ದುಂಬಿಯಂತೆ ಜ್ಞಾನ ಗ್ರಹಿಸಿ : ಇಂದಿನ ಸುಭಾಷಿತ

ಈ ದಿನದ ಸುಭಾಷಿತ, ಭಾಗವತದಿಂದ…


ಅಣುಭ್ಯಶ್ಚ ಮಹದ್ಭಶ್ಚ ಶಾಸ್ತ್ರೇಭ್ಯಃ ಕುಶಲೋ ನರಃ |
ಸರ್ವತಃ ಸಾರಮಾದದ್ಯಾತ್ ಪುಷ್ಪೇಭ್ಯಂ ಇವ ಷಟ್ಪದಃ || ಭಾಗವತ ಮಹಾಪುರಾಣ ||
ಅರ್ಥ: ಶಾಸ್ತ್ರಗಳು ಚಿಕ್ಕವಿರಲಿ, ದೊಡ್ಡವಿರಲಿ ಅವುಗಳ ಸಾರವತ್ತಾದ ಭಾಗವನ್ನು ಹೂವಿನಿಂದ ದುಂಬಿಯು ಮಧುವನ್ನು ಸಂಗ್ರಹಿಸುವಂತೆ ಸಂಗ್ರಹಿಸಬೇಕು.
ತಾತ್ಪರ್ಯ: ದುಂಬಿ (ಅಥವಾ ಜೇನು) ಹೂವಿನಿಂದ ಹೂವಿಗೆ ಹಾರಿ ಮಕರಂದವನ್ನು ಸಂಗ್ರಹಿಸುತ್ತವೆ. ಈ ಕೆಲಸಕ್ಕೆ “ಮಧುಕರ ವೃತ್ತಿ” ಎಂದು ಕರೆಯಲಾಗಿದೆ. ಯಾವುದೇ ವಿಷಯವನ್ನು ಸಾರ ರೂಪದಲ್ಲಿ ಸಂಗ್ರಹಿಸುವ ಪ್ರವೃತ್ತಿಗೆ ಮಧುಕರ ವೃತ್ತಿ ಎಂದು ಹೆಸರು.
ನಮ್ಮ ಜೀವನದ ಅವಧಿ ತುಂಬಾ ಕಡಿಮೆ. ಈ ಅವಧಿಯಲ್ಲಿ ಓದಬೇಕಾದ, ತಿಳಿಯಬೇಕಾದ ವಿಷಯಗಳು ಅಪಾರವಾಗಿರುತ್ತವೆ. ಒಂದು ಜನ್ಮದಲ್ಲಿ ಎಲ್ಲಾ ಶಾಸ್ತ್ರಗಳನ್ನು ಓದಿ ಮುಗಿಸಲಿಕ್ಕೆ ಸಾಧ್ಯವಿಲ್ಲ. ಇನ್ನು ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ವಿಷಯವಂತೂ ದೂರ. ಆದ್ದರಿಂದ; ಶಾಸ್ತ್ರಗಳಲ್ಲಿ ಮಹತ್ವವಾದ ಅಂಶವನ್ನು ಓದಿ – ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ, ಅನೇಕ ರೀತಿಯ ಶಾಸ್ತ್ರ ಜ್ಞಾನವನ್ನು ಸ್ವಲ್ಪಮಟ್ಟಿಗಾದರೂ ಪಡೆಯುವುದು ಸಾಧ್ಯವಾಗುತ್ತದೆ.
ಅಷ್ಟೇ ಅಲ್ಲ, ಎಲ್ಲ ಶಾಸ್ತ್ರಗಳೂ ಎಲ್ಲರಿಗೂ ಸಂಪೂರ್ಣವಾಗಿ ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದ, ನಮಗೆ ಎಷ್ಟು ಬೇಕೋ ಅಷ್ಟು ಮಾತ್ರ, ನಮಗೆ ಉಪಯುಕ್ತವಾಗುವಂತೆ ಗ್ರಹಿಸಿ, ಅದರ ಲಾಭ ಪಡೆಯುವುದು ಜಾಣತನ. ಹೀಗೆ ಗ್ರಹಿಸುವಾಗ ಅವುಗಳ ಅರ್ಥ ವ್ಯತ್ಯಾಸವಾಗದಂತೆ ಹಾಗೂ ಸಾಂದರ್ಭಿಕ ಅರ್ಥ ವ್ಯತಿರಿಕ್ತವಾಗದಂತೆ ಎಚ್ಚರವಹಿಸುವುದು ಮುಖ್ಯ.

Leave a Reply