‘ಸಮತೋಲನವೇ ಬುದ್ಧನ ಮಧ್ಯಮ ಮಾರ್ಗ’ : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 2.4

ಅತಿರೇಕಗಳನ್ನು ಆಯ್ಕೆ ಮಾಡಿಕೊಂಡಾಗ ಎರಡರಲ್ಲೂ ಸೋಲುತ್ತೀರಿ. ಆಯ್ಕೆಯ ಆಸೆ ಬಿಟ್ಟಾಗಲೇ ಗೆಲುವು ಸಾಧಿಸುತ್ತೀರಿ. ಸಮತೋಲನ ಎಲ್ಲವನ್ನೂ ಸಾಧ್ಯವಾಗಿಸುತ್ತದೆ. ಈ ಸಮತೋಲನವೇ ಬುದ್ಧನ ‘ಮಧ್ಯಮ ಮಾರ್ಗ’ ~ ಓಶೋ ರಜನೀಶ್

che zen

ಹಾದಿ ಪರಿಪೂರ್ಣವಾಗಿದೆ, ಅಪಾರ ಬಯಲಿನಂತೆ.
ಒಂದಿನಿತೂ ಹೆಚ್ಚು – ಕಡಿಮೆಯಿಲ್ಲ.
ಹೌದು, ಸ್ವೀಕಾರ ಮತ್ತು ನಿರಾಕರಣೆಗಳ ನಡುವಿನ ನಮ್ಮ ಆಯ್ಕೆ
ವಿಷಯಗಳ ನೈಜ ಸ್ವಭಾವದಿಂದ ನಮ್ಮನ್ನು ವಿಮುಖರನ್ನಾಗಿಸಿದೆ. 

ಸ್ವೀಕಾರ, ನಿರಾಕರಣೆಗಳ ಗೊಂದಲದಲ್ಲಿ ಬಿದ್ದೆವೆಂದರೆ
ವಿಷಯದ ನಿಜ ಸ್ವಭಾವ ಮರೆಯಾಗುತ್ತದೆ,
ಆಗಲೇ ನಿಮ್ಮ ವಿಚಾರಗಳು, ಸಿದ್ಧಾಂತಗಳು, ಪೂರ್ವಾಗ್ರಹಗಳು
ನಿಮ್ಮ ತಿಳುವಳಿಕೆಗೆ ಬಣ್ಣ ಹಚ್ಚಲು ಶುರು ಮಾಡುತ್ತವೆ.
ಅಕಸ್ಮಾತ್ ನಿಮ್ಮ ಕಣ್ಣುಗಳಿಗೆ ತಿಳುವಳಿಕೆ ಇರದೇ ಹೋಗಿದ್ದರೆ
ಅವು ಸುಮ್ಮನೇ ನೋಡುತ್ತಿದ್ದವು
ಯಾವುದನ್ನೂ ಹೊಗಳುತ್ತಿರಲಿಲ್ಲ
ಏನನ್ನೂ ತೆಗಳುತ್ತಿರಲಿಲ್ಲ
ಇರುವುದನ್ನ ಇದ್ದ ಹಾಗೆ ನೋಡುತ್ತಿದ್ದವು
ನಿರ್ವಾಣವನ್ನು ಸಾಧಿಸುತ್ತಿದ್ದವು.

ಆಗ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ.
ಯಾವ ಒಗಟನ್ನೂ ಬಿಡಿಸಬೇಕಾಗಿರಲಿಲ್ಲ.
ಕೇವಲ ನಿಗೂಢತೆಯನ್ನು 
ಬದುಕಬೇಕಾಗಿತ್ತು, ಆನಂದಿಸಬೇಕಾಗಿತ್ತು
ಕುಣಿತವನ್ನು ಕುಣಿಯಬೇಕಾಗಿತ್ತು.
ಆಗ ದ್ವಂದ್ವ ಮಾಯವಾಗುತ್ತದೆ 
ಆಗ ಇರುವ ಜಾಗವೇ ಸ್ವರ್ಗವಾಗುತ್ತದೆ,
ಖುಶಿ ತಾನೇ ತಾನಾಗಿ ಆವರಿಸಿಕೊಳ್ಳುತ್ತದೆ.

ಬಹಿರಂಗದ ಸಿಕ್ಕಿನಲ್ಲಿ ಸಿಕ್ಕಿ ಹಾಕಿಕೊಳ್ಳದಿರಿ,
ಅಂತರಂಗದ ಖಾಲೀತನಕ್ಕೆ ಭಾವಪರವಶರಾಗದಿರಿ.
ಆಚರಣೆಗಳ ಸಲುವಾಗಿ ಶ್ರಮಿಸದಿರಿ, ಬೆವರು ಸುರಿಸದಿರಿ
ಸಹಜವಾಗಿರಿ, ಸಮಾಧಾನವಾಗಿರಿ
ವಿಷಯದ ಅನನ್ಯತೆಯಲ್ಲಿ ಒಂದಾಗಿ.
ಆಗ ಗೊಂದಲಗಳು ತಾನೇ ತಾನಾಗಿ
ಮರೆಯಾಗುತ್ತ ಹೋಗುತ್ತವೆ.

ಅಂತರಂಗ ಬಹಿರಂಗಗಳನ್ನು 
ಪ್ರತ್ಯೇಕಿಸಿ ನೋಡಬೇಡಿ ಎನ್ನುತ್ತಾನೆ ಸೊಸಾನ್.

ಕಾರ್ಲ ಯೂಂಗ್ ನ ಪ್ರಕಾರ
ಜಗತ್ತಿನಲ್ಲಿ ಎರಡು ಥರದ ಜನರು.
ಅಂತರ್ಮುಖಿಗಳು ಮತ್ತು ಬಹಿರ್ಮುಖಿಗಳು.

ಬಹಿರ್ಮುಖಿಗಳು ಕ್ರಿಯಾಶೀಲರು
ಸಂಪತ್ತು, ಪ್ರತಿಷ್ಠೆ, ಅಧಿಕಾರದ ಹಿಂದೆ ಹೋಗುವವರು.
ಇವರು ರಾಜಕಾರಣಿಗಳು, ಸಮಾಜ 
ಸುಧಾರಕರು, ಉದ್ಯಮಶೀಲರು.
ಹೊರ ಜಗತ್ತಿನ ವಿಷಯದಲ್ಲಿ ಆಸಕ್ತರು.

ಅಂತರ್ಮುಖಿಗಳು 
ಸ್ವಂತದ ವಿಷಯದಲ್ಲಿ ಮಾತ್ರ ಆಸಕ್ತರು
ತಮ್ಮೊಳಗಿನ ವ್ಯವಹಾರದಲ್ಲಿ ಮಾತ್ರ ಮಗ್ನರು.
ಕುತ್ತಿಗೆಗೆ ಬಂದಾಗಲಷ್ಟೇ ಕ್ರಿಯೆಗೆ ಇಳಿಯುವವರು
ಇವರು ಕವಿಗಳು, ಅನುಭಾವಿಗಳು, ಚಿಂತಕರು.
ತಮ್ಮ ಶಕ್ತಿಯನ್ನೆಲ್ಲ ಅಂತರಂಗದ ವಹಿವಾಟಿಗೆ ಧಾರೆ ಎರೆಯುವವರು.

ಆದರೆ ಸೊಸಾನ್ ಈ ಇಬ್ಬರನ್ನೂ ದೂರ ಇಡುತ್ತಾನೆ.
ಏಕೆಂದರೆ ಅವರಲ್ಲಿ ವಿಭಜನೆ ಇದೆ.
ಬಹಿರ್ಮುಖಿಗಳು ಅಂತರಂಗದ ಖಾಲೀತನಕ್ಕೆ ಕೊರಗುವವರು,
ಮತ್ತು ಅಂತರ್ಮುಖಿಗಳು ಹೊರ ಜಗತ್ತಿನ ಸೌಂದರ್ಯದಿಂದ ವಂಚಿತರು.

ಈ ಎರಡೂ ಅತಿರೇಕಗಳಿಂದ ದೂರವಿರಿ.
ಅಂತರಂಗ ಬಹಿರಂಗಗಳ ನಡುವೆ ಭೇದ ಮಾಡದಿರಿ
ಈ ಎರಡರ ಮಧ್ಯೆ ಸಮತೋಲನ ಸಾಧಿಸುತ್ತ ಪ್ರವಹಿಸುತ್ತೀರಿ
ಎನ್ನುತ್ತಾನೆ ಸೊಸಾನ್.

ಅಂತರಂಗ ಬಹಿರಂಗಗಳು
ಎರಡು ಕಣ್ಣುಗಳಿದ್ದಂತೆ, ಎರಡು ಕಿವಿಗಳಿದ್ದಂತೆ
ಎರಡು ಕೈ, ಎರಡು ಕಾಲುಗಳಿದ್ದಂತೆ.
ಒಂದನ್ನೇ ಆಯ್ಕೆ ಮಾಡಿಕೊಳ್ಳುವುದು ಹೇಗೆ?
ವ್ಯಕ್ತಿಗಳಷ್ಟೇ ಅಲ್ಲ, ಸಮಾಜಗಳು ಕೂಡ
ಈ ಆಯ್ಕೆಯಲ್ಲಿ ಭಾಗವಹಿಸುತ್ತಿವೆ.

ಪೂರ್ವದ ದೇಶಗಳು ಅಂತರ್ಮುಖಿಯಾಗಿ
ಕವಿಗಳನ್ನು, ಅನುಭಾವಿಗಳನ್ನು, ಸಂತರನ್ನು ಸೃಷ್ಟಿಸಿದವು.
ಆದರೆ ದೇಶಗಳು ಬಡವಾಗಿಯೇ ಉಳಿದವು
ಜನರ ಬದುಕು ಅಸಹನೀಯವಾಗುತ್ತಲೇ ಹೋಯಿತು.

ಪಶ್ಚಿಮದ ದೇಶಗಳು ಬಹಿರ್ಮುಖತೆಯನ್ನು ಒಪ್ಪಿಕೊಂಡು
ವಿಜ್ಞಾನಿಗಳನ್ನು, ಇಂಜಿನೀಯರ್ ಗಳನ್ನು ಹುಟ್ಟು ಹಾಕಿತು.
ಆದರೆ ಮನಸ್ಸಿನ ಸಮಾಧಾನ ಇಲ್ಲದೇ ತತ್ತರಿಸಿತು.

ಆದ್ದರಿಂದಲೇ ಪೂರ್ವದ ಅಧ್ಯಾತ್ಮಿಕ ಗುರುಗಳಿಗೆ
ಪಶ್ಚಿಮದಲ್ಲಿ ಭಾರಿ ವ್ಯಾಪಾರ.
ಪಶ್ಚಿಮದ ವ್ಯಾಪಾರಿಗಳಿಗೆ ಪೂರ್ವದಲ್ಲಿ ಭರ್ಜರಿ ವ್ಯವಹಾರ.

ಈ ಎರಡೂ ಅತಿರೇಕಗಳು ಅಪಾಯಕಾರಿ.
ಎರಡಕ್ಕೂ ಬಹುಕಾಲ ಒಂದೇ ಜಾಗದಲ್ಲಿದ್ದು ರೂಢಿಯಿಲ್ಲ
ಜಾಗ ಬದಲಾಯಿಸುತ್ತಲೇ ಇರುತ್ತವೆ
ಇದೊಂದು ವಿಷ ವೃತ್ತ.

ಹಾಗಾದರೆ
ಎಲ್ಲಿ ಅಂತರಂಗ ಮುಗಿಯುತ್ತದೆ ?
ಎಲ್ಲಿ ಬಹಿರಂಗ ಶುರುವಾಗುತ್ತದೆ?
ಹುಡುಕಬಹುದೆ?
ಹೀಗೊಂದು ಗಡಿರೇಖೆ ಇದೆಯೆ?
ಖಂಡಿತ ಇಲ್ಲ.
ಅವೆರಡರ ನಡುವೆ ಯಾವ ಗೆರೆಯೂ ಇಲ್ಲ.
ಇದು ಮನಸ್ಸಿನ ಆಟ.
ಬಹಿರಂಗ, ಅಂತರಂಗದ ವಿಸ್ತರಣೆ ಅಷ್ಟೇ.
ಸೊಸಾನ್ ಹೇಳುತ್ತಿರುವುದು ಕೂಡ ಇದನ್ನೇ.

ಬಹಿರಂಗದ ಸಿಕ್ಕಿನಲ್ಲಿ ಸಿಕ್ಕಿ ಹಾಕಿಕೊಳ್ಳದಿರಿ,
ಅಂತರಂಗದ ಖಾಲೀತನಕ್ಕೆ ಭಾವಪರವಶರಾಗದಿರಿ.
ಆಚರಣೆಗಳ ಸಲುವಾಗಿ ಶ್ರಮಿಸದಿರಿ, ಬೆವರು ಸುರಿಸದಿರಿ,
ಸಹಜವಾಗಿರಿ, ಸಮಾಧಾನವಾಗಿರಿ
ವಿಷಯದ ಅನನ್ಯತೆಯಲ್ಲಿ ಒಂದಾಗಿ
ಆಗ ತಾನೇ ತಾನಾಗಿ
ಗೊಂದಲಗಳು ಮರೆಯಾಗುತ್ತ ಹೋಗುತ್ತವೆ.

ನೀವು ಯಾರನ್ನಾದರೂ ಪ್ರೀತಿಸುದ್ದೀರಾದರೆ
ಅವರ ದೇಹವನ್ನು ಅಪ್ಪಿಕೊಳ್ಳಲು ಬಯಸುತ್ತೀರಿ.

“ ನಿನ್ನನ್ನು ಪ್ರೀತಿಸುತ್ತೇನೆ
ಆದರೆ ನಿನ್ನ ದೇಹವನ್ನಲ್ಲ
ನಿನ್ನ ಅಂತರಂಗದ ಸೌಂದರ್ಯವನ್ನ ಮಾತ್ರ “
ಎಂದರೆ ಎಷ್ಟು ಅಸಹ್ಯ.
ಇದು ನಿಮ್ಮ ಮೋಸದ ತಂತ್ರ.
ನೀವು ಅವಳನ್ನು / ಅವನನ್ನು ಪೂರ್ತಿಯಾಗಿ
ಪ್ರೀತಿಸಿಲ್ಲ ಎಂದೇ ಅರ್ಥ.
ಇಲ್ಲಿ ಒಡಕಿದೆ
ಪ್ರೇಮ ಎಂದೂ ಒಡಕನ್ನು ಸಹಿಸುವುದಿಲ್ಲ. 

ಪರಿಧಿ ಇಲ್ಲದ ಕೇಂದ್ರ ಒಂದಿದೆಯೆ?
ಹಾಗೆಯೇ ಕೇಂದ್ರವಿಲ್ಲದ ಪರಿಧಿಯೂ ಇಲ್ಲ.
ಪರಿಧಿ ಬೇರೇನೂ ಅಲ್ಲ
ಕೇಂದ್ರದ ವಿಸ್ತರಣೆಯೇ ಹೌದು.
ಕೇಂದ್ರ ಬೇರೇನೂ ಅಲ್ಲ
ಪರಿಧಿ ಹುಟ್ಟುವ ಬೀಜ.

ಅನಾಸಕ್ತಿ ಸಾಧಿಸಲು ನೀವು ಕ್ರಿಯೆಯನ್ನು ನಿಲ್ಲಿಸುವಿರಾದರೆ
ಆ ನಿಮ್ಮ ಪ್ರಯತ್ನವೇ ನಿಮ್ಮನ್ನು ಕ್ರಿಯೆಯಿಂದ ತುಂಬಿ ತುಳುಕಿಸುತ್ತದೆ.

ಇದೇ ‘ Law of reverse effects ‘

ಎಲ್ಲಿಯವರೆಗೆ ನೀವು ಒಂದು ಅತಿರೇಕವನ್ನು ಅಪ್ಪಿಕೊಳ್ಳುತ್ತೀರೋ
ಅಲ್ಲಿಯವರೆಗೆ ಪೂರ್ಣತೆಯನ್ನು ಅರ್ಥ ಮಾಡಿಕೊಳ್ಳಲಾರಿರಿ.
ಯಾರಿಗೆ ದಾರಿಯ ಪೂರ್ಣ ವಿಳಾಸ ಗೊತ್ತಿಲ್ಲವೋ
ಅವರು ಸಮರ್ಥನೆ, ನಿರಾಕರಣೆಗಳಲ್ಲಿ ಮಾತ್ರವಲ್ಲ
ಕ್ರಿಯಾಶೀಲತೆ ಮತ್ತು ಅನಾಸಕ್ತಿಗಳಲ್ಲೂ ಸೋಲು ಅನುಭವಿಸುತ್ತಾರೆ.

ಅನಾಸಕ್ತರಾಗಲು ಪ್ರಯತ್ನಿಸಬೇಡಿ
ಏಕೆಂದರೆ ‘ಪ್ರಯತ್ನ’ ಕ್ರಿಯಾಶೀಲತೆಗೆ ಸಂಬಂಧಪಟ್ಟದ್ದು.
ಮತ್ತೇನು ಮಾಡುವುದು?
ಪೂರ್ಣವಾಗಿ ಕ್ರಿಯಾಶೀಲರಾಗಿ.
ಆಗ ನೆರಳಿನಂತೆ ಅನಾಸಕ್ತಿ ನಿಮ್ಮನ್ನು ಹಿಂಬಾಲಿಸುತ್ತದೆ.
ವಿಚಾರಗಳಿಂದ ಮುಕ್ತರಾಗಲು
ಪರಿಪೂರ್ಣವಾಗಿ ವಿಚಾರಮಂಥನದಲ್ಲಿ ತೊಡಗಿಸಿಕೊಳ್ಳಿ
ಆಗ ತಾನೇ ತಾನಾಗಿ
ವಿಚಾರ ಶೂನ್ಯತೆ ಆವರಿಸಿಕೊಳ್ಳುತ್ತದೆ.

ವಿಚಾರವನ್ನು ಸುಮ್ಮನೇ ಬಿಟ್ಟು ಬಿಡಲಿಕ್ಕೆ ಆಗುವುದಿಲ್ಲ
ಅಪೂರ್ಣವಾಗಿರುವ ಯಾವುದನ್ನೂ ಬಿಡುವುದು ಅಸಾಧ್ಯ,
ಪೂರ್ಣವಾದದ್ದನ್ನು ಮಾತ್ರ ಬಿಡಬಹುದು
ಹಾಗೆ ನೋಡಿದರೆ, ಪೂರ್ಣವಾಗಿದ್ದು
ತಾನೇ ತಾನಾಗಿ ಬಿಟ್ಟು ಹೋಗುತ್ತದೆ.

ಸೊಸಾನ್ ಹೇಳುತ್ತಿರುವುದೇ ಇದನ್ನೇ.
ಕ್ರಿಯಾಶೀಲತೆ ಮತ್ತು ಅನಾಸಕ್ತಿ ಒಂದಾದಾಗ
ಒಂದು ಸೂಕ್ಷ್ಮ ಸಮತೋಲನ ಅಲ್ಲಿ ನಿರ್ಮಾಣವಾಗುತ್ತದೆ,
ಇದೇ ‘ ಸಂಯಕ್ತ್ವ ‘
ಈ ಸೂಕ್ಷ್ಮ ಸಮತೋಲನವೇ ಸಮಾಧಾನ, ಪ್ರಶಾಂತತೆ.

ಅಂತರಂಗ- ಬಹಿರಂಗ
ಕ್ರಿಯಾಶೀಲತೆ – ಅನಾಸಕ್ತಿ
ಸಮತೋಲನವನ್ನು ಸಾಧಿಸಿದಾಗ
ನೀವು ಆ ಎರಡನ್ನೂ ದಾಟುತ್ತೀರಿ
ಆಗ ನೀವು ಆ ಎರಡೂ ಅಲ್ಲ
ಮೂರನೇಯವರು
ಇದೇ ಸಾಕ್ಷಿ ಪ್ರಜ್ಞೆ.

ಅತಿರೇಕಗಳನ್ನು ಆಯ್ಕೆ ಮಾಡಿಕೊಂಡಾಗ
ಎರಡರಲ್ಲೂ ಸೋಲುತ್ತೀರಿ.
ಆಯ್ಕೆಯ ಆಸೆ ಬಿಟ್ಟಾಗಲೇ ಗೆಲುವು ಸಾಧಿಸುತ್ತೀರಿ.
ಸಮತೋಲನ ಎಲ್ಲವನ್ನೂ ಸಾಧ್ಯವಾಗಿಸುತ್ತದೆ.
ಈ ಸಮತೋಲನವೇ 
ಬುದ್ಧನ ‘ಮಧ್ಯಮ ಮಾರ್ಗ’

ಆಯ್ಕೆಯ ಆಮಿಷದಿಂದ ಹೊರಬರುವುದು ಕಷ್ಟ.
ದ್ವೇಷ ಕಾಡತೊಡಗಿದಾಗ ‘ಮಧ್ಯ’ ಕ್ಕೆ ಬನ್ನಿ.
ಪ್ರೇಮ ಆವರಿಸಿಕೊಳ್ಳತೊಡಗಿದಾಗ ‘ಮಧ್ಯ’ ಕ್ಕೆ ಬನ್ನಿ.
ಆಗ ನಿಮಗೇ ಅಚ್ಚರಿಯಾಗುವಂತೆ
ಅದ್ಭುತ ಸಮತೋಲನವನ್ನು ಸಾಧಿಸುತ್ತೀರಿ.
ಇದೇ ಬುದ್ಧನ ‘ಅನಾಸಕ್ತಿ’
ಇದೇ ನಮ್ಮ ಗುರಿ.

(ಮುಂದುವರಿಯುವುದು…..)

ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2019/06/03/osho-19/

ಓಶೋ ಮಾತು ಕವಿತೆಗಿಂತ ಭಿನ್ನವಲ್ಲ. ಅವರ ಉಪನ್ಯಾಸಗಳು ಖಂಡ ಕಾವ್ಯದಂತೆ ಇರುತ್ತಿದ್ದವು. ಉದ್ವೇಗವಿಲ್ಲದ ತಣ್ಣನೆ ಪ್ರವಾಹದಂತೆ ಓಶೋ ಮಾತು. ಇನ್ನು ಕಾವ್ಯದ ಕುರಿತೇ ಹೇಳುವಾಗ ಅದು ಹೇಗಿದ್ದೀತು! ಝೆನ್ ಪರಂಪರೆಯ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದ ಓಶೋ, ಚೀನೀ ಝೆನ್ ಕವಿ, ಸಾಧಕ Sosan ರಚಿಸಿದ್ದೆಂದು ಹೇಳಲಾಗುವ Hsin hsin ming ಕಾವ್ಯದ ಬಗ್ಗೆ ನೀಡಿದ ಉಪನ್ಯಾಸದ ಭಾವಾನುವಾದ ಇಲ್ಲಿದೆ. ಅರಳಿಬಳಗದ ಚಿದಂಬರ ನರೇಂದ್ರ ಇದನ್ನು ಕನ್ನಡಕ್ಕೆ ತಂದಿದ್ದಾರೆ. 

1 Comment

Leave a Reply