ವಸಂತದ ಆರೋಗ್ಯಕ್ಕಾಗಿ ಸರಳ ಸೂತ್ರಗಳು

ಇಂದಿನಿಂದ ವಸಂತ ಮಾಸ ಆರಂಭವಾಗಿದೆ. ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಮೊದಲ ಮಾಸ ಇದು. ಈ ಮಾಸದಲ್ಲಿ ಆರೋಗ್ಯ ಕಾಯ್ದಿಟ್ಟುಕೊಂಡರೆ ಉಳಿದ ದಿನಗಳನ್ನು  ಸುಖ ಶಾಂತಿಯಿಂದ ಕಳಿಯಬಹುದಾಗಿದೆ. ಕೋವಿಡ್ 19 ಹರಡುವ ಭೀತಿಯ ನಡುವೆ ಹೊಸ ಸಂವತ್ಸರವನ್ನು ಎದುರುಗೊಳ್ಳುತ್ತಿರುವ ನಾವು ಹೆಚ್ಚು ಕಾಳಜಿವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ https://www.totalayurveda.in/  ಜಾಲತಾಣದಲ್ಲಿ ಪ್ರಕಟವಾಗಿದ್ದ ಉತ್ತಮ ಆರೋಗ್ಯಕ್ಕಾಗಿ ಸರಳ ಸೂತ್ರಗಳನ್ನು ಇಲ್ಲಿ ನೀಡಿದ್ದೇವೆ. 

ಆಹಾರ 

ಸಹಜವಾಗಿಯೇ ಜೀರ್ಣಶಕ್ತಿ ಕಡಿಮೆಯಾಗುವುದರಿಂದ ಪಚನಕ್ಕೆ ಜಡವಾದ ಪದಾರ್ಥಗಳಿಂದ ದೂರವಿರುವುದೇ ಲೇಸು. ಅಭ್ಯಾಸವಿರುವ ಲಘು ಬೋಜನ ಹಿತಕರ. ಮಲೆನಾಡಿನವರಿಗೆ ಹುರಿದಕ್ಕಿ ಗಂಜಿ, ಹುಗ್ಗಿ, ಹುರುದಕ್ಕಿ ತೆಳ್ಳವು, ಮೆಂತೆ ದೋಸೆ, ತೊಡದೇವುಗಳು ಹಿತಕರ ಸಿಹಿ, ಹುಳಿ ಮತ್ತು ಶೀತ ಪದಾರ್ಥಗಳ ಬಳಕೆಯಿಂದ ಕಫ ಹೆಚ್ಚಾಗಿ ಆರೋಗ್ಯ ಕೆಡುತ್ತದೆ. ಬಿಸಿಲಿನ ತೀಕ್ಷ್ಣತೆಗೆ ಮೋಸ ಹೋಗಿ ಐಸ್ ಕ್ರೀಂ ತಿಂದರೆ ಗಂಟಲು ನೋವು – ಜ್ವರ ಉಚಿತ ! ಬೆಳಗಿನ ದೋಸೆ ಬಿಸಿಯಿಲ್ಲದಿದ್ದರೆ ಜೇನುತುಪ್ಪ ಸವರಿ ಸವಿಯುವುದು ಕಫ ಹೆಚ್ಚಾಗುವುದನ್ನು ತಡೆಯುತ್ತದೆ! ಮೊಸರು – ಉದ್ದು- ಕರಿದ ಪದಾರ್ಥಗಳಿಗೆ ಜನವರಿ – ಫೆಬ್ರವರಿ – ಮಾರ್ಚ್ ಗಳಲ್ಲಿ ವಿದಾಯ ಹೇಳುವುದೇ ಉತ್ತಮ.

ನೀರು 

  ನೀರು ಆರೋಗ್ಯಕ್ಕೆ ಅನಿವಾರ್ಯ, ತಪ್ಪಾದರೆ ರೋಗಕ್ಕೆ ಮೂಲ!

– ವಸಂತದಲ್ಲಿ ಸಣ್ಣ ತುಂಡು ಶುಂಠಿ ಹಾಕಿ ಕುದಿಸಿದ ನೀರು ಕಫ ಕಟ್ಟುವುದನ್ನು ತಪ್ಪಿಸುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

– ಭದ್ರಮುಷ್ಠಿಯ ಬೇರು ಹಾಕಿ ಕುದಿಸಿದ ನೀರು ಪದೇ ಪದೇ ಜ್ವರ, ಭೇದಿ ಅಜೀರ್ಣಗಳಾಗುವುದನ್ನು ತಡೆಯುತ್ತದೆ.

– ಅತಿಸ್ಥೂಲಕಾಯರಿಗೆ ತಣ್ಣೀರು/ ಕಾದಾರಿದ ನೀರಿನಲ್ಲಿ ಐದಾರು ಹನಿ ಜೇನು ಸೇರಿಸಿ ಬಳಸುವುದು ಹಿತಕರ.

ವ್ಯಾಯಾಮ 

– ಪ್ರತಿನಿತ್ಯವೂ ಖಾಲಿ ಹೊಟ್ಟೆಯಲ್ಲಿ ಬೆವರು ಬರುವವರೆಗೆ ವ್ಯಾಯಾಮ ಬೇಕು.

– ಹಗಲು ನಿದ್ದೆ ಹಾನಿಕಾರಕವಾಗಿರುತ್ತದೆ.

– ವ್ಯಾಯಾಮದ ನಂತರ ಎಣ್ಣೆ ಹಚ್ಚಿ ಕಡ್ಲೆ ಹಿಟ್ಟು ಅಥವಾ ಹೆಸರಿಟ್ಟಿನಿಂದ ಉಜ್ಜಿ ಬಿಸಿ ನೀರ ಸ್ನಾನ ಮಾಡುವುದು ಹಿತಕರ.

ಚಳಿಗಾಲದಲ್ಲಿಯೇ ಕಫದ ಸಂಚಯ ಬಹಳಷ್ಟು ಆದವರಿಗೆ, ಬಿಸಿಲೇರುತ್ತಿದ್ದಂತೆಯೇ ಸಹಜವಾಗಿಯೇ ರೋಗದ ಬೀಜಗಳು ಮೊಳಕೆಯೊಡೆಯುತ್ತದೆ. ಅಂತವರು ಸುಶಿಕ್ಷಿತ ಆಯುರ್ವೇದ ವೈದ್ಯರಲ್ಲಿ ವಮನ ಕರ್ಮ ಮಾಡಿಸಿ ದೇಹವನ್ನು ಶುದ್ಧಿಗೊಳಿಸಿಕೊಳ್ಳುವುದು ಹಿತಕರ. ಅದು ವಯಸ್ಸಾಗಲೀ, ಋತುವಾಗಲೀ ಕಾಲವನ್ನರಿತು ನಡೆದರೆ ಸುಃಖ ಕಟ್ಟಿಟ್ಟ ಬುತ್ತಿ.

 

Leave a Reply