ಮಾಯೆ, ಸಾಕ್ಷಾತ್ಕಾರ, ಬ್ರಹ್ಮಚರ್ಯ ಇತ್ಯಾದಿ ಪ್ರಶ್ನೆಗಳಿಗೆ ರಮಣ ಮಹರ್ಷಿಗಳ ಉತ್ತರ

ಸಂದರ್ಶಕರು ಹಾಗೂ ಶಿಷ್ಯರು ಕೇಳಿದ ಪ್ರಶ್ನೆಗಳಿಗೆ ರಮಣ ಮಹರ್ಷಿಗಳು ನೀಡಿದ ಉತ್ತರಗಳನ್ನು ‘ಶ್ರೀ ರಮಣ ಮಹರ್ಷಿಗಳೊಡನೆ ಮಾತುಕತೆ’ ಕೃತಿಯಲ್ಲಿ ಸಂಕಲಿಸಲಾಗಿದೆ. ಈ ಕೃತಿಯಿಂದ ಪ್ರಶ್ನೋತ್ತರಗಳನ್ನು ಆಯ್ದು ಇಲ್ಲಿ ನೀಡಲಾಗಿದೆ…

(ಆಕರ ಕೃಪೆ: ಶ್ರೀ ರಮಣ ಮಹರ್ಷಿಗಳೊಡನೆ ಮಾತುಕತೆ | ಆಂಗ್ಲಮೂಲ: ಮುನಗಾಲ ವೆಂಕಟರಾಮಯ್ಯ)

ಶಿ : ಮಾಯೆ ಎಂದರೇನು?

ಮ : ಮಾಯೆ(ಭ್ರಮೆ) ಎಂಬುದು ಯಾರಿಗೆ? ಅದನ್ನು ಹುಡುಕಿ. ಆಗ ಭ್ರಮೆಯೇ ಮಾಯವಾಗುತ್ತದೆ. ಸಾಮಾನ್ಯವಾಗಿ ಮಾಯೆ ಎಂದರೇನು ಎಂಬುದನ್ನು ತಿಳಿಯಲು ಜನರು ಬಯಸುತ್ತಾರೆ. ಅದು ಯಾರಿಗೆ ಎಂದು ಪರಿಶೀಲಿಸುವುದಿಲ್ಲ. ಅದು ಶುದ್ಧ ಅವಿವೇಕ. ಭ್ರಮೆ ಬಾಹ್ಯವಾದದ್ದು, ತಿಳಿಯದಿರುವುದು. ಆದರೆ ಶೋಧಕನು ತಿಳಿವಿಗೆ ಸಿಲುಕುವವನು, ಅಂತರಂಗದಲ್ಲಿರುವವನು. ಯಾವುದು ಸಮೀಪದಲ್ಲಿದೆಯೋ, ಆತ್ಮೀಯವಾಗಿದೆಯೋ ಅದನ್ನು ಹುಡುಕಿ – ದೂರದ ಅಪರಿಚಿತ ವಸ್ತುವನ್ನು ಹುಡುಕುವ ಬದಲು.

ಶಿ : ಆತ್ಮಸಾಕ್ಷಾತ್ಕಾರಕ್ಕೆ ಉದ್ಯೋಗ ಒಂದು ಬಂಧಕವೆ?

ಮ : ಇಲ್ಲ, ಆತ್ಮಾನುಭವಿಗೆ ಆತ್ಮವೊಂದೇ ಪರಮಸತ್ಯ. ಕರ್ಮಗಳು ತೋರಿಕೆ ಮಾತ್ರ; ಆತ್ಮವನ್ನು ಅವು ಬಾಧಿಸಲಾರವು. ಕರ್ಮ ಮಾಡುವಾಗಲೂ ಮಾಡುತ್ತಿದ್ದೇನೆ ಎಂಬ ಅರಿವು ಅವನಿಗಿರುವುದಿಲ್ಲ. ಅವನ ಕರ್ಮಗಳೆಲ್ಲ ಅನೈಚ್ಛಿಕ. ಯಾವ ಬಂಧನಕ್ಕೂ ಒಳಗಾಗದೆ ಕೇವಲ ಸಾಕ್ಷಿಯಂತೆ ಅವನು ಇರುತ್ತಾನೆ. ಇಂತಹ ಕರ್ಮಕ್ಕೆ ಯಾವ ಉದ್ದೇಶವೂ ಇಲ್ಲ. ಕರ್ಮದಲ್ಲಿ ತೊಡಗಿರುವಾಗಲೂ ಜ್ಞಾನಮಾರ್ಗಿಯು ಆತ್ಮಸಾಧನೆಯನ್ನು ಬಿಡಬೇಕಿಲ್ಲ. ಸಾಧನೆಯ ಆರಂಭದಲ್ಲಿ ಅದು ಕಷ್ಟವೆನಿಸಬಹುದು, ಆದರೆ ಅಭ್ಯಾಸದ ನಂತರ ಇದು ಪರಿಣಾಮಕಾರಿಯಾಗುತ್ತದೆ. ಕರ್ಮವು ಧ್ಯಾನಕ್ಕೆ ಎಂದೂ ಬಾಧಕವೆನಿಸುವುದಿಲ್ಲ.

ಶಿ : ಯಾವ ಅಭ್ಯಾಸ? ಹಾಗೆಂದರೇನು?

ಮ : ನಾನು ಎಂಬುದನ್ನು ಸತತವಾಗಿ ಹುಡುಕುವುದು. ಅದೇ ಅಹಂನ ಮೂಲ. “ನಾನು ಯಾರು?” ಎಂಬುದನ್ನು ಕಂಡುಹಿಡಿಯಿರಿ. ಶುದ್ಧ ಆತ್ಮವೇ ಪರಮಸತ್ಯ. ಅದೇ ಪರಿಪೂರ್ಣ ಅಸ್ತಿತ್ವ, ಪ್ರಜ್ಞೆ ಹಾಗೂ ಆನಂದ (ಸತ್-ಚಿತ್-ಆನಂದ). ಅದನ್ನು ಮರೆತರೆ ಎಲ್ಲ ದುಃಖಗಳೂ ತಲೆಯೆತ್ತುತ್ತವೆ. ಅತ್ಮವನ್ನು ಬಲವಾಗಿ ಹಿಡಿದರೆ ದುಃಖಗಳು ಮನುಷ್ಯನನ್ನು ತಟ್ಟುವುದಿಲ್ಲ.

ಶಿ : ಆತ್ಮಸಾಕ್ಷಾತ್ಕಾರಕ್ಕೆ ಬ್ರಹ್ಮಚರ‍್ಯ ಅವಶ್ಯಕವಲ್ಲವೆ?

ಮ : ಬ್ರಹ್ಮನಲ್ಲಿ ನೆಲೆಸುವುದೇ ಬ್ರಹ್ಮಚರ್ಯ. ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುವ ಬ್ರಹ್ಮಚರ್ಯಕ್ಕೂ ಅದಕ್ಕೂ ಸಂಬಂಧವಿಲ್ಲ. ಬ್ರಹ್ಮನಲ್ಲಿ ನೆಲೆಸುವ ಬ್ರಹ್ಮಚಾರಿಯು ಆತ್ಮವೇ ಆದ ಬ್ರಹ್ಮನಲ್ಲಿಯೂ ಆನಂದವನ್ನು ಕಾಣುತ್ತಾನೆ. ಸುಖದ ಇತರ ಸಾಧನೆಗಳಿಗಾಗಿ ಏಕೆ ಹಾತೊರೆಯಬೇಕು? ಆತ್ಮವನ್ನು ಮರೆತು ದೂರ ಬಂದಿರುವುದೇ ಎಲ್ಲ ದುಃಖಗಳಿಗೆ ಕಾರಣ

Leave a Reply