ತತ್ ತ್ವಮ್ ಅಸಿ : ಉದ್ಧಾಲಕ ಆರುಣಿ – ಶ್ವೇತಕೇತು ಸಂವಾದ

ಛಾಂದೋಗ್ಯ ಉಪನಿಷತ್ ನಲ್ಲಿ ಬರುವ ‘ಉದ್ದಾಲಕ – ಶ್ವೇತ ಕೇತು’ ನಡುವಿನ ಸಂವಾದ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಭೌತಿಕ ದೃಷ್ಟಿಗೆ ಗೋಚರಿಸದ ಆತ್ಮವು ಸರ್ವವ್ಯಾಪಿಯಾಗಿದೆ ಎಂದೂ. ಮತ್ತು ಆ ತ್ಮವು ನೀನೇ ಆಗಿರುವೆ (ತತ್ ತ್ವಮ್ ಅಸಿ) ಎಂದೂ ತಂದೆಯಾದ ಉದ್ಧಾಲಕ ಆರುಣಿ, ತನ್ನ ಮಗ ಶ್ವೇತಕೇತುವಿಗೆ ವಿವರಿಸುವ ಸಂಭಾಷಣೆ ಇಲ್ಲಿದೆ.

uddhalaka

ಉದ್ದಾಲಕ ಆರುಣಿ : ಶ್ವೇತಕೇತು! ಕಿವಿಯಿಂದ ಕೇಳಲಾಗದ್ದನ್ನು ಯಾವುದರ ಮೂಲಕ ಕೇಳಬಹುದೋ, ಕಣ್ಣಿಂದ ನೋಡಲಾಗದ್ದನ್ನು ಯಾವುದರ ಮೂಲಕ ನೋಡಬಹುದೋ, ಅರಿವಿಗೆ ನಿಲುಕದ್ದನ್ನು ಯಾವುದರ ಮೂಲಕ ಅರಿಯಬಹುದೋ, ಆ ವಿದ್ಯೆಯನ್ನು ನೀನು ಕಲಿತಿರುವೆಯಾ?
ಶ್ವೇತಕೇತು : ಇಲ್ಲ ತಂದೆ ! ತಮ್ಮಿಂದ ಅದನ್ನು ಕಲಿಯಬಯಸುತ್ತೇನೆ.
ಉದ್ದಾಲಕ ಆರುಣಿ : ಹಾಗೇ ಆಗಲಿ. ಕೇಳು ಮಗನೇ ! ಜೇಡಿಮಣ್ಣಿನಿಂದ ವಿವಿಧ ಆಕಾರಗಳ ಪಾತ್ರಗಳನ್ನು ಮಾಡಿದರೂ ವಸ್ತುತಃ ಅದು ಜೇಡಿಯ ಮಣ್ಣೇ ಆಗಿರುತ್ತದೆ ಅಲ್ಲವೆ? ಹಾಗೆಯೇ ಈ ವಿದ್ಯೆ.
ಶ್ವೇತಕೇತು : ಇದನ್ನು ವಿಸ್ತರಿಸಿ ಹೇಳಿ ತಂದೆ…
ಉದ್ದಾಲಕ : ಹಾಗೆಯೇ ಆಗಲಿ ಮಗು ! ಹೋಗಿ, ಆ ಆಲದ ಮರದಿಂದ ಒಂದು ಹಣ್ಣು ತೆಗೆದುಕೊಂಡು ಬಾ….

ಶ್ವೇತಕೇತು ತರುತ್ತಾನೆ.

ಉದ್ದಾಲಕ : ಅದನ್ನು ಒಡೆದು ನೋಡು. ಅದರಲ್ಲೇನು ಕಾಣುತ್ತಿರುವುದು ಹೇಳು?
ಶ್ವೇತಕೇತು: ಚಿಕ್ಕಚಿಕ್ಕ ಬೀಝಗಳು ತಂದೆ!
ಉದ್ದಾಲಕ : ಸೌಮ್ಯ! ಆ ಬೀಜಗಳಲ್ಲೊಂದನ್ನು ಒಡೆದು, ಅದರಲ್ಲಿ ಏನಿದೆ ನೋಡು…..
ಶ್ವೇತಕೇತು : ಏನೂ ಕಾಣುತ್ತಲೇ ಇಲ್ಲ ತಂದೆ !
ಉದ್ದಾಲಕ : ಮಗೂ ! ಅಲ್ಲಿ ನಿನ್ನ ಕಣ್ಣಿಗೆ ಕಾಣಿಸದಿರುವ ಸೂಕ್ಷ್ಮಸಾರವಿದೆಯಲ್ಲ – ಆ ಸಾರದಿಂದಲೇ ಈ ಮಹತ್ತಾದ ಆಲದ ಮರ ಹುಟ್ಟಿ ಬೆಳೆದಿದೆ. ಅದುವೇ ಆತ್ಮಶಕ್ತಿ. ಅದೇ ಪರಮ ಸತ್ಯ. ಮತ್ತು ಅದು ನೀನೇ ಆಗಿರುವೆ ಮಗೂ!

ಶ್ವೇತಕೇತುವಿಗೆ ಅರ್ಥವಾಗುವುದಿಲ್ಲ. ಇನ್ನಷ್ಟು ವಿವರಿಸಿ ಹೇಳೆಂದು ತಂದೆಯನ್ನು ಕೇಳುತ್ತಾನೆ. 

ಉದ್ದಾಲಕ ಅರುಣಿ: ಈ ಉಪ್ಪನ್ನು ನೀರಿಗೆ ಹಾಕಿಡು. ಬೆಳಗ್ಗೆ ಅದನ್ನು ನನ್ನ ಬಳಿ ತೆಗೆದುಕೊಂಡು ಬಾ.
ಶ್ವೇತಕೇತು : ಹಾಗೆಯೇ ಆಗಲಿ.

ಉಪ್ಪನ್ನು ನೀರಿನ ಲೋಟಕ್ಕೆ ಹಾಕಿಟ್ಟು, ಶ್ವೇತಕೇತು ಮಲಗಿದನು. ಮತ್ತು ಬೆಳಗ್ಗೆ ಎದ್ದು ತಂದೆಯ ಬಳಿ ಹೋದನು.

ಉದ್ದಾಲಕ ಅರುಣಿ: ಮಗನೇ, ನಿನ್ನೆ ರಾತ್ರಿ ನೀರಿನಲ್ಲಿ ಯಾವ ಉಪ್ಪನ್ನು ಹಾಕಿದ್ದೆಯೋ ಅದನ್ನು ತೆಗೆದುಕೊಂಡು ಬಾ.

ಶ್ವೇತಕೇತು ಯೋಚಿಸುತ್ತ ನಿಲ್ಲುತ್ತಾನೆ. ಉಪ್ಪು ನೀರಲ್ಲಿ ಕರಗಿಹೋಗಿದೆ. ಅದನ್ನು ತರುವುದಾದರೂ ಹೇಗೆ!?
ಉದ್ಧಾಲಕ ಸುಮ್ಮನೆ ನಿಂತ ಮಗನಿಗೆ ಹೇಳುತ್ತಾನೆ, “ಈ ನೀರಿನ ಮೇಲ್ಭಾಗವನ್ನು ಮಾತ್ರ ಕುಡಿ. ರುಚಿ ಹೇಗಿದೆ ಎಂದು ಹೇಳು”
ಶ್ವೇತಕೇತು: ಕುಡಿದು ನೋಡಿದೆ ತಂದೆ. ಅದು ಉಪ್ಪಾಗಿದೆ.
ಉದ್ದಾಲಕ: ಈಗ ನೀರಿನ ಮಧ್ಯಭಾಗವನ್ನು ಕುಡಿದು ನೋಡು; ಹೇಗಿದೆ ಹೇಳು
ಶ್ವೇತಕೇತು: ಇದೂ ಉಪ್ಪಾಗಿದೆ ತಂದೆ.
ಉದ್ದಾಲಕ: ಮಗನೇ, ಈಗ ನೀರನ್ನು ಕೆಳಭಾಗದವರೆಗೂ ಕುಡಿದು ನೋಡು
ಶ್ವೇತಕೇತು: ಇದು ಕೂಡಾ ಉಪ್ಪಾಗಿದೆ ತಂದೆ!

“ಹಾಗೆಯೇ, ಮಗನೇ!” ಉದ್ಧಾಲಕ ಆರುಣಿ ವಿವರಿಸಿದ, “ಭೌತಿಕವಾಗಿ ಗೋಚರಿಸದೇ ಹೋದರೂ ಆತ್ಮವಸ್ತುವು ಸರ್ವಸ್ವವನ್ನೂ ವ್ಯಾಪಿಸಿದೆ. ಅದು ಎಲ್ಲಕ್ಕೂ ಸಾರವಾಗಿದೆ. ಮತ್ತು ಅದು ನೀನೇ ಆಗಿರುವೆ”

3 Comments

  1. ತತ್ವಮಸಿ ಅರ್ಥವಿಶೇಷತೆ ಕಥಾ ರೂಪದ ವಿವರಣೆ ಮನ ಮುಟ್ಟುವಂತೆ ತಿಳಿಸಿರುತ್ತೀರಿ ಧನ್ಯವಾದ

  2. *ಅರಳಿಮರ* ದ ಶಾಖೆಗಳಲ್ಲಿ ಅರಳಿದ ಉಪನಿಷತ್ ಕತೆಗಳು ಹಾಗೂ ಬೇನ್ದ್ರ ಅಜ್ಜ ಮೇಷ್ಟ್ರ ವಿಷಯಗಳು ನನ್ನನ್ನು ಒಳನೋಡಲು ಪ್ರೇರಣೆ ನೀಡಿದೆ
    ನಮ್ರಃ,
    ಕೊ🕉ವೆಂ🐄

Leave a Reply