ಸಂಪಾಯಿತಲೇ ಪರಾಕ್ ! : ಈ ವರ್ಷದ ಮೈಲಾರ ಕಾರಣಿಕ

ಮೈಲಾರಲಿಂಗಸ್ವಾಮಿ ಕಾರ್ಣಿಕೋತ್ಸವ ಕನ್ನಡ ನಾಡಿನ ಮುಖ್ಯ ಉತ್ಸವಗಳಲ್ಲೊಂದು. ಇಲ್ಲಿ ಹೇಳುವ ಕಾರಣಿಕ ಸುಳ್ಳಾಗೋದಿಲ್ಲ ಅನ್ನುವ ಪ್ರತೀತಿ ಇದೆ. ಈ ಬಾರಿಯ ಕಾರ್ಣಿಕೋತ್ಸವದಲ್ಲಿ ಹೇಳಿದ ನಾಡಭವಿಷ್ಯ ಇದು…

ಜಾಗೃತ ಕ್ಷೇತ್ರ ಎಂದೇ ಮನ್ನಣೆ ಪಡೆದ ಮೈಲಾರದ ಡಂಕನಮರಡಿಯಲ್ಲಿ ಸಂಜೆ ಕಾರ್ಣಿಕೋತ್ಸವ ನಡೆಯಿತು. ಇದರೊಂದಿಗೆ ಐದು ದಿನಗಳ ಜಾತ್ರೆ ಮುಕ್ತಾಯ ಕಂಡು, ಜನ ಹೊಸ ಭವಿಷ್ಯದ ಭರವಸೆಯೊಂದಿಗೆ ತೆರಳಿದರು.

ಸಾವಿರಾರು ಜನಸ್ತೋಮದ ನಡುವೆ 12 ಅಡಿ ಎತ್ತರದ ಬಿಲ್ಲಿನ ಮೇಲೇರಿದ ಗೊರವಪ್ಪ ರಾಮಣ್ಣ “ಸದ್ದಲೇ….” ಅಂತ ಕೂಗಿದ ಕೂಡಲೆ ಮೌನ ಮೊರೆಯಿತು. ಕೂಡಲೇ ಅವರು “ಸಂಪಾಯಿತಲೇ ಪರಾಕ್‌” ಎಂದು ಕಾರ್ಣಿಕ ನುಡಿದು ಕೆಳಗೆ ಬಿದ್ದರು.

ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್‌ ಅವರು ಈ ಕಾರ್ಣಿಕದ ವಿಶ್ಲೇಷಣೆ ಮಾಡಿದ್ದು, ಬರುವ ದಿನಗಳು ಸಮೃದ್ಧಿಯಿಂದ ಕೂಡಿವೆ. ಈ ಬಾರಿ ಮಳೆ-ಬೆಳೆ ಸಂಪಾಗಿ ಆಗಲಿದೆ. ರಾಜಕೀಯದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದು ಹೇಳಿದ್ದಾರೆ.

ಎಲ್ಲ ರಾಜಕೀಯ ಪಕ್ಷದ ವ್ಯಕ್ತಿಗಳಿಗೆ ಯಾರೂ ತೊಂದರೆ ಕೊಡುವುದಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಸದ್ಯ ಅಧಿಕಾರ ಮಾಡುವ ಪಕ್ಷಕ್ಕೆ ಯಾವುದೇ ವಿಘ್ನವಿಲ್ಲ. ರೈತಾಪಿ ವರ್ಗಕ್ಕೆ ಸಂತಸದ ಹೊನಲು ಇರಲಿದೆ. ಈ ಬಾರಿ ಮಳೆಯು ಸಮೃದ್ಧವಾಗಲಿದೆ. ರೈತರ ಕಷ್ಟಗಳು ದೂರವಾಗಿ ಅಂದುಕೊಂಡಿದ್ದು ನಡೆಯುತ್ತದೆ ಎಂದು ವಿಶ್ಲೇಷಿಸಿದ್ದಾರೆ.

ಕಳೆದ ಬಾರಿ “ಕಬ್ಬಿಣದ ಸರಪಳಿ ಹರೀತಲೇ ಪರಾಕ್” ಎಂಬ ಕಾರ್ಣಿಕ ರಾಜಕಾರಣ ಛಿದ್ರಗೊಳ್ಳುವುದರ ಸೂಚನೆ ಎಂದು ವಿಶ್ಲೇಷಿಸಲಾಗಿತ್ತು. ಅನಂತರ ಅದು ನಿಜವೂ ಆಯಿತು.

ಈ ಬಾರಿಯ ಕಾರ್ಣಿಕ ಎಲ್ಲರಿಗೂ ಶುಭಸೂಚಕವಾಗಿದ್ದು, ಶ್ರದ್ಧಾವಂತರಿಗೆ ಸಂತಸ ತಂದಿದೆ.

ಇದನ್ನು ಓದಿ :

ಕಬ್ಬಿಣದ ಸರಪಳಿ ಹರೀತಲೇ ಪರಾಕ್… : ಮೈಲಾರಲಿಂಗ ಸ್ವಾಮಿಯ ಕಾರಣಿಕ ಭವಿಷ್ಯ ಏನು ಹೇಳುತ್ತಿದೆ? https://aralimara.com/2019/02/23/karanika/

Leave a Reply