ವೈರುಧ್ಯಗಳ ಬಿಕ್ಕಟ್ಟು : ಜಿಡ್ಡು ಕಂಡ ಹಾಗೆ

ನಾವು ಯಾಕೆ ಬದುಕನ್ನ ಒಳಿತು ಮತ್ತು ಕೆಡುಕು ಎನ್ನುವ ಎರಡು ಸಂಗತಿಗಳ ನಡುವೆ ಭಾಗ ಮಾಡಿ ನಮಗಾಗಿ ನರಕವನ್ನ ಸೃಷ್ಟಿ ಮಾಡಿಕೊಳ್ಳುತ್ತಿದ್ದೇವೆ? ಇರುವುದು ಒಂದೇ ಸಂಗತಿಯಲ್ಲವೇ? ಅದು ‘ ಎಚ್ಚರದ ಸ್ಥಿತಿಯಲ್ಲಿರದ ಮೈಂಡ್’ ಅಲ್ಲವೆ ?

~ ಜಿಡ್ಡು ಕೃಷ್ಣಮೂರ್ತಿ । ಕನ್ನಡಕ್ಕೆ: ಚಿದಂಬರ ನರೇಂದ್ರ

ನನಗೆ ಆಶ್ಚರ್ಯ, ಕೆಡುಕು ಎನ್ನುವ ಸಂಗತಿಯೊಂದು ಇದೆಯೆ? ನಾವು ಯಾವಾಗಲೂ ಒಳಿತು ಮತ್ತು ಕೆಡುಕು ಎರಡರ ಬಗ್ಗೆಯೂ ಮಾತನಾಡುತ್ತೇವೆ. ಪ್ರೇಮ ಇರುವ ಬಗ್ಗೆ, ಅಸೂಯೆ ಕಾಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರೇಮಕ್ಕೆ ಒಳಿತಿನ ಮತ್ತು ಅಸೂಯೆಗೆ ಕೆಡುಕಿನ ಹಣೆಪಟ್ಟಿ ಕಟ್ಟುತ್ತೇವೆ. ಯಾಕೆ ನಾವು ಒಳಿತು ಮತ್ತು ಕೆಡುಕುಗಳ ಹೆಸರಿನಲ್ಲಿ ಬದುಕನ್ನ ಭಾಗ ಮಾಡಿ ವೈರುಧ್ಯಗಳ ಬಿಕ್ಕಟ್ಟನ್ನು ಹುಟ್ಟು ಹಾಕುತ್ತೇವೆ?

ಹಾಗೆಂದ ಮಾತ್ರಕ್ಕೆ ಮನುಷ್ಯನ ಬುದ್ಧಿ ಮತ್ತು ಮನಸ್ಸಿನಲ್ಲಿ ಅಸೂಯೆ, ದ್ವೇಷ, ಕ್ರೌರ್ಯ ಇಲ್ಲವೆಂದಲ್ಲ, ಅಂತಃಕರಣ ಹಾಗು ಪ್ರೇಮಗಳ ಅನುಪಸ್ಥಿತಿ ಇದೆ ಎಂದಲ್ಲ, ಆದರೆ ನಾವು ಯಾಕೆ ಬದುಕನ್ನ ಒಳಿತು ಮತ್ತು ಕೆಡುಕು ಎನ್ನುವ ಎರಡು ಸಂಗತಿಗಳ ನಡುವೆ ಭಾಗ ಮಾಡಿ ನಮಗಾಗಿ ನರಕವನ್ನ ಸೃಷ್ಟಿ ಮಾಡಿಕೊಳ್ಳುತ್ತಿದ್ದೇವೆ? ಇರುವುದು ಒಂದೇ ಸಂಗತಿಯಲ್ಲವೇ? ಅದು ‘ ಎಚ್ಚರದ ಸ್ಥಿತಿಯಲ್ಲಿರದ ಮೈಂಡ್’ ಅಲ್ಲವೆ ?

ಖಂಡಿತ, ಬುದ್ಧಿ-ಮನಸ್ಸು (ಮೈಂಡ್) ಎಚ್ಚರದ ಸ್ಥಿತಿಯಲ್ಲಿರುವಾಗ, ಸಂಪೂರ್ಣ ಅರಿವು, ಜಾಗ್ರತ ಮತ್ತು ಮೈಯೆಲ್ಲ ಕಣ್ಣಾಗಿರುವ ಸ್ಥಿತಿಯಲ್ಲಿರುವಾಗ ಒಳಿತು, ಕೆಡುಕು ಎನ್ನುವ ಎರಡು ಸಂಗತಿಗಳಿಗೆ ಬದುಕಿನಲ್ಲಿ ಜಾಗವೇ ಇಲ್ಲ ; ಇರುವುದು ಒಂದೇ ಪೂರ್ಣ ಎಚ್ಚರದ ಸ್ಥಿತಿ. ಆಗ ಒಳ್ಳೆಯತನ ಒಂದು ಗುಣವಲ್ಲ, ಒಂದು ಮೌಲ್ಯವಲ್ಲ ಅದು ಪ್ರೇಮದ ಒಂದು ಸ್ಥಿತಿ ಮಾತ್ರ.

ಪ್ರೇಮದ ಉಪಸ್ಥಿತಿಯಲ್ಲಿ ಒಳಿತು ಮತ್ತು ಕೆಡುಕುಗಳಿಗೆ ಸ್ಥಾನವಿಲ್ಲ ಇರುವುದು ಪ್ರೇಮ ಮಾತ್ರ. ನೀವು ಯಾರನ್ನಾದರೂ ಪ್ರೀತಿಸುದ್ದೀರಾದರೆ, ನೀವು ಒಳಿತು ಕೆಡುಕುಗಳ ಬಗ್ಗೆ ಯೋಚನೆ ಮಾಡುವುದಿಲ್ಲ, ನಿಮ್ಮ ಇಡೀ ಅಸ್ತಿತ್ವ ಪ್ರೇಮದಿಂದ ತುಂಬಿರುತ್ತದೆ. ನಿಮ್ಮ ಬುದ್ಧಿ-ಮನಸ್ಸು ಪೂರ್ಣವಾಗಿ ಎಚ್ಚರದ ಸ್ಥಿತಿಯಲ್ಲಿ ಇಲ್ಲದಿರುವಾಗ, ಪ್ರೇಮ ಇಲ್ಲದಿರುವಾಗ, ನಾನು ಏನಾಗಿದ್ದೇನೆ, ನಾನು ಏನಾಗಬೇಕಿತ್ತು ಮುಂತಾದ ಸಂಘರ್ಷಗಳು ಸೃಷ್ಟಿಯಾಗುತ್ತವೆ. ಆಗ ಆ ‘ನಾನು ಏನಾಗಿರುವೆ’ ಎನ್ನುವುದು ಕೆಡುಕಿನಂತೆಯೂ ‘ನಾನು ಏನಾಗಬೇಕಿತ್ತು’ ಎನ್ನುವುದು ಒಳಿತು ಎಂದು ಭಾಸವಾಗತೊಡಗುತ್ತವೆ.

ನಿಮ್ಮ ಮನಸ್ಸನ್ನು ಸೂಕ್ಷ್ಮವಾಗಿ ಗಮನಿಸಿ, ನಿಮ್ಮ ಮನಸ್ಸು ‘ ನಾನು ಏನೋ ಆಗಬೇಕು’ ಎಂದು ಆಲೋಚಿಸುವುದನ್ನ ನಿಲ್ಲಿಸಿದ ಕ್ಷಣದಲ್ಲಿ ಅಲ್ಲೊಂದು ಸ್ಥಗಿತತೆ ಇದೆ ಆದರೆ ಆ ಸ್ಥಗಿತತೆ ನಿಂತ ನೀರಲ್ಲ; ಅದು ಸಂಪೂರ್ಣ ಎಚ್ಚರದ ಸ್ಥಿತಿ, ಅದೇ ಒಳ್ಳೆಯತನ.

2 Comments

  1. ಮನಮೋಹಕದ ತಾಣ.. ಈ ಮಟ್ಟಿಗಂತು ಒಂದು ನಿಶ್ಚಿತ ವೆಬ್ ಆಗಲಿ ಕನ್ನಡಿಗರಿಗೆ

  2. ಎಷ್ಟು ಸರಳ ಕ್ನನಡದಲ್ಲಿ ಹೇಳಿದ್ದೀರಿ! Thank you!

Leave a Reply