ಶಿವನಂತೆ ಗುಣದೋಷ ಗ್ರಹಿಸಿ : ದಿನದ ಸುಭಾಷಿತ

ಇಂದಿನ ಸುಭಾಷಿತ …

ಗುಣದೋಷೌ ಬುಧೋ ಗೃಹ್ಣನ್ನಿಂದುಕ್ಷ್ವೇಡಾವಿವೇಶ್ವರಃ
ಶಿರಸಃ ಶ್ಲಾಘತೇ ಪೂರ್ವಂ ಪರಂ ಕಂಠೇ ನಿಯಚ್ಛತಿ ||

ಅರ್ಥ : ವ್ಯಕ್ತಿಯೊಬ್ಬನ ವ್ಯಕ್ತಿತ್ವದ ಒಳಿತು ಕೆಡುಕುಗಳನ್ನು ತಾರತಮ್ಯವಿಲ್ಲದಂತೆ ಏಕಪ್ರಕಾರವಾಗಿ ಗ್ರಹಿಸಬೇಕು. ಸಮುದ್ರಮಥನದ ಕಾಲದಲ್ಲಿ ಶಿವನು ತನ್ನಪಾಲಿಗೆ ಒದಗಿಬಂದ ಆಪ್ಯಾಯಮಾನವಾದ ಚಂದ್ರನನ್ನೂ ಪ್ರಾಣಘಾತುಕವಾದ ವಿಷವನ್ನೂ ಏಕಪ್ರಕಾರವಾಗಿ ಸ್ವೀಕರಿಸಿದನಂತೆ. ಯಾವುದೋ ಒಂದನ್ನು ಮಾತ್ರ ನಿರೀಕ್ಷಿಸುತ್ತೇನೆ ಎಂಬ ಮನೋಲಯವು ಅಸಮಾಧಾನಕ್ಕೆ ಕಾರಣವಾಗುತ್ತದೆ.

ಗುಣದೋಷಗಳೆರಡನ್ನೂ ಸ್ವೀಕರಿಸಿಯಾದಬಳಿಕ ಯಾವುದನ್ನು ಎಲ್ಲಿಡಬೇಕೋ ಅಲ್ಲಿಡಬೇಕಾದ್ದು ಕೂಡ ಜಾಣನ ಕರ್ತವ್ಯ. ಶಿವನು ಆನಂದ ನೀಡುವ ಚಂದ್ರನನ್ನು ತಲೆಯಲ್ಲಿ ಅಲಂಕಾರಕ್ಕೆಂಬಂತೆ ಧರಿಸಿದರೆ, ವಿಷವನ್ನು ಹೊಟ್ಟೆಗೂ ಹಾಕಿಕೊಳ್ಳದೆ ಅತ್ತ ಬಾಯಲ್ಲೂ ಇಟ್ಟುಕೊಳ್ಳದೆ ಕಂಠದಲ್ಲಿ ಧರಿಸಿದ್ದಾನಲ್ಲವೆ, ಹಾಗೆಯೇ ಬುದ್ಧಿವಂತನಾದವನೂ ನಡೆದುಕೊಳ್ಳಬೇಕು – ಇದು ತಾತ್ಪರ್ಯ.

1 Comment

Leave a Reply