ವಿಶ್ವರೂಪಿ ಭಗವಂತ ಯಾವುದರಲ್ಲಿ ಏನಾಗಿ ನೆಲೆಸಿದ್ದಾನೆ? : ಭಗವದ್ಗೀತೆಯ ಬೋಧನೆ

“ಈ ಸೃಷ್ಟಿಯ ಸಕಲ ಸುಂದರ, ಶ್ರೀಮಂತ, ಉಜ್ವಲ ವಸ್ತುಗಳೆಲ್ಲವೂ ನನ್ನ ಕೇವಲ ಒಂದು ಕಿಡಿಯಿಂದ ಪ್ರಕಟಗೊಂಡಿವೆ. ಅಷ್ಟು ಮಾತ್ರವಲ್ಲ ಅರ್ಜುನಾ, ಸಕಲ ಉತ್ಪತ್ತಿಗಳ ಮೂಲಬೀಜವೇ ನಾನಾಗಿರುವೆ” ಎಂದು ಹೇಳುವ ಗೀತಾಚಾರ್ಯ ಶ್ರೀಕೃಷ್ಣ, ತಾನು ಯಾವ ವಸ್ತು/ವ್ಯಕ್ತಿ. ಸಂಗತಿಯಲ್ಲೇ ಏನಾಗಿದ್ದೇನೆ ಎಂದು ಹೇಳುತ್ತಾ ಹೋಗುತ್ತಾನೆ. ಅದರ ವಿವರ ಹೀಗಿದೆ:

ಹನ್ನೆರಡು ಮಂದಿ ಆದಿತ್ಯರಲ್ಲಿ (ಅದಿತಿಯ ಮಕ್ಕಳು) ನಾನು ವಿಷ್ಣುವಾಗಿದ್ದೇನೆ.

ಜ್ಯೋತಿಗಳಲ್ಲಿ ಸೂರ್ಯನ ತೇಜಸ್ಸು ನನ್ನ ಕಣ್ಣು.

ಐವತ್ತು ಬಗೆಯ ವಾಯುಗಳಲ್ಲಿ ಮರೀಚಿ ನನ್ನ ಪ್ರತಿನಿಧಿ.

ನಕ್ಷತ್ರಗಳಲ್ಲಿ ಚಂದ್ರ, ಅದು ನನ್ನ ಇನ್ನೊಂದು ಕಣ್ಣು.

ವೇದಗಳಲ್ಲಿ ಸಾಮವೇದ ನಾನು; ದೇವತೆಗಳಲ್ಲಿ ನಾನು ಇಂದ್ರ.

ಇಂದ್ರಿಯಗಳಲ್ಲಿ ಮನಸ್ಸು, ಜೀವಿಗಳಲ್ಲಿ ಚೈತನ್ಯ ನಾನು.

ಹನ್ನೆರಡು ಮಂದಿ ರುದ್ರರಲ್ಲಿ ನಾನು ಶಿವನಾಗಿದ್ದು, ತಮೋಗುಣದ ನಿರ್ವಾಹಕನಾಗಿರುವೆ.

ಯಕ್ಷ ರಾಕ್ಷಸರಲ್ಲಿ ನಾನು ಕೋಶಾಧಿಪತಿ ಕುಬೇರ.

ಅಷ್ಟವಸುಗಳಲ್ಲಿ ಅಗ್ನಿ, ಚಲಿಸುವ ಪರ್ವತಗಳಲ್ಲಿ ಮೇರು, ನಿಶ್ಚಲ ಪರ್ವತಗಳಲ್ಲಿ ನಾನು ಹಿಮಾಲಯ.

ಪುರೋಹಿತರಲ್ಲಿ ಬೃಹಸ್ಪತಿ, ಸೇನಾಧಿಪತಿಗಳಲ್ಲಿ ಕಾರ್ತಿಕೇಯ, ಮುನಿಗಳಲ್ಲಿ ಭೃಗು ನಾನು.

ಜಲರಾಶಿಗಳಲ್ಲಿ ನಾನೇ ಸಾಗರ, ವೃಕ್ಷಗಳಲ್ಲಿ ಅಶ್ವತ್ಥ ವೃಕ್ಷ ನಾನು.

ದಿವ್ಯಮಂತ್ರಗಳಲ್ಲಿ ಓಂಕಾರ. ಯಜ್ಞಗಳಲ್ಲಿ ಜಪಯಜ್ಞ ನಾನು.

ದೇವ ಋಷಿಗಳಲ್ಲಿ ನಾರದ, ಗಂಧರ್ವರಲ್ಲಿ ಚಿತ್ರರಥ, ಸಿದ್ಧರಲ್ಲಿ ಕಪಿಲ ಮುನಿ ನಾನು.

ಸಮುದ್ರಮಥನದಲ್ಲಿ ಸಿಕ್ಕ ಅಮೂಲ್ಯ ರತ್ನಗಳಲ್ಲಿ ಉಚ್ಛೈಶ್ರವಸ್ ಎಂಬ ಬಿಳಿ ಕುದುರೆ ನಾನೇ.

ಗಜೇಂದ್ರರಲ್ಲಿ ಶ್ರೇಷ್ಠವಾದ ಐರಾವತ ನಾನೇ. ಮನುಷ್ಯರಲ್ಲಿ ನಾನು ರಾಜ. ಆಯುಧಗಳಲ್ಲಿ ನಾನು ವಜ್ರಾಯುಧ.

ಗೋವುಗಳಲ್ಲಿ ನಾನು ದೇವಲೋಕದ ಸುರಭಿ. ಪ್ರಜಾಪತಿಗಳಲ್ಲಿ ನಾನು ಕಂದರ್ಪಣ.

ಸರ್ಪಗಳಲ್ಲಿ ವಾಸುಕಿ, ಹಲವು ಹೆಡೆಗಳ ಸರ್ಪಗಳಲ್ಲಿ ನಾನು ಅನಂತ ಶೇಷ, ಜಲವಾಸಿಗಳಲ್ಲಿ ವರುಣ ಮತ್ತು ಪಿತೃಗಳಲ್ಲಿ ನಾನು ಆರ್ಯಮ.

ಮರ್ತ್ಯಲೋಕದ ಶಾಸನಕಾರರಲ್ಲಿ ಯಮಧರ್ಮ, ರಾಕ್ಷಸರಲ್ಲಿ ಪ್ರಹ್ಲಾದ ನಾನು.

ಕ್ಷೀಣಿಸುವ ಸಂಗತಿಗಳಲ್ಲಿ ನಾನು ಕಾಲ. ಪ್ರಾಣಿಗಳಲ್ಲಿ ಸಿಂಹ, ಪಕ್ಷಿಗಳಲ್ಲಿ ಗರುಡ.

ಶುದ್ಧೀಕರಿಸುವ ಸಂಗತಿಗಳಲ್ಲಿ ನಾನು ವಾಯು.

ಮೀನುಗಳಲ್ಲಿ ತಿಮಿಂಗಿಲ, ನದಿಗಳಲ್ಲಿ ಸುರನದಿ ಗಂಗೆ ನಾನು.

ವಿದ್ಯೆಗಳಲ್ಲಿ ಶ್ರೇಷ್ಠವಾದ ಅಧ್ಯಾತ್ಮ ವಿದ್ಯೆ ನಾನು.

ಎಲ್ಲ ತಾರ್ಕಿಕರ ಅಂತಿಮ ನಿರ್ಣಾಯಕ ಸತ್ಯವೂ ನಾನೇ.

ಅಕ್ಷರಗಳಲ್ಲಿ ‘ಅ’ಕಾರ ನಾನು, ಸಮಾಸಗಳಲ್ಲಿ ದ್ವಂದ್ವ ನಾನು.

ಸರ್ವಭಕ್ಷಕ ಮೃತ್ಯುವೂ ನಾನೇ, ಸೃಷ್ಟಿಯ ಉತ್ಪತ್ತಿ ತತ್ವವೂ ನಾನೇ.

ಸಪ್ತ ಐಶ್ವರ್ಯಗಳಾದ ಕೀರ್ತಿ, ವಾಕ್, ಶ್ರೀ, ಸ್ಮೃತಿ, ಮೇಧಾ ಶಕ್ತಿ, ದೃಢತೆ ಮತ್ತು ತಾಳ್ಮೆಗಳಲ್ಲಿ ನಾನಿದ್ದೇನೆ.

ಸಂಗೀತದಲ್ಲಿ ಸಾಮ, ಕಾವ್ಯಗಳಲ್ಲಿ ಗಾಯತ್ರಿ ಮಂತ್ರ ನಾನು.

ಮಾಸಗಳಲ್ಲಿ ಮಾರ್ಗಶಿರ, ಋತುಗಳಲ್ಲಿ ವಸಂತ ಋತು ನಾನು.

ತಪಸ್ವಿಗಳ ತಪಸ್ಸೂ ನಾನೇ, ಬಲಿಷ್ಟರ ಬಲವೂ ನಾನೇ, ನಾನೇ ಸಾಹಸಿ, ನಾನೇ ಜಯ, ಜೂಜುಕೋರರಲ್ಲಿರುವ ಮೋಸಗಾರನೂ ನಾನೇ!

ಪಾಂಡವರಲ್ಲಿ ಅರ್ಜುನ, ಋಷಿಗಳಲ್ಲಿ ವೇದವ್ಯಾಸ, ಯಾದವರಲ್ಲಿ ವಸುದೇವ, ಚಿಂತಕರಲ್ಲಿ ದಾನವಗುರು ಶುಕ್ರಾಚಾರ್ಯ ನಾನಾಗಿರುವೆ.

ಶಾಸನಗಳನ್ನು ಮೀರಿದವರಿಗೆ ಶಿಕ್ಷೆ ನಾನು; ಜಯಾಕಾಂಕ್ಷಿಗಳ ಪಾಲಿಗೆ ನಾನೇ ನೀತಿ.

ಜ್ಞಾನಿಗಳ ಜ್ಞಾನವೂ ನಾನೇ.

ಶ್ರವಣ, ಧ್ಯಾನ, ಚಿಂತನಗಳಲ್ಲಿ ಮೌನ ನಾನು.

Leave a Reply