ಜ್ಞಾನದಿಂದ ಉಂಟಾಗುವ ಶುದ್ಧಿಯೇ ಸರ್ವಶ್ರೇಷ್ಠ : ಸುಭಾಷಿತ

ವೃತ್ತಶೌಚಂ ಮನಃಶೌಚಂ ತೀರ್ಥಶೌಚಮತಃ ಪರಂ |
ಜ್ಞಾನೋತ್ಪನ್ನಂ ಚ ಯಚ್ಛೌಚಂ ತಚ್ಛೌಚಂ ಪರಮಂ ಸ್ಮೃತಂ || ಸುಭಾಷಿತ ||

ಅರ್ಥ : “ನಡತೆಯಲ್ಲಿ ಶುಚಿತ್ವ, ಮನಸ್ಸಿನ ಶುಚಿತ್ವ – ಇವು ತೀರ್ಥಕ್ಷೇತ್ರ ದರ್ಶನಾದಿಗಳಿಗಿಂತ ಮಿಗಿಲಾದವು. ಆದರೆ ಜ್ಞಾನದಿಂದ ಉಂಟಾದ ಶುಚಿತ್ವವು ಪರಮಶ್ರೇಷ್ಠವಾದುದೆಂದು ಹೇಳಲಾಗಿದೆ”.
ನಾವು ಶುಚಿಯಾಗಿರದೆ ತೀರ್ಥಕ್ಷೇತ್ರಗಳನ್ನು ಸುತ್ತುವುದರಿಂದ ಯಾವ ಪ್ರಯೋಜನವೂ ಇಲ್ಲ. ನಮ್ಮ ನಡೆನುಡಿಗಳು ಶುಚಿಯಾಗಿರಬೇಕು. ಮನಸ್ಸಿನಲ್ಲಿ ಯಾವುದೇ ರೀತಿಯ ಕಶ್ಮಲಗಳು ಇರಬಾರದು, ದುಷ್ಟ ಚಿಂತನೆಗಳು ಇರಬಾರದು. ಹೀಗೆ ನಾವು ಅಂತರಂಗದ ಶುಚಿತ್ವವನ್ನು ಕಾಯ್ದುಕೊಂಡರೆ, ಅದು ತೀರ್ಥಕ್ಷೇತ್ರ ಮಾಡುವುದಕ್ಕಿಂತ ಮಿಗಿಲಾದುದು.
ಹಾಗೆಯೇ ಈ ಅಂತರಂಗದ ಶುಚಿತ್ವವನ್ನು ಪ್ರಜ್ಞಾಪೂರ್ವಕವಾಗಿ ಕಾಪಾಡಿಕೊಂಡರೆ ಅದು ಎಲ್ಲಕ್ಕಿಂತ ಮಿಗಿಲಾದುದು.
ಜ್ಞಾನವು ನಮ್ಮ ಮನಸ್ಸಿನ ತಾಮಸಿಕ ಚಿಂತನೆಗಳನ್ನು ತೊಡೆದುಹಾಕುತ್ತದೆ. ನಮ್ಮನ್ನು ನಮ್ಮ ಅರಿವಿನಿಂದಲೇ ಶುಚಿಯಾಗಿಡುತ್ತದೆ. ಆದ್ದರಿಂದ “ಸಹಜ ಬದುಕಿನಲ್ಲಿ ಜ್ಞಾನ ಸಂಪಾದನೆಗೆ ಆದ್ಯತೆ ನೀಡಬೇಕು, ಆ ಮೂಲಕ ಸತ್ಫಲಗಳನ್ನು ಪಡೆಯಬೇಕು ಮತ್ತು ಸ್ವಚ್ಛ ಸುಂದರ ಬದುಕು ರೂಪಿಸಿಕೊಳ್ಳಬೇಕು” ಎನ್ನುವುದು ಈ ಸುಭಾಷಿತದ ತಾತ್ಪರ್ಯ.

1 Comment

  1. ಅರ್ಥಪೂರ್ಣ ಸಾಲುಗಳ ಮೂಲಕ ದಿನ ಪ್ರಾರಂಭವಾದರೆ ಕಳೆಯುವ ದಿನವೂ ಅರ್ಥಪೂರ್ಣ ವಾದೀತು.

Leave a Reply