ಪಾಪಿ ಪುಣ್ಯವಂತನಾಗುವುದು ಹೇಗೆ? ಓಶೋ ವ್ಯಾಖ್ಯಾನ ಓದಿ…

oshoಅಂಗುಲಿಮಾಲನಿಗೆ ಜ್ಞಾನೋದಯವಾದಂತಾಯಿತು “ಇಲ್ಲಿಯತನಕ ಕೊಲೆಗಳನ್ನು ಮಾಡುತ್ತಲೇ ಬದುಕಿರುವ ನನಗೆ ಕೊಲ್ಲುವುದು ಕೈಲಾಗದವರು ಮಾಡುವ ಕೆಲಸ ಎಂಬುದು ಹೊಳೆಯಲಿಲ್ಲವಲ್ಲ. ಆದರೆ ನಾನಂತೂ ಕೈಲಾಗದ ವ್ಯಕ್ತಿಯಲ್ಲ” ಎಂದುಕೊಂಡ… ~ ಓಶೋ ರಜನೀಶ್

ಲೋಕದಲ್ಲಿ ದುರ್ಬಲರಾರೂ ಪಾಪಕರ್ಮಗಳನ್ನು ಮಾಡುವುದಿಲ್ಲ. ಎಲ್ಲ ಪಾಪ ಕರ್ಮಗಳೂ ಶಕ್ತಿಶಾಲಿಗಳಿಂದಲೇ ನಡೆಯುವುದು. ಶಕ್ತಿಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳಲು ಗೊತ್ತಿಲ್ಲದವರು ಬೇರೆ ದಾರಿ ಕಾಣದೆ ಪಾಪಕರ್ಮಕ್ಕಿಳಿಯುತ್ತಾರೆ. ಆದ್ದರಿಂದ ಪಾಪಿಗಳನ್ನು ಶಕ್ತಿಯ ಮೂಲಸ್ರೋತವೆಂದು ತಿಳಿಯಬೇಕು. ಅಂಥವರಿಗೆ ಅವಕಾಶ ಸಿಕ್ಕಲ್ಲಿ ಅವರ ಶಕ್ತಿ ಅದ್ಭುತವಾದ ರೀತಿಯಲ್ಲಿ ಪ್ರಕಟಗೊಳ್ಳುತ್ತದೆ. ಆದ್ದರಿಂದ ಪಾಪಿಗಳು ಕ್ಷಣಮಾತ್ರದಲ್ಲಿ ಮಹಾತ್ಮರಾಗಿಬಿಡುವ ಹಲವು ಉದಾಹರಣೆಗಳು ನಮ್ಮ ಧಾರ್ಮಿಕ ಪರಂಪರೆಯಲ್ಲಿ ಸಿಗುತ್ತವೆ. ಇದಕ್ಕೆ ಕಾರಣವಿಷ್ಟೇ. ಅವರಲ್ಲಿ ಅಗಾಧವಾದ ಶಕ್ತಿ ಇದ್ದೇ ಇತ್ತು. ಆ ಶಕ್ತಿಯನ್ನು ರೂಪಾಂತರಿಸುವ ಕೆಲಸವಷ್ಟೇ ಉಳಿದಿತ್ತು; ಅಷ್ಟೇ. 

ಅಂಗುಲಿಮಾಲನಂಥವನು ಎಷ್ಟೊಂದು ಕೊಲೆಗಳನ್ನು ಮಾಡಿದ್ದ! ಅವನು ಸಾವಿರ ಜನಗಳನ್ನು ಬಲಿ ತೆಗೆದುಕೊಳ್ಳಬೇಕೆಂದು ಸಂಕಲ್ಪಿಸಿದ್ದ.999 ಜನಗಳನ್ನು ಹತ್ಯೆ ಮಾಡಿ ಅವರ ಬೆರಳುಗಳನ್ನೇ ಮಾಲೆಯಂತೆ ಪೋಣಿಸಿ ಧರಿಸಿಕೊಂಡಿದ್ದ.
ಅಂಗುಲಿಮಾಲನು ಒಂದು ಜಾಗದಲ್ಲಿರುವನು ಎಂಬ ಸುದ್ದಿ ಹರಡುತ್ತಿದ್ದಂತೆಯೇ ಆ ಜಾಗದ ರಸ್ತೆಗಳೆಲ್ಲ ಖಾಲಿಯಾಗುತ್ತಿದ್ದವು.ಅವನು ಯಾರ ಮುಖ ಮೂತಿ ನೋಡದೆ ಕಣ್ಣಿಗೆ ಬಿದ್ದವರನ್ನೆಲ್ಲ, ಎದುರಿಗೆ ಸಿಕ್ಕವರನ್ನೆಲ್ಲ ಕೊಚ್ಚಿಹಾಕುತ್ತಿದ್ದ.ಸಾಮಾನ್ಯ ಪ್ರಜೆಗಳು ಹಾಗಿರಲಿ ಪ್ರಸೇನಜಿತನಂತಹ ಚಕ್ರವರ್ತಿಯೂ ಅಂಗುಲಿಮಾಲನಿಗೆ ಹೆದರುತ್ತಿದ್ದ. ಅವನನ್ನು ಸೆರೆ ಹಿಡಿಯಲು ತನ್ನ ಸೇನಾ ಪಡೆಯನ್ನು ಕಳುಹಿಸಿದ್ದರೂ ಅವನ ಸೈನ್ಯ ಅಂಗುಲಿಮಾಲನನ್ನು ಹಿಡಿಯಲಾಗದೆ ಸೋತು ಹಿಂದಿರುಗಿತ್ತು.

ಒಮ್ಮೆ ಬುದ್ಧ ಕಾಡು ಮೇಡಿನ ಹಾದಿಯಲ್ಲಿ ನಡೆದು ಬರುವಾಗ ಜನ “ಮುಂದೆ ಅಂಗುಲಿ ಮಾಲ ವಾಸಿಸುವ ಕಾಡು ಸಿಗುತ್ತದೆ. ನಿಮ್ಮಂಥ ಅಮಾಯಕ ಭಿಕ್ಷು ಆ ಕ್ರೂರಿಯ ಕೈಯಿಂದ ಏಕೆ ಸಾಯಬೇಕು?”ಎಂದು ಎಚ್ಚರಿಕೆ ನೀಡಿದರು.
ಆದರೆ ಬುದ್ಧ ಹೇಳಿದ “ಭಿಕ್ಷುಗಳು ತಾವು ಆಯ್ಕೆ ಮಾಡಿಕೊಂಡ ಹಾದಿಯಲ್ಲಿ ನಡೆದೇ ತೀರುವರು, ಯಾವ ಕಾರಣಕ್ಕೂ ತಮ್ಮ ಹಾದಿಯಿಂದ ಅತ್ತಿತ್ತ ಸರಿಯುವವರಲ್ಲ. ಈ ಹಾದಿಯಲ್ಲಿ ಅಂಗುಲಿಮಾಲನಿರುವನೆಂದರೆ ನೋಡಿಯೇ ಬಿಡೋಣ.ನಾನು ಅವನಿಂದ ಕೊಲೆಯಾಗುವೆನೋ ಅಥವಾ ಅವನೇ ನನ್ನಿಂದ ಹತನಾಗುವನೋ” ಎಂದು ಹೇಳಿ ಮುಂದುವರೆದ.

ಜನ ಗಾಬರಿಯಿಂದ “ನಿಮಗೇನಾದರೂ ತಲೆ ಕೆಟ್ಟಿದೆಯೇ? ಅಂತಹ ದೈತ್ಯನಿಗೆ ಮುಖಾಮುಖಿಯಾಗಲು ನಿಮ್ಮ ಕೈಯಲ್ಲಿ ಯಾವ ಶಸ್ತ್ರಾಸ್ತ್ರವಿದೆ?”ಎಂದರು.ಆದರೆ ಬುದ್ಧ ಅವರ ಮಾತುಗಳನ್ನು ಲೆಕ್ಕಿಸದೆ ಅದೇ ದಿಕ್ಕಿನಲ್ಲಿ ಮುಂದೆ ಸಾಗಿದ.
ಅಂಗುಲಿಮಾಲನು ತನ್ನ ಹಾದಿಯಲ್ಲಿ ಓರ್ವ ಭಿಕ್ಷು ನಡೆದು ಬರುತ್ತಿರುವುದನ್ನು ಬೆಟ್ಟದ ತುದಿಯಿಂದಲೇ ಗುರುತಿಸಿದ. “ಈ ಹಾದಿಯಲ್ಲಿ ಇನ್ನು ಮುಂದುವರೆಯದೆ ಕೂಡಲೆ ಹಿಂದಿರುಗು. ನೀನು ಇಷ್ಟೊಂದು ಸೌಮ್ಯಭಾವದಿಂದ ನಡೆದು ಬರುತ್ತಿರುವುದನ್ನು ನೋಡಿದರೆ ನನಗೆ ನಿನ್ನ ಬಗ್ಗೆ ದಯೆ ಹುಟ್ಟುತ್ತಿದೆ. ನನ್ನಂಥವರು ಕಂಡ ಕಂಡವರಿಗೆ ದಯೆ ತೋರಿಸುವವರಲ್ಲ. ಆದರೂ ನೀನು ಸನ್ಯಾಸಿ ಎಂದು ಹಾಗೆಯೇ ಬಿಡುತ್ತಿದ್ದೇನೆ. ಕೂಡಲೆ ಇಲ್ಲಿಂದ ಕಣ್ಮರೆಯಾಗಿ ಹೋಗು” ಎಂದು ಅಲ್ಲಿಂದಲೇ ಕೂಗಿ ಹೇಳಿದ.

ಆಗ ಬುದ್ಧ ಅವನನ್ನು ಕುರಿತು “ನಮಗೂ ಅವರಿವರಿಗೆ ದಯೆ ತೋರಿಸುವ ಅಭ್ಯಾಸವಿಲ್ಲ. ಸವಾಲಿನ ಸನ್ನಿವೇಶದಲ್ಲಂತೂ ಸನ್ಯಾಸಿಗಳು ಹಿಮ್ಮೆಟ್ಟುವವರಲ್ಲ. ಹಾಗಾಗಿ ನಾನಂತೂ ಮುಂದುವರೆಯುತ್ತೇನೆ. ಸಾಧ್ಯವಾದರೆ ನೀನೂ ಮುಂದುವರೆ” ಎಂದ.
ಅಂಗುಲಿಮಾಲನಿಗೆ ಈ ಮಾತುಗಳು ಅನಿರೀಕ್ಷಿತವಾಗಿತ್ತು. ಇವನೆಲ್ಲೋ ತಲೆ ಕೆಟ್ಟವನಿರಬೇಕು ಎಂದುಕೊಂಡ. ತನ್ನ ಕತ್ತಿಯನ್ನು ಕೈಗೆತ್ತಿಕೊಂಡು ಕೆಳಗೆ ಧಾವಿಸಿ ಬಂದ. ಅಂಗುಲಿ ಮಾಲೆಯನ್ನು ಧರಿಸಿ ಅವನು ಕೆಳಗಿಳಿದು ಬಂದಾಗ “ನಿನ್ನ ಸಾವನ್ನು ನಿನ್ನ ಕೈಯಿಂದಲೇ ಪೋಣಿಸಿಕೊಂಡಿರುವೆಯಲ್ಲ! ನನ್ನನ್ನು ಕೊಲ್ಲುವ ಮುನ್ನ ಒಂದು ಸಣ್ಣ ಕೆಲಸವನ್ನು ಮಾಡು. ಎದುರಿಗಿರುವ ಮರದ ನಾಲ್ಕು ಎಲೆಗಳನ್ನು ಕತ್ತರಿಸಿ ತಾ” ಎಂದು ಬುದ್ಧ ಹೇಳಿದ.

ಒಡನೆಯೆ ಅಂಗುಲಿ ಮಾಲನು ತನ್ನ ಕತ್ತಿಯನ್ನು ಬೀಸಿ ಮರದ ಎಲೆಗಳನ್ನು ನೆಲದ ಮೇಲೆ ಉದುರಿಸಿದ.“ನಾಲ್ಕು ಎಲೆಗಳೇಕೆ, ನಾನ್ನೂರು ಎಲೆಗಳನ್ನು ಬೇಕಾದರೆ ಹೆಕ್ಕಿಕೋ” ಎಂದ.
ಬುದ್ಧ “ನನ್ನನ್ನು ಕತ್ತರಿಸುವ ಮುನ್ನ ಈ ಎಲೆಗಳನ್ನು ಪುನಃ ಮರಕ್ಕೆ ಸೇರಿಸಿಬಿಡು. ಇದೊಂದು ಕಡೆಯ ಕೆಲಸವನ್ನು ನಾನು ನಿನ್ನಿಂದ ಅಪೇಕ್ಷಿಸುತ್ತೇನೆ” ಎಂದ.
ಅಂಗುಲಿಮಾಲ “ಇದಂತೂ ಅಸಾಧ್ಯದ ಕೆಲಸ” ಎಂದ
“ಮರದ ಎಲೆಗಳನ್ನು ಕೀಳುವುದು ಸಣ್ಣ ಮಕ್ಕಳಿಗೂ ಸಾಧ್ಯವಾಗುವ ಕೆಲಸ. ಆದರೆ ಪುನಃ ಜೋಡಿಸುವುದು ಪುರುಷರಿಗೆ ಮಾತ್ರ ಸಾಧ್ಯ.ಹಾಗೆ ಜೋಡಿಸುವುದೇ ನಿಜವಾಗಿಯೂ ಪರಮ ಪುರುಷಾರ್ಥದ ಕೆಲಸ. ಕೀಳುವುದನ್ನಷ್ಟೇ ಬಲ್ಲ ನಿನ್ನನ್ನು ನಾನು ಪರಾಕ್ರಮಿ ಎಂದು ಒಪ್ಪಲಾರೆ. ಎಲೆಗಳನ್ನು ಪುನಃ ಮರಕ್ಕೆ ಸೇರಿಸಲೂ ಸಾಧ್ಯವಾಗದ ನಿನ್ನನ್ನು ದುರ್ಬಲ ವ್ಯಕ್ತಿ ಎಂದೇ ನಾನು ಪರಿಗಣಿಸುತ್ತೇನೆ. ಇನ್ನಾದರೂ ನಾನೊಬ್ಬ ಮಹಾನ್ ಶಕ್ತಿಶಾಲಿ ಎಂಬ ನಿನ್ನ ಗರ್ವವನ್ನು ಬಿಟ್ಟುಬಿಡು”
“ಎಲೆಯನ್ನು ಪುನಃ ಮರಕ್ಕೆ ಎಲ್ಲಾದರೂ ಯಥಾರೀತಿಯಲ್ಲಿ ಸೇರಿಸಲಾಗುವುದೇ?”
“ಏಕಾಗದು? ಇಲ್ಲಿಯತನಕ ಜೀವನದಲ್ಲಿ ನಾನು ಅದನ್ನೇ ತಾನೆ ಮಾಡುತ್ತಿರುವುದು!”
ಅಂಗುಲಿಮಾಲನು ಬುದ್ಧನ ನೇರವಾದ ಮಾತುಗಳ ಇಂಗಿತವನ್ನು ಅರಿಯಲು ಯತ್ನಿಸುತ್ತಿದ್ದ. ಆಗ ಬುದ್ಧ ಮುಂದುವರೆದು “ಸುಮ್ಮನೆ ಕೊಲ್ಲುತ್ತ ಹೋಗುವುದರಲ್ಲಿ ಯಾವ ಅರ್ಥವೂ ಇಲ್ಲ” ಎಂದ.

ಅಂಗುಲಿಮಾಲನಿಗೆ ಜ್ಞಾನೋದಯವಾದಂತಾಯಿತು “ಇಲ್ಲಿಯತನಕ ಕೊಲೆಗಳನ್ನು ಮಾಡುತ್ತಲೇ ಬದುಕಿರುವ ನನಗೆ ಕೊಲ್ಲುವುದು ಕೈಲಾಗದವರು ಮಾಡುವ ಕೆಲಸ ಎಂಬುದು ಹೊಳೆಯಲಿಲ್ಲವಲ್ಲ. ಆದರೆ ನಾನಂತೂ ಕೈಲಾಗದ ವ್ಯಕ್ತಿಯಲ್ಲ” ಎಂದುಕೊಂಡ. “ಈಗ ನಾನೇನು ಮಾಡಲಿ?” ಎಂದು ಬುದ್ಧನನ್ನೇ ಕೇಳಿದ. ಆಗ ಬುದ್ಧ ‘ನನ್ನೊಂದಿಗೆ ಬಾ’ ಎಂದು ಹೇಳಿ ಅವನನ್ನು ತನ್ನೊಂದಿಗೆ ಕರೆದೊಯ್ದ.

ಹೀಗೆ ಬುದ್ಧನಿಗೆ ಶರಣಾದ ಅಂಗುಲಿ ಮಾಲ ಒಬ್ಬ ಭಿಕ್ಷುವಾಗಿ ಪರಿವರ್ತನೆಗೊಂಡ.

ಅಂಗುಲಿಮಾಲನು ಒಮ್ಮೆ ಭಿಕ್ಷಾಟನೆ ಮಾಡಲು ಒಂದು ಹಳ್ಳಿಗೆ ಪ್ರವೇಶಿಸಿದ. ಅವನು ಬರುತ್ತಿದ್ದಂತೆಯೆ ಜನ ಹೆದರಿ ಓಡಿಹೋದರು.ತಮ್ಮ ಮನೆಯ ಛಾವಣಿಗಳ ಮೇಲೆ ನಿಂತು ಅವನತ್ತ ಕಲ್ಲುಗಳನ್ನು ತೂರಲಾರಂಭಿಸಿದರು.ಅವನ ಮೈತುಂಬ ಗಾಯಗಳಾದವು, ಅವನ ರಕ್ತ ಸಿಕ್ತವಾದ ದೇಹ ನಿಲ್ಲಲಾರದೆ ಅಲ್ಲಿಯೇ ಕುಸಿಯಿತು. ಅವನು ಕೆಳಗೆ ಬಿದ್ದರೂ ಜನಗಳ ಕಲ್ಲು ತೂರಾಟ ಮಾತ್ರ ನಿಲ್ಲಲಿಲ್ಲ. ಆಗ ಅವನ ಬಳಿಸಾರಿದ ಬುದ್ಧ “ಬ್ರಾಹ್ಮಣನಾದ ಅಂಗುಲಿಮಾಲನೆ, ಎದ್ದು ನಿಲ್ಲು. ಈಗ ನೀನು ಪುರುಷಾರ್ಥವನ್ನು ಸಾಧಿಸಿರುವೆ. ನಿನ್ನ ಮೇಲೆ ನಡೆದ ಕಲ್ಲು ತೂರಾಟ ನಿನ್ನೊಳಗೆ ಕೋಪವನ್ನೇ ಹುಟ್ಟಿಸಲಿಲ್ಲವಲ್ಲ. ನಿನ್ನ ದೇಹ ರಕ್ತಸಿಕ್ತವಾದರೂ ಜನಗಳ ಬಗ್ಗೆ ನಿನ್ನಲ್ಲಿ ದ್ವೇಷ ಪ್ರತೀಕಾರಭಾವವೇ ಮೂಡಲಿಲ್ಲವಲ್ಲ! ಈಗ ನೀನು ಪುರುಷಾರ್ಥವನ್ನು ಸಾಧಿಸಿಕೊಂಡೆ.ಈಗ ನೀನು ಬ್ರಾಹ್ಮಣನೆನಿಸಿಕೊಂಡೆ” ಎಂದ.

ಈ ಸುದ್ದಿ ಪ್ರಸೇನಜಿತನಿಗೆ ತಲುಪುತ್ತಿದ್ದಂತೆಯೆ ಅವನು ಬುದ್ಧನ ಬಳಿಗೆ ಓಡಿ ಬಂದ. “ನನ್ನ ಕಿವಿಗಳಿಗೆ ನಂಬಲಾಗುತ್ತಿಲ್ಲ. ಅಂಗುಲಿಮಾಲ ಸಾಧುವಾಗಿಬಿಟ್ಟನಂತೆ ನಿಜವೇ? ನಾನು ಅವನ ದರ್ಶನ ಮಾಡಬಹುದೇ?”ಎಂದು ಬುದ್ಧನನ್ನು ಕೇಳಿದ.
ಬುದ್ಧ ತನ್ನ ಪದತಳದಲ್ಲಿ ಕುಳಿತಿದ್ದ ಭಿಕ್ಷುವನ್ನು ತೋರಿಸಿ “ಅಂಗುಲಿಮಾಲ ಇಲ್ಲೇ ಕುಳಿತಿರುವನಲ್ಲ” ಎಂದು ಹೇಳಿದ. ಬುದ್ಧನ ಬಾಯಿಂದ ಅವನ ಹೆಸರು ಕೇಳುತ್ತಲೇ ಪ್ರಸೇನಜಿತನ ಕೈಕಾಲುಗಳಲ್ಲಿ ನಡುಕ ಹುಟ್ಟಿತು. ಆಗ ಅಂಗುಲಿಮಾಲ “ಹೆದರಬೇಡ, ಆ ಹೆಸರಿನ ವ್ಯಕ್ತಿ ಈಗಿಲ್ಲ. ಆ ವ್ಯಕ್ತಿಯಲ್ಲಿದ್ದ ಭಯಂಕರವಾದ ಶಕ್ತಿ ಈಗ ರೂಪಾಂತರಿತವಾಗಿದೆ.ಅದು ಈಗ ಬೇರೊಂದು ದಿಕ್ಕಿನಲ್ಲಿ ಹರಿಯಲಾರಂಭಿಸಿದೆ. ನೀನು ಈಗಲೇ, ನಿಂತ ನಿಲುವಿನಲ್ಲೇ ನನ್ನನ್ನು ಕೊಂದರೂ ನಿನ್ನ ಬಗ್ಗೆ ಕೋಪ, ಪ್ರತೀಕಾರದ ಬುದ್ಧಿಗಳು ಮತ್ತೆ ತಲೆ ಎತ್ತಲಾರವು” ಎಂದ.

ನೆರೆದಿದ್ದವರು ಕುತೂಹಲದಿಂದ “ಇಂತಹ ಪಾಪಿ ಹೇಗೆ ಇಷ್ಟೊಂದು ಬದಲಾದ” ಎಂದು ಬುದ್ಧನನ್ನು ವಿಚಾರಿಸಿದರು. “ಇದು ಪಾಪಿ-ಪುಣ್ಯವಂತನಾಗಿ ಬದಲಾದುದರ ಪ್ರಶ್ನೆಯಲ್ಲ. ಇದು ಶಕ್ತಿಯ ರೂಪಾಂತರಣದ ವಿಷಯವಾಗಿದೆ. ಲೋಕದಲ್ಲಿ ಯಾರು ಒಳ್ಳೆಯವರು ಯಾರು ಕೆಟ್ಟವರು? ಸಂಚಿತ ಶಕ್ತಿ ಹಲವು ದಿಕ್ಕುಗಳಲ್ಲಿ ಹರಿಯುತ್ತದೆ ಅಷ್ಟೇ” ಎಂದು ಮುಗುಳ್ನಕ್ಕ ಬುದ್ಧ. 

(ಧ್ಯಾನಸೂತ್ರಗಳು ಕೃತಿಯಿಂದ ಆಯ್ದ ಭಾಗ)

1 Comment

Leave a Reply