ಬುದ್ಧ ಬೋಧಿಸಿದ ‘ಧಮ್ಮ’ : ಅಂಬೇಡ್ಕರ್ ವ್ಯಾಖ್ಯಾನ

ಅಂಬೇಡ್ಕರರ ಅಧ್ಯಯನ ಮತ್ತು ಕಾಣ್ಕೆಯಿಂದ ಹೊಮ್ಮಿದ ಹೊಳಹುಗಳಲ್ಲಿ ಒಂದು ಬೊಗಸೆ ಇಲ್ಲಿದೆ… (ಇಂದು ಅಂಬೇಡ್ಕರ್ ಜಯಂತಿ)


ಡಾ.ಭೀಮರಾವ್ ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸುವ ಮೊದಲು ಅದನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ತಾವು ಜನಸಿದ್ದ ಹಿಂದೂ ಧರ್ಮದಲ್ಲಿ ತಾಂಡವವಾಡುತ್ತಿದ್ದ ಜಾತಿ ತಾರತಮ್ಯಗಳು ಅವರನ್ನು ತೀವ್ರ ಬೇಸರಕ್ಕೆ ದೂಡಿದ್ದರೂ ಅವರು ಒಟ್ಟಾರೆ ಧರ್ಮಗಳ ಬಗ್ಗೆ, ಧಾರ್ಮಿಕತೆಯ ಬಗ್ಗೆ ತಿರಸ್ಕಾರ ತಾಳಿರಲಿಲ್ಲ. ಅಂಬೇಡ್ಕರ್ ಪಾಲಿಗೆ ಧರ್ಮ ಅಂದರೆ ‘ರುಜುತನ’. ಭ್ರಾತೃತ್ವ, ನ್ಯಾಯ, ಸಮಾನತೆ ಇತ್ಯಾದಿಗಳನ್ನು ಒಳಗೊಂಡ ಜೀವನ ವಿಧಾನ.

ಈ ನಿಟ್ಟಿನಲ್ಲಿ ಅಂಬೇಡ್ಕರ್ ಬೌದ್ಧ ಧರ್ಮದ ಅಧ್ಯಯನ ನಡೆಸಿ, ಅದಕ್ಕೊಂದು ಹೊಸ ವ್ಯಾಖ್ಯಾನವನ್ನೇ ನೀಡಿದರು. ಬೌದ್ಧ ಧರ್ಮದಲ್ಲಿ ಕಾಲಾಂತರದಲ್ಲಿ ಸೇರಿಕೊಂಡ ನಂಬಿಕೆಗಳನ್ನು, ವ್ಯಾಖ್ಯಾನಗಳನ್ನು, ಆಚರಣೆಗಳನ್ನು ಬೆಟ್ಟುಮಾಡಿ ತೋರಿಸುತ್ತಾ ‘ಇದು ನೈಜ ಬೌದ್ಧಧರ್ಮವಲ್ಲ’ ಎಂದು ಸಾರಿದರು. ಹಾಗೂ ನೈಜ ಬೌದ್ಧ ಧರ್ಮ ಯಾವುದು, ಬುದ್ಧ ವಾಸ್ತವದಲ್ಲಿ ಹೇಳಿದ್ದೇನು ಎಂದು ಸ್ಪಷ್ಟವಾಗಿ ಹೇಳಿದರು.

ಅಂಬೇಡ್ಕರರ ಅಧ್ಯಯನ ಮತ್ತು ಕಾಣ್ಕೆಯಿಂದ ಹೊಮ್ಮಿದ ಹೊಳಹುಗಳಲ್ಲಿ ಒಂದು ಬೊಗಸೆ ಇಲ್ಲಿದೆ:

  • ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧವಾಗಿಡುವುದು ದಮ್ಮ. ಇರುವ ಜನ್ಮದಲ್ಲೆ ಪರಿಪೂರ್ಣತೆಯನ್ನು ಸಾಧಿಸುವುದು ದಮ್ಮ. ಜೀವನದಲ್ಲಿ ನಿಬ್ಬಣ (ನಿರ್ವಾಣ)ವನ್ನು ಪಡೆಯುವುದು ದಮ್ಮ. ದುರಾಸೆಯನ್ನು ತ್ಯಜಿಸುವುದು ದಮ್ಮ. ಸೃಷ್ಟಿಯ ಸಕಲ ವಸ್ತುಗಳೂ ಅನಿತ್ಯ ಎಂದು ತಿಳಿಯುವುದು ದಮ್ಮ. ಎಲ್ಲರಿಗೂ ವಿದ್ಯೆ ಲಭಿಸುವಂತೆ ಮಾಡುವುದು ದಮ್ಮ. ಬರಿ ವಿದ್ಯೆ ಆಭರಣ ಮಾತ್ರ. ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿ ನಡೆಯುವುದು ಪ್ರಜ್ಞೆ. ಮತ್ತು ‘ಪ್ರಜ್ಞೆ’ ಅಂದರೆ ವಿಚಾರ ದಮ್ಮ. ಇಂತಹಾ ಪ್ರಜ್ಞೆಯನ್ನು ವಿದ್ಯೆಯ ಜೊತೆ ಬೆಳೆಸುವುದು ದಮ್ಮ.
  • ಪ್ರಜ್ಞೆ ಶೀಲವನ್ನು (ಶೀಲ ಎಂದರೆ ಆಚಾರ ಧರ್ಮ) ಬೆಳೆಸುವಂತಿರಬೇಕು. ಪ್ರಜ್ಞೆ ಮತ್ತು ಶೀಲಗಳು ಕರುಣೆಯನ್ನು ಬೆಳೆಸುವಂತಿರಬೇಕು. ಅಷ್ಟೇ ಅಲ್ಲ, ಸಕಲ ಜೀವಿಗಳಲ್ಲೂ ಮೈತ್ರಿಯನ್ನು ಬೆಳೆಸುವಂತಿರಬೇಕು ಅದೇ ದಮ್ಮ.
  • ಬುದ್ಧನ ಪ್ರಕಾರ ಧರ್ಮದ ಮಹತ್ವ ಮನುಷ್ಯ ಮತ್ತು ದೇವರ ನಡುವಿನ ಸಂಬಂಧದಲ್ಲಿ ಇಲ್ಲ. ಅದು ಮನುಷ್ಯ – ಮನುಷ್ಯರ ನಡುವಿನ ಸಂಬಂಧದಲ್ಲಿದೆ. ಈ ಸಂಬಂದವನ್ನು ನಿಭಾಯಿಸಲು ಮನುಷ್ಯರು ಹೇಗೆ ವರ್ತಿಸಬೇಕು ಎಂದು ಬೋಧಿಸುವುದೇ ದಮ್ಮ.
  • ಧರ್ಮ ಮನುಷ್ಯರಿಗಾಗಿ ಇದೆಯೇ ಹೊರತು, ಮನುಷ್ಯರು ಧರ್ಮಕ್ಕಾಗಿ ಇರುವುದಲ್ಲ.
  • ಜಗತ್ತಿನಲ್ಲಿ ದುಃಖ ಇದೆ, ಇದು ಮನುಷ್ಯರು ಮನುಷ್ಯರಿಗೆ ಮಾಡುವ ಅನ್ಯಾಯದ ಫ‌ಲ. ಅದರೆ ಅದಕ್ಕೆ ಪರಿಹಾರವೂ ಮನುಷ್ಯರಲ್ಲೇ ಇದೆ. ನಮ್ಮ ದುಃಖ ನಿರ್ಮೂಲನೆಯಾಗಬೇಕೆಂದರೆ, ನಾವು ಇತರರೊಡನೆ ಋಜುತನದಿಂದ ನಡೆದುಕೊಳ್ಳಬೇಕು. ಆ ಮೂಲಕ ಭೂಮಿಯನ್ನು ಋಜುತನದ ಸಾಮ್ರಾಜ್ಯವಾಗಿ ಮಾಡಬೇಕು. ಇದು ದಮ್ಮ

(ಆಧಾರ: The Buddha and his Dhamma by Dr.B.R.Ambedkar)

Leave a Reply