“ಅಂಟಿಕೊಳ್ಳುವುದೆಂದರೆ ದಾರಿ ತಪ್ಪುವುದು” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.3

ನೀವು ಯಾವುದಕ್ಕಾದರೂ ಅಂಟಿಕೊಂಡಿದ್ದಿರೆಂದರೆ ಅದು ಸಮಸ್ಯೆ. ಯಾವುದಕ್ಕೆ ಅಂಟಿಕೊಂಡಿದ್ದೀರಿ ಅದು ಮುಖ್ಯವಲ್ಲ.
ದೇಹಕ್ಕೆ, ಇಂದ್ರಿಯಗಳಿಗೆ, ಬಯಕೆಗಳಿಗೆ ಪ್ರೇಮ, ಪ್ರಾರ್ಥನೆ, ಧ್ಯಾನ, ಭಗವಂತ, ಜ್ಞಾನೋದಯ, ನಿರ್ವಾಣ ಯಾವುದಕ್ಕೆ ಅಂಟಿಕೊಂಡಿದ್ದರೂ ಅದು ಸಮಸ್ಯೆಯೇ. | ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ

Strive to no goals |ಭಾಗ 6.3

ತಾವೋ ಸುಲಭವೂ ಅಲ್ಲ ಕಠಿಣವೂ ಅಲ್ಲ
ಆದರೆ ಸೀಮಿತ ದೃಷ್ಟಿಯಿರುವವರು
ಭಯಭೀತರು ಮತ್ತು ಹಟವಾದಿಗಳು :
ಅವಸರ ಮತ್ತು ವೇಗ ನಮ್ಮನ್ನು ನಿಧಾನವಾಗಿ ಮುನ್ನಡೆಸುವವು,
ಮತ್ತು ಅಂಟಿಕೊಳ್ಳುವುದು ದಾರಿತಪ್ಪಿಸುವುದು ;
ನಿರ್ವಾಣದ ಬಗ್ಗೆ ಸಂಭ್ರಮಿಸುವುದೆಂದರೆ
ನಮ್ಮ ಕಣ್ಣಿಗೆ ನಾವೇ ಪಟ್ಟಿ ಕಟ್ಟಿಕೊಳ್ಳುವುದು,
ಸುಮ್ಮನೇ ಎಲ್ಲವನ್ನೂ ಅವುಗಳ ಸಹಜತೆಗೆ ಬಿಟ್ಟಾಗ
ಯಾವ ಬರುವಿಕೆಯೂ ಇಲ್ಲ , ಯಾವ ಹೋಗುವಿಕೆಯೂ.

****

ಬೊಖಾರಾ ದಲ್ಲಿ
ಒಂದು ರಹಸ್ಯ ಸೂಫೀ ವಿಹಾರವಿದೆ,
ಗುರ್ಜೀಫ್ ಇಲ್ಲೇ ಆರು ವರ್ಷಗಳ ಕಾಲ ಇದ್ದು
ಕೆಲವು ವಿಧಾನಗಳನ್ನ ಕಲಿತಿದ್ದ.
ಈ ವಿಧಾನಗಳಲ್ಲಿಯೇ ಒಂದು ಸುಂದರ ವಿಧಾನವಿದೆ.

ವಿದ್ಯಾರ್ಥಿಯೊಬ್ಬ ವಿಹಾರವನ್ನು ಪ್ರವೇಶಿಸಿದನೆಂದರೆ,
ಅವನಿಗೆ ಒಂದು ಫಲಕ ನೀಡಲಾಗುತ್ತದೆ.
ಆ ಫಲಕದ ಒಂದು ಬದಿಗೆ ಹೀಗೆ ಬರೆದಿರುತ್ತಾರೆ.

“ನನ್ನದು ಋಣಾತ್ಮಕ ಚಿಂತನೆ,
ಯಾರೂ ನನ್ನನ್ನು ಗಂಭೀರವಾಗಿ ಪರಿಗಣಿಸಬೇಡಿ”

ಇದರ ಅರ್ಥ,
ನಾನೆನಾದರೂ ಕೆಟ್ಟದಾಗಿ ಮಾತಾಡಿದರೆ
ಅಥವಾ ತಪ್ಪಾಗಿ ನಡೆದುಕೊಂಡರೆ
ಅದಕ್ಕೆ ಕಾರಣ ನನ್ನೊಳಗಿನ ಋಣಾತ್ಮಕತೆಯೇ ಹೊರತು
ನಿನ್ನ ತಪ್ಪು ಏನೂ ಇಲ್ಲ.

ಫಲಕದ ಇನ್ನೊಂದು ಬದಿಗೆ ಹೀಗೆ ಬರೆದಿರುತ್ತಾರೆ.

“ನನ್ನದು ಧನಾತ್ಮಕ ಮನಸ್ಸು,
ನನ್ನನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಡಿ”

ಹೀಗೆಂದರೆ, ಮೂಲಭೂತವಾಗಿ ನಾನು
ಪ್ರೀತಿಯ, ಅಂತಃಕರಣದ ಮನುಷ್ಯ.
ನಾನೆನಾದರೂ ನಿಮ್ಮನ್ನು ಹೊಗಳಿದರೆ
ಅದಕ್ಕೆ ಕಾರಣ ನನ್ನೊಳಗಿನ ಧನಾತ್ಮಕತೆಯ ಹೊರತು,
ಈ ಹೊಗಳಿಕೆ ಖಂಡಿತ ನಿನ್ನ ಕುರಿತಾಗಿ ಅಲ್ಲ.

ವಿದ್ಯಾರ್ಥಿ ತನ್ನ ಮನಸ್ಥಿತಿಗೆ ಅನುಗುಣವಾಗಿ
ಫಲಕದ ಭಾಗವನ್ನು ಮುಂದು ಮಾಡಿಕೊಂಡು
ವಿಹಾರದಲ್ಲಿ ಓಡಾಡುತ್ತಿರುತ್ತಾನೆ.
ಈ ಕಾರಣವಾಗಿ, ಅನೇಕ ಬದಲಾವಣೆಗಳು
ಅವನಲ್ಲಿ ಕಾಣಲು ಶುರುವಾಗುತ್ತವೆ, ಏಕೆಂದರೆ
ಯಾರೂ ಅವನ ಒಳ್ಳೆಯಮಾತುಗಳಿಗೆ ಹಿಗ್ಗುವುದಿಲ್ಲ
ಮತ್ತು ಕೆಟ್ಟ ಮಾತುಗಳಿಗೆ ಬೇಸರ ಮಾಡಿಕೊಳ್ಳುವುದಿಲ್ಲ.
ಯಾರೂ ಅವನನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ.

ಯಾರಲ್ಲಾದರೂ
ವಾಂತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ
ಅವರು ನಿಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದರೆ
ಅವರು ನಿಮ್ಮ ಮೇಲೆ ಕಾರುತ್ತಿಲ್ಲ ಬದಲಾಗಿ,
ಏನಕೇನ ಕಾರಣವಾಗಿ
ಅವರೊಳಗೆ ತುಂಬಿಕೊಂಡಿರುವ ವಿಷವನ್ನು
ಹೊರಗೆ ಹಾಕುತ್ತಿದ್ದಾರೆ.

ತನ್ನೊಳಗಿನ ಈ ಇಬ್ಭಾಗ ಕೊನೆಯಾದಾಗ
ವಿದ್ಯಾರ್ಥಿ, ಗುರುವಿಗೆ ಮನವಿ ಮಾಡಿಕೊಳ್ಳುತ್ತಾನೆ
ಆಗ ಅವನಿಂದ ಫಲಕ ವಾಪಸ್ಸು ಪಡೆಯಲಾಗುತ್ತದೆ.

ನಿಮ್ಮ ಒಂದು ಭಾಗ
ಹಳೆಯ ಸಂಪ್ರದಾಯಗಳಿಗೆ, ಆಚರಣೆಗಳಿಗೆ
ಹವ್ಯಾಸಗಳಿಗೆ ಅಂಟಿಕೊಂಡರೆ
ಇನ್ನೊಂದು ಭಾಗ
ನಿಗೂಢ ಅನನ್ಯಕ್ಕೆ ಕೈಚಾಚುತ್ತದೆ.
ಒಂದು ಭಾಗ ಜಗತ್ತಿನ ಆಮಿಷಗಳಿಗೆ ಅಂಟಿಕೊಂಡಿದ್ದರೆ
ಇನ್ನೊಂದು ಭಾಗ
ಹಕ್ಕಿಯಂತೆ ಹಾರುತ್ತ ಅಜ್ಞಾತ ಆಕಾಶದ
ರಹಸ್ಯಗಳ ರುಚಿ ನೋಡಬಯಸುತ್ತದೆ.
ಹೀಗಾದಾಗ ಚಲನೆ ಸಾಧ್ಯವಿಲ್ಲ.
ನೀವು ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದೀರಿ.

ಈ ಇಕ್ಕಟ್ಟಿನಿಂದ ಹೊರ ಬರುವುದು ಹೇಗೆ?
ಮೊದಲು ಒಪ್ಪಿಕೊಳ್ಳಿ,
ಇದು ಅರ್ಧ ದಾರಿಯನ್ನು ಕ್ರಮಿಸಿದಂತೆ.
ನೀವು ನಿಮ್ಮೊಡನೆ, ಬೇರೆಯವರೊಡನೆ
ಹೇಗೆ ವ್ಯವಹರಿಸುತ್ತಿದ್ದೀರಿ, ಗಮನಿಸಿ.
ಆಯ್ಕೆಗಳನ್ನು ದೂರ ಸರಿಸಿ.
ಪೂರ್ಣವಾಗಿ ಒಪ್ಪಿಸಿಕೊಳ್ಳಿ.

ನೀರಿನಂತೆ ಹರಿಯುವುದು,
ಹಕ್ಕಿಯಂತೆ ಹಾರುವುದು
ಒಂದೇ ಉಪಾಯ.

…… ಆದರೆ ಸೀಮಿತ ದೃಷ್ಟಿಯಿರುವವರು
ಭಯಭೀತರು ಮತ್ತು ಹಟವಾದಿಗಳು,
ಅವಸರ ಮತ್ತು ವೇಗ ನಮ್ಮನ್ನು ನಿಧಾನವಾಗಿ ಮುನ್ನಡೆಸುವವು,
ಮತ್ತು ಅಂಟಿಕೊಳ್ಳುವುದೆಂದರೆ ದಾರಿತಪ್ಪುವುದು.

ನೀವು ಯಾವುದಕ್ಕಾದರೂ ಅಂಟಿಕೊಂಡಿದ್ದಿರೆಂದರೆ
ಅದು ಸಮಸ್ಯೆ.
ಯಾವುದಕ್ಕೆ ಅಂಟಿಕೊಂಡಿದ್ದೀರಿ ಅದು ಮುಖ್ಯವಲ್ಲ.
ದೇಹಕ್ಕೆ, ಇಂದ್ರಿಯಗಳಿಗೆ, ಬಯಕೆಗಳಿಗೆ
ಪ್ರೇಮ, ಪ್ರಾರ್ಥನೆ, ಧ್ಯಾನ,
ಭಗವಂತ, ಜ್ಞಾನೋದಯ, ನಿರ್ವಾಣ
ಯಾವುದಕ್ಕೆ ಅಂಟಿಕೊಂಡಿದ್ದರೂ
ಅದು ಸಮಸ್ಯೆಯೇ.

ಸೊಸಾನ್ ಮಾತು ನಿಜ
ಅಂಟಿಕೊಳ್ಳುವುದೆಂದರೆ ದಾರಿ ತಪ್ಪುವುದು.

ಅಂಟಿಕೊಳ್ಳದಿರಿ, ಚಲಿಸುತ್ತಿರಿ, ಹರಿಯುತ್ತಿರಿ
ನೀವು ಹೆಚ್ಚು ಚಲಿಸಿದಷ್ಟು, ನಿಮಗೆ ನೀವು ಹೆಚ್ಚು ಹೆಚ್ಚು
ಹತ್ತಿರವಾಗುತ್ತ ಹೋಗುತ್ತೀರಿ.
ನಿಮ್ಮೊಳಗಿನ ಶಕ್ತಿ ಯಾವ ಅಡೆತಡೆ ಇಲ್ಲದೆ
ನಿರಾಂತಕವಾಗಿ ಹರಿಯಲು ಆರಂಭಿಸಿದಾಗ,
ಸತ್ಯ ನಿಮ್ಮ ಬಾಗಿಲು ಬಾರಿಸಲು ಶುರು ಮಾಡುತ್ತದೆ.
ಹಾಗೆ ನೋಡಿದರೆ ಸತ್ಯ
ನಿಮ್ಮ ಬಾಗಿಲು ತಟ್ಟಲು ಶುರು ಮಾಡಿ
ಎಷ್ಟೋ ಹೊತ್ತಾಯಿತು,
ನೀವು ಅಂಟಿಕೊಂಡಿದ್ದೀರಿ, ನೀವು ಸಿಕ್ಕಿಹಾಕಿಕೊಂಡಿದ್ದೀರಿ
ನಿಮಗೆ ಆ ಸದ್ದು ಕೇಳಿಸುತ್ತಿಲ್ಲ.
ಸತ್ಯ ಯಾವತ್ತಿದ್ದರೂ ನಿಮ್ಮ ಮೂಗಿನ ತುದಿಯಲ್ಲಿ.

ನಿರ್ವಾಣದ ಬಗ್ಗೆ ಸಂಭ್ರಮಿಸುವುದೆಂದರೆ
ನಮ್ಮ ಕಣ್ಣಿಗೆ ನಾವೇ ಪಟ್ಟಿ ಕಟ್ಟಿಕೊಳ್ಳುವುದು.

ಸತ್ಯದ ಸಾಧನೆಗೆ, ನಿರ್ವಾಣ, ಮೋಕ್ಷದ ಬಗ್ಗೆ
ತೀವ್ರವಾಗಿ ಹಪಹಪಿಸುವುದು ಕೂಡ
ಲೌಕಿಕ ಬಯಕೆಗಳ ಬಗ್ಗೆ ಚಡಪಡಿಸುವಷ್ಟೇ
ಅಸಂಬದ್ಧ, ಅಪಾಯಕಾರಿ.

ನಿರ್ವಾಣ, ಸಾಧಿಸುವಂಥದಲ್ಲ, ಸಾಧ್ಯವಾಗುವಂಥದ್ದು .
ನಿರ್ವಾಣ ಸಾಧನೆಯಲ್ಲ, ಮತ್ತು ಸಾಧನೆ ಮಾಡುವ ಮನಸು
ಎಂದೂ ನಿರ್ವಾಣವನ್ನು ಸಾಧಿಸುವುದಿಲ್ಲ.
ಇದೊಂದು ಅಹಂ ವಿಹಾರ.

ನಿರ್ವಾಣವನ್ನು ತಲುಪುವವನು,
ತನ್ನ ಪಾಡಿಗೆ ತಾನು ಇರುವವನು
ಇರುವಲ್ಲೆ ಸುಮ್ಮನೆ ಖುಶಿಯಾಗಿರುವವನು
ಸಾಧನೆ ಗೊತ್ತಿಲ್ಲದವನು.
ಅವನಿಗೆ ಗುರಿಯೂ ಇಲ್ಲ, ಆತ ಎಲ್ಲಿಯೂ ಹೋಗುವುದೂ ಇಲ್ಲ.
ಆದರೆ ಅವನಲ್ಲಿ ಒಂದು ಚಲನೆ ಇದೆ
ಆದರೆ ಆ ಚಲನೆ ಗುರಿಯ ಮುಟ್ಟುವುದಕ್ಕಲ್ಲ.
ಅದು ಕೇವಲ ಅವನೊಳಗಿನ ಶಕ್ತಿ ಸಂಚಾರ.

ಹಿಮಾಲಯದಲ್ಲಿ ಹುಟ್ಟಿರುವ ನದಿ
ಒಂದೇ ಸವನೇ ಹರಿಯುತ್ತಿದೆ.
ನದಿ, ಸಮುದ್ರ ಸೇರಬೇಕೆಂದು ಹರಿಯುತ್ತಿಲ್ಲ,
ಸಮುದ್ರದ ವಿಳಾಸ ಕೂಡ ನದಿಗೆ ಗೊತ್ತಿಲ್ಲ.
ಹೀಗೆ ಹಿಮಾಲಯದಲ್ಲಿ ಹರಿಯುತ್ತಿರುವ
ನದಿಯ ಸಂಗೀತ ಎಷ್ಟು ಚಂದ.
ಗಿರಿ ಪರ್ವತಗಳನ್ನು ಇಳಿಯುತ್ತ,
ಕಣಿವೆ, ಕಂದರಗಳನ್ನು ದಾಟುತ್ತ,
ಬಯಲನ್ನು ತಲುಪಿ, ಜನರನ್ನು ದಾಟುತ್ತ……
ಈ ಒಂದು ಚಲನೆಯೇ ಎಷ್ಟು ಸುಂದರ
ಮತ್ತು ಈ ಚಲನೆಯ ಪ್ರತೀ ಕ್ಷಣವೂ ಎಷ್ಟು ಅಪರೂಪ

ಇದು ಬದುಕು, ಹೀಗೆ ಬದುಕಿನ ಚಲನೆ.

ನದಿಗೆ ತನ್ನ ಗುರಿಯ ಬಗ್ಗೆ ಗೊತ್ತಿಲ್ಲ
ಸಮುದ್ರ ಎನ್ನುವ ಅಪಾರದ ಬಗ್ಗೆಯೂ ಗೊತ್ತಿಲ್ಲ.
ನದಿಗೂ ಏನಾದರು ತನ್ನ ಗಮ್ಯದ ಬಗ್ಗೆ
ಕಾಳಜಿ ಶುರುವಾಯಿತೆಂದರೆ
ಅದು ಕೂಡ ನಮ್ಮಂತೆ ಅಲ್ಲಲ್ಲಿ ನಿಂತು
ಸರಿ ದಾರಿಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ,
ಉತ್ತರ, ದಕ್ಷಿಣ,ಪೂರ್ವ,ಪಶ್ಚಿಮ ಎಂದು
ಗಾಬರಿಯಾಗಬೇಕಾಗುತ್ತದೆ.
ನೆನಪಿರಲಿ, ಸಮುದ್ರ ನಮ್ಮ ಸುತ್ತ ಇದೆ.
ಯಾವ ದಿಕ್ಕಿಗೆ ಹರಿದರೂ ಸಮುದ್ರ ತಲುಪುವುದು ನಿಶ್ಚಿತ.
ದಾರಿಯ ಬಗ್ಗೆ ವಿಚಾರ ಮಾಡಬೇಡಿ, ಬದಲಾಗಿ,
ಹೇಗೆ ಇನ್ನಷ್ಟು ತೀವ್ರವಾಗಿ ಹರಿಯುವುದು, ಚಲಿಸುವುದು
ಕೇಳಿ ನೋಡಿ.

ನಿರಂತರವಾಗಿ ಹರಿಯುತ್ತಿದ್ದರೆ
ಹಳ್ಳ ಕೊಳ್ಳ, ಝರಿ, ಉಪನದಿ, ಮಹಾನದಿ
ಎಲ್ಲವೂ ಸಮುದ್ರ ಸೇರುವುದು ಖಂಡಿತ.
ಅಸ್ತಿತ್ವದ ದೃಷ್ಟಿಯಲ್ಲಿ ಎಲ್ಲವೂ ಸಮಾನ.
ಚಿಕ್ಕ ಬಳ್ಳಿಗಳಲ್ಲಿಯೂ ಹೂವು
ಮಹಾಮರಗಳಲ್ಲಿಯೂ ಹೂವು
ಹೂವು ಅರಳುವುದು ಮುಖ್ಯ.
ಹೂವು ಅರಳಿದಾಗ
ಮಹಾಮರಕ್ಕೆ ಎಷ್ಟು ಖುಶಿಯಾಗುತ್ತದೋ
ಅಷ್ಟೇ ಖುಶಿ ಬಳ್ಳಿಗೂ ಆಗುತ್ತದೆ.
ಖುಶಿಯ ಪ್ರಮಾಣದಲ್ಲಿ ವ್ಯತ್ಯಾಸವಿಲ್ಲ.

ಚಲನೆ ಮುಖ್ಯ, ಹರಿವು ಮುಖ್ಯ
ಗುರಿ ಮುಖ್ಯವಲ್ಲ
ಧ್ಯಾನದಲ್ಲೂ ಹಾಗೆಯೇ
ನೀವು ಏನನ್ನು ಬಯಸುವ ಹಾಗಿಲ್ಲ
ಯಾವುದಕ್ಕೂ ಕಾಯುವ ಹಾಗಿಲ್ಲ
ಸಹಜವಾಗಿರಿ
ನೀವು ಇಲ್ಲದ ಹೊತ್ತಿನಲ್ಲಿ
ಆ ಅಪರೂಪ ಸಂಭವಿಸುವುದು.

ಯಾವಾಗ ನಿಮ್ಮ ಕುಣಿತದಲ್ಲಿ
ಕುಣಿಯುವವ ಇರುವುದಿಲ್ಲವೋ,
ಯಾವಾಗ ನಿಮ್ಮ ನೋಡುವಿಕೆಯಲ್ಲಿ
ನೋಡುವವ ಇರುವುದಿಲ್ಲವೋ,
ಯಾವಾಗ ನಿಮ್ಮ ಪ್ರೇಮದಲ್ಲಿ
ಪ್ರೇಮಿ ಇರುವುದಿಲ್ಲವೋ

ಆಗ ಆ ಅಪರೂಪ ಸಂಭವಿಸುವುದು.

(ಮುಂದುವರೆಯುವುದು…..)

ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2020/06/23/osho-41/

1 Comment

Leave a Reply