ಕೃಷ್ಣನಿಂದ ಕಲಿಯಲೇಬೇಕಾದ 10 ಜೀವನ ಪಾಠಗಳು

ಬದುಕಿನ ಸಕಲ ಸಾರವನ್ನು ನಮ್ಮೆದುರು ತೆರೆದಿಟ್ಟಿರುವ ಜಗನ್ನಿಯಾಮಕನ ಸಂದೇಶದಲ್ಲಿ ಹತ್ತನ್ನೇ ಆರಿಸಿಕೊಳ್ಳುವುದು ಸವಾಲು. ಆದರೆ ಇದು ತುಟಿಗೆ ಜೇನು ಸವರುವಂಥ ಪ್ರಯತ್ನ. ಇವುಗಳ ರುಚಿ ಹಿಡಿದು ಕೃಷ್ಣನ ಜೀವನಗಾಥೆ ತಿಳಿಯುವಂತಾದರೆ, ಭಗವದ್ಗೀತೆ ಓದುವ- ಅರ್ಥೈಸುವ ಪ್ರಯತ್ನ ಆದರೆ ಅದು ಸಾರ್ಥಕ್ಯ. ಕೃಷ್ಣನಿಂದ ಬಂದ ಮುಖ್ಯ ಹತ್ತು ಪಾಠಗಳು ಇಲ್ಲಿವೆ | ಸಂಗ್ರಹ & ನಿರೂಪಣೆ : ನಿರಂಜನ

ಅಡೆತಡೆಗಳು ಬಂದರೂ ಉದ್ದೇಶದಿಂದ ಹಿಂಜರಿಯದೆ ಇರುವುದು

kamsa

ಆ ಕೃಷ್ಣನ ಮೇಲೆ ನಡೆದಷ್ಟು ಹತ್ಯಾ ಪ್ರಯತ್ನಗಳು ಬೇರೆ ಯಾರ ಮೇಲೂ ನಡೆದಿರಲಿಕ್ಕಿಲ್ಲ. ಅದೆಷ್ಟು ರಕ್ಕಸರು, ರಾಕ್ಷಸಿ ಪೂತನಿ ಸೇರಿದಂತೆ ಆತನನ್ನು ಕೊಲ್ಲಲು ನಾನಾ ಬಗೆಯ ಯತ್ನ ನಡೆಸಿದರು. ಅವೆಲ್ಲದರಿಂದ ಪಾರಾದ ಕೃಷ್ಣ, ಜೀವ ಬೆದರಿಕೆ ಬಂದರೂ ಘನ ಉದ್ದೇಶ ಬಿಡಬಾರದು ಎಂಬುದನ್ನು ಬಾಲ್ಯದಲ್ಲೇ ತೋರಿಸಿಕೊಟ್ಟ.

ನಮ್ಮ ರಕ್ಷಣೆಯಷ್ಟೇ ಮುಖ್ಯವಲ್ಲ ಎಂಬ ವಿಶಾಲ ಮನೋಭಾವ

govardhan

ಕೇವಲ ತನ್ನ ರಕ್ಷಣೆಯಷ್ಟೇ ಅಲ್ಲ, ತನ್ನ ಸುತ್ತಲಿನವರ ರಕ್ಷಣೆ ಕೂಡ ಆದ್ಯ ಕರ್ತವ್ಯ ಎಂಬುದನ್ನು ನೆನಪಿಸುವ ಕಾರಣಕ್ಕೆ ಗೋವರ್ಧನ ಗಿರಿಯನ್ನು ಕಿರು ಬೆರಳಿನಿಂದ ಎತ್ತಿ ಹಿಡಿದು ಜನರನ್ನು ರಕ್ಷಿಸಿದ.

ಸಕಲ ಪ್ರಾಣಿಗಳಲ್ಲಿ ದಯೆ

kalinga

ಕಾಳಿಂಗ ಮರ್ದನದ ಪ್ರಹಸನದಲ್ಲಿ ಆ ಹಾವನ್ನು ಕೊಲ್ಲುವುದು ಕೂಡ ಆ ಕೃಷ್ಣನಿಗೆ ಸವಾಲಿನ ವಿಚಾರ ಏನಾಗಿರಲಿಲ್ಲ. ಆದರೆ ಆ ನಾಗ ಕುಟುಂಬಕ್ಕೆ ಬದುಕಿಕೊಳ್ಳಲು ಅವಕಾಶ ನೀಡಿದ. ಆ ಮೂಲಕ ಪ್ರಾಣಿಗಳ ಬಗ್ಗೆ ದಯೆ ಇರಲಿ ಎಂಬ ಸಂದೇಶ ನೀಡಿದ.

ಉಪಕಾರಕ್ಕೆ ಪ್ರತ್ಯುಪಕಾರ

kubja

ತನಗೆ ಹಚ್ಚಿಕೊಳ್ಳಲು ಗಂಧ ನೀಡಿದಾಕೆಗೆ ಶಾಶ್ವತವಾದ ಯೌವನವನ್ನು ವರವಾಗಿ ನೀಡಿದ ಕೃಷ್ಣ, ನಮಗೆ ಪ್ರೀತಿಯಿಂದ ಯಾರಾದರೂ ಏನಾದರೂ ನೀಡಿದರೆ ಅದನ್ನು ಪಡೆಯಬೇಕು ಎನ್ನುವ, ಜತೆಗೆ ಬದಲಿಯಾಗಿ ಘನವಾದದ್ದನ್ನೇ ನೀಡಬೇಕು ಎಂಬ ಪಾಠ ಹೇಳಿದ್ದಾನೆ.

ಗುರುಗಳಲ್ಲಿ ಅಪರಿಮಿತ ಭಕ್ತಿ

sandipani

ವಿದ್ಯೆ ಕಲಿಸಿದ ಸಾಂದೀಪ ಮುನಿಗಳ ಪುತ್ರ ಶೋಕವನ್ನು ನಿವಾರಿಸಿ, ವಿದ್ಯೆ ಕಲಿಸಿದ ಗುರುಗಳಿಗೆ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಟ್ಟು ಜಗದ್ಗುರುವಾದ.

ಅಪಾತ್ರರಲ್ಲಿ ಕರುಣೆ ಕೂಡದು

shisupala

ಸಂಬಂಧಿಯೇ ಆದರೂ ದುಷ್ಟರಿಗೆ / ಕರುಣೆಗೆ ಯಾರು ಅಪಾತ್ರರೋ ಅವರಿಗೆ ಯಾವುದೇ ರಿಯಾಯಿತಿ ತೋರಬಾರದು ಎಂಬ ವಿಚಾರದಲ್ಲಿ ಕಂಸ ಹಾಗೂ ಶಿಶುಪಾಲ ವಧೆಯನ್ನು ಸಂದೇಶವಾಗಿ ನೀಡಿದ್ದಾನೆ.

ಗೆಳೆತನ ನಿಭಾಯಿಸುವುದು

sudama

ಬೇಡಲು ಬಂದ ಗೆಳೆಯ ಸುಧಾಮನ ಮನಸ್ಸನ್ನು ಆತ ಬಾಯಿಬಿಟ್ಟು ಹೇಳದಿದ್ದರೂ ತಿಳಿದು, ಸಕಲ ಐಶ್ವರ್ಯಗಳನ್ನು ನೀಡಿದ ಕೃಷ್ಣ, ಗೆಳೆಯರ ಮನಸ್ಸನ್ನು ಅರಿಯುವ ಬಗೆಯನ್ನು ತಿಳಿಸಿಕೊಟ್ಟಿದ್ದಾನೆ. ಅರ್ಜುನನನ್ನು ಮಿತ್ರ ಎನ್ನುತ್ತಿದ್ದ ಕೃಷ್ಣ, ಆ ಸ್ನೇಹಕ್ಕಾಗಿ ಮಾಡಿದ ಸಹಾಯ ಕೂಡ ಅತಿ ದೊಡ್ಡ ಪಾಠ.

ಸಹೋದರನ ಜವಾಬ್ದಾರಿ

draupadi

ದ್ರೌಪದಿಯ ಕಷ್ಟದಲ್ಲಿ ವಸ್ತ್ರ ದಯ ಪಾಲಿಸಿದ, ಅಕ್ಷಯ ಪಾತ್ರೆ ನೀಡಿದ ಆ ಕೃಷ್ಣ ಹೆಣ್ಣುಮಕ್ಕಳ ಕಷ್ಟಕ್ಕೆ ಸ್ಪಂದಿಸಬೇಕಾದ ಅಣ್ಣನ ಕರ್ತವ್ಯಕ್ಕೊಂದು ಉದಾಹರಣೆಯಾದ.

ಯುದ್ಧ ಯಾವತ್ತೂ ಕೊನೆಯ ಆಯ್ಕೆ

sandhana

ಕುರುಕ್ಷೇತ್ರ ಯುದ್ಧವನ್ನು ನಿಲ್ಲಿಸಲು ತನ್ನಿಂದಾದ ಎಲ್ಲ ಪ್ರಯತ್ನವನ್ನೂ ಮಾಡಿದ ಕೃಷ್ಣ, ಯುದ್ಧ ಎಂಬುದು ದುಷ್ಟ ಜನರ ಅಂತ್ಯಕ್ಕಿರುವ ಕೊನೆ ಆಯ್ಕೆ ಎಂಬುದನ್ನು ತೋರಿಸಿಕೊಟ್ಟ.

ಅನ್ಯಾಯ ನಡೆಸುವವರ ಜೊತೆ ಗುರುತಿಸಿಕೊಳ್ಳದೆ ಇರುವುದು

idur
ಸಂಧಾನಕ್ಕಾಗಿ ಹಸ್ತಿನಾವತಿಗೆ ಬಂದ ಕೃಷ್ಣ ಎಂಥ ಸಿರಿವಂತರು ಆಹ್ವಾನಿಸಿದರೂ ಕಡೆಗೆ ವಿದುರನ ಮನೆಗೆ ಹೋದ. ಆ ಮೂಲಕ ಒಂದು ಹೊತ್ತಿನ ಗಂಜಿಯಾದರೂ ಸರಿ, ಅದು ಸಜ್ಜನರ ಮನೆಯಲ್ಲಿ ತೆಗೆದುಕೊಳ್ಳಬೇಕು. ತಪ್ಪನ್ನು- ಅನ್ಯಾಯವನ್ನು ಎದುರಿಸದವರು ಶ್ರೀಮಂತರೇ ಆದರೂ ಅಂಥವರ ಮನೆಯ ಆತಿಥ್ಯ ಕೂಡದು ಎಂಬ ದೊಡ್ಡ ಸಂದೇಶವನ್ನೇ ನೀಡಿದ.

Leave a Reply