ಓ ತಬ್ರೀಜಿನ ಸೂರ್ಯನೇ! : ಒಂದು ರೂಮಿ ಪದ್ಯ

ಜಲಾಲುದ್ದೀನ್ ರೂಮಿ | ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ

ನನ್ನ ನಾನೇ ಅರಿಯದ ನಾನು
ನಿಮಗೆ ಹೇಳಲಾದರೂ ಏನನ್ನು?
ನಾನು ಕ್ರೈಸ್ತನಲ್ಲ, ಯಹೂದಿಯೂ ಅಲ್ಲ
ಮಾಜೂಸನಲ್ಲ ನಾನು, ಮುಸ್ಲಿಮನೂ ಅಲ್ಲ
ದಿಕ್ಕು ದೆಸೆಗಳನು ಅರಿತವನಲ್ಲ,

ಕಡಲು ನನ್ನದಲ್ಲ, ದಂಡೆಯೂ ನನ್ನದಲ್ಲ,
ನಾನು ಬಯಲ ನೆಲದಲಿ ಮಲಗಿದವನಲ್ಲ
ಬಾನ ನಿಟ್ಟಿಸಿ ಗ್ರಹತಾರೆ ಕಂಡವನಲ್ಲ…
ಭೂಮಿಯಲಿ ಚಿಗಿತವನಲ್ಲ
ನೀರಿನಲಿ ಚಿಗುರಿದವನಲ್ಲ

ಗಾಳಿಯ ಮಗನಲ್ಲ, ನಾನು ಬೆಂಕಿಯ ಮಗನಲ್ಲ;
ಜನ್ನತಿನಿಂದ ಇಳಿದು ಬಂದವನಲ್ಲ,
ಆದರೂ ನನಗೀ ಲೋಕದ ಪರಿಚಯವೇ ಇಲ್ಲ!
ಅಸ್ತಿತ್ವವೇ ಇರದವನು ನಾನು;
ಇರುವುದೇನಿದೆಯೋ, ಯಾವುದೂ ನನ್ನದಲ್ಲವೇ ಅಲ್ಲ…

ನಾನು ಭಾರತೀಯನಲ್ಲ, ಚೀನೀಯನೂ ಅಲ್ಲ,
ಬಲ್ಗೇರಿಯನಲ್ಲ, ಸಕ್‌ಸೀನಿಯನಲ್ಲ
ಇರಾಕಿಗೂ ಸೇರಿಲ್ಲ, ಖುರಾಸಾನಿಗೂ ಸೇರಿದವನಲ್ಲ;
ಈ ಜಗದ ಮಗುವಲ್ಲ ನಾನು,
ಅದರಾಚೆಯವನೂ ಅಲ್ಲ;
ಜನ್ನತಿನಲಿ ನನ್ನ ಮನೆಯಿಲ್ಲ, ನಾನು ಜಹನ್ನುಮಿನಲೂ ಇಲ್ಲ
ನನಗೊಂದು ಊರೆಂಬುದೇ ಇಲ್ಲ! ನನ್ನದೆಂಬ ನೆಲೆಯಿಲ್ಲ.

ಆದಂ ಹವ್ವಾ ನನ್ನ ಹಡೆದವರಲ್ಲ
ರಿಜ್ವಾನ್ ನನ್ನ ಗೆಳೆಯನಲ್ಲ
ನನ್ನ ನೆಲಕೆ ಹೆಸರಿಲ್ಲ, ನನ್ನ ಜಾಡಿಗೂ ಗುರುತಿಲ್ಲ
ನನಗೊಂದು ದೇಹವಿಲ್ಲ, ಆತ್ಮವೆಂಬುದು ನಾನಲ್ಲ…

ಆತ್ಮದೊಳಗಿನ ಚೇತನವೇ! ನಿನ್ನಿಂದ ಹೊಮ್ಮಿದ ಬೆಳಕು ನಾನು
ಅದ್ವೈತದ ಬೆನ್ನೇರಿ ಎರಡು ಲೋಕಗಳ ಬೆಸೆದವನು
ನನ್ನ ಹುಡುಕಾಟ ನೀನು, ನನ್ನ ತಿಳಿವು ನೀನು
ನನ್ನ ಕಾಣ್ಕೆ ನೀನು, ನನ್ನ ಕೂಗು ನೀನು…
ಆದಿಯೂ ಅವನೇ, ಅಂತ್ಯವೂ ಅವನೇ
ಹೊರಗೂ ಒಳಗೂ ಅವನೊಬ್ಬನೇ
ಎಲ್ಲೆಲ್ಲೂ ಇರುವವನು ಅವನೊಬ್ಬನೇ
ಎಂದಲ್ಲದೆ ಮತ್ತೇನೂ ಅರಿಯದವ ನಾನು!

ಪ್ರೇಮದ ಸುರಾಹಿಯಲಿ ಸುರಿವಾಗ
ಜಗವೆರಡೂ  ಜಾರಿದವು ಕೈಯಿಂದ;
ಕುಡಿದು ಕುಣಿಯಲೀಗ ನನಗೆ
ಲಜ್ಜೆ ಎಂಬುದೇ ತಿಳಿದಿಲ್ಲ!
ನಿನ್ನಗಲಿಕೆಯ ಕ್ಷಣವೊಂದು ಸಾಕು,
ಈ ನನ್ನ ಬದುಕು ಬಾಡಲು;
ನಿನ್ನೊಡನೆ ಅರೆಘಳಿಗೆ ಏಕಾಂತ ಸಿಕ್ಕರೂ
ಮೋಕ್ಷ ಕೆಡವಿ ಕಾಲಡಿ ತುಳಿಯುತ್ತ ಕುಣಿವೆನು!

ಓ ತಬ್ರೀಜಿ಼ನ ಸೂರ್ಯನೇ,
ಚಿತ್ತಮತ್ತನಾಗಿ ನಾನು ಉರುಳಿಬಿದ್ದಿರುವೆ;
ನನ್ನ ಬಳಿ ಉಳಿದಿರುವುದೀಗ, ನಿನಗೆ ಹೇಳಲು ಉನ್ಮಾದದ ಕಥೆಯೊಂದೇ…

Leave a Reply