ದುಃಖ ನಿವಾರಣೆಗಾಗಿ ಜಗದ್ಧಾತ್ರೀ ಸ್ತೋತ್ರ

ದೇವಿ ಜಗದ್ಧಾತ್ರಿ ಜಗತ್ತಿನ ರಕ್ಷಕಿ. ಸೃಷ್ಟಿಯನ್ನು ಗರ್ಭದಲ್ಲಿಟ್ಟು ಪೊರೆಯುವವಳು. ಜಗತ್ತನ್ನು ತನ್ನಲ್ಲಿ ಧರಿಸಿದವಳು. ಜಗನ್ಮಾತೆಯೂ ಜಗನ್ಮಯಿಯೂ ಆದ ದೇವಿ ಜಗದ್ಧಾತ್ರಿಯ ಸ್ತುತಿ ಇಲ್ಲಿದೆ…


ಸೂಕ್ಷ್ಮಾತಿಸೂಕ್ಷ್ಮ ರೂಪೇ ಚ ಪ್ರಣಾಪಾನಾದಿರೂಪಿಣಿ |
ಭಾವಾಭಾವಸ್ವರೂಪೇ ಚ ಜಗದ್ಧಾತ್ರೀ ನಮೋSಸ್ತು ತೇ || 1 ||
ಅರ್ಥ : ಸೂಕ್ಷ್ಮಕ್ಕಿಂತಲೂ ಸೂಕ್ಷ್ಮಳಾದ, ಜಗತ್ತಿನ ಜೀವಿಗಳೆಲ್ಲದರ ಪ್ರಾಣಾಪಾನಾದಿರೂಪಳಾದ; ಏಕಕಾಲಕ್ಕೆ ಭಾವಸ್ವರೂಪಿಣಿಯೂ ಅಭಾವಸ್ವರೂಪಿಣಿಯೂ ಆದ; ಹೇ ಜಗದ್ಧಾತ್ರಿ! ನಿನಗೆ ನಮಸ್ಕಾರ

ಕಾಲಾದಿರೂಪೇ ಕಾಲೇಶೇ ಕಾಲಾಕಾಲವಿಭೇದಿನೀ |
ಸರ್ವಸ್ವರೂಪೇ ಸರ್ವಜ್ಞೇ ಜಗದ್ಧಾತ್ರೀ ನಮೋSಸ್ತು ತೇ || 2 ||
ಅರ್ಥ : ಕಾಲವೇ ಮೊದಲಾದ ಅನಂತ ಸ್ವರೂಪಿಯೂ, ಕಾಲದ ಒಡತಿಯೂ ಕಾಲ – ಅಕಾಲಗಳನ್ನು ವಿಭಜಿಸುವವಳೂ; ಸರ್ವಸ್ವರೂಪಳೂ ಸರ್ವಜ್ಞೆಯೂ ಆದ; ಹೇ ಜಗದ್ಧಾತ್ರಿ! ನಿನಗೆ ನಮಸ್ಕಾರ

ದ್ವಿಸಪ್ತಕೋಟಿ ಮಂತ್ರಾಣಾಂ ಶಕ್ತಿರೂಪೇ ಸನಾತನೀ |
ಸರ್ವಶಕ್ತಿಸ್ವರೂಪೇ ಚ ಜಗದ್ಧಾತ್ರೀ ನಮೋSಸ್ತು ತೇ || 3 ||
ಅರ್ಥ : ಕೋಟಿ ಮಂತ್ರಗಳ ಶಕ್ತಿಸ್ವರೂಪಿಣಿ ನೀನು. ನೀನು ಅತ್ಯಂತ ಪ್ರಾಚೀನಳಾದ ಸನಾತನಿ, ಎಲ್ಲ ಶಕ್ತಿಯ ಆದಿರೂಪ ನೀನೇ. ಹೇ ಜಗದ್ಧಾತ್ರಿ! ನಿನಗೆ ನಮಸ್ಕಾರ

ತೀರ್ಥಯಜ್ಞತಪೋದಾನಯೋಗಸಾರೇ ಜಗನ್ಮಯೀ |
ತ್ವಮೇವ ಸರ್ವಂ ಸರ್ವಸ್ಥೇ ಜಗದ್ಧಾತ್ರೀ ನಮೋSಸ್ತು ತೇ || 4 ||
ಅರ್ಥ : ತೀರ್ಥಯಾತ್ರೆ, ಯಜ್ಞ, ತಪಸ್ಸು, ದಾನ, ಯೋಗ – ಇವುಗಳ ಸಾರ ನೀನೇ ಆಗಿರುವೆ. ಸಕಲ ಜಗತ್ತನ್ನು ಆವರಿಸುವ ನೀನು ಜಗನ್ಮಯಿ. ಎಲ್ಲದರಲ್ಲೂ ವ್ಯಾಪಿಸಿಕೊಂಡಿರುವ ಹೇ ಜಗದ್ಧಾತ್ರಿ! ನಿನಗೆ ನಮಸ್ಕಾರ

ದಯಾರೂಪೇ ದಯಾದೃಷ್ಟೇ ದಯಾರ್ದ್ರೇ ದುಃಖಮೋಚನೀ |
ಸರ್ವಾಪದಹಾರಿಕೇ ದುರ್ಗೇ ನಮೋSಸ್ತು ತೇ || 5 ||
ಅರ್ಥ : ಹೇ ದುರ್ಗೆ! ನೀನು ದಯಾಸ್ವರೂಪಳೂ ದಯಾದೃಷ್ಟಿ ಹೊಂದಿದವಳೂ ದುಃಖನಾಶ ಮಾಡುವವಳೂ, ಎಲ್ಲ ಬಗೆಯ ಆಪತ್ತುಗಳಿಂದ ರಕ್ಷಿಸುವವಳೂ ಆಗಿರುವೆ. ಹೇ ಜಗದ್ಧಾತ್ರಿ! ನಿನಗೆ ನಮಸ್ಕಾರ.

1 Comment

Leave a Reply