ಜೀವನ ಪಾಠ ಮಾಡುವ ನೇರಳೆಹಣ್ಣಿನ ಕಥೆ: ಮಹಾಭಾರತದಿಂದ

ವ್ಯಾಸಭಾರತದಲ್ಲಿಲ್ಲದ ಅನೇಕ ಕಥೆಗಳು ಕುಮಾರವ್ಯಾಸನ ಭಾರತದಲ್ಲಿವೆ. ಅದರಲ್ಲಿ ಅರಣ್ಯಪರ್ವದ ನೇರಳೆ ಹಣ್ಣಿನ ಕಥೆಯೂ ಒಂದು….

ಪಾಂಡವರು ವನವಾಸದಲ್ಲಿದ್ದ ಕಾಲದಲ್ಲಿ ಜೇಷ್ಠಮಾಸ ಬಂದಿತು. ಆಗ ದ್ರೌಪದಿಗೆ ಏನಾದರೂ ದಾನ ಮಾಡಬೇಕೆನ್ನಿಸಿತು. ಆ ಮಾಸದಲ್ಲಿ ನೇರಳೆ ಹಣ್ಣಿನ ದಾನ ಶ್ರೇಷ್ಠ ಎಂದು ಋಷಿಗಳೊಬ್ಬರು ಹೇಳಿದರು. ಹಾಗಾದರೆ ಒಂದಷ್ಟು ನೇರಳೆ ಹಣ್ಣುಗಳನ್ನು ತಂದುಕೊಡಬೇಕೆಂದು ಭೀಮಸೇನನಿಗೆ ಕೇಳಿಕೊಂಡಳು. ಆಯ್ತು ಎಂದು ಆತ ನೇರಳೆ ಹಣ್ಣು ಹುಡುಕಲು ನಡೆದ.

ಹೀಗೆ ಹುಡುಕುತ್ತ ಕಣ್ವರ ಆಶ್ರಮದ ಹತ್ತಿರ ಒಂದು ನೇರಳೆ ಮರವನ್ನು ಕಂಡ. ಹಣ್ಣುಗಳು ಸುರಿಯಬೇಕಾಗಿದ್ದ ಕಾಲದಲ್ಲಿ ಆ ಮರದಲ್ಲಿ ಒಂದೇ ಹಣ್ಣು ಆಗಿದೆ! ಅದೂ ಹಲಸಿನ ಹಣ್ಣಿನಷ್ಟು ದೊಡ್ಡದು! ಭೀಮ ಅದುವರೆಗೂ ಅಂಥ ಹಣ್ಣನ್ನೇ ಕಂಡಿದ್ದಿಲ್ಲ. ದಾನಕ್ಕೆ ಇದೇ ಸರಿಯಾದ ಫಲವೆಂದು ಅದನ್ನು ಕಿತ್ತುಕೊಂಡು ಬಂದ. ಎಲ್ಲರೂ ಅದನ್ನು ಕಂಡು ಆಶ್ಚರ್ಯಪಟ್ಟರು. ಧರ್ಮರಾಜ ಈ ಹಣ್ಣಿನ ವಿಶೇಷವೇನು ಎಂದು ತ್ರಿಕಾಲಜ್ಞಾನಿಯಾದ ಸಹದೇವನನ್ನು ಕೇಳಿದ. ಆತ ಹೇಳಿದ, ಅಣ್ಣಾ, ನೀನು ಈ ಹಣ್ಣನ್ನು ತಂದು ತಪ್ಪು ಮಾಡಿದ್ದೀಯಾ. ಇದು ಕೇವಲ ಮಹರ್ಷಿ ಕಣ್ವರಿಗಾಗಿ ಸೃಷ್ಟಿಯಾದ ಹಣ್ಣು. ಅವರು ಇಡೀ ವರ್ಷದಲ್ಲಿ ತಿನ್ನುವುದು ಇದನ್ನು ಮಾತ್ರ. ನಂತರ ಮತ್ತೆ ಒಂದು ವರ್ಷ ಧ್ಯಾನದಲ್ಲಿರುತ್ತಾರೆ. ಈಗ ಅವರು ಧ್ಯಾನವನ್ನು ಮುರಿದು ಹಣ್ಣು ತಿನ್ನಲು ಎಚ್ಚರಗೊಳ್ಳುವ ಸಮಯ. ಅವರಿಗೆ ತಿನ್ನಲು ಹಣ್ಣು ಸಿಗದಿದ್ದರೆ ಮತ್ತೊಂದು ವರ್ಷ ಉಪವಾಸ. ಹಣ್ಣು ಕಾಣದೇ ಅವರು ಶಾಪ ನೀಡಬಹುದು. ಅವರು ಎಚ್ಚರಗೊಳ್ಳುವ ಮೊದಲೇ ಇದನ್ನು ಮರಕ್ಕೆ ಅಂಟಿಸಿಬಿಡಬೇಕು. ಇಲ್ಲವಾದರೆ ಆಪತ್ತು ತಪ್ಪಿದ್ದಲ್ಲ .

ಕಿತ್ತಿದ್ದ ಹಣ್ಣನ್ನು ಮರಕ್ಕೆ ಜೋಡಿಸುವುದು ಹೇಗೆ? ಸಮಸ್ಯೆ ಬಂದಾಗಲೆಲ್ಲ ಪರಿಹಾರಕನಾದ ಶ್ರೀಕಷ್ಣನೇ ತಾನೇ ದಾರಿತೋರುವವನು? ಅವನೇ ಓಡಿಬಂದ. ಅವನ ಪರಿಹಾರ ಮಾರ್ಗಗಳು ತುಂಬ ಅಪರೂಪವಾದವು. ಆತ ಎಲ್ಲರನ್ನೂ ಕೂಡ್ರಿಸಿಕೊಂಡು ಹೇಳಿದ, ನೀವೆಲ್ಲರೂ ಒಬ್ಬೊಬ್ಬರಾಗಿ ನಿಮ್ಮ ಮನದಾಳದ ಅತ್ಯಂತ ಪ್ರಮುಖ ಚಿಂತನೆಯನ್ನು ನನಗೆ ತಿಳಿಸಬೇಕು. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಿಮಗೆ ಮಾತ್ರ ತಿಳಿದಿರಬೇಕು. ಹಾಗೆ ಹೇಳಿದಾಗ ಹಣ್ಣು ನೆಲದಿಂದ ಹಂತ ಹಂತವಾಗಿ ಮೇಲೆದ್ದು ಮರಕ್ಕೆ ಸೇರಿಕೊಳ್ಳುತ್ತದೆ .

ಮೊದಲು ಧರ್ಮರಾಜ ಬಂದ. ಧರ್ಮವೇ ನನ್ನ ಜೀವದುಸಿರು. ಅದು ಬಿಟ್ಟು ಬೇರೆ ಭಾವವಿಲ್ಲವೆಂದ. ಹಣ್ಣು ನೆಲಬಿಟ್ಟು ಒಂದಡಿ ಮೇಲೇರಿತು. ಭೀಮ, ನನಗೆ ಅಭಿಮಾನವೇ ಮುಖ್ಯ. ವಂಶದ ಮೇಲೆ ಮತ್ತು ನಿನ್ನ ಮೇಲೆ ನನ್ನ ಅಭಿಮಾನ ಅಳತೆಗೆ ಮೀರಿದ್ದು ಎಂದ. ಹಣ್ಣು ಮತ್ತೆ ಒಂದಡಿ ಮೇಲೆ ಸಾಗಿತು. ಅರ್ಜುನ, ದೇವಾ, ನಿನ್ನ ಸಾಮೀಪ್ಯವೇ ನನಗೆ ಮೋಕ್ಷ ಎಂದ. ಹಣ್ಣು ಮತ್ತಷ್ಟು ಮೇಲೇರಿತು. ನಕುಲ ತನ್ನ ಜೀವನದ ಉದ್ದೇಶವೇ ಸತ್ಯ ಮತ್ತು ಸತ್ಯಪಾಲನೆ ಎಂದ. ಹಣ್ಣು ಮತ್ತೆ ತೊಟ್ಟು ಸೇರಲು ಎರಡಡಿ ಮಾತ್ರ ಉಳಿಯಿತು. ಸಹದೇವ ತನ್ನ ಮೂಲ ಸ್ವಭಾವ ಕೇವಲ ಜ್ಞಾನ, ದಯೆ ಮತ್ತು ಶಾಂತಿ ಎಂದ. ತೊಟ್ಟಿಗೆ ಹಣ್ಣು ಅಂಟಲು ಕೇವಲ ಒಂದಡಿ ಉಳಿದಿತ್ತು. ಆಗ ಬಂದಳು ದ್ರೌಪದಿ. ಕಷ್ಣನ ಕಾಲಿಗೆರಗಿ ತನ್ನ ಕಣ್ಣೀರಿನಿಂದ ಅವನ ಪಾದ ತೊಳೆದಳು, ಪ್ರಭೂ, ನಿನಗೆ ಗೊತ್ತಿಲ್ಲದ ವಿಷಯ ಯಾವುದಿದೆ? ಆದರೂ ಹೇಳಿಸಿ ನನ್ನ ಮನಸ್ಸನ್ನು ಶುಚಿಗೊಳಿಸಬಯಸಿದ್ದೀಯಾ? ಹೇಳುತ್ತೇನೆ ಕೇಳು. ನಾನು ಮನುಷ್ಯ ದೇಹದಿಂದ ಬಂದವಳಲ್ಲ, ಅಗ್ನಿಕುಂಡದಿಂದ ಎದ್ದು ಬಂದವಳು. ಆದ್ದರಿಂದ ಸಾಮಾನ್ಯ ಮಹಿಳೆಯರಿಗಿರುವ ದೈಹಿಕ ದೌರ್ಬಲ್ಯಗಳು ನನಗಿಲ್ಲ. ನನ್ನನ್ನು ಗೆದ್ದವನು ಅರ್ಜುನ ಆದರೂ ವಿಧಿಯ ಲೀಲೆಯಂತೆ ಐವರನ್ನು ಮದುವೆಯಾಗಬೇಕಾಯಿತು. ಬ್ರಹ್ಮನ ವರದಂತೆ ನಾನು ಒಬ್ಬೊಬ್ಬರೊಡನೆ ಸೇರಿದಾಗ ನನ್ನಲ್ಲಿದ್ದ ಒಬ್ಬ ದೇವತೆ ಜಾಗ್ರತಳಾಗುತ್ತಿದ್ದಳು. ನನ್ನೊಳಗಿದ್ದ ಶಚಿದೇವಿಗೆ ಅರ್ಜುನ ಪತಿಯಾದ, ಶ್ಯಾಮಲೆಗೆ ಧರ್ಮರಾಜ, ಭಾರತೀದೇವಿಗೆ ಭೀಮಸೇನ, ಉಷಾದೇವಿಗೆ ನಕುಲಸಹದೇವರು ಜೊತೆಯಾದರು. ಆದರೆ ನನ್ನಲ್ಲಿದ್ದ ಪಾರ್ವತಿಯ ಅಂಶಕ್ಕೆ ಪತಿ ಯಾರಾದರೂ ಇದ್ದರೆ ಚೆನ್ನಾಗಿತ್ತು ಎನ್ನಿಸಿದ್ದುಂಟು. ನನಗೆ ಐವರು ಪತಿಗಳಿದ್ದಾರೆ. ಆದರೆ ಮನಸ್ಸಿನಲ್ಲಿ ಆರು ಜನರಿದ್ದಾರೆ ಏನು ಮಾಡಲಿ? ಎಂದಳು. ಥಟ್ಟನೇ ಹಣ್ಣು ತೊಟ್ಟು ಸೇರಿತು.

ಇದು ಒಂದು ಉಪಕಥೆ. ಆದರೆ ಅದರ ಹಿಂದಿನ ಚಿಂತನೆ ದೊಡ್ಡದು. ಜೀವನದ ಉತ್ಕಟ ಕ್ಷಣಗಳಲ್ಲಿ ನಮ್ಮ ಆಂತರ್ಯವನ್ನು ಬಗೆದು ನೋಡುವುದು ಒಳ್ಳೆಯದು. ನಮ್ಮ ಜೊತೆಗೇ ಇರುವವರಿಗೆ ತಿಳಿಯದಂತಹ, ನಮ್ಮ ಗಮನದಿಂದಲೇ ಮರೆಯಾಗಿ ಹದಯದ ಮೂಲೆಯಲ್ಲಿ ಅವುಚಿ ಕುಳಿತಿರುವ ಕೆಲವು ಅಗಮ್ಯ ವಿಷಯಗಳಿವೆ. ಅವನ್ನು ಆಗಾಗ ಬರಿದು ಮಾಡಿದಾಗ ಚೈತನ್ಯ ಶುದ್ಧಿಯಾಗಿ ನಡತೆ ಪುಟವಿಟ್ಟ ಚಿನ್ನದಂತಾಗುತ್ತದೆ.

(ಓದುಗರು ಕಳಿಸಿದ ಕಥೆ)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.