ಮಾಧವ ಲಾಲನ ಷಾ ಹುಸೇನ : ಸೂಫೀ ಸೌಹಾರ್ದದ ಕನ್ನಡಿ

ಅದೆಷ್ಟೇ ಗೌರವ ಮನ್ನಣೆಗಳಿದ್ದರೂ ಹುಸೇನನಿಗೆ ಅವೆಲ್ಲ ಬೇಕಿರಲಿಲ್ಲ. ಅವನು ಮತೀಯ ಮೇಲು ಕೀಳುಗಳನ್ನು ವಿರೋಧಿಸಿದ. ಶ್ರೀಮಂತಿಕೆಯ ತಾರತಮ್ಯವನ್ನು ಕಡೆಗಣಿಸಿದ. ಕಂದಾಚಾರವನ್ನು ದೂರವಿಟ್ಟ. ಪೊಳ್ಳು ಜನರನ್ನು ಹೊಡೆದಟ್ಟಿದ. ಯಾರಾದರೂ ಆತನನ್ನು ‘ಪೀರ್’ (ಗುರು) ಎಂದು ಕರೆದರೆ ಅದನ್ನು ನಿರಾಕರಿಸುತ್ತಾ, ‘ಫಕೀರನನ್ನು ಪೀರನೆನ್ನುವೆ ಏಕೆ?’ ಎಂದು ಗದರುತ್ತಿದ್ದ! ~ ಅಲಾವಿಕಾ

s6
ಷಾ ಹುಸೇನ – ಮಾಧವ ಲಾಲರ ಸಮಾಧಿ | ಇಂಟರ್’ನೆಟ್ ಚಿತ್ರ

ಅದು ಹದಿನಾರನೆಯ ಶತಮಾನ. ವಿಶ್ವಾದ್ಯಂತ ಸಂಸ್ಕೃತಿಗಳ ಕೊಡು ಕೊಳ್ಳುವಿಕೆ ಮಾತ್ರವಲ್ಲ, ಹೇರುವಿಕೆ – ದಬ್ಬಾಳಿಕೆಗಳೂ ತಾರಕಕ್ಕೇರಿದ್ದ ಅವಧಿಯದು. ಅದರಲ್ಲಿಯೂ ಇನ್ನೂ ಒಂದು ರಾಷ್ಟ್ರವಾಗಿ ಗುರುತು ಪಡೆಯದೆ ಇದ್ದ ಭಾರತ ಉಪಖಂಡವು ಆಕ್ರಮಣಕಾರರಿಂದ ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುತ್ತ, ಮುಖ್ಯವಾಗಿ ತನ್ನದೇ ಆಂತರಿಕ ಕಲಹದಿಂದ ಮತ್ತಷ್ಟು ಪೊಳ್ಳಾಗುತ್ತ, ಕಾಯಕಲ್ಪಕ್ಕೆ ಕಾತರಿಸಿದ್ದ ಕಾಲವದು. ಈ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಲು ಭಾರತದ ಅಂತಸ್ಸತ್ವವಾದ ಅಧ್ಯಾತ್ಮಿಕ ಅರಿವನ್ನು ಪುನಶ್ಚೇತನಗೊಳಿಸುವ ತುರ್ತು ಒದಗಿತ್ತು. ಹಾಗೆಂದೇ ದಕ್ಷಿಣದಲ್ಲಿ ಹುಟ್ಟಿಕೊಂಡ ಭಕ್ತಿ ಚಳವಳಿ ದೇಶಾದ್ಯಂತ ವ್ಯಾಪಿಸಿ ಬಹಿರಂತರಂಗ ಶುದ್ಧೀಕರಣಕ್ಕೆ ನಾಂದಿ ಹಾಡಿತು. ಈ ಕಾಲಘಟ್ಟದಲ್ಲಿ ಅನೇಕ ಸಾಧುಗಳು, ಸೂಫಿಗಳು, ಸಂತರು, ವಚನಕಾರರು, ದಾಸರು ಮೊದಲಾದ ಆಧ್ಯಾತ್ಮಿಕ ಮಾರ್ಗದರ್ಶಿಗಳು ಸಮಾಜ ಸುಧಾರಣೆಗೆ ಬಲ ತುಂಬಿದರು. ಅಂತಹಾ ಮಹಾಚೇತನರಲ್ಲಿ ಒಬ್ಬ ಸೂಫಿ ಸಂತ, ಲಾಹೋರದ ಷಾ ಹುಸೇನ್.

ಬಯಲಾದ ಸೂಫೀ
ಷಾ ಹುಸೇನನ ಹಿನ್ನೆಲೆ ಸಂಕೀರ್ಣವಾದದ್ದು. ಅವನ ಪೂರ್ವಿಕರು ಲಾಹೋರಿನಲ್ಲಿ ನೆಲೆಸಿ ನೇಕಾರ ವೃತ್ತಿ ಕೈಗೊಂಡಿದ್ದರು. ಹುಸೇನ್ ಬಾಲ್ಯದಲ್ಲೇ ತನ್ನ ವಿಲಕ್ಷಣತೆಯನ್ನು ಪ್ರಕಟಗೊಳಿಸಿದ್ದ. ಸದಾ ಹಾಡುತ್ತ ಕುಣಿಯುತ್ತ ಕಾಲ ಕಳೆಯುತ್ತಿದ್ದ ಅವನನ್ನು ಮೌಲ್ವಿಗಳ ಬಳಿ ಶಿಕ್ಷಣಕ್ಕೆ ಕಳಿಸಲಾಯ್ತು. ಬುದ್ಧಿವಂತನಾಗಿದ್ದ ಹುಸೇನ, ಬಹಳ ಬೇಗ ಕುರಾನ್ ಅನ್ನು ಕಂಠಸ್ಥಗೊಳಿಸಿಕೊಂಡ. ಸದಾ ಒಂದು ಗುಂಗಿನಲ್ಲಿ ಇರುತ್ತ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿರುತ್ತಿದ್ದ ಹುಸೇನ, ನಡು ಮೂವತ್ತರಲ್ಲಿ ಶೇಕ್ ಸಾದ್ ಉಲ್ಲಾರ ಬಳಿ ಶಾಗಿರ್ದನಾದ. ಆದರೆ ಅವನು ಸಿದ್ಧ ದಾರಿಯಲ್ಲಿ ನಡೆಯುವ ಕುರಿಯಾಗಿರಲಿಲ್ಲ. ತನ್ನ ಗುರುವಿನ ಪ್ರತಿ ಪಾಠದಲ್ಲೂ ಅವನು ಹೊಸ ವ್ಯಾಖ್ಯಾನವನ್ನು ಕಂಡುಕೊಳ್ಳುತ್ತಿದ್ದ. 
ಒಮ್ಮೆ ಶೇಕ್ ಸಾಹೇಬರು ಕುರಾನ್ ಅನ್ನು ವಿವರಿಸುತ್ತಾ, ಅದರಲ್ಲಿರುವ `ಈ ಜಗತ್ತು ಒಂದು ಆಟದ ಮೈದಾನ’ ಎನ್ನುವ ಮಾತನ್ನು ಹೇಳಿದರು. ಅದನ್ನು ಕೇಳುತ್ತಲೇ ಹುಸೇನ ಗುರುಸಮ್ಮುಖದಿಂದ ಎದ್ದು ಹೊರಕ್ಕೋಡಿದ. ಅಲ್ಲಿಂದ ಮುಂದೆ ಆತ ಕಾಣಿಸಿಕೊಂಡಿದ್ದು ಕೆಂಪು ಗೌನು, ಮದಿರೆಯ ಸುರಾಹಿ ಮತ್ತು ಪ್ಯಾಲಾದೊಂದಿಗೆ. ಹಾಡುತ್ತ, ಕುಣಿಯುತ್ತ ತನ್ನದೇ ನಿತ್ಯ ಉನ್ಮಾದದೊಂದಿಗೆ! 
ಹೀಗೆ ಸಾಂಸ್ಥಿಕ ಮತವೊಂದರ ರಿವಾಜುಗಳಿಂದ ಹೊರಬಂದು ತನ್ನದೇ ದಾರಿ ರೂಪಿಸಿಕೊಂಡ ಹುಸೇನ ಸೂಫೀ ಲಕ್ಷಣಗಳನ್ನು ಬೆಳೆಸಿಕೊಂಡ. ಕವಿತೆಗಳನ್ನು ಹಾಡಿದ. ಅವನ ಸುತ್ತ ದೀಪವನ್ನು ಪತಂಗಗಳು ಮುತ್ತುವಂತೆ ಜನ ಸುತ್ತುವರೆದರು. `ಇನ್ನೆಷ್ಟು ದಿನ ಹೀಗೆ ಪವಿತ್ರ ಜೀವಿಗಳಂತೆ ಕಾಣಿಸ್ಕೊಳ್ಳಬೇಕು? ನಾಳೆ ನಾವೆಲ್ಲರೂ ಮನೆಗೆ ಮರಳುವುದಿದೆ. ಹಾಡುತ್ತ, ನಲಿಯುತ್ತ ಜೀವಿಸುವುದಿದೆ. ಬೇಡಿಕೊಂಡು ಬದುಕುವುದಂತೂ ಇದ್ದೇ ಇದೆ. ನಾವು ಜೀವಿಸಲಿಕ್ಕಿರುವುದು ಇದೇ ಬದುಕನ್ನಷ್ಟೇ…’ ಎನ್ನುತ್ತಿದ್ದ ಹುಸೇನ. 
ಆದರೆ ಇಂಥಾ ಬುದ್ಧಿವಂತ ಶಿಷ್ಯನನ್ನು ಬಿಟ್ಟುಕೊಡಲು ಶೇಕ್ ಸಾಹೇಬರಿಗೆ ಇಷ್ಟವಿದ್ದಿಲ್ಲ. ಹಾಗೂ ಹೀಗೂ ಮನವೊಲಿಸಿ ಆತನನ್ನು ಕರೆತಂದು ಕೂರಿಸಿಕೊಂಡರು. ಮತ್ತೆ ಮೊದಲಿನಂತೆ ಕುರಾನಿನ ವ್ಯಾಖ್ಯಾನ ಪಾಠ ಆರಂಭವಾಯಿತು. ಶೇಕ್ ಸಾಹೇಬರು `ಆಲಮ್ ನಶ್ರಾಹ್ ಲಾಕಾ ಸದ್ರ್ಕ್’ – `ನಾವು ನಿನ್ನ ಹೃದಯವನ್ನು ತೆರೆದು ಹೊರೆಯನ್ನು ಹರಿಯಗೊಟ್ಟು, ಭಾರಮುಕ್ತಗೊಳಿಸಿಲ್ಲವೇನು?’ ಎನ್ನುವ ಸಾಲುಗಳನ್ನು ಓದುತ್ತಿದ್ದ ಹಾಗೆಯೇ ಹುಸೇನನ ಮೈಯಲ್ಲಿ ಮಿಂಚು ಹರಿಯಿತು. ಅದರ ಅರ್ಥವೈಶಾಲ್ಯತೆಯ ಸಮ್ಮೋಹಕ್ಕೊಳಗಾದ ಹುಸೇನ ಮತ್ತೊಮ್ಮೆ ಓಡಿ ಹೋದ. ಅವನು ಉನ್ಮತ್ತನಂತೆ ನಗುತ್ತಿದ್ದ ಮತ್ತು ಸುರೆಯನ್ನು ಗಂಟಲಿಗೆ ಸುರಿದುಕೊಳ್ಳುತ್ತ ನಶೆಯಲ್ಲಿ ಹಾಡತೊಡಗಿದ. ಅವನ ಈ ಉನ್ಮಾದ ದೈವಾನುಭೂತಿಯ ಉನ್ಮಾದವಾಗಿತ್ತು. ಅಂದು ಮತ್ತೊಮ್ಮೆ ಬಯಲಾದ ಹುಸೇನ ಮತ್ತೆಂದೂ ಸಂಕುಚಿತಗೊಳಿಸುವ ಗೋಡೆಗಳ ನಡುವೆ ಬಂಧಿಯಾಗಲೇ ಇಲ್ಲ.

ಮಾಧವನ ಸಂಗಾತ
ಆಧ್ಯಾತ್ಮಿಕ ತರಬೇತಿಗೆ ತಿಲಾಂಜಲಿಯಿತ್ತು ತನ್ನೂರಿಗೆ ಮರಳಿದ ಹುಸೇನ, ಪೂರ್ವಜರ ನೇಕಾರ ವೃತ್ತಿಯನ್ನು ಮುಂದುವರೆಸಿದ. ಕೆಲಸದ ಜೊತೆಜೊತೆಯಲ್ಲೇ ಆತ ಆಡುತ್ತಿದ್ದ ವಿಲಕ್ಷಣ ಮಾತುಗಳು, ನಡವಳಿಕೆ, ಹೊಸೆಯುತ್ತಿದ್ದ ಅನುಭಾವ ಗೀತೆಗಳು ಜನಮನ ಸೆಳೆದವು. ಹುಸೇನನನ್ನು ಸುಮ್ಮನೆ ನೋಡಲೆಂದೇ ಒಂದು ಚಿಕ್ಕ ಗುಂಪು ಸದಾ ಅವನ ಮನೆ ಮುಂದೆ ಜಮಾಯಿಸಿರುತ್ತಿತ್ತು. ಆದರೆ ಅದ್ಯಾವುದರ ಪರಿವೆಯೂ ಇಲ್ಲದೆ ಹುಸೇನ ತನ್ನ ಕಾಯಕದಲ್ಲಿ ಮುಳುಗಿ, ಅದರಲ್ಲೆ ಅಧ್ಯಾತ್ಮ ಸಾಧನೆಯ ಮೆಟ್ಟಿಲುಗಳನ್ನು ಕಟ್ಟಿಕೊಳ್ಳುತ್ತಿದ್ದ. ಈತನ ಖ್ಯಾತಿ ಅದೆಷ್ಟು ಹಬ್ಬಿತೆಂದರೆ, ಬಾದಷಾಹ್ ಜಹಾಂಗೀರ್ `ಈ ಷಾಹ್ ಹುಸೇನನ ದಿನಚರಿಯನ್ನು ಯಾವ ವಿವರವೂ ತಪ್ಪದಂತೆ ದಾಖಲಿಸಿ. ಆತನ ಯಾವ ನಡೆಯಲ್ಲಿ ಯಾವ ನಿಗೂಢ ತಿಳಿವು ಹೊಮ್ಮುವುದೋ, ಯಾವ ನುಡಿಯಲ್ಲಿ ಯಾವ ಸಂದೇಶ ಸಿಗುವುದೋ’ ಎಂದು ಆದೇಶ ಹೊರಡಿಸಿದ್ದ! 
ಈ ನಡುವೆ ಹುಸೇನನಿಗೆ ಮಾಧವ ಲಾಲ ಎನ್ನುವ ಬ್ರಾಹ್ಮಣ ತರುಣ ಮಿತ್ರ ದೊರಕಿದ. ಅವನ ಗ್ರಹಣ ಸಾಮರ್ಥ್ಯ, ಸ್ಪಂದನೆ, ಸಹೃದಯತೆಗಳು ಹುಸೇನನನ್ನು ಸೆಳೆದವು. ಆತ ಮಾಧವನನ್ನು ತನ್ನ ಅಂತರಂಗಕ್ಕೆ ಬಿಟ್ಟುಕೊಂಡ. ಆತನ ಜೊತೆಯಲ್ಲೇ ಜೀವಿಸಿದ. ‘ಮಾಧೋ’ ಎಂದು ಕರೆಸಿಕೊಳ್ತಿದ್ದ ಮಾಧವನನ್ನು ಹುಸೇನ ಗಾಢವಾಗಿ ಪ್ರೀತಿಸಿದ. ಇಪ್ಪತ್ತು ಮಂದಿ ಖಲೀಫರೂ ಸೇರಿದಂತೆ ನೂರಾರು ಶಿಷ್ಯರನ್ನು ಹೊಂದಿದ್ದ ಹುಸೇನ ತನ್ನೆಲ್ಲ ಸಾಧನೆಯನ್ನು ಪರಿಪೂರ್ಣವಾಗಿ ಧಾರೆ ಎರೆದಿದ್ದ ಮಾತ್ರ ಮಾಧವನಿಗೇ. ಆತನ ಮೇಲಿನ ಪ್ರೇಮದಿಂದ ತನ್ನ ಹೆಸರನ್ನೇ `ಮಾಧೋ ಲಾಲ್ ಷಾ ಹುಸೇನ್’ ಎಂದು ಮಾಡಿಕೊಂಡ ಹುಸೇನ. ತನ್ನ ಹಲವಾರು `ಕಫೀ’ (ಅನುಭಾವ ಗೀತೆ)ಗಳಲ್ಲಿ `ಮಾಧೋ’ನನ್ನು ಸಂಬೋಧಿಸಿದ್ದಾನೆ ಈತ. 
ಹುಸೇನ ಗ್ರಾಮೀಣ ಪಂಜಾಬಿ ಭಾಷೆಯಲ್ಲಿ ಅತ್ಯದ್ಭುತವಾದ ಪದ್ಯಗಳನ್ನು ರಚಿಸಿದ. ಸಾಮಾನ್ಯ ಹಿನ್ನೆಲೆಯ ಅನುಭಾವೀ ಸಂತನೊಬ್ಬನ ಸಾರ್ವಕಾಲಿಕ ಸುಂದರ ಹಾಗೂ ಸಮರ್ಥ ರಚನೆಗಳೆಂದು ಇವು ಇಂದಿಗೂ ಮನ್ನಣೆ ಉಳಿಸಿಕೊಂಡಿವೆ.

ಪೀರನಲ್ಲ, ಫಕೀರ…
ಹುಸೇನನ ಶಿಷ್ಯತ್ವ ಬಯಸಿ ದೂರದೂರದಿಂದ ಜನರು ಬರುತ್ತಿದ್ದರು. ಅವರಿಗೆಲ್ಲ ಆತ ಹೇಳುತ್ತಿದ್ದುದು ಒಂದೇ, `ತಲೆ ಬೋಳಿಸಿಕೊಂಡು ನನ್ನೊಡನೆ ಮದ್ಯ ಕುಡಿಯಲು ಬಾ’ ಎಂದು. ಆತನ ಈ ಕರಾರನ್ನು ಯಾರು ನಡೆಸುತ್ತಿದ್ದರೋ ಅಮ್ರ ಆತನ ಶಿಷ್ಯರಾಗುತ್ತಿದ್ದರು. ಒಮ್ಮೆ ಹುಸೇನನ ಬಳಿ ಶಾಗಿರ್ದಿಗಾಗಿ ಒಬ್ಬ ಮುಲ್ಲಾ ಬಂದ. ಆದರೆ ಆತನನ್ನು ಬಳಿ ಬಿಟ್ಟುಕೊಳ್ಳದ ಹುಸೇನ, `ನಿನಗೆ ಬೋಧಿಸಬಹುದಾದದ್ದು ನನ್ನಲ್ಲಿ ಏನೂ ಇಲ್ಲ. ಸುಮ್ಮನೆ ನನ್ನ ಹಿರಿಮೆ ಹಾಳುಗೆಡವಬೇಡ ನಡಿ!’ ಎಂದುಬಿಟ್ಟ. ಅದೆಷ್ಟೇ ಗೌರವ ಮನ್ನಣೆಗಳಿದ್ದರೂ ಹುಸೇನನಿಗೆ ಅವೆಲ್ಲ ಬೇಕಿರಲಿಲ್ಲ. ಆತನ ಮತೀಯ ಮೇಲು ಕೀಳುಗಳನ್ನು ವಿರೋಧಿಸಿದ. ಶ್ರೀಮಂತಿಕೆಯ ತಾರತಮ್ಯವನ್ನು ಕಡೆಗಣಿಸಿದ. ಕಂದಾಚಾರವನ್ನು ದೂರವಿಟ್ಟ. ಪೊಳ್ಳು ಜನರನ್ನು ಹೊಡೆದಟ್ಟಿದ. ಯಾರಾದರೂ ಆತನನ್ನು `ಪೀರ್’ (ಗುರು) ಎಂದು ಕರೆದರೆ ಅದನ್ನು ನಿರಾಕರಿಸುತ್ತಾ, `ಫಕೀರನನ್ನು ಪೀರನೆನ್ನುವೆ ಏಕೆ?’ ಎಂದು ಗದರುತ್ತಿದ್ದ! 
ಅನುಭಾವದ ತುಂಬುಜೀವನ ನಡೆಸಿದ ಹುಸೇನ ಕಾಲವಾದ ಬಳಿಕ ಆತನ ಕೊನೆಯ ಬಯಕೆಯಂತೆ ಮಾಧವನ ಸಮಾಧಿಯ ಪಕ್ಕದಲ್ಲಿಯೇ ಹೂಳಲಾಯ್ತು. ಸಾವಿನಲ್ಲೂ ಮಿತ್ರಪ್ರೇಮವನ್ನು ಮೆರೆದು ಅಂದಿಗೆ ಅನಿವಾರ್ಯವೂ ತುರ್ತೂ ಆಗಿದ್ದ ಸೌಹಾರ್ದವನ್ನು ಸಾರಿದ ಷಾ ಹುಸೇನ ಸಾರ್ವಕಾಲಿಕ ಆದರ್ಶವಾಗಿ ಉಳಿದುಹೋಗಿದ್ದಾನೆ.

ಗೆಳೆಯ ‘ಮಾಧವಲಾಲ’ (ಮಾಧೋ)ನ ಉಲ್ಲೇಖವಿರುವ ಷಾ ಹುಸೇನನ ಒಂದು ಪದ್ಯ ಇಲ್ಲಿದೆ:

ನನ್ನ ಮಾನ ಹರಾಜಾಯಿತು ಮಾಧೋ!
ಜನ ನನ್ನ ನೋವನ್ನು
ನಶೆ ಅನ್ನುತ್ತಿದ್ದಾರೆ…

ಕಣ್ಣೀರನ್ನು ಮದಿರೆ ಅನ್ನುತ್ತಿದ್ದಾರೆ ಮಾಧೋ!
ನಾನು ಕುಡುಕನೆಂದು
ದೂರು ತಂದಿದ್ದಾರೆ!!

ಮತಿಗೆಟ್ಟು ಅಲೆಮಾರಿಯಾದವನ
ಹುಡುಕಿ ತಂದರು ಮಾಧೋ!
ಈಗ ಮುಖ ತಿರುಗಿಸಿ ನಿಂದಿಸುತಿದ್ದಾರೆ… 

ಮಾಧವಲಾಲ ಹುಸೇನನ ಪಾಲಿಗೆ
ಪ್ರಾರ್ಥನೆಯೊಂದೇ ಈಗ;
ಜನರ ಜಾತ್ರೆಯಲಿ ಕಳೆದೋಗಿರುವೆ,
ಕೈ ಹಿಡಿದು ನಡೆಸು; ಬಾ, ಬೇಗ!

 

Leave a Reply