ಆಲೋಚನೆಗಳು ಇಲ್ಲವಾದರೆ ಶಾಂತಿ : ಉಪನಿಷತ್ ವಾಕ್ಯ

“ಆಲೋಚನೆಗಳು ಮೌನ ತಾಳಿದಾಗ ಆತ್ಮವು ತನ್ನ ಮೂಲ ನೆಲೆಯಲ್ಲಿ ಶಾಂತಿಯಿಂದ ನೆಲೆಸುವುದು” ~ ಉಪನಿಷತ್ ವಾಕ್ಯ

ಮ್ಮ ಅಂತರಂಗವು ಆತ್ಮದ ಮೂಲ ನೆಲೆ. ಅಂತರಂಗವನ್ನು ಒಂದು ಕೊಳವೆಂದು ಭಾವಿಸುದರೆ, ಆಲೋಚನೆಗಳು ಆ ಕೊಳವನ್ನು ಕದಡುವ ಅಲೆಗಳು. ಅಲೆಗಳು ಕಲಕುತ್ತಿದ್ದಷ್ಟೂ ಹೊತ್ತು ಆತ್ಮದ ನೆಲೆ ವಿಚಲಿತಗೊಳ್ಳುತ್ತ ಇರುತ್ತದೆ. ಇದರಿಂದ ಆತ್ಮದ ಶಾಂತಿಯೂ ಕದಡುತ್ತದೆ. ಆತ್ಮವು ಅಶಾಂತಿಯಿಂದ ಇದ್ದರೆ ಮನುಷ್ಯರ ಬದುಕು ಹಳಿ ತಪ್ಪುತ್ತದೆ. ಆದ್ದರಿಂದ, ಆತ್ಮ ಶಾಂತವಾಗಿರಬೇಕು ಎಂದರೆ ಮೊದಲು ಆಲೋಚನಾ ತರಂಗಗಳನ್ನು ಸುಮ್ಮನಾಗಿಸಬೇಕು.
ಈ ಆಲೋಚನೆಯ ಅಲೆಗಳು ಏಳುವುದು ಹೇಗೆ? ಹೊರಗಿನ ಕಲ್ಲು, ಕಡ್ಡಿಗಳಿಂದ, ಜೋರು ಗಾಳಿ ಬೀಸುವುದರಿಂದ – ಹೀಗೆ ಹೊರಗಿನ ಪ್ರೇರಣೆಯಿಂದ ಕೊಳದ ಮೇಲ್ಮೈ ಚಡಪಡಿಸಿ ಅಲೆಗಳು ಏಳುತ್ತವೆ. ಹಾಗೆಯೇ ಎಲ್ಲಿಯವರೆಗೆ ನಾವು ನಮ್ಮನ್ನು ಹೊರಜಗತ್ತಿನೊಡನೆ ಜೋಡಿಸಿಕೊಂಡಿರುತ್ತೇವೋ, ನಮ್ಮನ್ನು ಹೊರಜಗತ್ತಿನ ಭಾಗವಾಗಿ ಗುರುತಿಸಿಕೊಂಡಿರುತ್ತೇವೋ, ಅಲ್ಲಿಯವರೆಗೆ ನಮ್ಮ ಅಂತರಂಗವು ಕೂಡ ಹೊರಗಿನ ಪ್ರೇರಣೆಗಳಿಗೆ ವಿಚಲಿತಗೊಳ್ಳುತ್ತದೆ. ಹೊರಗಿನ ಆಗುಹೋಗುಗಳಿಗೆ, ನಮ್ಮದೇ ಲೌಕಿಕ ಬದುಕಿನ ಏಳುಬೀಳುಗಳಿಗೆ ಪ್ರತಿಕ್ರಿಯೆಯಾಗಿ ನಮ್ಮೊಳಗೆ ಕಂಪನ ಉಂಟಾಗುತ್ತದೆ. ಮತ್ತು ಇದರಿಂದ ನಮ್ಮ ನೆಮ್ಮದಿಗೆಟ್ಟು, ಆತ್ಮವು ಅಶಾಂತಗೊಳ್ಳುತ್ತದೆ.
ಹಾಗಾದರೆ ದೈನಂದಿನ ಸಂಗತಿಗಳಿಗೆ, ಲೌಕಿಕ ಆಗುಹೋಗುಗಳಿಗೆ ನಾವು ಜವಾಬ್ದಾರರೇ ಆಗಿಲ್ಲವೆ? ಖಂಡಿತ ಆಗಿದ್ದೇವೆ. ಖಂಡಿತವಾಗಿಯೂ ನಾವು ಈ ನಿಟ್ಟಿನಲ್ಲಿ ನಮ್ಮ ಕರ್ತವ್ಯವನ್ನು ನಡೆಸಬೇಕು ಮತ್ತು ಅಭಿವ್ಯಕ್ತಿಸಬೇಕು. ಆದರೆ ಈ ಅಭಿವ್ಯಕ್ತಿ ಪ್ರತಿಕ್ರಿಯೆ ಆಗಿರಬಾರದು. ಬದಲಿಗೆ, ಸ್ಪಂದನೆ ಆಗಿರಬೇಕು. ಕಡ್ಡಿ ಬೀಳುವುದು ಕ್ರಿಯೆಯಾದರೆ, ಕಂಪಿಸಿ ಅಲೆಗಳು ಏಳುವುದು ಪ್ರತಿಕ್ರಿಯೆ. ಹಾಗೆಯೇ ಹೊರಗಿನ ಸಂಗತಿಗಳಿಗೆ ನಮ್ಮಲ್ಲಿ ಬದಲಾವಣೆ ಉಂಟಾದರೆ ಅದು ಪ್ರತಿಕ್ರಿಯೆ. ನಮ್ಮ ಅಂತರಂಗದಲ್ಲಿ ಬದಲಾವಣೆ ಆಗದಂತೆ ನಾವು ತೋರುವ ಅಭಿವ್ಯಕ್ತಿಯೇ ಸ್ಪಂದನೆ.

ಇಂಥಾ ಸ್ಪಂದನೆ ನಮಗೆ ಸಾಧ್ಯವಾಗಬೇಕು. ನಾವು ವಿಚಲಿತಗೊಳ್ಳದೆ ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ಆಗ ನಮ್ಮ ನೆಮ್ಮದಿಯನ್ನು ಕಾಯ್ದುಕೊಳ್ಳಲು ಸಾಧ್ಯ.

2 Comments

Leave a Reply