ಸಂಪು ಹಾಯ್ಕು, ಓಶೋ ವ್ಯಾಖ್ಯಾನ, ವ್ಯಾನ್’ಗೋ ನಿದರ್ಶನ…

ಸಂಪು ಬರೆಯುತ್ತಾನೆ :  
ನೆಲತಬ್ಬಿ ಕಾಯುತ್ತಿದೆ ಮಗು.
ಮೋಡದ ಗುಬ್ಬಿ
ಎತ್ತರ, ಇನ್ನೂ ಎತ್ತರ.

“ಹುಟ್ಟಿದ ಕೂಡಲೇ ಮಗು ನೆಲದಲ್ಲಿ ತನ್ನ ಬೇರುಗಳನ್ನು ಇಳಿಸಿಕೊಳ್ಳಬೇಕು. ಅಲ್ಲಿ ಭದ್ರವಾಗಿ ನೆಲೆಯೂರಿದರಷ್ಟೆ ಬಲಿತು ತನ್ನ ರೆಂಬೆಕೊಂಬೆಗಳನ್ನು ಹರಡಿಕೊಳ್ಳಲು ಸಾಧ್ಯವಾಗುವುದು.” ಎಂದು ಸಂಪು ರಚನೆಯ ಹಾಯ್ಕುವನ್ನು ವ್ಯಾಖ್ಯಾನಿಸುತ್ತಾರೆ ಓಶೋ |  ಅನುವಾದ : ಅಲಾವಿಕಾ

ತಾಯಿ ಗರ್ಭದಿಂದ ಹೊರಬಂದ ಮೇಲಿಂದ ಮಗುವಿಗೆ ನೆಲದ ಹಂಬಲ ಶುರುವಾಗುತ್ತದೆ. ಹುಟ್ಟಿದ ಕೂಡಲೇ ಮಗು ನೆಲದಲ್ಲಿ ತನ್ನ ಬೇರುಗಳನ್ನು ಇಳಿಸಿಕೊಳ್ಳಬೇಕು. ಅಲ್ಲಿ ಭದ್ರವಾಗಿ ನೆಲೆಯೂರಿದರಷ್ಟೆ ಬಲಿತು ತನ್ನ ರೆಂಬೆಕೊಂಬೆಗಳನ್ನು ಹರಡಿಕೊಳ್ಳಲು ಸಾಧ್ಯವಾಗುವುದು. ಹಾಗೆ ನೆಲದಲ್ಲಿ ಬೇರೂರದೆ ಇದ್ದವರಿಗೆ ಆಕಾಶದಲ್ಲಿ ತಮ್ಮನ್ನು ಚಾಚಿಕೊಳ್ಳಲು ಸಾಧ್ಯವಾಗದು. ಬೇರುಗಳು ನೆಲದಲ್ಲಿ ಆಳಕ್ಕೆ ಇಳಿದಷ್ಟೂ ಮರವು ಎತ್ತರಕ್ಕೂ ವಿಶಾಲವಾಗಿಯೂ ಬೆಳೆಯುವುದು. ಗಗನಚುಂಬಿಯಾಗುವುದು. ಗ್ರಹ ನಕ್ಷತ್ರಗಳನ್ನು ತಲುಪುವುದು.

ವಿನ್ಸೆಂಟ್ ವ್ಯಾನ್’ಗೋ ಚಿತ್ರಗಳನ್ನು ಗಮನವಿಟ್ಟು ನೋಡಿ. ಆ ಚಿತ್ರಗಳನ್ನು ಧ್ಯಾನಿಸಿ. ಆಗ ನಿಮಗೆ ಇದು ಅರ್ಥವಾಗಬಹುದು. ಅವನ ಕಲಾಕೃತಿಯಲ್ಲಿ ಮೂಡಿರುವ ಮರಗಳು ನಮ್ಮ ಸುತ್ತ ಕಾಣುವ ಮರಗಳಂತೆ ಇರುವುದಿಲ್ಲ. ಅವು ಪ್ರಕೃತಿಯಿಂದ ಸೃಷ್ಟಿಯಾಗಿಲ್ಲ. ಅವು ವ್ಯಾನ್’ಗೋನಿಂದ ಸೃಷ್ಟಿಯಾದಂಥವು. ಅವು ವ್ಯಾನ್’ಗೋನಿಂದ ಸೃಷ್ಟಿಯಾಗಿವೆ ಅನ್ನುವುದಕ್ಕಿಂತ, ವ್ಯಾನ್’ಗೋ ಅವುಗಳ ಮೂಲಕ ಉಸಿರಾಡುತ್ತಿದ್ದಾನೆ ಅನ್ನಬಹುದು.

ವ್ಯಾನ್’ಗೋ ಸೃಷ್ಟಿಸಿದ ಮರಗಳು ನಿಸರ್ಗದ ನಕಲಲ್ಲ. ಅದು ಅವನದೇ ಆತ್ಯಂತಿಕ ಸೃಷ್ಟಿ. ಕಲಾಜಗತ್ತಿನಲ್ಲಿ ಕಲಾವಿದನೇ ಸ್ವಯಂಬ್ರಹ್ಮ. ಅಂತೆಯೇ ವ್ಯಾನ್’ಗೋ ಬ್ರಹ್ಮನಾಗಿದ್ದರೆ ಸೃಷ್ಟಿಯ ಮರಗಳೆಲ್ಲವೂ ಅವನ ಚಿತ್ರದ ಮರಗಳಂತೆಯೇ ಇರುತ್ತಿದ್ದವು; ಮತ್ತು ಅವು ತಮ್ಮ ರೆಂಬೆಕೊಂಬೆಗಳನ್ನು ಗ್ರಹನಕ್ಷತ್ರಗಳ ವರೆಗೆ ಚಾಚಿ ಗಗನವನ್ನು ಚುಂಬಿಸುತ್ತಿದ್ದವು!
ಒಮ್ಮೆ ಒಬ್ಬ ಕಲಾಪ್ರೇಮಿ ವ್ಯಾನ್’ಗೋ ರಚಿಸಿದ ಕಲಾಕೃತಿಯ ಮರಗಳನ್ನು ನೋಡಿ, “ನಿಮಗೆ ಇಂಥಾ ವಿಲಕ್ಷಣ ಕಲ್ಪನೆಗಳು ಎಲ್ಲಿಂದ ಬರುತ್ತವೆ?” ಎಂದು ಕೇಳಿದರಂತೆ. ಆಗ ವ್ಯಾನ್’ಗೋ, “ಈ ಕಲ್ಪನೆಗಳು ಎಲ್ಲೋ ಹೊರಗಿನಿಂದ ಬಂದವಲ್ಲ, ನನ್ನೊಳಗೇ ಮೂಡಿದವು. ಇವುಗಳ ಜನ್ಮದಾತ ನಾನೇ. ನನ್ನ ಈ ಮರಗಳಿಗೆ ನಕ್ಷತ್ರಗಳನ್ನು ಮುಟ್ಟುವ ತವಕ. ಈ ಮರಗಳು ನೆಲದ ಆಳಕ್ಕಿಳಿಯುತ್ತಲೇ ಆಗಸವನ್ನೂ ತಲುಪುವ ಹಂಬಲವನ್ನು ಸೂಚಿಸುತ್ತವೆ.” ಎಂದನಂತೆ.
ಮತ್ತೂ ಮುಂದುವರೆದು ಆತ ಹೇಳಿದ ಮಾತುಗಳು ಎಷ್ಟು ಸೊಗಸಾಗಿವೆ ನೋಡಿ; “ಭೂಮಿಯು ನಿದ್ರೆಯಲ್ಲಿ ಕಂಡ ಕನಸುಗಳಿವು, ಈ ನನ್ನ ಚಿತ್ರಗಳು. ನೆಲದ ಒಡಲಿಂದ ಚಾಚಿದ ಬಯಕೆಯ ಕೈಗಳಿವು”

ವ್ಯಾನ್’ಗೋ ನಕ್ಷತ್ರಗಳನ್ನು ಕೂಡಾ ಸುರುಳಿಸುರುಳಿಯಾಗಿ, ವಿಶಿಷ್ಟವಾಗಿ ಚಿತ್ರಿಸುತ್ತಿದ್ದ. ದೊಡ್ಡ ದೊಡ್ಡ ಕಲಾವಿದರು ಅದನ್ನು ಕಂಡು, “ನಕ್ಷತ್ರಗಳು ಸುರುಳಿಯಾಗಿ ಇರುವುದಿಲ್ಲ” ಎಂದು ಅವನಿಗೆ ಬುದ್ಧಿ ಹೇಳಲು ಪ್ರಯತ್ನಿಸಿದ್ದರು. ಆಗ ವ್ಯಾನ್’ಗೋ “ಅದು ನನಗೆ ಗೊತ್ತು. ಆಕಾಶದಲ್ಲಿ ಮಿನುಗುವ ನಕ್ಷತ್ರಗಳನ್ನು ನಾನೂ ನೋಡಿದ್ದೇನೆ. ಆದರೆ, ಅವುಗಳನ್ನು ಚಿತ್ರಿಸಲು ಕುಳಿತ ಕೂಡಲೇ, ಅವು ನನ್ನ ಮನಸಿನಲ್ಲಿ ಸುರುಳಿಗಟ್ಟುತ್ತವೆ. ಅವು ಇರುವುದು ಹಾಗೆಯೇ, ದೂರದ ಕಾರಣದಿಂದ ನಮಗೆ ಸುರುಳಿಯಾಕಾರ ತೋರುವುದಿಲ್ಲ ಎಂದು ನನ್ನ ಒಳಮನಸು ಹೇಳತೊಡಗುತ್ತದೆ. ಅದು ಎಷ್ಟು ಖಚಿತವಾಗಿ ಅದನ್ನು ಹೇಳುತ್ತದೆ ಎಂದರೆ, ಅದನ್ನು ನಂಬಿಕೊಳ್ಳದೆ ನನಗೆ ಬೇರೆ ದಾರಿಯೇ ಉಳಿಯುವುದಿಲ್ಲ” ಅನ್ನುತ್ತಿದ್ದ.

ವ್ಯಾನ್’ಗೋ ಇಂಥಾ ವಿಲಕ್ಷಣ ವ್ಯಕ್ತಿಯಾಗಿದ್ದ. ಆದರೆ ಅಂದಿನ ಸಮಾಜ ಅವನನ್ನು ಹುಚ್ಚನೆಂದು ತಿಳಿಯಿತು. ತನ್ನಿಂದ ದೂರವಿಟ್ಟಿತು. ಅವನ ಸಹೋದರ ನೀಡುತ್ತಿದ್ದ ದುಡ್ಡಿನಲ್ಲಿ ಊಟಕ್ಕೆ ಕಡಿಮೆ ಮಾಡಿಕೊಂಡು ಉಳಿಸಿ, ತನ್ನ ಕಲಾಸೃಷ್ಟಿಗೆ ಬೇಕಾದ ಪರಿಕರಗಳನ್ನು ಕೊಳ್ಳುತ್ತಿದ್ದ ವ್ಯಾನ್’ಗೋ. ಅವನ ಕಾಲದಲ್ಲಿ ಯಾರೂ ಆತನ ಕಲಾಕೃತಿಗಳ ಶ್ರೇಷ್ಠತೆಯನ್ನು ಗುರುತಿಸಲಿಲ್ಲ. ಬದಲಿಗೆ, ಅವನನ್ನು ಹುಚ್ಚಾಸ್ಪತ್ರೆಗೆ ತಳ್ಳಿತು. ಪರಿಣಾಮವಾಗಿ ವ್ಯಾನ್’ಗೋ, ಹುಚ್ಚಾಸ್ಪತ್ರೆಯಿಂದ ಬಿಡುಗಡೆಯಾಗುತ್ತಲೇ, ತನ್ನ 33ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ.

ಹುಚ್ಚಾಸ್ಪತ್ರೆಯಲ್ಲಿದ್ದಾಗ ಒಮ್ಮೆ ವ್ಯಾನ್’ಗೋನಿಗೆ ಸೂರ್ಯನನ್ನು ಚಿತ್ರಿಸಬೇಕೆಂಬ ಬಯಕೆಯಾಯಿತು. ಸೂರ್ಯನ ಸಮಗ್ರತೆಯನ್ನು ತನ್ನ ಕುಂಚದಲ್ಲಿ ಮೂಡಿಬೇಕೆಂದು ತೀವ್ರವಾಗಿ ಬಯಸಿದ. ಆದರೆ ಹುಚ್ಚಾಸ್ಪತ್ರೆಯ ಸಿಬ್ಬಂದಿ ಅದಕ್ಕೆ ಅವಕಾಶ ನೀಡಲಿಲ್ಲ. ಹೇಗೂ ಪ್ರಯತ್ನಪಟ್ಟು ವ್ಯಾನ್’ಗೋ ಸೂರ್ಯನ ಕಲಾಕೃತಿಯನ್ನು ರಚಿಸಿದ. ಅದಕ್ಕೆ ಅವನಿಗೆ ತಗುಲಿದ್ದ ಪೂರಾ ಒಂದು ವರ್ಷ!
ಈ ಕೃತಿಯನ್ನು ರಚಿಸಲು ಅವನು ಸೂರ್ಯನನ್ನು ತನ್ನೊಳಗೆ ಆವಾಹಿಸಿಕೊಳ್ಳುತ್ತಿದ್ದ. ದಿನವಿಡೀ ಸೂರ್ಯನನ್ನು ನೆಟ್ಟ ದಿಟ್ಟಿಯಿಂದ ನೋಡುತ್ತಾ ನಿಂತುಬಿಡುತ್ತಿದ್ದ. ಹೀಗೆ ದಿನಗಟ್ಟಲೆ ನೋಡಿದ ಪರಿಣಾಮ ಅವನ ರೆಪ್ಪೆಗಳು ಮುರುಟಿಹೋದವು. ದೃಷ್ಟಿ ಮಂದವಾಯಿತು. “ದಿನವೂ ಕಾಣುವುದು ಅದೇ ಸೂರ್ಯ. ಅವನನ್ನು  ಪ್ರತಿದಿನವೂ ನೋಡುವುದೇನಿದೆ?” ಎಂದು ಆಸ್ಪತ್ರೆಯಲ್ಲಿದ್ದವರು ಕೇಳುತ್ತಿದ್ದರಂತೆ. ಆಗ ವ್ಯಾನ್’ಗೋ, “ಪ್ರತಿ ದಿನ ಬರುವುದು ಅದೇ ಸೂರ್ಯನಾದರೂ ಪ್ರತಿದಿನವೂ ಕಾಣುವುದು ಅದೇ ಸೂರ್ಯನಲ್ಲ. ನೀವು ಎಂದಾದರೂ ಕತ್ತೆತ್ತಿ ಸೂರ್ಯನನ್ನು ನೋಡಿದ್ದರೆ ನಿಮಗದು ತಿಳಿಯುತ್ತಿತ್ತು. ಈವರೆಗೆ ನಾನು ಒಂದೇ ಬಗೆಯ ಸೂರ್ಯೋದಯವನ್ನಾಗಲೀ ಸೂರ್ಯಾಸ್ತವನ್ನಾಗಲೀ ಎರಡು ಸಲ ಕಂಡಿಲ್ಲ. ಸೂರ್ಯನ ಈ ವಿಲಕ್ಷಣತೆಯನ್ನು ಹಿಡಿದಿಡುವ ಹಂಬಲವೇ ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸಿದ್ದು” ಎಂದಿದ್ದನಂತೆ!

ಸೂರ್ಯನ ಕಲಾಕೃತಿ ಸಿದ್ಧಗೊಳ್ಳುವ ವೇಳೆಗೆ ವ್ಯಾನ್’ಗೋ ಕಣ್ಣುಗಳು ಹೆಚ್ಚೂಕಡಿಮೆ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದವು.
ಈ ಕಲಾಕೃತಿಯ ರಚನೆ ಮುಗಿಸಿ ಹುಚ್ಚಾಸ್ಪತ್ರೆಯಿಂದ ಬಿಡುಗಡೆಗೊಂಡ ವ್ಯಾನ್’ಗೋ, ತನ್ನ ಸಹೋದರನಿಗೆ ಒಂದು ಪತ್ರ ಬರೆದ. “ಜಗತ್ತಿನಲ್ಲಿ ಸಾರ್ಥಕತೆಯನ್ನು ಅನುಭವಿಸಿದ ಕೆಲವೇ ಜನರಲ್ಲಿ ಈಗ ನಾನೂ ಒಬ್ಬನಾಗಿದ್ದೇನೆ. ನಾನು ನಿರಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿಲ್ಲ. ಬದಲಿಗೆ, ಸಾರ್ಥಕ ಭಾವದಿಂದ ಸಾಯಲು ಹೊರಟಿದ್ದೇನೆ. ನನ್ನ ಸುತ್ತಲಿನ ಜಗತ್ತು ನನ್ನನ್ನು ನಿಂದಿಸುತ್ತಿದ್ದರೂ ವಿಚಲಿತನಾಗದೆ ಸಂಕಲ್ಪಿಸಿದ ಕೆಲಸವನ್ನು ಮಾಡಿ ಮುಗಿಸಿದ್ದೇನೆ. ಸೂರ್ಯನನ್ನು ಸಮಗ್ರವಾಗಿ ಹಿಡಿದಿಡುವುದು ನನ್ನ ಹಂಬಲವಾಗಿತ್ತು. ಅದು ನೆರವೇರಿದೆ. ನಾನು ಸಂತೃಪ್ತನಾಗಿರುವೆ. ನಾನಿನ್ನು ಬದುಕಲು ಬೇರೆ ಕಾರಣಗಳೇ ಇಲ್ಲ, ಬದುಕುವ ಅಗತ್ಯವೂ ಇಲ್ಲ. ನಾನು ಕಲೆಗಾಗಿ ಬದುಕಿದ್ದೆ. ಕಲೆಯೇ ನನ್ನ ಬದುಕು ಹೊರತು, ಕೇವಲ ಉಸಿರಾಟವಲ್ಲ. ನಾನಿನ್ನು ಹೊರಡುತ್ತೇನೆ”
ಇದಾದ ಮೇಲೆ ವ್ಯಾನ್’ಗೋ ತನಗೆ ತಾನೆ ಗುಂಡಿಟ್ಟುಕೊಂಡು ಮುಗಿದುಹೋದ. ವ್ಯಾನ್’ಗೋನ ಇಂಥಾ ಸಾವನ್ನು ಯಾರಾದರೂ ಆತ್ಮಹತ್ಯೆ ಎಂದು ಕರೆಯಬಲ್ಲರೆ?

ಯಾರಾದರೂ ಒಬ್ಬ ಕಲವಿದಾನನ್ನು ಕುರಿತು “ಅವನಿಗೆ ತಲೆ ಕೆಟ್ಟಿದೆ” ಅಂದರೆ, ಆತ ಸಂತೋಷಪಡಬೇಕು. ತಾನು ದೈನಂದಿನ ಮಾಮೂಲು ಸಂಗತಿಗಳಿಂದ ಹೊರತಾಗಿದ್ದೇನೆಂದು ತಿಳಿಯಬೇಕು. ಜನಸಾಮಾನ್ಯರ ಊಹೆಗೂ ನಿಲುಕದ ಕಲ್ಪನೆಯ ರೆಕ್ಕೆಗಳು ತನಗೆ ಮೂಡತೊಡಗಿವೆ ಎಂದು ತಿಳಿಯಬೇಕು.

ಸಂಪು ಹೇಳುತ್ತಿದ್ದಾನೆ, “ನೆಲ ತಬ್ಬಿದ ಮಗು ಮೋಡದ ಗುಬ್ಬಿಯಾಗಲು ಕಾಯುತ್ತಿದೆ. ಮತ್ತು ಆ ಮೋಡವು ಇನ್ನೂ ತೀರಾ ಎತ್ತರದಲ್ಲಿದೆ”. ಮಗು ನೆಲದಲ್ಲಿ ತನ್ನ ಬೇರುಗಳನ್ನು ಆಳವಾಗಿ ಇಳಿಯಬಿಟ್ಟಷ್ಟೂ ಎತ್ತರಕ್ಕೆ ಏರುತ್ತಾ ಹೋಗುವುದು. (ವ್ಯಾನ್’ಗೋನಂತೆ?)  

1 Comment

Leave a Reply