ರಸ್ತೆಯಲ್ಲಿ ರಾಮ, ರಹೀಮರು…. : ಕೊರೊನಾ ಕಾಲದ ಕಥೆಗಳು #7

ಗಯೂರ್ ಅಹಮದನಿಗೆ ಜೊತೆಯಾದ ಅನಿರುದ್ಧ ಮತ್ತು ಅಮೃತ್ ಚರಣನ ಜೊತೆ ನಿಂತ ಮಹಮ್ಮದ್ ಯಾಕೂಬ್… ಉಳಿದೆಲ್ಲ ಗುರುತುಗಳಿಗಿಂತ ಶುದ್ಧ ಮಾನವೀಯತೆಯನ್ನು ಎತ್ತಿಹಿಡಿದ ಕಥೆ ಮನಮಿಡಿಯುವಂಥದ್ದು… ಕಷ್ಟಕಾಲದಲ್ಲಿ ನಮ್ಮ ಆದ್ಯತೆ ಮತ್ತು ಕರ್ತವ್ಯಗಳು ಏನಿರಬೇಕೆಂದು ಸಾರಿಹೇಳಿದ ಈ ಜೋಡಿಗಳು ಭಾರತದ ಶ್ರೀಮಂತ ಪರಂಪರೆಯ ಸಾರ್ವಕಾಲಿಕ ಮಾದರಿ… | ಸಂದೀಪ್ ಮತ್ತು ಪಂಜು ಗಂಗೂಲಿ 

ಗಯೂರ್ ಅಹಮದ್ ಮತ್ತು ಅನಿರುದ್ಧ

gayur

ನಾಗ್ಪುರದಿಂದ ಪ್ರವಾಸಿಗನಾಗಿ ಬಂದಿದ್ದ 28 ವರ್ಷದ ಅನಿರುದ್ಧ, ಮುಜಾಪ್ಫರ್ ನಗರದಿಂದ ಬಂದಿದ್ದ 40 ವರ್ಷದ ಅಂಗವಿಕಲ ಬಡಗಿ ಗಯೂರ್ ಅಹಮದ್, ಇಬ್ಬರೂ ಜೋಧ್ ಪುರದಲ್ಲಿ ಕ್ವಾರಂಟೈನ್’ಗೆ ಒಳಗಾದರು. ಅಲ್ಲಿ ಬೆಳೆದ ಪರಿಚಯ ಸ್ನೇಹವಾಯಿತು.

ಮೇ 8ರಂದು ಅಲ್ಲಿಂದ ಹೊರಡುವ ಅವಕಾಶ ದೊರೆತು, ಇಬ್ಬರೂ ಒಟ್ಟಿಗೆ ಯುಪಿ ಗಡಿಯಲ್ಲಿರುವ ಭರತ್ ಪುರದಿಂದ 40 ಕಿ.ಮೀ ದೂರದಲ್ಲಿ ಬಸ್ಸಿನಿಂದ ಇಳಿದರು.

ಅಲ್ಲಿಂದ ಮುಂದೆ ಅನಿರುದ್ಧ ನಾಗ್ಪುರಕ್ಕೆ, ಗಯೂರ್ ಮುಜಾಪ್ಫರ್ ನಗರಕ್ಕೆಹೊರಟರು. ಆದರೆ ಗಯೂರ್ ಪ್ರಯಾಣ ಸುಲಭವಿರಲಿಲ್ಲ. ಕಾಲುಗಳು ಸ್ವಾಧೀನವಿಲ್ಲದೆ ಟ್ರೈಸಿಕಲ್’ನಲ್ಲೇ ಜೋಧಪುರದಿಂದ ಬಸ್ಸೇರಿ ಬಂದಿಳಿದಿದ್ದ ಗಯೂರ್, ಕೈಗಳಲ್ಲಿ ಪೆಡಲ್ ಮಾಡುತ್ತ ಮುನ್ನೂರಕ್ಕೂ ಹೆಚ್ಚು ಕಿಲೋಮೀಟರ್ ಕ್ರಮಿಸಬೇಕಿತ್ತು.

ಗೆಳೆಯನ ಈ ಅಸಹಾಯಕತೆಗೆ ಮುರುಗಿದ ಅನಿರುದ್ಧ ನಾಗ್ಪುರಕ್ಕೆ ಹೋಗುವುದನ್ನು ಬದಿಗೊತ್ತಿ, ಮುಂದಿನ ಐದು ದಿನಗಳ ಕಾಲ ಟ್ರೈಸಿಕಲ್ ಅನ್ನು ತಳ್ಳುತ್ತ ನಡೆದು ಗಯೂರ್’ನನ್ನು ಮನೆಗೆ ತಲುಪಿಸಿದ.

ಅಮೃತ್ ರಾಮ್ ಚರಣ್ ಮತ್ತು ಮಹಮ್ಮದ್ ಯಾಕೂಬ್

amrut

ಅಮೃತ್ ರಾಮ್ ಚರಣ್ ಮತ್ತು ಮಹಮ್ಮದ್ ಯಾಕೂಬ್ ಬಾಲ್ಯ ಸ್ನೇಹಿತರು. ವಲಸೆ ಕಾರ್ಮಿಕರಾಗಿದ್ದ ಅವರು ಇತರ ಕೆಲವರು ಕಾರ್ಮಿಕರೊಂದಿಗೆ ಕೂಡಿ ತಲಾ 4000 ರುಪಾಯಿ ಕೊಟ್ಟು ಟ್ರಕ್ಕೊಂದರಲ್ಲಿ ಕುಳಿತು ಗುಜರಾತಿನ ಸೂರತಿನಿಂದ ಉತ್ತರಪ್ರದೇಶದ ತಮ್ಮೂರು ಬಸ್ತಿಗೆ ಮರಳುತ್ತಿದ್ದರು. ಟ್ರಕ್ಕು ಮಧ್ಯಪ್ರದೇಶದ ಶಿವಪುರಿ-ಝಾನ್ಸಿ ತಲುಪಿದಾಗ ಅಮೃತ್ ಅಸ್ವಸ್ಥನಾದನು. ಯಾಕೂಬ್ ಲಾರಿ ನಿಲ್ಲಿಸಿ ಅವನನ್ನು ಯಾರಾದರೂ ಡಾಕ್ಟರ್ ಬಳಿಗೆ ಕರೆದುಕೊಂಡು ಹೋಗೋಣ ಎಂದರೆ ಚಾಲಕ ಮತ್ತು ಇತರ ಕಾರ್ಮಿಕರು ಅವನಿಗೆ ಕೊರೋನಾ ಸೋಂಕು ತಗಲಿರಬಹುದು ಎಂದು ಹೆದರಿ ಅದಕ್ಕೊಪ್ಪದೆ ಅಮೃತ್ ನನ್ನು ಹೈವೇಯಲ್ಲಿ ಇಳಿಸುತ್ತಾರೆ. ಯಾಕೂಬ್ ತನ್ನ ಸ್ನೇಹಿತನನ್ನು ಆ ಸ್ಥಿತಿಯಲ್ಲಿ ಏಕಾಂಗಿಯಾಗಿ ಬಿಡಲು ಒಪ್ಪದೆ ತಾನೂ ಅವನೊಂದಿಗೆ ಕೆಳಕ್ಕಿಳಿಯುತ್ತಾನೆ.

ಲಾಕ್ ಡೌನ್ ನಿಂದಾಗಿ ಹೈವೇ ನಿರ್ಜನವಾಗಿತ್ತು. ಅಮೃತ್ ನ ಜ್ವರ ಏರುತ್ತಿತ್ತು. ಯಾಕೂಬ್ ಅಮೃತ್ ನ ತಲೆಯನ್ನು ತನ್ನ ತೊಡೆ ಮೇಲಿರಿಸಿ ಮುಖಕ್ಕೆ ನೀರು ಚಿಮುಕಿಸಿ ಹಣೆಯ ಮೇಲಿನ ಬೆವರನ್ನು ಒರೆಸಿ ಅವನನ್ನು ಸಂತೈಸಿಸಲು ಪ್ರಯತ್ನಿಸುತ್ತಿರುವಾಗ ಕೆಲವರು ಬಂದು ಒಂದು ಅಂಬುಲೆನ್ಸ್ ನಲ್ಲಿ ಅವನನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಆದರೆ ಅಮೃತ್ ಉಳಿಯಲಿಲ್ಲ. ಯಾಕೂಬ್ ಕ್ವಾರಂಟೈನ್ ಕೇಂದ್ರ ಸೇರಬೇಕಾಗುತ್ತದೆ.

ಕೊರೋನಾ ಸೋಂಕಿನ ಈ ಆಪತ್ತಿನ ಸಮಯದಲ್ಲಿ ನೀನೇಕೆ ಅಂತಹ ಅಪಾಯವನ್ನು ಮೈಮೇಲೆಳೆದುಕೊಂಡೆ ಎಂಬ ಪ್ರಶ್ನೆಗೆ ಯಾಕೂಬ್ ಕೊಟ್ಟ ಉತ್ತರ ಇಷ್ಟೇ-
“ಹೇಗೆ ನನ್ನ ಅಪ್ಪ ಅಮ್ಮಂದಿರು ನನ್ನ ಬರವನ್ನು ಕಾಯುತ್ತಿದ್ದಾರೋ ಹಾಗೆಯೇ ಅವನ ಹೆತ್ತವರೂ ಅವನ ಬರವನ್ನು ಕಾಯುತ್ತಿದ್ದಾರಲ್ಲವೇ?’

ಯಾಕೂಬ್ ನ ಪ್ರಾಯ ಇನ್ನೂ 23 ಅಷ್ಟೇ, ಅಮೃತ್ ನ ಪ್ರಾಯ 24. ಆದರೆ ಈ ಕಿರಿಯರಿಬ್ಬರು ದೇಶಕ್ಕೆ ಕೊಟ್ಟ ಸಂದೇಶ ಎಂತಹದು!

ಆಧಾರ: ವಿವಿಧ ಅಂತರ್ಜಾಲ ಪತ್ರಿಕೆಗಳ ವರದಿ ಆಧರಿಸಿ ಬರೆದ ಕಿರುಬರಹಗಳನ್ನು ಸಂದೀಪ್ ಹಾಗೂ ಪಂಜು ಗಂಗೂಲಿಯವರ ಫೇಸ್ ಬುಕ್’ನಿಂದ ಯಥಾವತ್ತಾಗಿ ತೆಗೆದುಕೊಳ್ಳಲಾಗಿದೆ. 

Leave a Reply