“ನಂಬಿಕೆಯ ವಿರುದ್ಧ ಪದ ಭಯ” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.2

ನನ್ನ ಭೇಟಿ ಮಾಡುವ ಜನರದ್ದು ಒಂದೇ ಪ್ರಶ್ನೆ, “ಜ್ಞಾನೋದಯ ಯಾವಾಗ ನಮಗೆ ಸಾಧ್ಯ? ಯಾವಾಗ?” “ಈಗ” – ಇಷ್ಟೇ ನನ್ನ ಉತ್ತರ. ಅವರು ನಂಬುವುದಿಲ್ಲ. ಆದರೆ ನನ್ನ ನಂಬಿ. ಜ್ಞಾನೋದಯ ನಿಮಗೆ ಸಾಧ್ಯವಾಗುವುದಾದರೆ ಅದು ‘ಈಗ’ ತಪ್ಪಿದರೆ ಮತ್ತೊಂದು  ತಪ್ಪಿದರೆ ಮತ್ತೊಂದು ‘ಈಗ’ ಯಾವಾಗಲೂ ‘ಈಗ’ ಮಾತ್ರ” | ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ

Strive to no goals |ಭಾಗ 6.2

ತಾವೋ ಸುಲಭವೂ ಅಲ್ಲ ಕಠಿಣವೂ ಅಲ್ಲ
ಆದರೆ ಸೀಮಿತ ದೃಷ್ಟಿಯಿರುವವರು
ಭಯಭೀತರು ಮತ್ತು ಹಟವಾದಿಗಳು :
ಅವಸರ ಮತ್ತು ವೇಗ ನಮ್ಮನ್ನು ನಿಧಾನವಾಗಿ ಮುನ್ನಡೆಸುವವು,
ಮತ್ತು ಅಂಟಿಕೊಳ್ಳುವುದು ಕಾಲೆಳೆಯುವುದು;
ನಿರ್ವಾಣದ ಬಗ್ಗೆ ಸಂಭ್ರಮಿಸುವುದೆಂದರೆ
ನಮ್ಮ ಕಣ್ಣಿಗೆ ನಾವೇ ಪಟ್ಟಿ ಕಟ್ಟಿಕೊಳ್ಳುವುದು,
ಸುಮ್ಮನೇ ಎಲ್ಲವನ್ನೂ ಅವುಗಳ ಸಹಜತೆಗೆ ಬಿಟ್ಟಾಗ
ಯಾವ ಬರುವಿಕೆಯೂ ಇಲ್ಲ ಯಾವ ಹೋಗುವಿಕೆಯೂ.

**

ಸೊಸಾನ್ ನ ಈ ಮಾತು ದ್ವಂದ್ವ ಅಲ್ಲ.
ಅವಸರ ಮತ್ತು ವೇಗ ಕಾರಣವಾಗಿ ನೀವು
ನಿಮ್ಮ ಎದುರಿಗಿನ ಸತ್ಯವನ್ನು
ನೀವು ಕಾಣದೇ ಹೋಗುವಿರಿ.

ನನ್ನ ಭೇಟಿ ಮಾಡುವ ಜನರದ್ದು ಒಂದೇ ಪ್ರಶ್ನೆ.
“ ಜ್ಞಾನೋದಯ ಯಾವಾಗ ನಮಗೆ ಸಾಧ್ಯ? ಯಾವಾಗ? “

“ಈಗ” – ಇಷ್ಟೇ ನನ್ನ ಉತ್ತರ.

ಅವರು ನಂಬುವುದಿಲ್ಲ. ಆದರೆ ನನ್ನ ನಂಬಿ.
ಜ್ಞಾನೋದಯ ನಿಮಗೆ ಸಾಧ್ಯವಾಗುವುದಾದರೆ
ಅದು ‘ಈಗ’
ತಪ್ಪಿದರೆ ಮತ್ತೊಂದು
ತಪ್ಪಿದರೆ ಮತ್ತೊಂದು ‘ಈಗ’
ಯಾವಾಗಲೂ ‘ಈಗ’ ಮಾತ್ರ”
ಜ್ಞಾನೋದಯಕ್ಕೆ
ಬೇರೆ ಯಾವ ಸಮಯವೂ ಸಾಧ್ಯವಿಲ್ಲ.

ಹೌದು ನೀವು ಕಾಯುತ್ತ ಕುಳಿತರೂ,
ಅವಸರ ಮಾಡಿದರೂ, ಸಾಧ್ಯವಿಲ್ಲ.
ಜ್ಞಾನೋದಯ ಸಾಧ್ಯವಾಗುವುದಾದರೆ
ಅದು ‘ಈಗ’ ಮತ್ತು ‘ಇಲ್ಲಿ’ ಮಾತ್ರ.

ಹೇಗೆ ಕಾಲ ಮತ್ತು ದೇಶ ಎರಡು ಪದಗಳಲ್ಲವೋ
ಹಾಗೆಯೇ, ‘ಈಗ ಮತ್ತು ಇಲ್ಲಿ (Now & Here)’
ಎರಡೂ ಬೇರೆ ಬೇರೆ ಪದಗಳಲ್ಲ.

ಕಾಲ, ಪ್ರತ್ಯೇಕ ಅಸ್ತಿತ್ವ ಅಲ್ಲ ಅದು
ದೇಶದ ನಾಲ್ಕನೇಯ ಆಯಾಮ
ಎನ್ನುವುದನ್ನ ವೈಜ್ಞಾನಿಕವಾಗಿ ನಿರೂಪಿಸಿದ ಐನ್ ಸ್ಟಿನ್
‘ಕಾಲ ಮತ್ತು ದೇಶ’ ಬೇರೆ ಬೇರೆ ಅಲ್ಲ ಒಂದೇ ಎಂದು ಸಾರಿದ.

ಐನ್ ಸ್ಟಿನ್ ಗಿಂತ ಸಾವಿರಾರು ವರ್ಷ ಮೊದಲು
ಅನುಭಾವಿ ಸೊಸಾನ್ ಗೆ ಈ ಬಗ್ಗೆ
ಸ್ಪಷ್ಟ ತಿಳುವಳಿಕೆ ಇತ್ತು.
‘ಈಗ ಮತ್ತು ಇಲ್ಲಿ’ ಬೇರೆ ಬೇರೆ ಅಲ್ಲ
‘ಈಗ’ ದ ಇನ್ನೊಂದು ಆಯಾಮವೇ ‘ಇಲ್ಲಿ’
ಹಾಗಾಗಿ ‘ಈಗ-ಇಲ್ಲಿ’ ಒಂದೇ ಶಬ್ದ.

ಆದರೆ ನೀವು ಹಟವಾದಿಗಳು
ಅವಸರ ಮಾಡುತ್ತೀರಿ
ಹಾಗಾಗಿ ಸತ್ಯ ನಿಮ್ಮಿಂದ ದೂರ ಹೋಗುತ್ತದೆ.
ಸೋಸಾನ್ ಮಾತು ನೆನಪಿನಲ್ಲಿರಲಿ,
ಸತ್ಯ ನಿಮ್ಮೊಳಗೆ ಘಟಿಸುವುದಾದರೆ
ಅದು ‘ ‘ಈಗ ಮತ್ತು ಇಲ್ಲಿ’ ಮಾತ್ರ.
ನಿಮ್ಮ ಕಾಯುವಿಕೆಗೆ ನಿಮ್ಮ ಅವಸರಕ್ಕೆ
ಯಾವುದೂ ಸಾಧ್ಯವಿಲ್ಲ,
ಇವುಗಳನ್ನ ನಂಬಿಕೊಂಡಿರಾದರೆ
ಹತಾಶರಾಗುವಿರಿ
ಸಮಸ್ಯೆಯ ಸುಳಿಗೆ ಸಿಕ್ಕಿಹಾಕಿಕೊಳ್ಳುವಿರಿ.

ಸೊಸಾನ್ ‘ ಭಯಭೀತರು’ ಎನ್ನುತ್ತಾನಲ್ಲ
ಹಾಗೆಂದರೇನು?

ಇದು ನಿಮ್ಮೊಳಗಿನ ಸ್ಥಿತಿ.
ನಿಮಗೆ ‘ಬೇಕು’ ಆದರೆ ನಿಮಗೆ ‘ಬೇಡ’ ಕೂಡ,
ನೀವು ಸಾಧಿಸಬಯಸುತ್ತಿದೀರಿ ಆದರೆ
ಈ ಪಯಣ ಸಾಧ್ಯವೇ ಎನ್ನುವ ಆತಂಕ.
ಇದು ಭಯದ ಸ್ಥಿತಿ.

‘ಭಯ’
ಜೀಸಸ್ ಯಾವಾಗಲೂ ಬಳಸುವ ಪದ.
ನಂಬಿಕೆಗೆ ವಿರುದ್ಧವಾಗಿ ಆತ
ಅಪನಂಬಿಕೆ ಶಬ್ದ ಬಳಸುವುದಿಲ್ಲ
ಬದಲಾಗಿ ‘ಭಯ’ ಶಬ್ದ ಉಪಯೋಗಿಸುತ್ತಾನೆ.
ಯಾರಿಗೆ ಭಯ ಇಲ್ಲವೋ ಅವರು ನಂಬಿಕಸ್ತರು ಎನ್ನುತ್ತಾನೆ.
ನಂಬಿಕೆ ಒಂದು ಪೂರ್ಣ ನಿರ್ಧಾರ.
ನೀವು ಈ ನಂಬಿಕೆಯಲ್ಲಿ ಪ್ರವೇಶಿಸಬಯಸುವಿರಾದರೆ,
ಪೂರ್ಣವಾಗಿ ಶರಣಾಗಬೇಕು,
ಯಾವ ಹಿಂಜರಿಕೆ,
ಯಾವ ಭಯದ ಭಯವೂ ಇಲ್ಲದೆ.

ಜೀಸಸ್ ಪದ ಬಳಕೆ ನಿಖರ.
ಆತ ಹೊರಗಿನ ಭಾಷೆಯ ಬಗ್ಗೆ ಚಿಂತಿತನಲ್ಲ
ಆತ ಒಳಗಿನ ಭಾಷೆಯನ್ನರಿತು ಮಾತನಾಡುತ್ತಿದ್ದಾನೆ.
ಹೌದು ನಂಬಿಕೆಯ ವಿರುದ್ಧ ಪದ ಅಪನಂಬಿಕೆ ಅಲ್ಲ.
ನಿಮಗೆ ಒಂದು ವಿಷಯದ ಬಗ್ಗೆ
ನಂಬಿಕೆ ಇಲ್ಲವೆಂದರೆ ಅದಕ್ಕೆ ಕಾರಣ
ನಿಮಗೆ ಆ ವಿಷಯದ ಬಗ್ಗೆ ಅಪನಂಬಿಕೆ ಎಂದಲ್ಲ
ನಿಮಗೆ ಆ ವಿಷಯದ ಬಗ್ಗೆ ಭಯ ಕಾರಣ ಎಂದು.

ಆದರೆ ನೀವು ಜಾಣತನ ಉಪಯೋಗಿಸುತ್ತೀರಿ,
ನಿಮ್ಮ ಅಪನಂಬಿಕೆ, ನಿಮ್ಮ ಭಯ ಗಳನ್ನು
ಭಾಷೆಯ ಸಂಕೀರ್ಣತೆಯಲ್ಲಿ ಅಡಗಿಸಿ,

“ ನಾನು ಸಂದೇಹವಾದಿ, ನಾನು ನಾಸ್ತಿಕ?
ನನಗೆ ವಿಷಯದ ಸತ್ಯ ನಿಕ್ಕಿ ಆಗುವತನಕ
ಹೇಗೆ ತಾನೆ ಒಪ್ಪಿಕೊಳ್ಳಲಿ”

ಎಂದು ಸಮಜಾಯಿಷಿ ಕೊಡುವಿರಿ.
ಆದರೆ, ನೀವು ನಿಮ್ಮ ಅಂತರಾಳವನ್ನು
ಬಗೆದು ನೋಡಬಲ್ಲಿರಾದರೆ,
ಅಲ್ಲಿ ಕಾಲು ಚಾಚಿಕೊಂಡು ಕುಳಿತಿರುವ
ನಿಮ್ಮ ಭಯ ನಿಮಗೆ ಕಾಣಿಸುವುದು.

ಭಯ ಎಂದರೆ,
ನಿಮ್ಮ ಅರ್ಧ ಬಯಸುತ್ತಿದೆ
ಮತ್ತು ಇನ್ನರ್ಧ, ಹಿಂಜರಿಯುತ್ತಿದೆ.
ಅರ್ಧ, ಅಜ್ಞಾತದ ಸೆಳೆತಕ್ಕೆ ಬಲಿಯಾಗಿದೆ,
ಅಜ್ಞಾತದ ಸ್ವಾಗತವನ್ನು ಸ್ವೀಕರಿಸಿದೆ.
ಆದರೆ ಇನ್ನರ್ಧಕ್ಕೆ, ಜ್ಞಾತಕ್ಕೆ ಅಂಟಿಕೊಂಡಿರುವ
ಅಜ್ಞಾತದ ಬಗ್ಗೆ ಭಯ.

ಅರ್ಧ, ಬದಲಾವಣೆಗೆ ಸಿದ್ಧ
ಆದರೆ ಇನ್ನರ್ಧಕ್ಕೆ, ಹೊಸತನದ ಬಗ್ಗೆ ಭಯ,
ಅಲ್ಲಿ ಎದುರಾಗಬಹುದಾದ ಅಪಾಯಗಳ ಬಗ್ಗೆ ಆತಂಕ.
ಆದ್ದರಿಂದಲೇ, ಈ ಇನ್ನರ್ಧ ರೂಢಿ, ಸಂಪ್ರದಾಯಕ್ಕೆ ಅಂಟಿಕೊಂಡಿದೆ.
ಆದ್ದರಿಂದಲೇ ಇನ್ನರ್ಧದ ಸ್ವಭಾವ, ಅಂಟಿಕೊಳ್ಳುವುದು, ಕಾಲೆಳೆಯುವುದು.

ಇನ್ನರ್ಧ ಗತಕಾಲದ ರಾಯಭಾರಿ,
ಈ ಬಗ್ಗೆ ನಮಗೆ ಖಚಿತ ಮಾಹಿತಿ,
ಇದು ನೆನಪು.
ಇನ್ನರ್ಧಕ್ಕೆ ಮೊದಲರ್ಧದ ಅಜ್ಞಾತದ ಬಗ್ಗೆ
ಕುತೂಹಲ,
ಆ ಗಡಿಯೊಳಗೆ ನುಸುಳಿ ರುಚಿ ಸವಿಯುವ ತಹತಹ. ಆದರೆ….

ಇದು ಭಯ
ಭಯ ನಿಮ್ಮನ್ನು ಭಾಗ ಮಾಡಿದೆ.
ನೀವು ಭಯಭೀತರಾಗಿದ್ದಾಗ ಅನಿರ್ಣಯಾತ್ಮಕರು.
ಅಜ್ಞಾತದತ್ತ ನೀವು ಒಂದು ಹೆಜ್ಜೆಯನ್ನೆನೋ
ಎತ್ತಿ ಇಡುತ್ತೀರಿ ಆದರೆ
ಇನ್ನೊಂದು ಹೆಜ್ದೆ
ಭೂತಕಾಲದ ಸಮಾಧಿಯಲ್ಲಿ ಸಿಕ್ಕಿಹಾಕಿಕೊಂಡಿದೆ.
ಕೇವಲ ಒಂದು ಹೆಜ್ಜೆಯೊಂದಿಗೆ
ಒಂದು ರೆಕ್ಕೆಯೊಂದಿಗೆ
ಪ್ರಯಾಣ ಮಾಡುವುದು ಸಾಧ್ಯವಿಲ್ಲ.
ನೀವು ನಿಮ್ಮಎರಡೂ ಹೆಜ್ಜೆಗಳನ್ನು
ಎತ್ತಿ ಇಡಬೇಕು,
ಎರಡೂ ರೆಕ್ಕೆಗಳನ್ನು ಬಿಚ್ಚಿ ಹಾರಬೇಕು.

ಹಾಗಾಗದೇ ಹೋದಾಗ ಸಮಸ್ಯೆ.
ಇಡೀ ಬದುಕು ದ್ವಂದ್ವ.
ನೀವು ಒಬ್ಬರನ್ನು ಪ್ರೀತಿಸುತ್ತೀರಿ
ಇನ್ನೊಬ್ಬರನ್ನು ದ್ವೇಷಿಸುತ್ತೀರಿ.
ಶಾಂತಿ ಎನ್ನುತ್ತೀರಿ, ಯುದ್ಧ ಮಾಡುತ್ತೀರಿ.
ನಂಬಿಕೆ ಅಪನಂಬಿಕೆಗಳ ನಡುವೆ ತೊಳಲಾಡುತ್ತೀರಿ.
ಭಕ್ತಿ ಎನ್ನುತ್ತೀರಿ ಆದರೆ ಭಯಕ್ಕೆ ಮಣಿಯುತ್ತೀರಿ.

ಭಯ ನಿಮ್ಮನ್ನು ಭಾಗ ಮಾಡುತ್ತಿದೆ
ಭಾಗವಾಗಿದ್ದಾಗ ನೀವು ಸತ್ಯವನ್ನು ಧರಿಸಲಾರಿರಿ.
ಏಕೆಂದರೆ ಸತ್ಯ ಒಂದು, ಸತ್ಯ ಪೂರ್ಣ.
ಸತ್ಯದ ತಿಳುವಳಿಕೆಯೇ ಅಧ್ಯಾತ್ಮ

ಸಂಸ್ಕೃತದಲ್ಲಿ ಒಂದು ಸುಂದರ ಮಾತಿದೆ: ಜ್ಞಾನ ಜ್ಞಾತೃ ಜ್ಞೇಯ ರೂಪಾ – “ತಿಳುವಳಿಕೆ, ತಿಳಿಯುವವಳು ಮತ್ತು ತಿಳಿಯಬೇಕಾದುದು ಎಲ್ಲವೂ ಅವಳೇ”.

ಇದುವೇ ಸತ್ಯ.

(ಮುಂದುವರೆಯುತ್ತದೆ…..)

ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2020/06/15/ming-9/

1 Comment

Leave a Reply