‘ಯಾವುದೂ ಕೆಸರಲ್ಲ…’ : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.6

ದೇಹದ ಮಾತು ಕೇಳುವವರಿಗಿಂತ, ಇಂದ್ರಿಯಗಳ ಮಾತು ಕೇಳದವರು, ಅವುಗಳನ್ನು ಹಿಂಸಿಸುವವರು ಅರಿವಿನ ನೆಲೆ ತಲುಪಲು ಹೆಚ್ಚು ಪರದಾಡುತ್ತಾರೆ  ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ

ಅಧ್ಯಾಯ 6.6 | Strive to no goals

ನೀವು ಒಂದು ನಿರ್ದಿಷ್ಟ ದಾರಿಯಲ್ಲಿ ಸಾಗುವುದು
ನಿಶ್ಚಿತವಾದ ಮೇಲೂ
ಇಂದ್ರಿಯಗಳ ಮತ್ತು ಹೊಳಹುಗಳ ಜಗತ್ತನ್ನು ಯಾವ ಕಾರಣಕ್ಕೂ ನಿರಾಕರಿಸಬೇಡಿ.

ಎರಡು ರೀತಿಯ ಜನರಿದ್ದಾರೆ.
ಒಂದು ರೀತಿಯವರು
ತಮ್ಮ ಇಂದ್ರಿಯಗಳೊಡನೆ ಸದಾ
ಯುದ್ಧದಲ್ಲಿ ನಿರತರು.
ದೇಹವನ್ನು ನಾನಾ ರೀತಿ ಹಿಂಸೆಗೆ ಗುರಿ ಮಾಡುತ್ತಾರೆ.
ಹೇಗೆಲ್ಲ, ಸುಖ ಪಡಬಾರದು, ರುಚಿ ನೋಡಬಾರದು
ಪ್ರೇಮ ಮಾಡಬಾರದು
ಎನ್ನುವುದರ ಬಗ್ಗೆ ಸದಾ ಪ್ರಯೋಗ ಮಾಡುತ್ತಾರೆ.
ಇವರು ಸ್ವಪೀಡಕರಾದರೂ
ವಿರಾಗಿಗಳೆಂದೇ ಪ್ರಸಿದ್ಧರು.
ಸಮಾಜದ ಕಣ್ಣಲ್ಲಿ ಗೌರವಾನ್ವಿತರು ಮತ್ತು
ಈ ಗೌರವದ ಆಮಿಷ ಕಾರಣವಾಗಿ
ಕಳವಳಕ್ಕೀಡಾದವರು.

ದೇಹದ ತಿಳುವಳಿಕೆ ಅಪಾರ.
ನೀವು ತಿನ್ನುವುದು ಒಂದು ಚೂರು ಹೆಚ್ಚಾದರೂ,
ತಿನ್ನುವುದ ನಿಲ್ಲಿಸುವಂತೆ
ದೇಹ ಸೂಚನೆ ನೀಡಲಾರಂಭಿಸುತ್ತದೆ.
ಬುದ್ಧಿ- ಮನಸ್ಸಿಗೆ ಈ ತಿಳುವಳಿಕೆ ಇಲ್ಲ.
ರುಚಿಯಾಗಿದೆ ತಿನ್ನು ಎಂದು
ಹುರಿದುಂಬಿಸುತ್ತಲೇ ಇರುತ್ತವೆ.

ದೇಹಕ್ಕೆ ಹೋಲಿಸಿದರೆ
ಬುದ್ಧಿ-ಮನಸ್ಸಿನ ತಿಳುವಳಿಕೆ ತೀರ ಕಡಿಮೆ.

ಬುದ್ಧಿ-ಮನಸ್ಸಿನ ಮಾತು ಕೇಳಿದರೆ
ಎಲ್ಲ ಇಂದ್ರಿಯಗಳ ವೈರ ಕಟ್ಟಿಕೊಂಡಂತೆ,
ಆಗ ಇಂದ್ರಿಯಗಳು ತಂದಿಡುವ
ಸಂಕಟ, ಆತಂಕ, ಬಿಕ್ಕಟ್ಟು, ನೋವು
ವರ್ಣಿಸಲಸದಳ.

ತಮಾಷೆ ನೋಡಿ;
ಮೊದಲು ರುಚಿಯಾಗಿದೆ
ತಿನ್ನು ಎನ್ನುವ ಬುದ್ಧಿ-ಮನಸ್ಸು,
ದೇಹ ಸೋತು ಪ್ರತಿರೋಧ ತೋರತೊಡಗಿದಾಗ,
ತಿನ್ನುವುದು ಒಳ್ಳೆಯದಲ್ಲ,
ಉಪವಾಸ ಮಾಡೆಂದು ಉಪದೇಶ ಹೇಳುತ್ತದೆ.
ಉಪವಾಸ ಕೂಡ ದೇಹಕ್ಕೆ ಅಪಾಯಕಾರಿ.
ಆದ್ದರಿಂದಲೇ ದೇಹದ ಮಾತು ಕೇಳಿ
ಆಗ ನೀವು ಕೊಂಚವೂ ಹೆಚ್ಚಿಗೆ ತಿನ್ನಲಾರಿರಿ
ಹಸಿವಿನಿಂದ ಕೂಡ ಬಳಲರಾರಿರಿ.

ತಾವೋ ಮಾಸ್ಟರ್ ನನ್ನು ಒಮ್ಮೆ ಕೇಳಲಾಯಿತು,
ನಿನ್ನ ಇಡೀ ಜೀವನದ ತಿಳುವಳಿಕೆಯ ಸಾರ ಏನು ?
ಅವನು ಉತ್ತರಿಸಿದ ;

“ ಹಸಿವೆಯಾದಾಗ ಊಟ ಮಾಡುವುದು
ನಿದ್ದೆ ಬಂದಾಗ ಮಲಗಿಕೊಳ್ಳುವುದು”

ದೇಹದ ಮಾತು ಕೇಳುವುದೆಂದರೆ
ತಾವೋ ಪಾಲಿಸಿದಂತೆ.

ನಿಮ್ಮ ಪ್ರಕೃತಿಯನ್ನು ದೇಹದ ತಿಳುವಳಿಕೆಯ
ದೇಖರೇಖಿಗೆ ಬಿಟ್ಟಾಗ,
ತನ್ನ ದೇಹ ಸ್ಥಿತಿಗೆ ಅನುಗುಣವಾಗಿ ಅದು
ಕೆಲವು ಆಹಾರಗಳನ್ನು ಬಯಸುವುದೂ ಇಲ್ಲ.

ಇದು ಕೇವಲ ಆಹಾರದ ವಿಷಯ ಅಲ್ಲ,
ಬದುಕಿನ ಪ್ರತಿಯೊಂದು ಪ್ರಕ್ರಿಯೆಗಳ ಬಗ್ಗೆ ಕೂಡ ನಿಜ.

ನಿಮ್ಮ ಲೈಂಗಿಕತೆ ಹಾದಿ ತಪ್ಪುವುದೇ
ದೇಹದ ಬೇಕು ಬೇಡಗಳನ್ನ ಕಡೆಗಣಿಸಿ
ಬುದ್ಧಿ – ಮನಸ್ಸು ನಿಮ್ಮ ಲೈಂಗಿಕತೆಯನ್ನು ನಿರ್ದೇಶಿಸತೊಡಗಿದಾಗ.

ಕೇವಲ 3 ತಿಂಗಳ ಮಟ್ಟಿಗಾದರೂ
ದೇಹದ ತಿಳುವಳಿಕೆಯಲ್ಲಿ
ಮೂಗು ತೂರಿಸಲು ಬುದ್ಧಿ-ಮನಸಿಗೆ ಅವಕಾಶ ನೀಡಬೇಡಿ.
ನೋಡಿ ಹೇಗೆ ಆರೋಗ್ಯ ಮತ್ತು ಖುಶಿ
ನಿಮ್ಮೊಳಗೆ ಮನೆ ಮಾಡುವವು.

ಹಾಗಂತ ಬುದ್ಧಿ-ಮನಸ್ಸು
ಕೇವಲ ಅಪಾಯಕಾರಿ ಅಂತಲ್ಲ.
ನಮ್ಮ ಹೊರಗಿನ ಎಲ್ಲ ವ್ಯವಹಾರಗಳು
ನಮ್ಮ ಸುತ್ತ ಇರುವ ಜನರೊಡನೆ ಸಂಪರ್ಕ,
ಕಾರ್ ಡ್ರೈವ್ ಮಾಡುವುದು,
ಟ್ರ್ಯಾಫಿಕ್ ನಿಯಮಗಳನ್ನು ಪಾಲಿಸುವುದು,
ಭವಿಷ್ಯಕ್ಕಾಗಿ ಪ್ಲಾನ್ , ಇಂಥ ಹಲವಾರು,
ಈ ಎಲ್ಲದರ ಜವಾಬ್ದಾರಿ ಬುದ್ಧಿ-ಮನಸ್ಸಿನದೇ.

ದೇಹದ ಮಾತು ಕೇಳುವವರಿಗಿಂತ,
ಇಂದ್ರಿಯಗಳ ಮಾತು ಕೇಳದವರು,
ಅವುಗಳನ್ನು ಹಿಂಸಿಸುವವರು
ಅರಿವಿನ ನೆಲೆ ತಲುಪಲು ಹೆಚ್ಚು ಪರದಾಡುತ್ತಾರೆ.

ದೇಹದ ಸಂಗೀತಕ್ಕೆ ಕಿವಿಗೊಡಿ,
ನೀವು ಇಲ್ಲಿರುವುದೇ
ಬದುಕು ನಿಮಗೆ ದಯಪಾಲಿಸಿರುವ
ಈ ಕ್ಷಣಗಳನ್ನು ಆನಂದದಿಂದ ಅನುಭವಿಸಲು,
ನೀವು ಸಂಪೂರ್ಣವಾಗಿ ಜೀವಂತ,
ಪ್ರಜ್ಞಾಪೂರ್ವಕ ಮತ್ತು
ಅಪಾರ.

ಜೀಸಸ್ ಒಂದು ದ್ವಂದ್ವಾತ್ಮಕ ಅನಿಸಬಲ್ಲ
ಮಾತು ಹೇಳುತ್ತಾನೆ.

“ ನೀವು ಸಾಕಷ್ಟು ಹೊಂದಿರುವಿರಾದರೆ,
ನಿಮಗೆ ಇನ್ನಷ್ಟು ಹೆಚ್ಚು ಕೊಡಲಾಗುವುದು,
ಮತ್ತು ನಿಮ್ಮ ಬಳಿ ಸಾಕಷ್ಟು ಇಲ್ಲವಾದರೆ
ನಿಮ್ಮ ಹತ್ತಿರ ಇರುವ ಎಲ್ಲವನ್ನೂ ವಾಪಸ್ ಪಡೆಯಲಾಗುವುದು “

ಇದು ಅಸಂಗತ, ಆ್ಯಂಟಿ ಕಮ್ಯುನಿಸ್ಟ್ ,
ಪ್ರತಿಗಾಮಿ ಅನಿಸಬಹುದು.

ಇದು ಸಾಮಾನ್ಯ ಅರ್ಥಶಾಸ್ತ್ರ ಅಲ್ಲ

ಕೇವಲ ಅವರು,
ಯಾರ ಬಳಿ ಸಾಕಷ್ಟಿದೆಯೋ
ಅವರಿಗೆ ಮಾತ್ರ ಇನ್ನಷ್ಟು ಒದಗಿಸಲಾಗುವುದು.
ಹಾಗೆಂದರೆ ಅವರು,
ಯಾರು ಹೆಚ್ಚು ಹೆಚ್ಚು ಆನಂದ ಹೊಂದುವರೋ,
ಆನಂದ ಇನ್ನಷ್ಟು ಇನ್ನಷ್ಟು ಅವರ ಪಾಲಾಗುವುದು.

ಬದುಕಿನ ಆನಂದವನ್ನು ಯಾರು
ಅನುಭವಿಸಲಾರರೋ
ಅವರಿಂದ ಇರುವ ಆನಂದವನ್ನೂ ಕಸಿದುಕೊಳ್ಳಲಾಗುವುದು.

ನೀವು ಹೆಚ್ಚು ಪ್ರೇಮಮಯಿ ಆದಂತೆಲ್ಲ
ಹೆಚ್ಚು ಹೆಚ್ಚು ಪ್ರೇಮ ನಿಮ್ಮದಾಗುವುದು.
ನೀವು ಹೆಚ್ಚು ಸಮಾಧಾನಿ ಆದಂತೆಲ್ಲ
ಹೆಚ್ಚು ಹೆಚ್ಚು ಸಮಾಧಾನ ನಿಮ್ಮದಾಗುವುದು.
ನೀವು ಹೆಚ್ಚು ಹಂಚಿದಂತೆಲ್ಲ
ಹಂಚಲು ಹೆಚ್ಚು ಹೆಚ್ಚು ನಿಮ್ಮನ್ನು ಸೇರುವುದು.

ಆದರೆ ನೀವು ಹಂಚದೇ ಇರುವಿರಾದರೆ,
ಪ್ರೇಮಿಸದೇ ಹೋದರೆ,
ನಿಮ್ಮಲ್ಲಿ ಈಗಾಗಲೇ ಇರುವುದರ
ಮಾಹಿತಿ ಕೂಡ ನಿಮಗೆ ಇಲ್ಲವಾಗುವುದು,
ಆಗ ನಿಮ್ಮ ಬಳಿ ಇರುವುದು ಕೂಡ
ನಿರುಪಯುಕ್ತವಾಗುವುದು.

ಇದು ಬದುಕಿನ ಅತ್ಯಂತ ಶ್ರೇಷ್ಠ ಅರ್ಥಶಾಸ್ತ್ರ.

ಈ ಬದುಕು ಈಗಾಗಲೇ ಅಪಾರ.
ಅಪರಿಮಿತ ಬದುಕಿನ ಬಗ್ಗೆ,
ಬದುಕಿನ ಚಿಕ್ಕ ಪುಟ್ಚ ಸಂಗತಿಗಳ ಬಗ್ಗೆ ಕೂಡ
ಉನ್ಮತ್ತರಾಗಿರಿ.
ಆಹಾರವೂ ದಿವ್ಯ ಸಂಸ್ಕಾರವಾಗಲಿ,
ಇನ್ನೊಬ್ಬರ ಕೈ ಕುಲುಕುವುದೂ ಪ್ರಾರ್ಥನೆಯಾಗಲಿ,
ಸುತ್ತಲಿನ ಜನರೊಡನೆಯ ಸಹವಾಸ
ಪರಮ ಆನಂದ ನೀಡಲಿ,
ಏಕೆಂದರೆ, ನಿಮಗೆ ಲಭ್ಯವಾಗಿರುವುದು
ಎಲ್ಲಿಯೂ, ಇನ್ನಾರಿಗೂ ಸಾಧ್ಯವಾಗಿಲ್ಲ.

ಸೋಸಾನ್ ಹೇಳುತ್ತಿದ್ದಾನೆ,

ನೀವು ಒಂದು ನಿರ್ಧಿಷ್ಟ ದಾರಿಯಲ್ಲಿ ಸಾಗುವುದು
ನಿಶ್ಚಿತವಾದ ಮೇಲೂ
ಇಂದ್ರಿಯಗಳ ಮತ್ತು ಹೊಳಹುಗಳ ಜಗತ್ತನ್ನು ಯಾವ ಕಾರಣಕ್ಕೂ ನಿರಾಕರಿಸಬೇಡಿ.

ಯಾವ ಕಾರಣಕ್ಕೂ ಇಂದ್ರಿಯಗಳ ಜಗತ್ತನ್ನ,
ಹೊಳಹು-ವಿಚಾರಗಳ ವಿಶ್ವವನ್ನ ಇಷ್ಟಪಡದೇ ಇರಬೇಡಿ.
ಈ ಎರಡು ಜಗತ್ತುಗಳೂ
ತಮ್ಮ ತಮ್ಮ ರೀತಿಯ
ಅತ್ಯಂತ ಸುಂದರ ಸಂವಿಧಾನಗಳು.

ಆಧುನಿಕ ಮನುಷ್ಯನ ಬಗ್ಗೆ
ಗುರ್ಜೀಫ್ ನ ಸಿದ್ಧಾಂತವೊಂದಿದೆ.
ಆಧುನಿಕ ಮನುಷ್ಯನಲ್ಲಿ
ಎಲ್ಲ ಶಕ್ತಿ ಕೇಂದ್ರಗಳು ಒಂದು ಇನ್ನೊಂದರಲ್ಲಿ
ಮಿಕ್ಸ್ಡ್ ಅಪ್ ಆಗಿವೆ.
ಅವುಗಳ ಶುದ್ಧತೆ ನಾಶವಾಗಿದೆ,
ಪ್ರತಿಯೊಂದೂ ಇನ್ನೊಂದರ ಕಾರ್ಯಕ್ಷೇತ್ರದಲ್ಲಿ
ಹಸ್ತಕ್ಷೇಪ ಮಾಡುತ್ತಿವೆ.

ಹೌದು ಅವ ಹೇಳೋದು ನಿಜ.
ನೀವು ಪ್ರೇಮಿಸುವಾಗ,
ಬುದ್ಧಿ-ಮನಸ್ಸಿನ ಅವಶ್ಯಕತೆ ಇರುವುದಿಲ್ಲ,
ಆದರೂ ಅವು ಹಸ್ತಕ್ಷೇಪ ಮಾಡುತ್ತಲೇ ಇರುತ್ತವೆ.
ಈಗ ನೀವು ಪ್ರೇಮಿಸುತ್ತಿರುವುದು
ನಿಮ್ಮ ಬುದ್ಧಿ-ಮನಸ್ಸಿನ ಮಖಾಂತರವೇ ಹೊರತು
ಲೈಂಗಿಕ ಶಕ್ತಿ ಕೇಂದ್ರದ ಮೂಲಕ ಅಲ್ಲ.

ಲೈಂಗಿಕತೆ ತಪ್ಪಲ್ಲ, ಅದು ತನ್ನ ರೀತಿಯ
ಅತ್ಯಂತ ಸುಂದರ ಪ್ರಕ್ರಿಯೆ.
ಆ ಅರಳುವಿಕೆ, ಆ ಹಂಚುವಿಕೆ,
ಇಬ್ಬರು ವ್ಯಕ್ತಿಗಳ ನಡುವಿನ ಆಳ ಕೊಡು ಕೊಳ್ಳುವಿಕೆ,
ಎಷ್ಟು ಸುಂದರ.
ಆದರೆ ಬುದ್ಧಿ-ಮನಸ್ಸು ಹಸ್ತಕ್ಷೇಪ ಮಾಡಿದಾಗ
ಎಷ್ಟು ಕುರೂಪ.
ಆಗ ಲೈಂಗಿಕ ಶಕ್ತಿ ಕೇಂದ್ರವೂ ಪ್ರತಿಕಾರಕ್ಕೆ ಸಿದ್ಧವಾಗುತ್ತದೆ.
ನೀವು ಪ್ರಾರ್ಥನೆಯಲ್ಲಿರುವಾಗ, ಧ್ಯಾನದಲ್ಲಿರುವಾಗ,
ಪವಿತ್ರ ಗ್ರಂಥಗಳನ್ನು ಓದುತ್ತಿರುವಾಗ,
ನೀವು ಲೈಂಗಿಕತೆಯ ಬಗ್ಗೆ
ಯೋಚನೆ ಮಾಡಲು ಶುರು ಮಾಡುತ್ತೀರಿ.

ನಮ್ಮ ಬುದ್ಧಿ-ಮನಸ್ಸಿನಲ್ಲಿ ಹುಟ್ಟುವ
ಹೊಳಹುಗಳು, ವಿಚಾರಗಳು ತಪ್ಪಲ್ಲ,
ಅವೂ ಕೂಡ ತಮ್ಮ ರೀತಿಯಲ್ಲಿ ಅತ್ಯಂತ ಸುಂದರ.
ಎಲ್ಲವೂ ತಮ್ಮ ತಮ್ಮ ಜಾಗೆಯಲ್ಲಿದ್ದಾಗ,
ಬೇರೆ ಜಾಗೆಗಳಲ್ಲಿ ಹಸ್ತಕ್ಷೇಪ ಮಾಡದೇ
ತಮ್ಮ ತಮ್ಮ ಮೂಲ ಸ್ವಭಾವವನ್ನು ಅರಳಿಸುವಾಗ
ಎಲ್ಲವೂ ಸುಂದರವೇ.

ಆದರೆ ಹಾಗಾಗುವುದಿಲ್ಲ
ಎಲ್ಲ ಇನ್ನೊಂದರ ಕಾರ್ಯಕ್ಷೇತ್ರಗಳಲ್ಲಿ
ಅನಧೀಕೃತವಾಗಿ ಭಾಗವಹಿಸುತ್ತಿವೆ.
ಪ್ರೇಮಿಸುವಾಗ ಬುಧ್ದಿಯ ಭಾಗವಹಿಸುವಿಕೆ,
ಧ್ಯಾನ ಮಾಡುವಾಗ ಲೈಂಗಿಕತೆ ಅಡ್ಡಬರುವುದು,
ಉಟ ಮಾಡುವಾಗ ಇನ್ಯಾವುದೋ ಯೋಚನೆ….. ಹೀಗೆ.

ಎಲ್ಲ ಶಕ್ತಿ ಕೇಂದ್ರಗಳನ್ನು ಶುದ್ಧ ಮಾಡಿ
ಅವು ತಮ್ಮ ಜಾಗೆಯಲ್ಲಿ ನಿರಾಳವಾಗಿ
ಬೇರೆ ಯಾವ ಹಸ್ತಕ್ಷೇಪವಿಲ್ಲದೆ
ಮೈದುಂಬಿ ಕಾರ್ಯನಿರ್ವಹಿಸುವಾಗ
ಬದುಕು ತನ್ನ ಸಹಜ ಸೌಂದರ್ಯದಲ್ಲಿ
ವಿಜೃಂಭಿಸುತ್ತದೆ.

ಎಲ್ಲ ಶಕ್ತಿಗಳನ್ನು
ಅವುಗಳ ಮೂಲ ಚೆಲುವಿನಲ್ಲಿ ಆನಂದಿಸಿ.
ನೀವೂ ಆ ಶಕ್ತಿಯ ಭಾಗವಾಗಿ.
ಸ್ವತಃ ನೀವೇ ಲೈಂಗಿಕ ಶಕ್ತಿಯಾಗಿ,
ನೀವೇ ಹಸಿವಾಗಿ,
ನೀವೇ ಧ್ಯಾನ ವಾಗಿ
ಎಲ್ಲವನ್ನೂ ಪೂರ್ಣವಾಗಿ ಅನುಭವಿಸಿ.

ನೀವು ಆಲೋಚನೆ ಮಾಡಬಯಸುವಾಗ
ಒಂದು ಗಿಡದ ನೆರಳಲ್ಲಿ ಕುಳಿತು
ನಿಮ್ಮೊಳಗೆ ಮೂಡುತ್ತಿರುವ ವಿಚಾರಗಳನ್ನು,
ಹೊಳಹುಗಳನ್ನು ಆನಂದಿಸಿ.
ನಿಮ್ಮೊಳಗೆ ಸುಂದರ ಕಾವ್ಯ ಅರಳಲಿ,
ವಿಜ್ಞಾನದ ಹೊಸ ಸಾಧ್ಯತೆಗಳು ಗೋಚರವಾಗಲಿ,
ತತ್ವಜ್ಞಾನದ ನಿಗೂಢಗಳು ಸ್ಪಷ್ಟವಾಗಲಿ,
ಸಮಾಜದ ಏಳಿಗೆಗಾಗಿ ಹೊಸ ಕನಸುಗಳು ಸ್ಥಾಪಿತವಾಗಲಿ,

ಆಗ ಯಾವುದೂ ಕೆಸರಲ್ಲ,
ಎಲ್ಲ ತಿಳಿ, ಎಲ್ಲ ಸ್ಪಷ್ಟ, ಎಲ್ಲವೂ ಸುಂದರ.

(ಮುಂದುವರೆಯುತ್ತದೆ.......)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.