ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ : ನಮ್ಮ ಬೆಳವಣಿಗೆಯೊಡನೆ ಲೋಕ ಹಿತ ದೃಷ್ಟಿ…..

ರಾಮಕೃಷ್ಣ ಮಿಷನ್ ಸ್ಥಾಪಿಸಿದ ಸ್ವಾಮಿ ವಿವೇಕಾನಂದರು ಅದಕ್ಕೆ “ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ” ಎಂಬ ಧ್ಯೇಯ ವಾಕ್ಯವನ್ನೂ ಕೊಟ್ಟರು. ಇದರ ಅರ್ಥ, “ಸ್ವಂತದ ಮುಕ್ತಿಗಾಗಿಯೂ ಜಗತ್ತಿನ ಹಿತಕ್ಕಾಗಿಯೂ (ಸಾಧನೆ ಮಾಡುವುದು)” ಎಂದು. ಈ ಬೋಧನೆಯನ್ನು ಅವರು ಪಡೆದದ್ದು ಗುರು ರಾಮಕೃಷ್ಣ ಪರಮಹಂಸರ ಬದುಕಿನಿಂದ ~ ಆನಂದಪೂರ್ಣ


ತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ ಅನ್ನುವ ಹೇಳಿಕೆಯ ಮೂಲ ಋಗ್ವೇದದಲ್ಲಿದೆ. ಪರಮಹಂಸರು ವೇದಬೋಧೆಗಳನ್ನು ಬಾಳುವ ಮೂಲಕ ತಮ್ಮ ಶಿಷ್ಯರಿಗೆ ಮಾರ್ಗದರ್ಶನ ಮಾಡಿದರು. ಮತ್ತು ಅತ್ಯಂತ ಸರಳ ವಿಧಾನದ ಮೂಲಕ ಅವು ಶಿಷ್ಯರ ಅಂತರಂಗದೊಳಗೆ ಇಳಿಯುವಂತೆ ಮಾಡುತ್ತಿದ್ದರು.

ಒಮ್ಮೆ ಹೀಗಾಯ್ತು. ವಿವೇಕಾನಂದರು ಇನ್ನೂ ನರೇಂದ್ರನಾಗಿದ್ದ ಕಾಲ. ರಾಮಕೃಷ್ಣರನ್ನು ಕಾಣಲು ಕಲ್ಕತ್ತೆಯಿಂದ ದಕ್ಷಿಣೇಶ್ವರಕ್ಕೆ ಹೊರಟಿದ್ದ ನರೇಂದ್ರ, ನಿಗದಿತ ಸಮಯಕ್ಕಿಂತ ಬಹಳ ತಡವಾಗಿ ತಲುಪಿದ. ಗುರುದೇವ ಕಾರಣ ಕೇಳಿದರು. “ದಾರಿಯಲ್ಲೊಬ್ಬ ನಿರ್ಗತಿಕ ಕಷ್ಟಕ್ಕೆ ಸಿಲುಕಿಕೊಂಡಿದ್ದ. ಅವನನ್ನು ನೋಡಿ ಅನುಕಂಪವುಕ್ಕಿತು. ಅವನಿಗೆ ಸಹಾಯ ಮಾಡಿ ಬರುವಷ್ಟರಲ್ಲಿ ಇಷ್ಟು ತಡವಾಯ್ತು” ಅಂದ ಶಿಷ್ಯ. ರಾಮಕೃಷ್ಣರು ನರೇಂದ್ರನನ್ನು ಅರೆಕ್ಷಣ ದಿಟ್ಟಿಸಿದರು. “ಅನುಕಂಪ ಹುಟ್ಟಿತಾ? ಮತ್ತೊಂದು ಜೀವದ ಮೇಲೆ ಅನುಕಂಪ ತೋರಿಸಲು ನೀನು ಎಷ್ಟು ಮಾತ್ರದವನು? ಮತ್ತೊಬ್ಬರಿಗೆ ಉಪಕಾರ ಮಾಡಲು ನಿನಗೇನು ಅಧಿಕಾರವಿದೆ?” ಎಂದರು.

ನರೇಂದ್ರ ಗಲಿಬಿಲಿಗೊಂಡ. ಈ ಪ್ರತಿಕ್ರಿಯೆಯನ್ನು ಆತ ಊಹಿಸಿಯೂ ಇರಲಿಲ್ಲ. ಗುರುದೇವ ಮುಂದುವರಿದು ಹೇಳಿದರು, “ನೀನು ಮತ್ತೊಬ್ಬರೊಡನೆ ಸಹಾನುಭೂತಿ ಹೊಂದಬಲ್ಲೆಯಷ್ಟೆ. ಮತ್ತೊಬ್ಬರಿಗೆ ಸೇವೆ ಮಾಡಬಲ್ಲೆ ಹೊರತು ಉಪಕಾರವನ್ನಲ್ಲ. ವಾಸ್ತವದಲ್ಲಿ ನಿನಗೆ ಸೇವೆ ಮಾಡುವ ಅವಕಾಶವನ್ನು ಕೊಟ್ಟು ಆ ವ್ಯಕ್ತಿ ನಿನಗೆ ಉಪಕರಿಸಿದ್ದಾನೆ. ಸಹಜೀವಿಗಳ ಸೇವೆ ಮನುಷ್ಯನ ಸಹಜ ಧರ್ಮ. ನೀನು ಅದನ್ನು ಪಾಲಿಸಿದ್ದೀಯ. ನೀನು ಅದೊಂದು ಸೇವೆ ಎನ್ನುವ ಎಚ್ಚರವಿಟ್ಟುಕೊಂಡೇ ಮಾಡಿದೆಯಾದರೆ, ಅದು ನಿಜವಾದ ಧರ್ಮಪಾಲನೆಯಾಗುತ್ತದೆ” ಎಂದರು. ನರೇಂದ್ರ ಎಚ್ಚರಗೊಂಡ. ತಿಳಿವು ಆಳಕ್ಕಿಳಿಯಿತು. ಅದರ ಫಲಗಳು ಮುಂದಿನ ದಿನಗಳಲ್ಲಿ ತೂಗಿಯೇ ತೂಗಿದವು.

`ಕರ್ಮವನ್ನು ಮಾಡುವುದೆ ಧರ್ಮವಲ್ಲ. ಆದರೆ ಕರ್ಮವನ್ನು ಸರಿಯಾಗಿ ಮಾಡಿದರೆ ಅದು ನಮ್ಮನ್ನು ಮುಕ್ತರನ್ನಾಗಿ ಮಾಡುವುದು. ನಿಜವಾಗಿ ಮರುಕವೆಲ್ಲ ಇರುವುದು ಅಜ್ಞಾನದಲ್ಲಿ. ನೀವು ಯಾರಿಗೆ ಮರುಕವನ್ನು ತೋರಬಲ್ಲಿರಿ? ದೇವರಿಗಾಗಿ ನೀವು ಮರುಕಪಡಬಲ್ಲಿರಾ? ಇಲ್ಲಿ ಇರುವುದೆಲ್ಲವೂ ದೇವರ ಬಿಂಬಗಳೇ” ಎಂಬುದು ರಾಮಕೃಷ್ಣ ಪರಮಹಂಸರು ಯಾವಾಗಲೂ ಹೇಳುತ್ತಿದ್ದ ಮಾತು.

ಈ ಮಾತುಗಳನ್ನು ಆತ್ಮಗತ ಮಾಡಿಕೊಂಡ ವಿವೇಕಾನಂದರು, “ನಿಮ್ಮ ಉದ್ಧಾರಕ್ಕಾಗಿ ಜಗತ್ತೆಂಬ ಗರಡಿ ಮನೆಯನ್ನು ಕೊಟ್ಟ ಭಗವಂತನ್ನು ಕೃತಜ್ಞತೆಯಿಂದ ನೆನೆಯಿರಿ. ಆದರೆ ಎಂದಿಗೂ ನೀವು ಜಗತ್ತಿಗೆ ಸಹಾಯ ಮಾಡುತ್ತಿದ್ದೇನೆಂದು ಭ್ರಮಿಸಬೇಡಿ” ಎಂದು ಹೇಳುತ್ತಾ, ಆ ಚಿಂತನೆಯ ದಾರಿಯಲ್ಲಿ ತಾವೇ ಮೊದಲಿಗರಾಗಿ ನಡೆದು ಮಾದರಿ ಹಾಕಿಕೊಟ್ಟರು.

ಮತ್ತೊಮ್ಮೆ ಹೀಗಾಯ್ತು. ಅದು ನರೇಂದ್ರನು ವಿವೇಕಾನಂದರಾಗಿ ಬೆಳೆದು ನಿಂತ ಕಾಲ. ಕೋಲ್ಕತ್ತದ ಬೇಲೂರಿನಲ್ಲಿ ರಾಮಕೃಷ್ಣ ಮಠ ನಿರ್ಮಿಸಬೇಕೆಂಬ ಬಯಕೆಯಿಂದ ಸ್ವಾಮೀಜಿ ದೇಶ ವಿದೇಶ ಸುತ್ತಾಡಿ ಹಣ ಒಟ್ಟು ಮಾಡಿದರು. ಅದೇ ಅವಧಿಯಲ್ಲಿ ಬಂಗಾಳದಲ್ಲಿ ಮಲೇರಿಯಾ ರೋಗ ತೀವ್ರವಾಗಿ ಆವರಿಸಿಕೊಂಡಿತು. ಜೊತೆಗೆ ಕ್ಷಾಮ ಬೇರೆ. ಹೆಜ್ಜೆ ಹೆಜ್ಜೆಗೂ ನರಳಾಡುವ ಜನರನ್ನು ಕಂಡು ಮಮ್ಮಲ ಮರಗುವ ಸ್ವಾಮೀಜಿ, ತಮ್ಮ ಸಂಗ್ರಹದಲ್ಲಿದ್ದ ಹಣವೆಲ್ಲವನ್ನೂ ಜನರ ಶುಶ್ರೂಷೆಗೆ, ಆಹಾರಕ್ಕೆ ಹಂಚಿಬಿಟ್ಟರು. ಅಷ್ಟು ಮಾತ್ರವಲ್ಲ, ರೋಗಿಗಳ ಸೇವೆಯಲ್ಲೂ ಸಂಪೂರ್ಣವಾಗಿ ತೊಡಗಿಕೊಂಡರು. ಜನರ ನಡುವೆ ಇದ್ದು, ಶುಶ್ರೂಷಾ ಬಿಡಾರಗಳಲ್ಲಿ ತಂಗಿ, ಅವರ ಆರೈಕೆ ಮಾಡಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಮೇಲಷ್ಟೆ ಅವರು ಸಂಗ್ರಹಾರ್ಥವಾಗಿ ಪುನಃ ಪ್ರಯಾಣಕ್ಕೆ ಹೊರಟಿದ್ದು. ನಂತರದಲ್ಲೂ ಅಗತ್ಯವಿದ್ದಷ್ಟು ಹಣ ಸಂಗ್ರಹವಾಗಿ ರಾಮಕೃಷ್ಣ ಮಠ ಎದ್ದು ನಿಲ್ಲುವಂತಾಗಿದ್ದು ವಿವೇಕಾನಂದರ ನಿಸ್ವಾರ್ಥ ಮನೋಭಾವದ ಪ್ರತಿಫಲವಾಗಿಯೇ.

ಇಂಥಾ ಉದಾತ್ತ ವರ್ತನೆಯ ತಳಹದಿಯ ಮೇಲೆ ಎದ್ದು ನಿಂತ ರಾಮಕೃಷ್ಣ ಮಿಷನ್ ಮಠ “ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ” ಎಂಬ ಘೋಷಣೆಯನ್ನು ಹೊತ್ತುಕೊಂಡಿರುವುದು ಸಾರ್ಥಕವಾಗಿಯೇ ಇದೆ.

ಗುರು ಹೊತ್ತಿಸಿಕೊಟ್ಟ ಕಂದೀಲು ಹಿಡಿದು ಸಾಗಿದ ವಿವೇಕಾನಂದರು ಸೇವಾತತ್ತ್ವವನ್ನೇ ಉನ್ನತ ಆದರ್ಶವಾಗಿ ಸ್ವೀಕರಿಸಿದ್ದರು. ಬಹುಜನರ ಹಿತಕ್ಕಾಗಿ ನಮ್ಮ ಬಾಳನ್ನು ಅರ್ಪಿಸುವುದೇ ಧರ್ಮದ ಅತ್ಯುತ್ತಮ ಅನುಷ್ಠಾನ ಎನ್ನುತ್ತಿದ್ದ ಸ್ವಾಮೀಜಿ, `ಯಾರು ಕೇವಲ ತನಗಾಗಿ ಬದುಕುತ್ತಾನೆಯೋ ಅವನು ಸತ್ತಿರುವಂತೆಯೇ ಸರಿ. ಇತರರಿಗಾಗಿ ಬದುಕುವವರೇ ನಿಜವಾಗಿಯೂ ಬದುಕುತ್ತ ಇರುತ್ತಾರೆ’ ಎಂದು ಹೇಳುತ್ತಿದ್ದರು. “ನಾವು ರಣಹದ್ದುಗಳಂತೆ. ನಮ್ಮ ಗಮನವೆಲ್ಲ ಕೊಳೆತ ಹೆಣಗಳ ಮೇಲೆಯೇ! ಹುಲಿಯ ಬಾಯಿಯಿಂದ ದೇಹವನ್ನು ನಾವು ಯಾಕಾದರೂ ರಕ್ಷಿಸಿಕೊಳ್ಳಬೇಕು? ನಾವೇತಕ್ಕೆ ಅದನ್ನು ಹುಲಿಗೆ ಕೊಟ್ಟುಕೊಂಡುಬಿಡಬಾರದು? ಇದರಿಂದ ಹುಲಿಗಾದರೂ ತೃಪ್ತಿ ಸಿಗುವುದು – ಎಂದು ಯೋಚಿಸಬಲ್ಲ ಸ್ಥಿತಿಯನ್ನು ಯಾರು ತಲುಪುತ್ತಾರೋ ಅವರು ನಿಸ್ವಾರ್ಥ ಮನೋಭಾವವನ್ನು ಗಳಿಸಿರುತ್ತಾರೆ. ಆತ್ಮತ್ಯಾಗಕ್ಕೆ ಸದಾ ಸಿದ್ಧವಾಗಿರುವಂತಹ ಶ್ರೇಷ್ಠ ಸ್ಥಿತಿಯನ್ನು ಮುಟ್ಟುವವರೇ ಮುಮುಕ್ಷುಗಳು.. ಈ ದೇಹವನ್ನು ನಾವೆಲ್ಲ ತಕ್ಕ ಮಟ್ಟಿಗೆ ಆರೋಗ್ಯಕರ ಸ್ಥಿತಿಯಲ್ಲಿಟ್ಟಿರಬಹುದು. ಸ್ವಲ್ಪ ಹೆಚ್ಚು ವರ್ಷವೋ ಕಡಿಮೆ ವರ್ಷವೋ ಬದುಕಬಹುದು. ಅದು ಸ್ಥಿರವಾಗಿರಲಾರದು. ಪರೋಪಕಾರಕ್ಕಾಗಿ ತಮ್ಮ ದೇಹವನ್ನು ಸವೆಸುವಂಥವರೇ ಧನ್ಯರು” ಎನ್ನುವುದು ಅವರ ಬದುಕಿನ ಧ್ಯೇಯವಾಗಿತ್ತು.

ಸಾಮಾನ್ಯರ ಬದುಕಿನಲ್ಲಿ ಸೇವೆ
ಪರಮಹಂಸರ ಬೋಧನೆ ವಿಶಾಲಾರ್ಥದ್ದು. ವಿವೇಕಾನಂದರ ನಡೆಯೂ ಕೂಡ. ನಮ್ಮಂಥ ಸಾಮಾನ್ಯರು ಈ ಚಿಂತನೆಯನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲಾರೆವೆ?

ಖಂಡಿತ ಅಳವಡಿಸಿಕೊಳ್ಳಲು ಸಾಧ್ಯವಿದೆ. ನಾವು ತೀರಾ ಮೋಕ್ಷದವರೆಗಿನ ಯೋಚನೆ ಮಾಡಲಾರೆವು. ಆದರೆ ಆತ್ಮವಿಕಸನದ ಮೊದಲ ಹೆಜ್ಜೆಯಾದ ವ್ಯಕ್ತಿತ್ವ ವಿಕಸನದ ಪ್ರಯತ್ನವನ್ನಂತೂ ಮಾಡಬಹುದು. ಕಣ್ಣಿಗೆ ಕಂಡಂತೆ ಕಷ್ಟದಲ್ಲಿರುವ ಜನರಿಗೆ ನಮ್ಮಿಂದಾಗುವ ಸೇವೆ ಸಲ್ಲಿಸುವ ಮೂಲಕ ನಮ್ಮಲ್ಲಿ ಸಕಾರಾತ್ಮಕತೆಯನ್ನು ತುಂಬಿಕೊಳ್ಳುತ್ತಾ ಅವರಿಗೂ ಹಿತವನ್ನುಂಟು ಮಾಡಬಹುದು.

ಇಲ್ಲಿ ಸೇವೆ ಎಂದರೆ ಏನೋ ಭಾರೀ ಕೆಲಸವನ್ನು ಮಾಡುವುದೆಂದಲ್ಲ. ಕನಿಷ್ಠ ಪಕ್ಷ, ನಮ್ಮಲ್ಲಿರುವ ವಸ್ತು, ಹಣ, ಸಮಯ, ನಾಲ್ಕು ಒಳ್ಳೆಯ ಮಾತುಗಳು, ಆಪ್ತತೆಗಳನ್ನು ಹಂಚಿಕೊಳ್ಳುವುದು ಕೂಡ ಸೇವೆಯೇ. ಸೇವೆಯೆಂದರೆ, ನಮ್ಮ ಸೀಮಿತಿಯಲ್ಲಿ ಹಂಚಿಕೊಳ್ಳುವುದು ಎಂದೇ. ಇದೇ ನಮ್ಮ ಪಾಲಿನ ಮೋಕ್ಷ ಮತ್ತು ನಮ್ಮಿಂದ ಆಗಬಹುದಾದ ಜಗತ್ತಿನ ಹಿತ!

1 Comment

Leave a Reply