ನಮ್ಮಂತೆ ಜಗತ್ತು ಇರುವುದು, ಜಗತ್ತಿನಂತೆ ನಾವು ಇರುವೆವು! : ಅಧ್ಯಾತ್ಮ ಡೈರಿ

‘ನಮ್ಮಂತೆ ಜಗತ್ತು ಇರುವುದು’ ಎನ್ನಲಾಗುತ್ತದೆ. ‘ಜಗತ್ತಿನಂತೆ ನಾವು ಇರುತ್ತೇವೆ’ ಎನ್ನುವುದು ಕೂಡ ಅಷ್ಟೇ ಸತ್ಯ. ನಾವು ಸಜ್ಜನರೂ ಸಾಧಕರೂ ಸಕಾರಾತ್ಮಕ ಚಿಂತನೆಯವರೂ ಆಗಿದ್ದಾಗಲಷ್ಟೆ ಜಗತ್ತು ನಮ್ಮಂತೆ ಇರಲು ಸಾಧ್ಯವಾಗುತ್ತದೆ. ಅದಕ್ಕೆ ಬದಲಾಗಿ ನಾವು ದುರ್ಬಲರೂ ದುಷ್ಟರೂ ಅರಿವುಗೇಡಿಗಳೂ ಆಗಿದ್ದರೆ ಜಗತ್ತಿನ ಪ್ರಭಾವಕ್ಕೆ ಸಿಲುಕುತ್ತೇವೆ, ಅದರಂತೆ ನಾವೂ ಆಗಿಬಿಡುತ್ತೇವೆ  | ಅಲಾವಿಕಾ

ರಡು ಸಹೋದರ ಗಿಳಿಗಳ ಕಥೆ ಕೇಳಿಯೇ ಇರುತ್ತೀರಿ. ಚಿಕ್ಕಂದಿನಲ್ಲಿ ಬೇರ್ಪಟ್ಟ ಗಿಳಿಗಳಲ್ಲಿ ಒಂದನ್ನು ಕಟುಕನೂ ಮತ್ತೊಂದನ್ನು ಋಷಿಯೂ ಸಾಕುತ್ತಾರೆ. ಕಟುಕನ ಮನೆಯಲ್ಲಿ ಬೆಳೆದ ಗಿಳಿ ಮನೆಯೆದುರು ಯಾರೇ ಬಂದರೂ `ಹಿಡಿಯಿರಿ! ಕಟ್ಟಿ ಹಾಕಿ… ಕೊಲ್ಲಿ!!’ ಅನ್ನುತ್ತ ಇರುತ್ತದೆ. ಮತ್ತು ಋಷಿಯ ಮನೆಯಲ್ಲಿ ಬೆಳೆದ ಗಿಳಿ ಮನೆ ಜಗುಲಿಗೆ ಬಂದವರನ್ನು ಸ್ವಾಗತಿಸುತ್ತ `ಬನ್ನಿ, ಕುಳಿತುಕೊಳ್ಳಿ, ನೀರು ಬೇಕೆ?’ ಎಂದು ಕೇಳುತ್ತ ಇರುತ್ತದೆ.
ನಾವು ಬೆಳೆಯುವ ಪರಿಸರ ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಸೂಚಿಸುವ ಅತ್ಯಂತ ಸಮರ್ಥ ದೃಷ್ಟಾಂತ ಕಥೆ ಇದು.

‘ನಿನ್ನ ಗೆಳೆಯರು ಯಾರೆಂದು ಹೇಳು, ನಾನು ನಿನ್ನ ಬಗ್ಗೆ ಹೇಳುತ್ತೇನೆ’ ಅನ್ನುವ ಪಾಶ್ಚಾತ್ಯ ನಾಣ್ಣುಡಿಯೂ ಇದೇ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದ್ದು. ಒಂದು ಸಸ್ಯ ಕೂಡ ತನ್ನ ವಾತಾವರಣದಂತೆ ಬೆಳೆಯುತ್ತದೆ. ನೀವು ಗಮನಿಸಿರಬಹುದು; ಮೈದಾನದ ಹುಲ್ಲಿನ ಗಾತ್ರ ಕೆಲವೇ ಸೆಂಟಿ ಮೀಟರ್‍ಗಳಷ್ಟು ಇರುತ್ತದೆ. ಅದೇ ಕಾಡಿನೊಳಗೆ ಅದೇ ಜಾತಿಯ ಹುಲ್ಲು ಹಲವಾರು ಅಡಿಗಳವರೆಗೆ ಬೆಳೆದು ನಿಂತಿರುತ್ತದೆ. ಮನುಷ್ಯನ ದೈಹಿಕ ಬೆಳವಣಿಗೆಯೂ ಆಯಾ ಪ್ರಾಂತ್ಯಕ್ಕೆ ಅನುಗುಣವಾಗಿ ಇರುತ್ತದೆ. ಇದೇ ಬಗೆಯಲ್ಲೇ ಮನುಷ್ಯನ ಅಂತರಂಗದ ಮೇಲೆ ಕೂಡ ಪರಿಸರದ ಪ್ರಭಾವ ಉಂಟಾಗುತ್ತದೆ, ಬೆಳವಣಿಗೆಗೆ ಪೂರಕವಾಗಿ ವರ್ತಿಸುತ್ತದೆ.

ವಿಶ್ವವು ಒಂದು ಶಕ್ತಿ ಪ್ರವಾಹ. ಅನೇಕ ಬಗೆಯ ಶಕ್ತಿ ತರಂಗಗಳು ಇದರಿಂದ ನಿರಂತರವಾಗಿ ಹೊಮ್ಮುತ್ತಲೇ ಇರುತ್ತವೆ. ಪ್ರತಿಯೊಂದು ಜಡ – ಚೇತನಗಳಿಂದಲೂ ಧನಾತ್ಮಕ ಅಥವಾ ಋಣಾತ್ಮಕ ಶಕ್ತಿ ತರಂಗಗಳು ಹೊಮ್ಮುತ್ತವೆ. ನಾವು ಆಂತರಿಕವಾಗಿ ದೃಢವಾಗಿರದ ಹೊರತು ಈ ತರಂಗಗಳ ಪ್ರಭಾವದಿಂದ ಪಾರಾಗುವುದು ಸಾಧ್ಯವಿಲ್ಲ. ನಮ್ಮ ಶಕ್ತಿ ತರಂಗಗಳು ಕೂಡ ನಾವು ಬಯಸಿದರೂ ಬಯಸದೆ ಇದ್ದರೂ ಮತ್ತೊಬ್ಬರ ಮೇಲೆ ಅಗತ್ಯವಾಗಿ ಪ್ರಭಾವ ಬೀರುತ್ತದೆ. ಅದನ್ನು ತಪ್ಪಿಸುವುದು ನಮ್ಮ ಕೈಲಿಲ್ಲ. ಆದ್ದರಿಂದಲೇ ಪ್ರಾಜ್ಞರು ಹೇಳಿರುವುದು, ನಿನ್ನ `ಇರುವಿಕೆ’ಯೇ ವಿಶ್ವಕ್ಕೆ ಒಂದು ಕೊಡುಗೆ ಎಂದು.

ನಮ್ಮ ಪೂರ್ವಜರು ಮಂಗಳಕರವಾದ ಕೆಲಸಗಳನ್ನು ಮಾಡುತ್ತಿದ್ದುದು, ಒಳ್ಳೆಯ ಮಾತುಗಳನ್ನು ಆಡುತ್ತಿದ್ದುದು, ಈ ಎಲ್ಲದರ ಉದ್ದೇಶ ಸಕಾರಾತ್ಮಕ ಶಕ್ತಿಯನ್ನು ಉದ್ದೀಪನಗೊಳಿಸುವುದು ಮತ್ತು ಒಂದೆಡೆ ಕಲೆ ಹಾಕುವುದೇ ಆಗಿತ್ತು. ಅವರು ಇದನ್ನು ಅತ್ಯಂತ ಸಹಜವಾಗಿ ನಡೆಸಿಕೊಂಡು ಹೋಗುತ್ತಿದ್ದರು. ಒಳ್ಳೆಯದನ್ನು ಮಾಡಿದರೆ, ಯೋಚಿಸಿದರೆ ಮತ್ತು ನುಡಿದರೆ ನಮಗೂ ಒಳಿತೇ ಆಗುತ್ತದೆ ಎನ್ನುವುದು ಅವರು ಕಂಡುಕೊಂಡಿದ್ದ ಸರಳ ಸತ್ಯವಾಗಿತ್ತು.

ಸ್ವಾಮಿ ರಾಮತೀರ್ಥರು ಒಂದು ದೃಷ್ಟಾಂತ ಹೇಳುತ್ತಾರೆ; ಒಬ್ಬ ಕಳ್ಳ ಏನೋ ಕದ್ದು ಓಡುವಾಗ ತಪ್ಪಿಸಿಕೊಳ್ಳುವ ಸಲುವಾಗ ಸತ್ಸಂಗ ನಡೀತಿದ್ದಲ್ಲಿಗೆ ಹೋಗಿ ಕೂರುತ್ತಾನಂತೆ. ಕತ್ತಲು ದಟ್ಟವಾಗಿ, ಹಿಂಬಾಲಕರು ಕಾಣದಂತೆ ಆದಮೇಲೆ ಆತ ಹೊರಬುರುತ್ತಾನೆ. ಕಳ್ಳ ಸತ್ಸಂಗದ ಚಾವಡಿಯಿಂದ ಹೊರ ಬರೋದನ್ನ ನೋಡಿದ ಜನರೆಲ್ಲ `ಓಹೋ! ನೀ ಒಳ್ಳೇವನಾಗಿಬಿಟ್ಟಿದೀಯಲ್ಲ? ಸತ್ಸಂಗಕ್ಕೆ ಬರುತ್ತಿದ್ದೀಯ… ನಿನಗೆ ಒಳಿತಾಗಲಿ’ ಅನ್ನುತ್ತಾರಂತೆ. ಹೀಗೆ ಅವನನ್ನು ಅಲ್ಲಿ ಕಂಡವರೆಲ್ಲ `ನೀ ಒಳ್ಳೆಯವನು’ ಅಂದೂ ಅಂದೂ ಕೊನೆಗೆ ಅವನು ಒಳ್ಳೇವನೇ ಆಗಿಬಿಡುತ್ತಾನಂತೆ.
– ಇದು ಸಕಾರಾತ್ಮಕ ಶಕ್ತಿ ತರಂಗಗಳು ಬೀರುವ ಪ್ರಭಾವಕ್ಕೆ ಉದಾಹರಣೆ. ಆದರೆ ಸಕಾರಾತ್ಮಕ ಶಕ್ತಿಗಿಂತ ನಕಾರಾತ್ಮಕ ಶಕ್ತಿಗಳ ಪ್ರಭಾವವೇ ಹೆಚ್ಚು ವೇಗವಾಗಿ ಹಾಗೂ ಗಾಢವಾಗಿ ಉಂಟಾಗುವುದು. ಸಾಮಾನ್ಯವಾಗಿ ಹತ್ತು ಬಾರಿ ಮೆಚ್ಚಿ ಮಾತಾಡಿದವರು ಒಂದು ಬಾರಿ ಟೀಕಿಸಿದರೆ, ಟೀಕೆಯೇ ನಮ್ಮ ಮನಸಿನಲ್ಲಿ ದಟ್ಟವಾಗಿ ಉಳಿದುಕೊಳ್ಳುತ್ತದೆ ಅಲ್ಲವೆ?
ಅದು ಹಾಗೆ ಆಗುವುದಕ್ಕೆ ಕಾರಣ ನಮ್ಮೊಳಗೇ ಇದೆ. ನಾವು ಆಂತರಿಕ ಗಟ್ಟಿತನ ಹೊಂದಿರುವುದಿಲ್ಲ. ಆದಕಾರಣ ನಕಾರಾತ್ಮಕ ಸಂಗತಿಗಳಿಗೆ ಬಹಳ ಬೇಗ ಸ್ಪಂದಿಸುತ್ತೇವೆ. ಆ ತರಂಗಗಳು ನಮ್ಮನ್ನು ಹೊಕ್ಕಲು, ಪ್ರಭಾವಿಸಲು ಅನುವು ಮಾಡಿಕೊಡುತ್ತೇವೆ. ಸಕಾರಾತ್ಮಕ ತರಂಗಗಳನ್ನು ಸ್ವೀಕರಿಸಲು ಒಂದು ಸಿದ್ಧತೆ ಇರಬೇಕಾಗುತ್ತದೆ. ನಮ್ಮನ್ನು ಕವಿದಿರುವ ಅಜ್ಞಾನದ, ಅಹಮ್ಮಿನ ಮುಸುಕನ್ನು ತೆಗೆಯಬೇಕಾಗುತ್ತದೆ. ಆಗ ಮಾತ್ರವೇ ಪ್ರಾಂಜಲವಾದ ಸಕಾರಾತ್ಮಕ ಶಕ್ತಿ ತರಂಗಗಳು ನಮ್ಮನ್ನು ಪ್ರಭಾವಿಸಲು ಸಾಧ್ಯ.

ನಾವು ಕೆಡುಕರನ್ನು ಗುರುತಿಸುವಷ್ಟು ಸುಲಭವಾಗಿ ಸಜ್ಜನರನ್ನು ಗುರುತಿಸಲಾರೆವು. ಅಥವಾ ಕೆಡುಕುಗಳಿಗೆ ಹೆದರುವಷ್ಟು ಒಳಿತುಗಳಿಗೆ ಹಂಬಲಿಸಲಾರೆವು. ನಕಾರಾತ್ಮಕತೆಯ ಸಂಕೀರ್ಣ ಜಾಲ ನಮ್ಮೊಳಗೆ ಹಾಸುಹೊಕ್ಕಾಗಿಬಿಟ್ಟಿರುವುದು. ಇದಕ್ಕೆ ನಮ್ಮ ಸ್ವಾರ್ಥ ಹಾಗೂ ಮಿಥ್ಯಾಹಂಕಾರವೇ ಮೂಲ ಕಾರಣ.

‘ನಮ್ಮಂತೆ ಜಗತ್ತು ಇರುವುದು’ ಎನ್ನಲಾಗುತ್ತದೆ. ‘ಜಗತ್ತಿನಂತೆ ನಾವು ಇರುತ್ತೇವೆ’ ಎನ್ನುವುದು ಕೂಡ ಅಷ್ಟೇ ಸತ್ಯ. ನಾವು ಸಜ್ಜನರೂ ಸಾಧಕರೂ ಸಕಾರಾತ್ಮಕ ಚಿಂತನೆಯವರೂ ಆಗಿದ್ದಾಗಲಷ್ಟೆ ಜಗತ್ತು ನಮ್ಮಂತೆ ಇರಲು ಸಾಧ್ಯವಾಗುತ್ತದೆ. ಅದಕ್ಕೆ ಬದಲಾಗಿ ನಾವು ದುರ್ಬಲರೂ ದುಷ್ಟರೂ ಅರಿವುಗೇಡಿಗಳೂ ಆಗಿದ್ದರೆ ಜಗತ್ತಿನ ಪ್ರಭಾವಕ್ಕೆ ಸಿಲುಕುತ್ತೇವೆ, ಅದರಂತೆ ನಾವೂ ಆಗಿಬಿಡುತ್ತೇವೆ.

ಸಸ್ಯ ಸಂಕುಲಕ್ಕೆ ಆಯ್ಕೆಯ ಅವಕಾಶಗಳಿರುವುದಿಲ್ಲ. ವಿವೇಚನೆಯ ಶಕ್ತಿ ಇರುವುದಿಲ್ಲ. ಆದ್ದರಿಂದಲೇ ಅದು ಪರಿಸರಕ್ಕೆ ತಕ್ಕಂತೆ ಬೆಳೆಯುತ್ತದೆ. ಪ್ರಾಣಿಗಳಿಗೆ ಸರಿ ತಪ್ಪುಗಳನ್ನು ಯೋಚಿಸಿ ನಿರ್ಧರಿಸುವ ಬುದ್ಧಿ ಶಕ್ತಿ ಇರುವುದಿಲ್ಲ. ಆದ್ದರಿಂದಲೇ ಅವು ಕೂಡ ಪರಿಸರದ ಪ್ರಭಾವಕ್ಕೆ ಒಳಗಾಗುತ್ತವೆ. ಆದರೆ ಮನುಷ್ಯನಿಗೆ ವಿವೇಚನಾ ಶಕ್ತಿಯೂ ಇದೆ, ಆಲೋಚನಾ ಸಾಮರ್ಥ್ಯವೂ ಇದೆ. ಆದ್ದರಿಂದ ಮನುಷ್ಯ ತನ್ನ ನಡವಳಿಕೆಗೆ ಪರಿಸರದ ಪ್ರಭಾವವನ್ನು ದೋಷಿಯನ್ನಾಗಿಸುವ ಬದಲು, ತನ್ನ ಅಂತರಂಗವನ್ನು ಗಟ್ಟಿ ಮಾಡಿಕೊಳ್ಳುವತ್ತ ಹೆಜ್ಜೆ ಇಡಬೇಕು. ಸ್ವತಃ ತಾನು ಸಕಾರಾತ್ಮಕ ಶಕ್ತಿ ತರಂಗಗಳ ಪ್ರವಾಹವಾಗಬೇಕು. ಆಗಷ್ಟೆ ಜಗತ್ತು ಒಳಿತಿನ ನಂದನವಾಗುವುದು.

 

 

Leave a Reply