4 ಬಗೆಯ ಯಜ್ಞಗಳು ಮತ್ತು ವಿವರಣೆ

ಮೊದಲನೆಯದ್ದು ಶಾರೀರಿಕ ವಿಧಿವಿಧಾನಗಳಿಂದ ಕೂಡಿರುತ್ತದೆ.  ಎರಡನೆಯದು ವಾಕ್ಕಿಗೆ ಕೆಲಸ ಕೊಡುತ್ತದೆ. ಮೂರನೆಯದ್ದು ಕೂಡ ವಾಕ್ಕಿಗೆ ಸಂಬಧಿಸಿದ್ದಾಗಿದೆ. ವಾಚಿಕ ಜಪ ಮತ್ತು ಉಪಾಂಶು ಜಪ ಇವೆರಡೂ ವಾಕ್ ಇಂದ್ರಿಯದ ಮೂಲಕವೇ ನಡೆಯುವಂಥವುಗಳು. ನಾಲ್ಕನೆಯದ್ದು ಮಾನಸ ಯಜ್ಞ…  

ಆಧ್ಯಾತ್ಮಿಕ ಮಾರ್ಗದಲ್ಲಿರುವವರನ್ನು  ನಾಲ್ಕು ವಿಭಾಗಗಳಲ್ಲಿ ವಿಂಗಡಿಸಬಹುದು.  ಆಸ್ತಿಕರು, ಭಗವದ್ಭಕ್ತಿ ಪರಾಯಣರು, ಧರ್ಮ ಕಾರ್ಯ ತತ್ಪರರು ಹಾಗೂ ತತ್ವ ಜಿಜ್ಞಾಸುಗಳು. ದೇವರ ಅಸ್ತಿತ್ವವನ್ನು ನಂಬಿ ತಮ್ಮ ಕಷ್ಟಗಳಿಗೆ ಪರಿಹಾರ ನೀಡುವವನು ಅವನೇ ಎಂಬ ಭಾವನೆಯಿಂದ ಉಪಾಸನೆಗಳನ್ನು  ಮಾಡುವವರು  ಆಸ್ತಿಕರು. ಇದು ಭಗವಂತನ ಕಡೆಗಿನ ಮಾರ್ಗದ ಮೊಟ್ಟ ಮೊದಲ ಹೆಜ್ಜೆ. ಈ ಮೊದಲ ಹೆಜ್ಜೆಯಲ್ಲೇ ಜೀವನದ ಆಯುಷ್ಯವನ್ನು ಸಂಪೂರ್ಣ ಕಳೆದುಬಿಡುವವರ ಸಂಖ್ಯೆ ಹೆಚ್ಚು. ಇನ್ನು ಭಗವತ್ಸ್ವರೂಪವನ್ನು ತಿಳಿದು ಭಕ್ತಿಯ ನಿಜಸ್ವರೂಪ ತಿಳಿದು ಭಗವಂತನಿಗೆ ಶರಣಾಗುವವರು  ಭಗವದ್ ಭಕ್ತಿ ಪರಾಯಣರು  ಅಥವಾ ಭಾಗವತರು ಎಂದು ಕರೆಯಲ್ಪಡುತ್ತಾರೆ. ಇಂಥವರ ಸಂಖ್ಯೆ ಅತೀ ವಿರಳ. ಉಪಾಸನೆಯ ವಿಧಾನಗಳ ಅನುಸರಣೆ  ಮತ್ತು ಭಕ್ತಿಯನ್ನು ಹೊಂದಿರುವುದು ಮಾತ್ರವಲ್ಲದೇ ವಿಧಿ-ನಿಷೇಧಗಳಿಂದ ಕೂಡಿದ ಧರ್ಮ -ಕರ್ಮ ತಿಳಿದು  ವಿಧಿಪೂರ್ವಕವಾಗಿ ಸ್ವಧರ್ಮ ಸ್ವಕರ್ಮಗಳನ್ನ ಆಚರಿಸುವವರು ಅಥವಾ  ಧರ್ಮ ಬದ್ಧ ಜೀವನವನ್ನು ನಡೆಸುವವರು ಧರ್ಮಕಾರ್ಯ ತತ್ಪರರು ಅಥವಾ ಧಾರ್ಮಿಕರು.

ಈ ಮೂರೂ ಹಂತಗಳನ್ನು ಕ್ರಮವಾಗಿ ದಾಟಿಕೊಂಡು ಬಂದಾಗ  ತತ್ವಜಿಜ್ಞಾಸೆ  ಮಾಡುವ ಹಂತಕ್ಕೆ ತಲುಪುವುದು ಸ್ವಾಭಾವಿಕ. ಅಂಥವರು ತತ್ವ ಜಿಜ್ಞಾಸುಗಳು.  ಮೊದಲಿನ ಮೂರೂ ಹಂತಗಳಿಗೆ ಒಳಗಾಗದೇ  ನೇರವಾಗಿ ತತ್ವ ಜಿಜ್ಞಾಸೆಗೆ ತೊಡಗುವವರು  ಅಪರೂಪಕ್ಕೆ ಕಂಡುಬರುತ್ತಾರೆ. ಅಂಥವರು ತಮ್ಮ ಪೂರ್ವ ಜನ್ಮದಲ್ಲಿ ಅರ್ಧಕ್ಕೆ ನಿಂತ ತಮ್ಮ ಸಾಧನೆಯ ಮುಂದುವರಿಕೆಯನ್ನು ಮಾಡುತ್ತಿರುತ್ತಾರೆ. ಅಂತಹ ಅಪರೂಪದ ವ್ಯಕ್ತಿಗಳಿಗೆ ಮಾತ್ರ ಅದು ಸಾಧ್ಯವಾಗುತ್ತದೆ. ಆದ್ದರಿಂದ ಅಂಥವರನ್ನು ಉದಾಹರಣೆಯಾಗಿ ಇಟ್ಟುಕೊಂಡು  ಎಲ್ಲರೂ ಆ ಹಂತಕ್ಕೆ ನೇರವಾಗಿ ನೆಗೆಯಲು ಪ್ರಯತ್ನಿಸಿದರೆ ಮುಗ್ಗರಿಸಿ ಬೀಳುವ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ ಕ್ರಮವಾಗಿ  ಸಾಧನಾಪಥವನ್ನು ಭಕ್ತಿ-ಧರ್ಮಗಳ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವುದು ಸೂಕ್ತ ಮತ್ತು ಸುಲಭ.  

ನಾಲ್ಕೂ ಹಂತಗಳಲ್ಲಿ ಇರುವ  ಈ ಎಲ್ಲ ಸಾಧಕರೂ  ಯಜ್ಞಗಳ ಮೂಲಕ ಸಾಧನೆಯನ್ನು ಕೈಗೊಳ್ಳುತ್ತಾರೆ. ಅಂತಹ ಯಜ್ಞವು  ನಾಲ್ಕು ಪ್ರಕಾರದ್ದಾಗಿದೆ. ೧. ವಿಧಿ ಯಜ್ಞ, ೨. ಜಪಯಜ್ಞ, ೩. ಉಪಾಂಶು  ಯಜ್ಞ  ೪. ಮಾನಸ ಯಜ್ಞ 

ಈ ನಾಲ್ಕರಲ್ಲಿ ಮೊದಲನೆಯದ್ದು ಶಾರೀರಿಕ ವಿಧಿವಿಧಾನಗಳಿಂದ ಕೂಡಿರುತ್ತದೆ.  ಎರಡನೆಯದು ವಾಕ್ಕಿಗೆ ಕೆಲಸ ಕೊಡುತ್ತದೆ. ಮೂರನೆಯದ್ದು ಕೂಡ ವಾಕ್ಕಿಗೆ ಸಂಬಧಿಸಿದ್ದಾಗಿದೆ. ವಾಚಿಕ ಜಪ ಮತ್ತು ಉಪಾಂಶು ಜಪ ಇವೆರಡೂ ವಾಕ್ ಇಂದ್ರಿಯದ ಮೂಲಕವೇ ನಡೆಯುವಂಥವುಗಳು. ನಾಲ್ಕನೆಯದ್ದು ಮಾನಸ ಯಜ್ಞ. ಅದು ಮಾನಸಿಕವಾಗಿ ಮಾಡುವಂಥದ್ದು ಆಗಿದ್ದು ಅದೇ ಎಲ್ಲಕ್ಕಿಂತ ಕಷ್ಟಕರ ಹಾಗೂ ಶ್ರೇಷ್ಠ ಅಂತ ಗೀತೆಯಲ್ಲಿ ಕೃಷ್ಣನು ವಿವರಿಸಿದ್ದಾನೆ.

ನಾವು ಕರ್ತೃ. ನಮಗಿರುವುದು ಕರಣ ಅಂದರೆ ಉಪಕರಣ. ಆ ಉಪಕರಣದ  ಮೂಲಕ ನಾವು ಮಾಡುವುದು ಕ್ರಿಯೆ. ಆ ಕ್ರಿಯೆಯಿಂದ ಉಂಟಾಗುವುದು ಫಲ. ಆ ಫಲವನ್ನು ಅನುಭವಿಸುವುದು ಮತ್ತೆ ನಾವೇ ಆಗಿರುತ್ತೇವೆ. ಹೀಗೆ ಕರ್ತೃವಿನಿಂದ  ಮತ್ತೆ ಕರ್ತೃವಿಗೆ ಬಂದು ತಲುಪುವ ಈ ಪ್ರಯಾಣ  ಚಕ್ರವೇ ಜೀವನ.  ಕರ್ತಾ, ಕರಣ, ಕಾರ್ಯ ಮತ್ತು ಫಲ. ನಾವು ಏನು ಮಾಡಿದರೂ ನಮ್ಮ ಕರಣಗಳ ಮೂಲಕ ಮಾಡುತ್ತೇವೆ. ನಮಗೆ ಇರುವುದು  ಮೂರು  ಕರಣಗಳು. ಕರಣ ಅಂದರೆ ಉಪಕರಣ ಅಥವಾ ಸಾಧನ. ನಮಗೆ ಅಗತ್ಯವಾದ ಉಪಕರಣ ಅಥವಾ ಸಾಧನ ಇಲ್ಲದೇ ಇದ್ದರೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಸಾಧನವಿಲ್ಲದೇ  ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅಂತಹ ಕರಣಗಳು ಮೂರು ಇವೆ. ಅವುಗಳನ್ನೇ ತ್ರಿಕರಣ ಅಂತ ಕರೀತಾರೆ. ಮನೋ- ವಾಕ್- ಕಾಯ.  ಮನಸ್ಸು, ವಾಕ್ಕು  ಮತ್ತು ಶರೀರ. 

ಈ ತ್ರಿಕರಣಗಳಲ್ಲಿ  ಕಾಯಕ್ಕಿಂತ ವಾಕ್ಕು ಪ್ರಶಸ್ತ. ವಾಕ್ಕಿಗಿಂತ ಮನಸ್ಸು ಉತ್ತಮ.  ಮನಸ್ಸು ಶುದ್ಧವಾದಾಗಲೇ ವಾಕ್ಕು ಶುದ್ಧವಾಗುತ್ತದೆ. ವಾಕ್ ಶುದ್ಧಿ ಮತ್ತು ಚಿತ್ತ ಶುದ್ಧಿ  ಇವೆರಡೂ ಸಂಭವಿಸಿದ ಮೇಲೆ ಕಾಯ ಶುದ್ಧಿ ತನ್ನಷ್ಟಕ್ಕೆ ತಾನೇ ಸಂಭವಿಸುತ್ತದೆ.  ಆದರೆ ಎಲ್ಲರಿಗೂ ಮನಸ್ಸು ಶುದ್ಧಿ ಮಾಡಿಕೊಳ್ಳುವುದು ಅಷ್ಟು ಸುಕರವಾಗಿ ಸಾಧ್ಯವಿಲ್ಲವಾದ ಕಾರಣ  ತದ್ವಿರುದ್ಧ ಕ್ರಮದಲ್ಲಿ ಶುದ್ಧತೆಯನ್ನು ಮಾಡಿಕೊಂಡು ಬರುತ್ತೇವೆ. ಅಂದರೆ ಮೊದಲು ಆಹಾರ-ವಿಹಾರ,  ಶೌಚ-ಅಶೌಚಾದಿ  ನಿಯಮಗಳ ಮೂಲಕ  ದೈಹಿಕ ಶುದ್ಧಿ, ಉಪಾಸನಾದಿ ವಿಧಾನಗಳ ಮೂಲಕ   ಹಾಗೂ ಸತ್ಯವಚನದ ಮೂಲಕ ವಾಕ್ ಶುದ್ಧಿ, ಧರ್ಮ ಕರ್ಮಗಳ ಮೂಲಕ  ಚಿತ್ತ ಶುದ್ಧಿ   ಮಾಡಿಕೊಂಡು ತನ್ಮೂಲಕ ಮನಸ್ಸಿನ ಶುದ್ಧಿಯನ್ನು ಸಾಧಿಸಿಕೊಳ್ಳುವ ನಿಟ್ಟಿನಲ್ಲಿ ಸಂಸ್ಕೃತಿಯ ನಿರ್ಮಾಣವಾಗಿದೆ.  ತ್ರಿಕರಣ ಶುದ್ಧಿಯಲ್ಲಿ ನಸ್ಸಿನ ಶುದ್ಧಿ ಸರ್ವೋತ್ಕೃಷ್ಟವಾಗಿದೆ.

ಜಗತ್ತಿನ ಮೊಟ್ಟ ಮೊದಲ ವ್ಯಕ್ತಿಯ ಹೆಸರು ಮನು. ಮನನ ಮಾಡುವ ಸ್ವಭಾವ ಉಳ್ಳವನು ಅಥವಾ ಮನಸ್ಸನ್ನು ಹೊಂದಿದವನು ಅನ್ನುವ ಕಾರಣಕ್ಕೆ ಅವನಿಗೆ ಮನು ಎಂಬ ಹೆಸರು. ಆ ಮನುವಿನ ಸಂತಾನವಾದ್ದರಿಂದಲೇ ನಮಗೆ  ಮಾನವರು ಎಂಬ ಹೆಸರು ಇದೆ. ಮನುಜ ಅಂದರೆ ಮನುವಿನಿನಂದ ಹುಟ್ಟಿದವರು, ಮಾನವ ಅಂದರೆ ಮನಸ್ಸು ಉಳ್ಳವನು. ಮನುಷ್ಯ ಎಂದರೆ ಮನಸ್ಸನ್ನು ಉಪಯೋಗಿಸಬಲ್ಲವನು ಎಂಬ ಅರ್ಥ.  “ಮನುಷ್ಯ”, “ಮಾನವ” ಹಾಗೂ “ಮನುಜ” ಎಂಬ ಈ ಮೂರೂ ಹೆಸರುಗಳು ಮನುಸ್ಸು ಇದೆ  ಹಾಗೂ ಮನನ ಮಾಡುವ ಸ್ವಭಾವವಿದೆ ಎಂಬ ಕಾರಣಕ್ಕಾಗಿಯೇ ಬಂದಿವೆ. ಮನನ ಅಂದರೆ ಆಲೋಚನೆ.. ಭಾವಿಸುವಿಕೆ. ಅದು ಜಗತ್ತಿನ ಯಾವ ವಿಷಯವಾದರೂ ಸರಿ. ಆ ಆಲೋಚನೆಯ ಪ್ರಯಾಣಕ್ಕೆ ಸಾಧನಗಳು ಬೇಕಾಗುವುದಿಲ್ಲ. ಅದು ಸ್ವಯಂಸಿದ್ಧ ಸಾಧನ.  ಪ್ರಪಂಚದ ಬಗ್ಗೆಯಾಗಿರಬಹುದು ಅಥವಾ ಭಗವಂತನ ಬಗ್ಗೆಯಾಗಿರಬಹುದು. ಇಹ ಮತ್ತು ಪರ ಎರಡಕ್ಕೂ ಮೂಲ ಕಾರಣ ಮನಸ್ಸೇ ಆಗಿದೆ.  ಅಂತಹ ಆ ಮನಸ್ಸೆಂಬ ಆಯುಧವನ್ನು ಉಪಯೋಗಿಸುವ ವಿಧಾನಗಳನ್ನು ಕಲಿತರೆ ಅದರಿಂದಲೇ ಎಲ್ಲವನ್ನೂ ಸಾಧಿಸಬಹುದು.  ಆದ್ದರಿಂದಲೇ ನಾಲ್ಕೂ ಪ್ರಕಾರದ ಯಜ್ಞಗಳಲ್ಲಿ ಮಾನಸ ಯಜ್ಞವೇ ಅತ್ಯುನ್ನತವಾದದ್ದು. ಆ ಮಾನಸ ಯಜ್ಞಕ್ಕೇ ಇನ್ನೊಂದು ಹೆಸರು ಜ್ಞಾನಯಜ್ಞ.

ಯಜ್ಞದ ಎಲ್ಲ ಪ್ರಕಾರಗಳನ್ನು ವಿಶದವಾಗಿ ವಿವರಿಸಿದ ನಂತರ ಭಗದ್ಗೀತೆಯು “ಶ್ರೇಯಾನ್ ದ್ರವ್ಯಮಯಾತ್ ಯಜ್ಞಾತ್ ಜ್ಞಾನಯಜ್ಞಃ ಪರಂ ತಪ” ಎಂಬ ಒಂದು ಮಾತನ್ನು ಕೊನೆಯಲ್ಲಿ ಹೇಳುತ್ತದೆ. ನಾನು ಈ ವರೆಗೆ ಅನೇಕ ಯಜ್ಞಪ್ರಕಾರಗಳ ಬಗ್ಗೆ ಹೇಳಿರಬಹುದು. ಎಲ್ಲ ಯಜ್ಞಗಳೂ ಫಲವನ್ನು ಕೊಡತಕ್ಕದ್ದಾಗಿವೆ. ದ್ರವ್ಯರೂಪದ ಎಲ್ಲ ಯಜ್ಞಗಳೂ ದ್ರವ್ಯಲಾಭವನ್ನೇ ಕೊಡುತ್ತವೆ. ಆದರೆ ಜ್ಞಾನಯಜ್ಞವು ಮಾತ್ರ ದ್ರವ್ಯದಿಂದ ಕೂಡಿಲ್ಲ ಹಾಗೂ ದ್ರವ್ಯದಿಂದ ಪಡೆಯಲು ಅಸಾಧ್ಯವಾದ ಸಾಯುಜ್ಯವನ್ನು ಅದು ನೀಡುತ್ತದೆ ಎಂದು ಭಗವಂತ ಹೇಳಿದ್ದಾನೆ.

ಯಜ್ಞಕ್ಕಾಗ್ಗಿ ನಾವು ಕರ್ಮಗಳನ್ನು ಮಾಡಿದರೆ ಅದು ನಮ್ಮನ್ನು ಬಂಧಿಸುವುದಿಲ್ಲ. ಆದರೆ ಯಜ್ಞಕ್ಕಾಗಿ ಅಲ್ಲದೇ ಅದರಿಂದ ಬರುವ ಫಲಕ್ಕಾಗಿ ನಾವು ಕರ್ಮಗಳನ್ನು ಮಾಡಿದರೆ ಆ ಫಲವೇ ನಮ್ಮನ್ನು ಬಂಧಿಸುತ್ತದೆ. ಅಂತಲೂ ಗೀತೆ ಹೇಳುತ್ತದೆ.  ಹಾಗಾದರೆ ಈ “ಯಜ್ಞ” ಎಂಬ ಶಬ್ದಕ್ಕೆ ಅರ್ಥವೇನು ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಅದಕ್ಕೆ ಶಂಕರರು ಸೊಗಸಾಗಿ ಉತ್ತರಿಸುತ್ತಾರೆ. “ಯಜ್ಞೋ ವೈ ವಿಷ್ಣುಃ, ಈಶ್ವರಾರ್ಪಣ ಬುಧ್ಯಾ ಅನುಷ್ಠೀಯಮಾನಂ ಕರ್ಮ: ಫಲಂ ನ ಉತ್ಪಾದಯತಿ, ಸಮಗ್ರಂ ಪ್ರವಿಲೀಯತೆ”  ವಿಷ್ಣವೇ  ಅಂದರೆ ಎಲ್ಲೆಡೆ ವ್ಯಾಪಿಸಿರುವ ಭಗವತ್ ತತ್ವವೇ ಯಜ್ಞವಾಗಿದೆ.

ಈಶ್ವರಾರ್ಪಣ ಬುದ್ಧಿಯಿಂದ ಫಲದ ಅಪೇಕ್ಷೆ ಇಲ್ಲದೇ ಮಾಡುವ ಯಾವ ಕೆಲಸವೂ ಫಲದ ಭಾರವನ್ನು ಕರ್ತೃವಿನ ಮೇಲೆ ಹೊರಿಸುವುದಿಲ್ಲ. ಅದು ಸಮಗ್ರವಾಗಿ ಲಯವಾಗಿ ಹೋಗುತ್ತದೆ.  ಕರ್ಮ ಮತ್ತು ಕರ್ಮದ ಫಲದ ಲಯವಾಗಿ ಹೋದಾಗ ನಿಷ್ಕರ್ಮ ಉಂಟಾಗುತ್ತದೆ. ಅಂದರೆ ನೈಷ್ಕರ್ಮ್ಯ ಸಿದ್ಧಿ. ಆ ನೈಷ್ಕರ್ಮ್ಯವೇ ಮೋಕ್ಷಸ್ವರೂಪ. ಹೇಗೆಂದರೆ ನಾವು ಕೆಲಸಗಳನ್ನು ಮಾಡುತ್ತಿದ್ದರೂ ಅದರ ಕರ್ತೃತ್ವ ಮತ್ತು ಫಲಗಳನ್ನು ನಮ್ಮ ಮೇಲೆ ನಾವು ಆರೋಪಿಸಿಕೊಳ್ಳದೇ ಅವೆರಡೂ ಈಶ್ವರಿನಿಗೇ ಅರ್ಪಿತವೆಂಬ ಭಾವದಲ್ಲುಳಿದರೆ ಅದರ ಫಲ ನಮಗೆ ಅಂಟಿಕೊಳ್ಳುವುದಿಲ್ಲ. ಆ ಫಲದ ಅನುಭವಿಸುವಿಕೆಗಾಗಿ ಉಂಟಾಗುವ ಜನನ ಮರಣ ಚಕ್ರವು ಮುಂದುವರೆಯುವುದಿಲ್ಲ. ಈ ರೀತಿಯಾಗಿ ಮರಣಕ್ಕೂ ಮುನ್ನವೇ ನಮ್ಮ ಎಲ್ಲ ಕೆಲಸಕಾರ್ಯಗಳನ್ನು ಯಥಾಪ್ರಕಾರವಾಗಿ ಮಾಡಿಕೊಂಡು ಜೀವಿಸುತ್ತಲೇ ಮೋಕ್ಷದ ಅನುಭವ ಪಡೆಯಬಹುದಾಗಿದೆ. ಅದೇ ಜ್ಞಾನಯಜ್ಞವಾಗಿದೆ. 

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.