ತೃಣೀಕರೋತಿ ತೃಷ್ಣೈಕಾ….| ಯೋಗವಾಸಿಷ್ಠದಿಂದ ಒಂದು ಸುಭಾಷಿತ

“ತೃಣೀಕರೋತಿ ತೃಷ್ಣೈಕಾ…” ಒಂದೇ ಒಂದು ತೀವ್ರ ಹಂಬಲ, ಕೇವಲ ಒಂದು ತೀವ್ರ ಹಂಬಲ ನಮ್ಮನ್ನು ಹುಲ್ಲಿಗೆ ಸಮನಾಗಿ ಮಾಡಿಬಿಡುತ್ತದೆ… | ಗಾಯತ್ರಿ

ಯೋಗವಾಸಿಷ್ಠ  ಹೀಗೆ ಹೇಳುತ್ತದೆ:
ಅಪಿ ಮೇರುಸಮಂ ಪ್ರಾಜ್ಞಮಪಿ ಶೂರಮಪಿ ಸ್ಥಿರಂ|
ತೃಣೀಕರೋತಿ ತೃಷ್ಣೈಕಾ ನಿಮೇಷೇಣ ನರೋತ್ತಮಮ್ || 1.17.50||

“ಮೇರು ಪರ್ವತದ ಹಾಗೆ ಸ್ಥಿರವಾದವರು, ಅದರ ಎತ್ತರದಷ್ಟು ಜ್ಞಾನವಿದರೂ (ಅಷ್ಟು ಹಿರಿಮೆಯುಳ್ಳವರೂ) ಶೂರರೂ ಆಗಿರುವಂಥವರು ಕೂಡಾ ಒಂದು ತೀವ್ರ ಹಂಬಲದ ಸುಳಿಗೆ ಸಿಕ್ಕುಬಿಟ್ಟರೆ ಕ್ಷಣ ಮಾತ್ರದಲ್ಲಿ ಹಿರಿಮೆಗರಿಮೆಗಳನೆಲ್ಲ ಕಳೆದುಕೊಂಡು ಹುಲ್ಲಿನ ಮಟ್ಟಕ್ಕೆ ಇಳಿದುಬಿಡುತ್ತಾರೆ. ಹಂಬಲದ ಪಾಶ ಹೀಗಿರುತ್ತದೆ” – ಎಂದು ಇದರ ಅರ್ಥ.

ಹಾಗೇ ಇಲ್ಲೊಂದು ಪ್ರಶ್ನೆ, “ಮನುಷ್ಯ ಬೆಟ್ಟದಂತೆಯೇ ಯಾಕಿರಬೇಕು? ತಗ್ಗಲಾರೆ, ಬಾಗಲಾರೆ, ಎದೆ ಸೆಟೆಸಿಕೊಂಡೇ ನಿಲ್ಲುವೆ ಅನ್ನುವ ಹಮ್ಮು ಯಾಕೆ ಬೇಕು? ಇಷ್ಟಕ್ಕೂ ‘ದೃಢವಾಗಿರುವುದೂ ಒಂದು ಅಹಂಕಾರವೇ’
ಸ್ಥಿರವಾಗಿ ಬೇರೂರಿ ನಿಂತರಷ್ಟೆ ಗುರುತು. ಹೆಜ್ಜೆ ಕಿತ್ತರೆ ನಿಂತ ನೆಲದ ಮೇಲಿನ ಒಡೆತನ ಕಳೆದಂತೆಯೇ.

ಈ ಸುಭಾಷಿತದಲ್ಲಿ ಹುಲ್ಲಾಗುವುದನ್ನು ನಕಾರಾತ್ಮಕವಾಗೇ ತೆಗೆದುಕೊಳ್ಳಬೇಕಿಲ್ಲ. ನಮ್ಮೆಲ್ಲ ಅಹಂಕಾರದ ಹೆಗ್ಗಲ್ಲನ್ನು ಕುಟ್ಟಿ ಪುಡಿ ಮಾಡಿ ಪಳಗಿಸಿ, ಬಳಕುವ ಬಾಗುವ ಹುಲ್ಲಾಗಿ ಮಾಡುವಂಥ – ಅಂಥದೊಂದು ತೀವ್ರ ಹಂಬಲ ಬೆಳೆಸಿಕೊಂಡರೆ ಬದುಕೆಷ್ಟು ಚೆಂದ!!

ತೃಷ್ಣಾ ಅನ್ನುವ ಪದದ ಅರ್ಥವನ್ನು ಕನ್ನಡದಲ್ಲಿ ಹೇಳುವುದು ಹೇಗೆ?
ತೃಷ್ಣಾ ಅಂದರೆ ಬಾಯಾರಿಕೆ ಕೂಡಾ. ಯಶಸ್ಸಿನ ಬಾಯಾರಿಕೆ. ಕಾಮಾದಿಗಳ ಹಪಾಹಪಿ. ಕೀರ್ತಿಯ ಹಂಬಲ.
ತೃಷ್ಣಾ ಅಂದರೆ ತೀವ್ರ ಬಯಕೆಯಂಥದು ಕೂಡಾ.

ಆದರೆ, ಹೆಜ್ಜೆ ಕೀಳದೆ ನಡಿಗೆ ಸಾಧ್ಯವೆ?

ತಗ್ಗುವುದು ಬಗ್ಗುವುದು ಸೋಲೇ ಆಗಿರಬೇಕೆಂದಿಲ್ಲ. ಅದು ಸೌಹಾರ್ದವೂ, ಸೌಜನ್ಯವೂ, ಸಹಜೀವನ ಪಾಠವೂ ಯಾಕಾಗಿರಬಾರದು?

ತೃಣೀಕರೋತಿ ತೃಷ್ಣೈಕಾ….
ವಿನಯದಿಂದ ಬಾಗುವ, ಸ್ವೀಕರಿಸುವ, ತೊನೆಯುವ, ಅಲ್ಪಕಾಲವೇ ಇದ್ದರೂ ನಲಿದು ಬಾಡಿ ಮುಗಿದುಹೋಗುವ ಹುಲ್ಲು, ಮೈಬಿಗಿದು ನಿಂತ ಮೇರುಗಿರಿಗಿಂತ ಮೇಲಲ್ಲವೆ?
ಅಂಥ ಬಿಗುವನ್ನು, ಹಮ್ಮನ್ನು ಕಳೆದು ಹುಲ್ಲಾಗಿಸಬಲ್ಲ ತೀವ್ರ ಹಂಬಲವೊಂದು ಯಾಕಿರಬಾರದು?

Leave a Reply