ಹೆಣ್ಣಾಗಿ ಹುಟ್ಟಿ, ಗಂಡಾಗಿ ಬೆಳೆದು ಮತ್ತೆ ಹೆಣ್ಣಾದ… ಮತ್ತೆ ಗಂಡೂ ಆಗಿ ಬಾಳಿದ ಸುದ್ಯುಮ್ನ (ಇಳಾ) ಕಥೆ ಭಾಗವತ ಪುರಾಣದದ್ದಾದರೆ; ಹೆಣ್ಣಾಗಿ ಹುಟ್ಟಿ, ಗಂಡಾಗಿ ಬೆಳೆದು, ಕೊನೆಗೆ ಗಂಡೇ ಆಗಿ ಉಳಿದ ಐಫಿಸ್’ನ ಕಥೆ ಗ್ರೀಕ್ ಪುರಾಣದಲ್ಲಿದೆ… | ಸಂಗ್ರಹ ಮತ್ತು ನಿರೂಪಣೆ : ಚೇತನಾ ತೀರ್ಥಹಳ್ಳಿ
ವೈವಸ್ವತ ಮನು ಮತ್ತು ಶ್ರದ್ಧಾ ದಂಪತಿಗೆ ಎಷ್ಟು ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಮನುವಿಗೆ ಮಕ್ಕಳಾಗದೆಹೋದರೆ ಸೃಷ್ಟಿ ಕಾರ್ಯದ ಒಂದು ಕೊಂಡಿ ಕಳಚಿದಂತೆಯೇ. ಆ ಕಾರಣದಿಂದಲೂ ಮಾನವ ಸಹಜ ಸಂತಾನದ ಅಭೀಪ್ಸೆಯಿಂದಲೂ ಮನು ದಂಪತಿಗಳು ಕೊರಗುತ್ತಿದ್ದರು. ಅದನ್ನು ನೋಡಲಾಗದೆ ಕುಲಗುರು ವಸಿಷ್ಠರು ಅವರಿಬ್ಬರಿಂದ ‘ಮೈತ್ರಾವರುಣ’ ಯಾಗವನ್ನು ಮಾಡಿಸಿದರು.
ಮನುವಿಗೆ ಗಂಡು ಮಗು ಬೇಕೆಂಬ ಅದಮ್ಯ ಬಯಕೆ. ಶ್ರದ್ಧಾಳಿಗೆ ಹೆಣ್ಣು ಮಗುವೇ ಆಗಲೆಂಬ ಉತ್ಕಟ ಇಚ್ಛೆ. ಅವಳು ಅದನ್ನುವಿಷ್ಠರ ಬಳಿ ಹೇಳಿಕೊಂಡಳು. ಅವಳ ಮಾತುಗಳನ್ನೇ ಯೋಚಿಸುತ್ತಾ ವಸಿಷ್ಠರು ಹೋಮ ಕುಂಡಕ್ಕೆ ಪೂರ್ಣಾಹುತಿ ಸಮರ್ಪಿಸಿದರು.
ಅದಾಗಿ ಕೆಲವು ತಿಂಗಳಲ್ಲಿ ಶ್ರದ್ಧಾ ಗರ್ಭವತಿಯಾದಳು. ತಿಂಗಳುಗಳ ನಿರೀಕ್ಷೆ ಕಳೆದು ಒಂದು ಹೆಣ್ಣು ಮಗು ಜನಿಸಿತು. ಆ ಮಗುವನ್ನು ಶ್ರದ್ಧಾ, ‘ಇಳಾ’ ಎಂದು ಕರೆದಳು. ಆದರೆ ಮನುವಿಗೆ ಇದರಿಂದ ಸ್ವಲ್ಪವೂ ಸಮಾಧಾನವಿಲ್ಲ.
“ನಾನು ಯಾಗ ನಡೆಸಿದ್ದು ಗಂಡು ಮಗುವನ್ನು ಪಡೆಯುವ ಸಂಕಲ್ಪದಿಂದ. ಅದು ಹೇಗೆ ಸಂಕಲ್ಪ ಸಿದ್ಧಿಯಾಗದೇಹೋಯಿತು?” ವಸಿಷ್ಠರನ್ನು ಪ್ರಶ್ನಿಸಿದ.
“ನಿನ್ನ ಸಂಕಲ್ಪಕ್ಕಿಂತ ಶ್ರದ್ಧಾಳ ಭಕ್ತಿ ಮತ್ತು ಹೆಣ್ಣುಮಗುವಿನೆಡೆಗಿನ ಪ್ರೇಮವೇ ಉತ್ಕಟವಾಗಿತ್ತು. ಆದ್ದರಿಂದ ಅವಳ ಬಯಕೆಯೇ ಈಡೇರಿತು” ಅಂದರು ವಸಿಷ್ಠರು.
ಮನು, ತನಗೆ ಗಂಡುಮಗುವೇ ಬೇಕೆಂದು ಹಠ ಹಿಡಿದ. ವಸಿಷ್ಠರು ಉಪಾಯಗಾಣದೆ ತಮ್ಮ ಮಂತ್ರ ಶಕ್ತಿಯಿಂದ ಇಳೆಯನ್ನು ಗಂಡಾಗಿ ಪರಿವರ್ತಿಸಿದರು; ಮತ್ತು ಗಂಡಾಗಿ ಪರಿವರ್ತನೆಗೊಂಡ ಆ ಮಗುವಿಗೆ ‘ಸುದ್ಯುಮ್ನ’ ಎಂದು ಹೆಸರಿಟ್ಟರು.
ಸುದ್ಯುಮ್ನ, ಮನೆಮುದ್ದಾಗಿ ಮಾತ್ರವಲ್ಲ, ರಾಜ್ಯದ ಕಣ್ಮಣಿಯಾಗಿಯೂ ಬೆಳೆದ. ಯೌವನಕ್ಕೆ ಕಾಲಿಟ್ಟಮೇಲೆ ಎಲ್ಲ ರಾಜಕುಮಾರರಂತೆ ತಾನೂ ಭೇಟೆಗೆ ಹೋದ. ಇಲ್ಲಿ ಕಾದು ಕುಳಿತಿತ್ತು ಒಂದು ಅನಿರೀಕ್ಷಿತ, ವಿಚಿತ್ರ ತಿರುವು…
ಕಾಡಿನಲ್ಲಿ ತನ್ನ ತಂಡದಿಂದ ಬೇರ್ಪಟ್ಟು ಅಲೆಯುತ್ತಿದ್ದ ಸುದ್ಯುಮ್ನ ಕಾಡಿನೊಳಗಿನ ಒಂದು ಉಪವನವನ್ನು ಹೊಕ್ಕ. ದುರದೃಷ್ಟವಶಾತ್ ಅದು ಶಿವ – ಪಾರ್ವತಿಯರ ಕ್ರೀಡಾ ಸ್ಥಳವಾಗಿತ್ತು. ಪಾರ್ವತಿ ಲಜ್ಜೆಪಡುತ್ತಾಳೆಂದು ಶಿವ ಅಲ್ಲಿಗೆ ಯಾರೂ ಪ್ರವೇಶಿಸಕೂಡದು ಎಂದು ನಿರ್ಬಂಧ ವಿಧಿಸಿದ್ದ. ಹಾಗೊಮ್ಮೆ ಯಾವುದೇ ಪುರುಷ ಆ ಉಪವನವನ್ನು ಹೊಕ್ಕರೆ, ಕೂಡಲೇ ಆತ ಹೆಣ್ಣಾಗಿ ಬದಲಾಗುತ್ತಾನೆ ಎಂದು ಶಿವ ಘೋಷಿಸಿದ್ದ. ಸುದ್ಯುಮ್ನ ಆ ಉಪವನದೊಳಗೆ ಕಾಲಿಟ್ಟ ಕೂಡಲೇ ಹೆಣ್ಣಾಗಿ ಬದಲಾಗಿಬಿಟ್ಟ!
ವಾಸ್ತವದಲ್ಲಿ ಸುದ್ಯುಮ್ನ ತನ್ನ ಹುಟ್ಟುರೂಪಕ್ಕೆ ಮರಳಿದ್ದ. ಅವನೀಗ ಮರಳಿ ಇಳೆಯಾಗಿದ್ದ. ತನ್ನ ಸೈನಿಕರೊಡನೆ ಮರಳಿ ರಾಜ್ಯಕ್ಕೆ ಹೋಗಲೊಪ್ಪದೆ ಕಾಡಿನಲ್ಲಿಯೇ ಉಳಿದ. ಇಳೆ ಈಗ ಸುಂದರ ತರುಣಿ. ಆಶ್ರಮವಾಸಿಗಳೊಡನೆ ಗೆಳೆತನ ಮಾಡಿಕೊಂಡು ಅಲ್ಲಿಯೇ ಇರತೊಡಗಿದಳು. ಅವಳಿಗೆ ತಾನು ಸುದ್ಯುಮ್ನನಾಗಿದ್ದ ಕಾಲದ ಯಾವ ಸಂಗತಿಗಳು ನೆನಪಿನಲ್ಲಿ ಇರಲಿಲ್ಲ.
ಹೀಗೆ ತನ್ನ ಪಾಡಿಗೆ ತಾನು ಆನಂದದಿಂದ ಕಾಡಿನಲ್ಲಿ ಓಡಾಡಿಕೊಂಡು ಇರುವಾಗ ಚಂದ್ರ – ತಾರೆಯರ ಮಗ ಬುಧ ಅವಳನ್ನು ಕಂಡ. ಅವರಿಬ್ಬರ ನಡುವೆ ಪ್ರೇಮ ಅಂಕುರಿಸಿತು. ಅವನು ತಂದೆಯ ಸಮ್ಮತಿ ಪಡೆದು ಅವಳನ್ನು ಮದುವೆಯೂ ಆದ. ಅವರ ದಾಂಪತ್ಯದ ಕುರುಹಾಗಿ ಒಂದು ಗಂಡು ಮಗು ಜನಿಸಲು, ಅದಕ್ಕೆ ‘ಪುರೂರವ’ ಎಂದು ಹೆಸರಿಟ್ಟರು.
ಪುರೂರವ ಜನಿಸಿದ ಮೇಲೆ ಇಳೆಗೆ ತನ್ನ ಪೂರ್ವಾಶ್ರಮದ ನೆನಪಾಗಿಬಿಟ್ಟಿತು! ತಾನು ಸುದ್ಯುಮ್ನನಾಗಿದ್ದುದು, ತನ್ನ ತಂದೆಯ ರಾಜ್ಯ, ತಾನು ರಾಜಕುಮಾರ ಎಂಬುದೆಲ್ಲ ನೆನಪಾಯಿತು. ತಾನು ಮರಳಿ ಗಂಡಿನ ದೇಹ ಪಡೆಯಲು ಅವನು ಹಂಬಲಿಸಿದಳು. ತನ್ನ ಈಗಿನ ಸ್ಥಿತಿಯನ್ನು ಕಂಡು ದುಃಖಿಸತೊಡಗಿದಳು. ಒಂದೆಡೆ ಮರಳಿ ಗಂಡಾಗಬೇಕು ಎನ್ನುವ ಬಯಕೆ, ಮತ್ತೊಂದೆಡೆ, ತನ್ನ ಮೊಲೆಯುಣ್ಣುತ್ತಿರುವ ಪುಟ್ಟ ಕಂದನ ಮಮತೆ. ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಯಲಾಗದೆ ಚಡಪಡಿಸಿದಳು. ವಸಿಷ್ಠರನ್ನು ನೆನೆದು, ಮಗುವನ್ನೂ ಕರೆದುಕೊಂಡು ಅವರಲ್ಲಿಗೆ ಹೋದಳು.
ಇಳೆಯಾಗಿದ್ದ ಸುದ್ಯುಮ್ನನ ಅವಸ್ಥೆ ನೋಡಲಾಗದೆ ವಸಿಷ್ಠರು ಮಹಾದೇವನನ್ನು ಪ್ರಾರ್ಥಿಸಿದರು. ಇಳೆಗೆ ಮರಳಿ ಸುದ್ಯುಮ್ನನ ದೇಹ ಕೊಡುವಂತೆ ಪ್ರಾರ್ಥಿಸಿದರು. ಆದರೆ ಮಹಾದೇವ “ಸಂಪೂರ್ಣವಾಗಿ ಈಕೆ ಗಂಡಾಗಿ ಬಾಳುವುದು ಸಾಧ್ಯವಿಲ್ಲ. ಒಂದು ತಿಂಗಳು ಹೆಣ್ಣು, ಒಂದು ತಿಂಗಳು ಗಂಡಾಗಿರುವಂತೆ ನಾನು ಇವಳಿಗೆ ವರವನ್ನು ಕೊಡುತ್ತೇನೆ” ಎಂದುಬಿಟ್ಟ. ಅದು ಹಾಗೆಯೇ ಆಯಿತು ಕೂಡಾ.
ಇಳೆ ಸುದ್ಯುಮ್ನನಾಗಿ ತನ್ನ ರಾಜ್ಯಕ್ಕೆ ಹೋದಳು. ಸುದ್ಯುಮ್ನನಾಗಿದ್ದ ತಿಂಗಳುಗಳಲ್ಲಿ ರಾಜ್ಯಭಾರ ಮಾಡುವಳು, ಇಳೆಯಾಗಿದ್ದ ತಿಂಗಳುಗಳಲ್ಲಿ ಮಗನ ಪಾಲನೆಯಲ್ಲಿ ದಿನ ಕಳೆಯುವಳು.
ಇಳಾ ಸುದ್ಯುಮ್ನನಿಗೆ ಇದು ಸರಿಬರಲಿಲ್ಲ. ಎರಡೂ ಪಾತ್ರಗಳನ್ನೂ ನಿಭಾಯಿಸುತ್ತಾ ಸುಸ್ತಾಗಿ ಹೋದ. ಈ ಪಲ್ಲಟ ಅವನ ಭಾವುಕತೆ ಮತ್ತು ಮನಸ್ಸಿನ ಮೇಲೆ ವಿಪರೀತ ಹೊಡೆತ ನೀಡುತ್ತಿದ್ದವು, ಈ ವೇಳೆಗೆ ಮನು ಮತ್ತು ಶ್ರದ್ಧಾ ವಾನಪ್ರಸ್ಥಕ್ಕೆ ತೆರಳಿದ್ದರು. ತಾನೂ ವೈರಾಗ್ಯ ಸ್ವೀಕರಿಸಿ ತಪೋನಿರತನಾಗುವುದಾಗಿ ಸಂಕಲ್ಪಿಸಿದ ಸುದ್ಯುಮ್ನ, ಇಳೆಯಾಗಿದ್ದಾಗ ಬುಧನಿಂದ ಪಡೆದ ಮಗ ಪುರೂರವನಿಗೆ ಪಟ್ಟ ಕಟ್ಟಿದ. ರಾಜ್ಯಭಾರವನ್ನು ಅವನಿಗೆ ವಹಿಸಿಕೊಟ್ಟು ಕಾಡಿಗೆ ತೆರಳಿದ. ಪುರೂರವ ಚಂದ್ರನ ಮೊಮ್ಮಗ. ಅವನ ಮೂಲಕ ಭೂಮಿಯಲ್ಲಿ ಚಂದ್ರವಂಶದ ಆಳ್ವಿಕೆ ಮೊದಲಾಯಿತು.
*
ಹೆಣ್ಣಾಗಿ ಹೊತ್ತ ಹರಕೆಯನ್ನು ಗಂಡಾಗಿ ತೀರಿಸಿದ ಐಫಿಸ್
ಕ್ರೀಟ್ ದ್ವೀಪದ ಫೀಸ್ಟಸ್ ಎಂಬಲ್ಲಿ ಜೀವಿಸಿದ್ದ ಲಿಗ್ಡಸ್, ಕಡು ಬಡವನಾಗಿದ್ದ. ಟೆಲಿಥೂಸ ಅವನ ಹೆಂಡತಿ. ಅವಳು ತುಂಬು ಗರ್ಭಿಣಿಯಾಗಿದ್ದಾಗ ಲಿಗ್ಡಸ್ ಚಿಂತಾಕ್ರಾಂತನಾಗಿ ತಲೆ ಮೇಲೆ ಕೈಹೊತ್ತು ಕುಳಿತುಬಿಡುತ್ತಿದ್ದ. ಯಾಕೆ ಹೀಗೆ ಯೋಚನೆಯಲ್ಲಿ ಮುಳುಗಿದ್ದೀಯ ಎಂದು ಹೆಂಡತಿ ಕೇಳಿದರೆ ಏನಿಲ್ಲವೆಂದು ತಲೆಯಾಡಿಸುತ್ತಿದ್ದ.
ಗಂಡನ ಅನ್ಯಮನಸ್ಕತೆಯಿಂದ ಬೇಸರಗೊಂಡ ಟೆಲಿಥೂಸ ಒಂದು ದಿನ ಅವನನ್ನು ಬಹಳವಾಗಿ ಆಗ್ರಹಪಡಿಸಿ, “ಅದೇನು ಯೋಚನೆ ಎಂದು ಹೇಳದೆ ಹೋದರೆ ನನ್ನ ಮೇಲಾಣೆ” ಅಂದುಬಿಟ್ಟಳು. ಲಿಗ್ಡಸ್ ಹೆಂಡತಿಯನ್ನು ವಿಪರೀತ ಪ್ರೀತಿಸುತ್ತಿದ್ದ. ಹಿಂಜರಿಯುತ್ತಲೇ, “ಒಬ್ಬ ತಾಯಿಯ ಬಳಿ ಈ ಮಾತು ಹೇಳಲು ನನಗೆ ನಾಚಿಕೆಯಾಗ್ತಿದೆ. ಆದರೇನು ಮಾಡೋದು? ಬಡವರಿಗೆ ನಾಚಿಕೆ ಸಲ್ಲದು. ನಮಗೆ ಹುಟ್ಟುವ ಮಗು ಹೆಣ್ಣಾದರೆ ಅದನ್ನು ಕೊಂದುಬಿಡೋಣ ಅಂದುಕೊಂಡಿದ್ದೇನೆ” ಅಂದ. ಈ ಮಾತು ಕೇಳಿ ಟೆಲಿಥೂಸಳಿಗೆ ಆಕಾಶವೇ ಬಿದ್ದ ಹಾಗಾಯ್ತು. ಲಿಗ್ಡಸ್ ಅವಳ ತಲೆ ನೇವರಿಸುತ್ತಾ, “ನಾವು ಬಡವರು. ಮನೆಯಲ್ಲಿ ಹೆಣ್ಣು ಹುಟ್ಟಿದರೆ ಸಾಕಿ ಬೆಳೆಸುವುದು, ಮದುವೆ ಮಾಡುವುದಕ್ಕೆಲ್ಲ ಖರ್ಚು ಹೊಂದಿಸುವುದು ಕಷ್ಟ. ಸುಮ್ಮನೆ ಹೆತ್ತು ಹಳವಂಡಕ್ಕೆ ನೂಕುವುದಕ್ಕಿಂತ, ಹುಟ್ಟುತ್ತಲೇ ಕೊಂದುಬಿಡೋಣ. ಗಂಡುಮಗುವೇ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೋ” ಅಂದ.
ಟಿಲಿಥೂಸಳ ಸಂಕಟ ಹೇಳತೀರದಾಯ್ತು. ಗಂಡನ ಮಾತು ಸರಿ ಅನ್ನಿಸಿದರೂ ಹೆತ್ತ ಮಗುವನ್ನು ಕೊಲ್ಲಲು ಸಾಧ್ಯವೇ!? ತಾನು ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಿದ್ದ ಅಯೋ ದೇವತೆಗೆ ಶರಣುಹೋದಳು. “ನನಗೆ ಗಂಡುಮಗುವನ್ನೇ ಕೊಡು, ಅಥವಾ ಹೆಣ್ಣು ಮಗುವನ್ನು ಉಳಿಸಿಕೊಳ್ಳುವ ಶಕ್ತಿ ಕೊಡು” ಎಂದು ಹಗಲಿರುಳು ದೇವತೆಯನ್ನು ಬೇಡಿಕೊಂಡು ಅತ್ತಳು. ಹೆರಿಗೆಯ ಹಿಂದಿನ ರಾತ್ರಿ ಕನಸಿನಲ್ಲಿ ಅಯೋ ದೇವತೆಯು ಕಾಣಿಸಿಕೊಂಡು, “ನಿನ್ನ ಮಗು ಗಂಡಾಗಲಿ, ಹೆಣ್ಣಾಗಲಿ, ಧೈರ್ಯದಿಂದ ಅದನ್ನು ಸಾಕು. ಕಷ್ಟ ಬಂದಾಗ ನಾನು ಸಹಾಯ ಮಾಡುತ್ತೇನೆ. ಧೈರ್ಯವಾಗಿರು” ಎಂದು ಅಭಯ ನೀಡಿದಳು.
ಮರುದಿನ ಟೆಲಿಥೂಸಳಿಗೆ ಹೆರಿಗೆಯಾಗಿ ಚೆಂದದ ಹೆಣ್ಣುಮಗು ಜನಿಸಿತು. ಸೂಲಗಿತ್ತಿಯ ಬಳಿ ಆಣೆ ಭಾಷೆ ಮಾಡಿಸಿಕೊಂಡ ಟೆಲಿಥೂಸ, ಲಿಗ್ಡಸನ ಬಳಿ ಗಂಡು ಮಗು ಹುಟ್ಟಿದೆ ಎಂದು ಸುಳ್ಳು ಹೇಳಿದಳು. ಗಂಡು – ಹೆಣ್ಣು ಇಬ್ಬರಿಗೂ ಬಳಕೆಯಲ್ಲಿದ್ದ ‘ಐಫಿಸ್’ ಎಂಬ ಹೆಸರನ್ನು ಮಗುವಿಗೆ ಇಟ್ಟು, ಅದನ್ನು ಗಂಡಿನಂತೆಯೇ ಬೆಳೆಸಿದಳು. ಶಾಲೆಗೂ ಕಳಿಸಿದಳು.
ಐಫಿಸ್ ಹುಡುಗನಂತೇ ಬೆಳೆದಳು. ಆದರೆ ಅವಳಿಗೆ ಹರೆಯಕ್ಕೆ ಕಾಲಿಟ್ಟಾಗ ತಾನು ಹುಡುಗಿ ಎಂಬುದು ಗೊತ್ತಾಗಿತ್ತು. ಅವಳಿಗೆ ಹದಿಮೂರು ವರ್ಷ ತುಂಬುತ್ತಲೇ ಲಿಗ್ಡಸ್, “ಮಗ ಹದಿಹರೆಯಕ್ಕೆ ಕಾಲಿಟ್ಟಿದ್ದಾನೆ, ಮದುವೆ ಮಾಡೋಣ” ಎಂದು ಹೇಳಿದ. ಟೆಲಿಥೂಸ ನೆವಗಳನ್ನು ಹೇಳಿ ಮದುವೆ ತಪ್ಪಿಸುವ ಪ್ರಯತ್ನ ಮಾಡಿದರೂ ಲಿಗ್ಡಸನ ಉತ್ಸಾಹದ ಎದುರು ಅವಳ ಜಾಣತನ ನಡೆಯಲಿಲ್ಲ.
ಕ್ರೀಟ್ ದ್ವೀಪದವಳೇ ಆದ ಟೆಲಿಸ್ಟೀಸ್ ಎಂಬುವವಳ ಮಗಳು ಇಯಾಂತೆ ಐಫಿಸ್ ವಯಸ್ಸಿನವಳೇ ಆಗಿದ್ದಳು. ಅವಳು ಕೂಡಾ ಚೆಲುವೆ. ಲಿಗ್ಡಸ್, ತನ್ನ ಮಗನಿಗಾಗಿ ಅವಳನ್ನೇ ಆಯ್ಕೆ ಮಾಡಿದ. ಇಯಾಂತೆ ಐಫಿಸನ ಸಹಪಾಠಿಯಾಗಿದ್ದಳು. ಅವಳು ಐಫಿಸ್ ಗಂಡೆಂದೇ ನಂಬಿದ್ದಳು. ಅವನ ಜೊತೆ ಮದುವೆ ಎಂದ ಕೂಡಲೇ ಅವನ ಕುರಿತು ಪ್ರೇಮ ಭಾವನೆ ತಾಳಿದಳು ಇಯಾಂತೆ.
ಇತ್ತ ಟೆಲಿಥೂಸ ಮತ್ತು ಐಫಿಸ್ ಚಿಂತೆಗೊಳಗಾದರು. ಮದುವೆ ದಿನಗಳು ಹತ್ತಿರ ಬಂದಂತೆಲ್ಲ ವಿಚಲಿತಗೊಂಡರು. ರಹಸ್ಯ ಬಯಲಾದ ಮೇಲೆ ಜನರ ಪ್ರತಿಕ್ರಿಯೆ ಏನಿರಬಹುದು ಎಂದು ಕಳವಳಗೊಂಡರು. ಅದಕ್ಕಿಂತಲೂ ಲಿಗ್ಡಸ್ ತಮ್ಮಿಬ್ಬರನ್ನು ಕೊಂದೇಹಾಕುತ್ತಾನೆ ಎಂದು ಭಯಪಟ್ಟರು. ಟೆಲಿಥೂಸ ತನ್ನ ಮೆಚ್ಚಿನ ಅಯೋ ದೇವತೆಯ ಮೊರೆ ಹೋದಳು. ಮರುದಿನ ಐಫಿಸ್’ಳನ್ನೂ ಕರೆದುಕೊಂಡು ಅಯೋ ದೇವತೆಯ ಮಂದಿರಕ್ಕೆ ತೆರಳಿ, ಮಗಳನ್ನು ಬಲಿಗಂಬಕ್ಕೆ ಕಟ್ಟಿದಳು. “ನಮ್ಮ ಸಮಸ್ಯೆ ಪರಿಹರಿಸು, ಇಲ್ಲವೇ ಮಗಳನ್ನು ಬಲಿ ತೆಗೆದುಕೋ” ಎಂದು ಬೇಡಿಕೊಂಡು ಬಿಕ್ಕಳಿಸಿದಳು. ಐಫಿಸ್ ಕೂಡಾ ಈ ಸಮಸ್ಯೆ ಪರಿಹಾರವಾದರೆ ಕಾಣಿಕೆ ಸಲ್ಲಿಸುವುದಾಗಿ ಹರಕೆ ಹೊತ್ತಳು.
ಅಮ್ಮ ಮಗಳ ದೈನ್ಯತೆಯನ್ನು ಕಂಡು ಅಯೋ ದೇವತೆ ಕರಗಿದಳು. ಬಲಿಪೀಠ ಅಲುಗಿ, ಗಂಟೆಗಳು ತೂಗಿ ಸೂಚನೆ ದೊರಕಿತು. ಐಫಿಸ್’ಗೆ ಎಚ್ಚರ ತಪ್ಪಿದಂತಾಯ್ತು. ಕಣ್ಣುಬಿಟ್ಟಾಗ ದೇಹರಚನೆ ಬದಲಾಗಿತ್ತು. ಮುಖದ ಕೋಮಲತೆ ಅಳಿದು ಗಡುಸುತನ ಮೂಡಿತ್ತು. ಅವನು ಮೂರ್ಛೆಹೋಗಿದ್ದ ಟೆಲಿಥೂಸಳನ್ನು ಎಬ್ಬಿಸಲು “ಅಮ್ಮಾ…” ಎಂದು ಕರೆದಾಗ ತನ್ನ ದನಿಗೆ ತನಗೇ ಅಚ್ಚರಿಯಾಯ್ತು. ಐಫಿಸ್ ಗಂಡಾಗಿ ಮಾರ್ಪಟ್ಟಿದ್ದಳು. ಐಫಿಸ್ ಈಗ ಗಂಡಾಗಿದ್ದ!!
ಟೆಲಿಥೂಸಳ ಸಂಭ್ರಮಕ್ಕೆ ಪಾರವೇ ಇಲ್ಲ. ಅಮ್ಮ ಮಗ ಮನೆಗೆ ಬಂದು, ಏನೂ ನಡೆದೇ ಇಲ್ಲವೆಂಬಂತೆ ಮದುವೆ ತಯಾರಿಯಲ್ಲಿ ತೊಡಗಿದರು. ಇಯಾಂತೆ – ಐಫಿಸರ ಮದುವೆ ಸಡಗರದಿಂದ ನೆರವೇರಿತು. ಹರಕೆ ಹೊತ್ತುಕೊಂಡಿದ್ದಂತೆ ಐಫಿಸ್ ತನ್ನ ಹೆಂಡತಿಯನ್ನು ಕರೆದುಕೊಂಡು ಅಯೋ ದೇವತೆಯ ಮಂದಿರಕ್ಕೆ ತೆರಳಿ ಕಾಣಿಕೆ ಸಲ್ಲಿಸಿದ. ಮತ್ತು ಅಲ್ಲಿ ಶಿಲೆಯೊಂದರ ಮೇಲೆ “ನಾನು ಐಫಿಸ್, ಹೆಣ್ಣಾಗಿ ಮಾಡಿಕೊಂಡ ಹರಕೆಯನ್ನು ಗಂಡಾಗಿ ತೀರಿಸುತ್ತಿದ್ದೇನೆ” ಎಂದು ಶಾಸನ ಬರೆದ.
ಎಷ್ಟೋ ಕಾಲದವರೆಗೆ ಐಫಿಸನ ಲಿಂಗಾಂತರದ ಕಥೆ ಯಾರಿಗೂ ಗೊತ್ತೇ ಆಗಲಿಲ್ಲ.