ನೈಜ ಪ್ರಜ್ಞೆ ಎಂದರೇನು? ಅದರ ನೆಲೆ ಯಾವುದು?


 

ನೈಜಪ್ರಜ್ಞೆ ಅಹಂಮುಕ್ತ. ಅದು ವೈಶ್ವಿಕವಾದದ್ದು. ನೈಜಪ್ರಜ್ಞೆ ಒಂದು ವ್ಯಕ್ತಿ ಅಥವಾ ಜೀವದ ಪರಿಧಿಯಲ್ಲಿ ಸೀಮಿತವಾಗಿರುವಂಥದ್ದಲ್ಲ. ಒಬ್ಬ ವ್ಯಕ್ತಿ ನೈಜ ಪ್ರಜ್ಞೆಯನ್ನು ಹೊಂದುತ್ತಾನೆ/ಳೆ ಎಂದರೆ ಆತ/ ಆಕೆ ವಿಶ್ವದ ನೆಲೆಗಟ್ಟಿನಲ್ಲಿ ಘಟನೆಗಳನ್ನು ನೋಡುತ್ತಾನೆ/ಳೆ ಎಂದರ್ಥ. ನೈಜ ಪ್ರಜ್ಞಾವಂತರು ತಮ್ಮನ್ನೂ ವಿಶ್ವಚೇತನದ ಭಾಗವಾಗಿ ಗುರುತಿಸಿಕೊಳ್ಳುತ್ತಾರೆ. ಇತರರನ್ನೂ ಹಾಗೆಯೇ ಭಾವಿಸುತ್ತಾರೆ | ಸಾ.ಹಿರಣ್ಮಯಿ

ಪ್ರಜ್ಞೆಯ ವ್ಯಾಖ್ಯಾನವನ್ನು ಇದಿಮಿತ್ಥಂ – ಇದು ಹೀಗೇ ಎಂಬಂತೆ ಮಾಡಲು ಬರುವುದಿಲ್ಲ. ಪ್ರಜ್ಞೆಯನ್ನು ಒಂದೊಂದು ಚಿಂತನೆಯ ಜನರು ಒಂದೊಂದು ಬಗೆಯಲ್ಲಿ ವ್ಯಾಖ್ಯಾನಿಸುತ್ತಾರೆ.

ವಿಜ್ಞಾನಿಗಳು ಪ್ರಜ್ಞೆಯನ್ನು ಮೆದುಳಿನಲ್ಲಿ ಕಾಣುತ್ತಾರೆ.
ಮನಶ್ಶಾಸ್ತ್ರಜ್ಞರು ಪ್ರಜ್ಞೆಯನ್ನು ಮನಸ್ಸಿನಲ್ಲಿ ಕಾಣುತ್ತಾರೆ.
ಆಧ್ಯಾತ್ಮಿಕ ಜನರು ಪ್ರಜ್ಞೆಯನ್ನು ಆತ್ಮ ಅಥವಾ ಚೇತನವಾಗಿ ಭಾವಿಸುತ್ತಾರೆ.

ಹಾಗಾದರೆ ಪ್ರಜ್ಞೆ ಎಂದರೆ ಏನು? ಅದು ಇರುವುದಾದರೂ ಎಲ್ಲಿ?
ಸಾಮಾನ್ಯವಾಗಿ ನಾವು ಮನಸ್ಥಿತಿಯನ್ನೇ ಪ್ರಜ್ಞೆ ಎಂದು ಭಾವಿಸ್ತೇವೆ. ಈ ಹಿನ್ನೆಲೆಯಲ್ಲಿ, ಮೇಲೆ ಹೇಳಲಾದ ಮೂರೂ ವ್ಯಾಖ್ಯಾನಗಳನ್ನು ಒಗ್ಗೂಡಿಸಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಇವನ್ನು ಒಟ್ಟಾಗಿ ನೋಡಿದಾಗ ನಮಗೆ ನಾಲ್ಕು ಬಗೆಯ ಪ್ರಜ್ಞೆ ಅಥವಾ ಮನಸ್ಥಿತಿಯ ಇರುವಿಕೆ ಕಂಡುಬರುತ್ತದೆ:

ಭೌತಿಕ ಪ್ರಜ್ಞೆ ಅಥವಾ ಮನಸ್ಥಿತಿ = ವೈಚಾರಿಕ ಮನಸ್ಥಿತಿಯ ಪ್ರಜ್ಞೆ ಇರುವುದಿಲ್ಲ;
ಭಾವುಕ ಪ್ರಜ್ಞೆ ಅಥವಾ ಮನಸ್ಥಿತಿ = ವೈಚಾರಿಕ ಮನಸ್ಥಿತಿಯ ಕುರಿತು ಸುಪ್ತಪ್ರಜ್ಞೆ;
ವೈಚಾರಿಕ ಪ್ರಜ್ಞೆ ಅಥವಾ ಮನಸ್ಥಿತಿ = ವೈಚಾರಿಕ ಮನಸ್ಥಿತಿಯ ಪ್ರಜ್ಞೆ ಇರುತ್ತದೆ;
ಚೈತನ್ಯ ಪ್ರಜ್ಞೆ ಅಥವಾ ಮನಸ್ಥಿತಿ = ವೈಚಾರಿಕ ಮೆದುಳಿನ ಅನುಪಸ್ಥಿತಿ.

ಈಗ ಈ ನಾಲ್ಕೂ ಬಗೆಯ ಪ್ರಜ್ಞೆ ಅಥವಾ ಮನಸ್ಥಿತಿ ನೈಜ ಪ್ರಜ್ಞೆಗಿಂತ ಹೇಗೆ ಭಿನ್ನ ಅನ್ನೋದನ್ನು ನೋಡೋಣ.
ಭೌತಿಕ ಪ್ರಜ್ಞೆ, ಜೀವಿಯಲ್ಲಿ ವೃದ್ಧಿಯಾಗುವ ಮೊದಲ ಅವಸ್ಥೆ. ಇದು ದೇಹದ ಜೈವಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಆಯಾ ಜಾತಿ- ಪ್ರಭೇದಗಳಿಗೆ ತಕ್ಕಂತೆ ಜೀವಿಯ ಚಟುವಟಿಕೆಗಳನ್ನು ಇದು ರೂಪಿಸುತ್ತದೆ. ಇದು ಬಹುತೇಕ 9ನೇ ತಿಂಗಳಿನಿಂದ 2ನೇ ವರ್ಷದವರೆಗಿನ ಅವಧಿಯಲ್ಲಿ ಬೆಳೆಯುತ್ತದೆ.

ಅನಂತರದ್ದು ಭಾವುಕ ಪ್ರಜ್ಞೆ. ಇದು ಜೀವಿಯ ಪಾರಿಸರಿಕ / ಸಾಮಾಜಿಕ ಬದುಕನ್ನು ರೂಪಿಸುತ್ತದೆ. ಇದು (ಮಾನವ) ಜೀವಿಯಲ್ಲಿ ಒಂದೂವರೆ ವರ್ಷದಿಂದ 7ನೇ ವರ್ಷದವರೆಗೆ ಬೆಳವಣಿಗೆಯಾಗುತ್ತದೆ. ಯಾರೊಡನೆ ಹೇಗೆ ವ್ಯವಹರಿಸಬೇಕು, ಯಾವಾಗ ಏನು ಮಾತಾಡಬೇಕು, ಹೇಗೆ ವರ್ತಿಸಬೇಕು ಇತ್ಯಾದಿ ಅರಿವನ್ನು ಕಾಯ್ದಿಡುವ ಪ್ರಜ್ಞೆ ಇದು. ಈ ಪ್ರಜ್ಞೆ ಬೆಳೆಯುತ್ತ, ಭೌತಿಕ ಪ್ರಜ್ಞೆಗಿಂತಲೂ ಒಂದು ಕೈಮೇಲಾಗಿ ಪದರಗಟ್ಟುತ್ತದೆ.

ವೈಚಾರಿಕ ಪ್ರಜ್ಞೆ ಸಾಮಾನ್ಯವಾಗಿ 8ನೇ ವಯಸ್ಸಿನಲ್ಲಿ ಬೆಳೆಯತೊಡಗುತ್ತದೆ. ಸರಿತಪ್ಪುಗಳನ್ನು ಗುರುತಿಸುವ, ತೂಗಿನೋಡುವ, ಆಯ್ಕೆ ಮಾಡಿಕೊಳ್ಳುವ ಮತ್ತು ಅನುಸರಿಸುವ ವಯಸ್ಸು ಇದು. ಈ ವಯಸ್ಸಿನಲ್ಲಿ ವೈಚಾರಿಕ ಪ್ರಜ್ಞೆಯ ಬೆಳವಣಿಗೆ ಆರಂಭವಾಗುತ್ತದೆ. ಒಮ್ಮೆ ಈ ವೈಚಾರಿಕ ಪ್ರಜ್ಞೆ ಬಲಿತುಬಿಟ್ಟರೆ ನಮ್ಮ ಭಾವುಕ ಪ್ರಜ್ಞೆಯ ಹಿಡಿತ ಕಡಿಮೆಯಾಗಿ ಅದು ಕೂಡಾ ಸುಪ್ತಪ್ರಜ್ಞೆಯಾಗಿ ಬದಲಾವಣೆ ಹೊಂದುತ್ತದೆ.

ವೈಚಾರಿಕ ಪ್ರಜ್ಞೆಯ ಈ ಹಂತವನ್ನೂ ದಾಟುವುದು ಚೈತನ್ಯ ಪ್ರಜ್ಞೆ. ಇದು ಮೂಲಕ್ಕೆ ಮರಳುವ ಪ್ರಕ್ರಿಯೆ. ಹುಟ್ಟಿನಿಂದಲೂ ಜೀವಿಯಲ್ಲಿ, ಅದರಲ್ಲೂ ಮಾನವ ಜೀವಿಯಲ್ಲಿ ಸುಪ್ತವಾಗಿರುವ ಚೈತನ್ಯಪ್ರಜ್ಞೆಯನ್ನು ಹಲವು ಮಾರ್ಗಗಳ ಮೂಲಕ ಜಾಗೃತಗೊಳಿಸಿಕೊಳ್ಳುವುದೇ ಸಾಧನೆ.

ಚೈತನ್ಯಪ್ರಜ್ಞೆಯು ವೈಚಾರಿಕತೆಯನ್ನೂ ಮೀರಿ ಎಲ್ಲವನ್ನೂ ಅವು ಇರುವಂತೆಯೇ ಕಾಣುವ, ಒಳಗೊಳಿಸಿಕೊಳ್ಳುವ ಸಾಮರ್ಥ್ಯ. ಇದೇ ನೈಜ ಪ್ರಜ್ಞೆ. ಇಲ್ಲಿ ವೈಚಾರಿಕ ಮನಸ್ಥಿತಿ ಇರುವುದಿಲ್ಲ. ನೈಜಪ್ರಜ್ಞೆ ಭೌತಿಕ, ಭಾವುಕ ಮನಸ್ಥಿತಿಗಳನ್ನೂ ಹೊಂದಿರುವುದಿಲ್ಲ. ಇದು ಅವೆಲ್ಲದರಿಂದಲೂ ಅತೀತವಾದದ್ದು.

ಹಾಗಾದರೆ ಪ್ರಜ್ಞೆಯು ಮೆದುಳು ಮತ್ತು ಮನಸಸಿಗೆ ಸಂಬಂಧಿಸಿದ ಎಲ್ಲವನ್ನೂ ಮೀರಿದೆ ಎಂದಾಯ್ತು. ಮತ್ತು ಇದರಿಂದ ಪ್ರಜ್ಞೆಯು ತಲೆಯಲ್ಲಿ – ಅಂದರೆ ಭೌತಿಕ ಮೆದುಳಿನಲ್ಲಿ ಇರುವುದಿಲ್ಲ ಎಂದಾಯ್ತು.
ಕೆಲವರಲ್ಲಿ ಇದೊಂದು ತಪ್ಪು ಕಲ್ಪನೆ ಇದೆ. ನಾವು ನೋಡುವ ಕಣ್ಣು, ಆಲಿಸುವ ಕಿವಿ, ಉಸಿರಾಡುವ ಮೂಗು, ಚಪ್ಪರಿಸುವ ನಾಲಗೆ, ಹೆಚ್ಚು ಕಾಳಜಿ ತೋರುವ ತ್ವಚೆ ಈ ಎಲ್ಲ ಪಂಚೇದ್ರಿಯಗಳೂ ರುಂಡ ಭಾಗದಲ್ಲೆ ಇರುವುದರಿಂದ ನಾವು ಪ್ರಜ್ಞೆಯನ್ನು ತಲೆ – ಅಂದರೆ ಮೆದುಳಿನಲ್ಲಿದೆ ಎಂದು ಭಾವಿಸುತ್ತೇವೆ.

ನೈಜ ಪ್ರಜ್ಞೆ ಈ ಇಂದ್ರಿಯಗಳ ನಿಲುಕನ್ನು ಮೀರಿರುವಂಥದ್ದು. ಯಾವುದೋ ಒಂದು ವ್ಯಕ್ತಿ, ವಸ್ತುವನ್ನು ನೋಡಿದಾಗ ನಾವು ಅದನ್ನು ಬರೀ ವ್ಯಕ್ತಿ ಅಥವಾ ವಸ್ತುವಾಗಿ ನೋಡುವುದಿಲ್ಲ. ಭೌತಿಕ, ಭಾವುಕ ಮತ್ತು ವೈಚಾರಿಕ ಮನಸ್ಥಿತಿಗಳು ಕಟ್ಟಿಕೊಟ್ಟ ವಿವರಗಳೊಂದಿಗೆ ಅದನ್ನು / ಅವರನ್ನು ನೋಡುತ್ತೇವೆ. ಉದಾಹರಣೆ ಒಂದು ಕಲ್ಲನ್ನು ನೋಡಿದಾಗ ನಾವು ಅದರ ಅಪಾಯ ಅಥವಾ ಉಪಯೋಗಗಳ ಜೊತೆಗೇ ಅದನ್ನು ಗುರುತಿಸುತ್ತೇವೆ. ಆದರೆ ನೈಜಪ್ರಜ್ಞೆ ಹಾಗಲ್ಲ, ಅದು ಕಲ್ಲನ್ನು ಕಲ್ಲು ಮಾತ್ರವಾಗಿಯೇ ನೋಡುತ್ತದೆ.

ಹಾಗಾದರೆ ನೈಜಪ್ರಜ್ಞೆ ಇರುವುದೆಲ್ಲಿ? ಅದು ಇರುವುದು ಹೃದಯದಲ್ಲಿ. ಅಂತಃಕರಣದಲ್ಲಿ. ನೈಜಪ್ರಜ್ಞೆ ಅಹಂಮುಕ್ತ. ಅದು ವೈಶ್ವಿಕವಾದದ್ದು. ನೈಜಪ್ರಜ್ಞೆ ಒಂದು ವ್ಯಕ್ತಿ ಅಥವಾ ಜೀವದ ಪರಿಧಿಯಲ್ಲಿ ಸೀಮಿತವಾಗಿರುವಂಥದ್ದಲ್ಲ. ಒಬ್ಬ ವ್ಯಕ್ತಿ ನೈಜ ಪ್ರಜ್ಞೆಯನ್ನು ಹೊಂದುತ್ತಾನೆ/ಳೆ ಎಂದರೆ ಆತ/ ಆಕೆ ವಿಶ್ವದ ನೆಲೆಗಟ್ಟಿನಲ್ಲಿ ಘಟನೆಗಳನ್ನು ನೋಡುತ್ತಾನೆ/ಳೆ ಎಂದರ್ಥ. ನೈಜ ಪ್ರಜ್ಞಾವಂತರು ತಮ್ಮನ್ನೂ ವಿಶ್ವಚೇತನದ ಭಾಗವಾಗಿಯೇ ಗುರುತಿಸಿಕೊಳ್ಳುತ್ತಾರೆ. ಇತರರನ್ನೂ ಹಾಗೆಯೇ ಭಾವಿಸುತ್ತಾರೆ.

ಉದಾಹರಣೆಗೆ ಬುದ್ಧ ಅಂಗುಲಿಮಾಲನನ್ನು ಒಬ್ಬ ವ್ಯಕ್ತಿಯಾಗಿ ಕಾಣಲು ಸಾಧ್ಯವಾಗಿದ್ದು, ಬುದ್ಧ ಪ್ರಜ್ಞಾವಂತನಾಗಿದ್ದ ಕಾರಣದಿಂದ. ಭೌತಿಕ ಪ್ರಜ್ಞೆಯ ಮಂದಿ ಆತ ನೀಡಬಹುದಾದ ದೈಹಿಕ ಹಿಂಸೆ ನೆನೆದು ಭಯಪಟ್ಟರೆ, ಭಾವುಕ ಮಂದಿ ಆತ ಮಾಡಬಹುದಾದ ಹಾನಿಗೆ ಚಿಂತಿಸಿ ಮುಖ ತಿರುವಿದರು. ವೈಚಾರಿಕ ಪ್ರಜ್ಞೆಯುಳ್ಳವರು ಆತನ ಪಾಪಗಳ ಲೆಕ್ಕವಿಟ್ಟು ದೂರವುಳಿದರು.
ಆದರೆ ಬುದ್ಧ ನೈಜಪ್ರಜ್ಞಾವಂತನಾಗಿದ್ದ. ಆತ ಅಂಗುಲೀಮಾಲನಲ್ಲಿ ವಿಶ್ವಸಹಜವಾದ ಚೇತನವನ್ನು ಕಂಡ. ಅವನ ಭೌತಶರೀರವನ್ನು ಬಿಟ್ಟು ಅಂತರಂಗದ ಚೇತನವನ್ನು ನೋಡಲು ಬುದ್ಧನಿಗೆ ಸಾಧ್ಯವಾಗಿದ್ದು ಆತನಲ್ಲಿದ್ದ ಪ್ರಜ್ಞೆಯಿಂದ.

ಆದ್ದರಿಂದ, ಪ್ರಜ್ಞೆ ಇರುವುದು ಅಂತಃಕರಣದಲ್ಲಿ. ಅದು ಇರುವುದು ಹೃದಯದಲ್ಲಿ.

ಇಲ್ಲಿ ಹೃದಯ ಎಂದರೆ ಅಪಧಮನಿ – ಅಬಿಧಮನಿಗಳನ್ನು ಹೊಂದಿದ ಭೌತಿಕ ಅಸ್ತಿತ್ವವಲ್ಲ. ಹೃದಯ ಅನಾಹತ ಮತ್ತು ವಿಶುದ್ಧಿ ಚಕ್ರಗಳ ನಡುವೆ ನೆಲೆಯಾಗಿರುವ ಅಭೌತಿಕ ಅಸ್ತಿತ್ವ. ಅದು ಅಂತಃಕರಣ. ಈ ಅಂತಃಕರಣವನ್ನು, ಈ ಪ್ರಜ್ಞೆಯನ್ನು ಹೊಂದಿರುವವರು ಭೌತಿಕ ಮನಸ್ಥಿತಿಗೆ ಒಳಗಾಗಿ ದೇಹವನ್ನು ಭಾವಿಸುವುದಿಲ್ಲ. ಭಾವುಕ ಮನಸ್ಥಿತಿಯಿಂದ ಯಾರನ್ನೂ ಮೋಹಪಟ್ಟು ಹಚ್ಚಿಕೊಳ್ಳುವುದಿಲ್ಲ. ವೈಚಾರಿಕ ಮನಸ್ಥಿತಿಯಿಂದ ಯಾರನ್ನೂ ಇವರು ಹೀಗೇ ಎಂದು ತೀರ್ಪು ನೀಡುವುದಿಲ್ಲ.

ಉದಾಹರಣೆಗೆ ರಮಣರು ಕೈಗೆ ಚಿಕಿತ್ಸೆ ಮಾಡಿಸಿಕೊಂಡ ಘಟನೆ.
ರಮಣರ ಕೈಗೆ ಚಿಕಿತ್ಸೆ ನೀಡಬೇಕಾಗಿ ಬಂದಾಗ ವೈದ್ಯರು ಅನಸ್ತೇಶಿಯಾ ಕೊಡಲು ಮುಂದಾಗುತ್ತಾರೆ. ರಮಣರು ಅವರನ್ನು ತಡೆದು ಕುಳಿತಲ್ಲೆ ಕೈಚಾಚಿ ‘ಅದೇನು ಮಾಡುತ್ತೀರೋ ಮಾಡಿ’ ಎಂದು ಸೂಚಿಸುತ್ತಾರೆ. ವೈದ್ಯರು ಕೊಯ್ದು, ಹೊಲಿಗೆ ಹಾಕಿ ಏನೆಲ್ಲ ಮಾಡಿದರೂ ರಮಣರು ನಸುನಗುತ್ತ ಶಿಷ್ಯರೊಡನೆ ಸಂವಹಿಸುತ್ತ ಇರುತ್ತಾರೆ!
ಇಲ್ಲಿ ನಾವು ‘ರಮಣರಿಗೆ ದೇಹಪ್ರಜ್ಞೆ ಇರಲಿಲ್ಲ, ಆದ್ದರಿಂದ ಅವರಿಗೆ ನೋವಾಗಲಿಲ್ಲ’ ಎಂದು ವ್ಯಾಖ್ಯಾನಿಸುವುದು ತಪ್ಪಾಗುತ್ತದೆ. ಬದಲಿಗೆ, ರಮಣgು ದೇಹಪ್ರಜ್ಞೆಯನ್ನೂ ಮೀರಿದ ನೈಜಪ್ರಜ್ಞಾವಂತರಾಗಿದ್ದರು, ಆದ್ದರಿಂದ ಅವರಿಗೆ ನೋವಾಗಲಿಲ್ಲ ಎಂದು ಹೇಳುವುದು ಸೂಕ್ತ.

ಗೈರಾಗುವಿಕೆ ಮತ್ತು ಮೀರುವಿಕೆ – ಇವೆರಡೂ ಬೇರೆ ಬೇರೆ ಸಂಗತಿಗಳಲ್ಲವೆ?

ಬಹುಶಃ ಈ ಮೇಲಿನ ವಿವರಣೆಗಳು ಪ್ರಜ್ಞೆಯ ನೆಲೆ ಅಂತಃಕರಣ ಅಥವಾ ಹೃದಯ ಎಂಬುದನ್ನು ಸಿದ್ಧಪಡಿಸಬಹುದು. ಅಥವಾ ಈ ಊಹೆಯನ್ನು ತುಂಡರಿಸುವ ಬೇರೆ ಸೂತ್ರಗಳೂ ಇರಬಹುದು. ಅಂತಹಾ ವಿವರಣೆ ನಿಮ್ಮಲ್ಲಿದ್ದರೆ ಹಂಚಿಕೊಳ್ಳಿ. ಅಥವಾ ಈ ಕುರಿತು ಪ್ರಶ್ನೆಗಳಿದ್ದರೆ ಅಗತ್ಯವಾಗಿ ಕೇಳಿ.

ಕೊನೆಯದಾಗಿ, ನಮ್ಮ ಲೌಕಿಕ ಜೀವನಕ್ಕೆ ನೈಜಪ್ರಜ್ಞೆ ಅದೆಷ್ಟು ಸಹಕಾರಿಯೋ ಹೇಳಲಾಗದು. ಸ್ಪರ್ಧೆಯಲ್ಲಿ ಆಸಕ್ತಿ ಇಲ್ಲದ, ತೋರುಗಾಣಿಕೆಯ ಬದುಕು ಬಯಸದ, ಯಶಸ್ಸನ್ನು ಹಣ – ಹೆಸರುಗಳ ಮೂಲಕ ಅಳೆಯದ ಜನರು ಈ ನೈಜಪ್ರಜ್ಞಾವಂತಿಕೆಯತ್ತ ಆಸಕ್ತಿ ಹೊಂದುವರು.
ಸಾಮಾನ್ಯ ಲೌಕಿಕರಿಗೆ ಭೌತಿಕ, ಭಾವುಕ ಮತ್ತು ವೈಚಾರಿಕ – ಈ ಮೂರೂ ಪ್ರಜ್ಞೆಗಳು ಬೇಕು. ಆಯಾ ವಯಸ್ಸಿನಲ್ಲಿ ನಮ್ಮಲ್ಲಿ ಚಾಲನೆಗೊಳ್ಳುವ ಈ ಪ್ರಜ್ಞೆಗಳ ಪ್ರಖರತೆಯನ್ನು ಕಾಯ್ದಿಟ್ಟುಕೊಳ್ಳಬೇಕು. ಸದಾ ಎಚ್ಚರದಲ್ಲಿಟ್ಟು ಅವನ್ನು ಸಕಾರಾತ್ಮಕ ಚಟುವಟಿಕೆಗಳಿಗೆ ಬಳಸಬೇಕು.

ಅದರ ಬದಲು ನಾವು ನಮ್ಮ ಪ್ರಜ್ಞೆಯನ್ನು ಉಡಾಫೆ ಮಾಡಿದರೆ, ದುರ್ಬಳಕೆ ಮಾಡಿದರೆ ಅಥವಾ ಬಳಸದೆ ಹೋದರೆ ಲೌಕಿಕದಲ್ಲಿಯೂ ಮನುಷ್ಯರಾಗಿ ನಾವು ಯಶಸ್ವಿಯಾಗುವುದಿಲ್ಲ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.