಐವತ್ತೊಂದನೆ ಸೂಕ್ತವನ್ನು ರಚಿಸಿದವಳು ಶ್ರದ್ಧಾ.
ಖಿಲಸೂಕ್ತದ ಋಷಿ ಮೇಧಾ, ನೂರಾಏಳನೇ ಸೂಕ್ತಕ್ಕೆ ಋಷಿಯಾದ ದಕ್ಷಿಣಾ ಮೊದಲಾದವು ಸ್ತ್ರೀಯರ ಹೆಸರೋ ಭಾವನೆಗಳದ್ದೋ ಎಂಬುದು ಖಚಿತವಿಲ್ಲ ಎಂದು ವಿದ್ವಾಂಸರ ಅಭಿಪ್ರಾಯ.
ಭಾರದ್ವಾಜನ ಮಗಳು ರಾತ್ರೀ ಹತ್ತನೇ ಮಂಡಲದ ನೂರಾಇಪ್ಪತ್ತೇಳನೆ ಸೂಕ್ತದ ಋಷಿ. ಸವಿತೃವಿನ ಮಗಳು ಸೂರ್ಯಾ (ಸಾವಿತ್ರೀ) ಎಂಬತ್ತೈದನೆಯ ಸೂಕ್ತದ ದ್ರಷ್ಟಾರಳು.
ಬೃಹದ್ದೇವತೆಯಲ್ಲಿ ಉಲ್ಲೇಖಗೊಂಡವರಷ್ಟೇ ಅಲ್ಲದೆ, ಇನ್ನೂ ಹಲವು ಸ್ತ್ರೀಯರು ಋಷಿಗಳಾಗಿ ಕಂಡುಬರುತ್ತಾರೆ. ಅವರಲ್ಲಿ : ಸಿಕತಾ ನಿವಾವರೀ, ಮಮತಾ, ಗಾರ್ಗೀ ವಾಚಕ್ನವೀ, ಮೈತ್ರೇಯೀ ಮೊದಲಾದ ಬ್ರಹ್ಮವಾದಿನಿಯರು ಪ್ರಮುಖರು.