ಉತ್ತರ ಭಾರತದ ಸಂತ ಪರಂಪರೆಯಂತೂ ರಾಮನಾಮಕ್ಕೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿತ್ತು. ಎಷ್ಟೆಂದರೆ, “ಸ್ವತಃ ರಾಮ ಕರೆದಾಗಲೂ ನಾನು ಹೋಗಲಿಲ್ಲ. ರಾಮನಾಮದ ಮುಂದೆ ಶ್ರೀರಾಮನಲ್ಲೂ ರುಚಿಯಿಲ್ಲ” ಎಂದು ಕಬೀರ ಹಾಡುವಷ್ಟು! ~ ಆನಂದಪೂರ್ಣ
ರಾಮ, ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ನಾಮ. ದೇವರಾಗಿ ಪೂಜೆಗೊಳ್ಳುವುದಕ್ಕಿಂತ, ಕಥೆಯಾಗಿ, ಆದರ್ಶವಾಗಿ, ವಿಮರ್ಶೆಗೆ ಒಳಗಾಗಿ ಮತ್ತೆಮತ್ತೆ ಪ್ರಸ್ತುತವಾಗುತ್ತಲೇ ಇರುವ ಪುರಾಣೈತಿಹಾಸಿಕ ವ್ಯಕ್ತಿ; ಅಥವಾ ಅವತಾರಿ ಶ್ರೀ ರಾಮ.
ಸೂರ್ಯ ವಂಶದ, ಇಕ್ಷ್ವಾಕು ಕುಲದ ಮಹಾರಾಜ ದಶರಥನ ಮಗನಾಗಿ ಹುಟ್ಟಿ, ಲವಕುಶರ ತಂದೆಯಾಗಿ ಅವರಿಂದ ತನ್ನ ಕಥನವನ್ನು ತಾನೇ ಕೇಳಿಸಿಕೊಳ್ಳುವರೆಗೆ ಶ್ರೀರಾಮನ ಜೀವನಗಾಥೆ ಇದೆ. ಮತ್ತು ಈ ಕಥೆ ನಾನಾ ಪಾಠಾಂತರಗಳಲ್ಲಿ ಭಾರತದ ಹಳ್ಳಿಹಳ್ಳಿಗಳಲ್ಲೂ ಪ್ರಚಲಿತದಲ್ಲಿದೆ.
ವಿಶೇಷವಾಗಿ ಉತ್ತರ ಭಾರತದಲ್ಲಿ ರಾಮಪ್ರೇಮಿಗಳು ಹೆಚ್ಚು. ಅಲ್ಲಿಯ ಸಂತ ಪರಂಪರೆಯಂತೂ ರಾಮನಾಮಕ್ಕೆ ತನ್ನನ್ನು ಅರ್ಪಿಸಿಕೊಂಡಿತ್ತು. ಎಷ್ಟೆಂದರೆ, “ಸ್ವತಃ ರಾಮ ಕರೆದಾಗಲೂ ನಾನು ಹೋಗಲಿಲ್ಲ. ರಾಮನಾಮದ ಮುಂದೆ ಶ್ರೀರಾಮನಲ್ಲೂ ರುಚಿಯಿಲ್ಲ” ಎಂದು ಕಬೀರ ಹಾಡುವಷ್ಟು! ರಾಮನಾಮವೆಂದರೆ ಅವರ ಪಾಲಿಗೆ, ಅದೊಂದು ಶಕ್ತಿ. ಅದು ರಾಮನಿಗಿಂತಲೂ ಹೆಚ್ಚು. ಈ ಸಂತರ ಪಾಲಿನ ರಾಮ ‘ಅವತಾರಿ ರಾಮ’ನಲ್ಲ, ಆತ ನಿರ್ಗುಣ ರಾಮ. ಸರ್ವಾಂತರ್ಯಾಮಿಯಾದ ಶಕ್ತಿಮೂಲವನ್ನೇ ಅವರು ರಾಮನೆಂದು ಕರೆದು ಜಪಿಸಿದರು. ನಿರ್ಗುಣ ರಾಮನಲ್ಲಿ ಪ್ರೇಮವನ್ನು ತುಂಬಿ ತಮ್ಮ ತಮ್ಮ ರಾಮಂದಿರನ್ನು ತಾವು ಸೃಷ್ಟಿಸಿಕೊಂಡು, ಆ ರಾಮನ ಮೂಲಕ ಜಗತ್ತಿಗೆ ಪ್ರೇಮವನ್ನು ಹಂಚಿದರು. ರಾಮಪ್ರೇಮ ಅವರ ಸಾಧನೆಯ ಹಾದಿಯೇ ಆಗಿತ್ತು.
ಉದಾಹರಣೆಗೆ, ಸಂತ ನಾಮದೇವರ ‘ಎಂತಾದರೂ ನಿಂದಿಸಲಿ ಮಂದಿ ನನ್ನ / ತನುಮನವೆಲ್ಲ ರಾಮಪ್ರೇಮದಲಿ ಮಗ್ನ’ ಎಂಬ ಸಾಲುಗಳನ್ನೇ ತೆಗೆದುಕೊಳ್ಳಿ. ಇಲ್ಲಿ ಪ್ರಧಾನವಾಗಿ ತೋರುವುದು ಮಾಧುರ್ಯ ಭಾವ. ಇನ್ನು ಹೆಸರಿನಲ್ಲೇ ರಾಮನನ್ನು ಹೊಂದಿದ್ದ ಸಂತ ರಾಮಾನಂದರಂತೂ ಸದಾ ರಾಮನಾಮದಲ್ಲಿ ಉನ್ಮತ್ತರಾಗಿರುತ್ತದ್ದರು. ಹಾಗೆಂದೇ ಕಬೀರ ಅವರನ್ನು ಕುರಿತು ‘ರಾಮಾನಂದ ರಾಮರಸ ಮಾತೇ/ ಹಮ್ ಕಹಿಕಹಿ ಥಾಕೇ’ – ‘ರಾಮಾನಂದರು ಸದಾ ರಾಮರಸ ಮತ್ತರು, ಅವರ ಗುಣಗಾನ ಮಾಡಿದಷ್ಟೂ ನನಗೆ ತೃಪ್ತಿಯಿಲ್ಲ’ ಎಂದು ಹೇಳಿರುವುದು. ಸೇನಾ ನಾಯೀ (ನಾಯೀ – ಕ್ಷೌರಿಕ) ಕೂಡಾ ರಾಮಾನಂದರನ್ನು ಕುರಿತು “ರಾಮಭಕುತಿಯ ರಾಮಾನಂದರೇ ಬಲ್ಲರು/ಪೂರ್ಣ ಪರಮಾನಂದದಲಿ ರಾಮನ ಕರೆವರು” ಎಂದು ತಮ್ಮ ಅಭಂಗದಲ್ಲಿ ಹಾಡಿ ಹೊಗಳಿದ್ದಾರೆ.
ಇನ್ನು, ಸ್ವತಃ ಕಬೀರರ ರಾಮಪ್ರೇಮ ಬಣ್ಣಿಸಿದಷ್ಟೂ ಮುಗಿಯದ್ದು. ತಮ್ಮದೊಂದು ದೋಹೆಯಲ್ಲಿ ಅವರು ‘ಕಬೀರಾ ಕೂತಾ ರಾಮಕಾ ಮುತಿಯಾ ಮೇರಾ ನಾಉ/ಗಲೈ ರಾಮಕೀ ಜೇವಡೀ ಜಿತ ಖೀಂಚೈ ತಿತ ಜಾಂಉ’ ಎಂದು ಹೇಳಿಕೊಂಡಿದ್ದಾರೆ. “ಕಬೀರನೆಂಬುವನು ರಾಮನ ನಾಯಿ, ಮುತಿಯಾ ನನ್ನ ಹೆಸರು/ಕೊರಳಲಿಹುದು ರಾಮನ ಉರುಳು, ಅವನೆಳೆದತ್ತ ಸಾಗುವೆ ನಾನು” ಎಂದು ಅದರ ಅರ್ಥ! ಇಲ್ಲಿ ಕಬೀರರ ದಾಸ್ಯ ಭಕ್ತಿಯ ಔನ್ನತ್ಯವನ್ನು ನಾವು ಕಾಣಬಹುದು. ಹಾಗೆಯೇ ಕಬೀರ ಮಾಧುರ್ಯ ಭಕ್ತಿಯಲ್ಲೂ ಹಿಂದೆ ಬಿದ್ದವನಲ್ಲ, ತನ್ನನ್ನು ರಾಮನ ಪ್ರಿಯತಮೆಯಾಗಿ ಭಾವಿಸಿಕೊಂಡು “ಹರಿ ಮೋರಾ ಪಿಯಾ/ಮೈಂ ರಾಮ್ ಕೀ ಬಹುರಿಯಾ” ಎಂದು ತಮ್ಮ ರಾಮಪ್ರೇಮವನ್ನು ತೋರ್ಪಡಿಸಿಕೊಂಡಿದ್ದಾರೆ.
ಅದು “ಕಾಯದಲೇ ದೇವ/ಕಾಯದಲೇ ಜೀವ/ಕಾಯದಲೇ ಜಂಗಮ ಪ್ರಾಣಿ// ಬರಲಿಲ್ಲವೇನೂ, ಹೋಗಲಿಲ್ಲವೇನೂ ರಾಮನಾಣೆ!” ಎಂದ ಸಂತ ಪೀಪಾ ಇರಬಹುದು; “ಪೂಜೆಯನರಿಯೆ, ಅರ್ಚನೆಯರಿಯೆ, ಭಕುತನನುದ್ಧರಿಸೋ ರಾಮ” ಎಂದು ದೀನ ಭಕ್ತಿ ತೋರಿದ ರೈದಾಸರಿರಬಹುದು; ರಾಮನ ಜೊತೆ ಸೀತೆಯನ್ನೂ ಸೇರಿಸಿಕೊಂಡು “ನಮ್ಮ ಮತಕ್ಕೆ ಯಾರು ಬೇಕಾದರೂ ಬರಬಹುದು/ಸೀತಾರಾಮರ ನಾಮಜಪ ಹಾಡಿ ಸುಖ ಹೊಂದಬಹುದು” ಎಂದು ತಮ್ಮ ಸಿಕ್ಖ್ ಮತಕ್ಕೆ ಆಹ್ವಾನ ನೀಡಿದ ಗುರು ನಾನಕರೇ ಇರಬಹುದು… ಇವರೆಲ್ಲರೂ ರಾಮನಾಮಪ್ರೇಮಿಗಳು. ರಾಮನ ನಾಮ ಜಪದಲ್ಲಿ ಸಾಕ್ಷಾತ್ಕಾರದ, ಮುಕ್ತಿಯ, ಜ್ಞಾನೋದಯದ ದಾರಿಯನ್ನು ಕಂಡುಕೊಂಡವರು.
ಇಲ್ಲಿ ಉಲ್ಲೇಖಿಸಲಾಗಿರುವುದು ಆದಿಕಾಲದ ಸಂತ ಸಾಹಿತ್ಯಸಾಗರದ ಕೆಲವು ಹನಿಗಳನ್ನಷ್ಟೆ. ಈ ಸಂತಪರಂಪರೆ ಮತ್ತವರ ಸಾಹಿತ್ಯ ಸೃಷ್ಟಿ ಸಾಕಷ್ಟು ಅಗಾಧ; ಮತ್ತದರ ರಾಮಪ್ರೇಮದ ಕಥನ ವಿಸ್ತಾರವೂ ಸ್ವಾರಸ್ಯಕರವೂ ಆಗಿವೆ. ಅವುಗಳನ್ನು ರಾಮನಾಮ ಮತ್ತು ಸಂತಸ್ಮರಣೆಯ ಮುಂದಿನ ಅವಕಾಶಗಳಲ್ಲಿ ನೋಡೋಣ.