ಅಖಂಡ ಬ್ರಹ್ಮ ಎಲ್ಲದರಲ್ಲಿಯೂ ಇರುವನು

ನಮ್ಮ ದೇಹದಲ್ಲಿ ಪರಮಾತ್ಮನ ಪ್ರತಿಬಿಂಬವಾದ ಆತ್ಮವು ಇರುವವರೆಗೂ ನಮಗೆ ಜೀವ ಇರುತ್ತದೆ. ನಮ್ಮ ದೇಹದಿಂದ ಪ್ರತಿಬಿಂಬ ಕದಲಿದ ಕ್ಷಣ, ಆತ್ಮ ಕದಲಿದ ಕ್ಷಣ ಸಾವು ಸಂಭವಿಸುತ್ತದೆ. ಹಾಗಾದರೆ ಆ ಆತ್ಮ ಎಲ್ಲಿ ಹೋಗುತ್ತದೆ? ಅದು ಕೇವಲ ಪ್ರತಿಬಿಂಬ ಮಾತ್ರವಾಗಿದ್ದರಿಂದ, ಮೂಲವಸ್ತು ಏನಿತ್ತೋ, ಎಲ್ಲಿತ್ತೋ ಅದು ಹಾಗೆಯೇ ಅವಿಚ್ಛಿನ್ನವಾಗಿ ಉಳಿದಿರುತ್ತದೆ. ಪ್ರತಿಬಿಂಬ ಲೀನವಾಗುತ್ತದೆ ~ ಸಾ.ಹಿರಣ್ಮಯಿ

ಯಥೈವಾದರ್ಶಮಧ್ಯಸ್ಥೇ ರೂಪೇSನ್ತಃ ಪರಿತಸ್ತು ಸಃ |
ತಥೈವಾಸ್ಮಿನ್ ಶರೀರೇSನ್ತಃ ಪರಿತಃ ಪರಮೇಶ್ವರಃ || 1.19 ||
ಏಕಂ ಸರ್ವಗತಂ ವ್ಯೋಮ ಬಹಿರನ್ತರ್ಯಥಾ ಘಟೇ |
ನಿತ್ಯಂ ನಿರನ್ತರಂ ಬ್ರಹ್ಮ ಸರ್ವಭೂತಗಣೇ ತಥಾ || 1. 20 ||

ಅರ್ಥ : ಹೇಗೆ ಪ್ರತಿಬಿಂಬಿಸುತ್ತಿರುವ ವಸ್ತು ಕನ್ನಡಿಯೊಳಗೆ ಮತ್ತು ಹೊರಗೆ ಇರುತ್ತದೆಯೋ, ಹಾಗೆಯೇ ಪರಮಾತ್ಮನೂ ಈ ಶರೀರದ ಒಳಗೂ ಹೊರಗೂ ಇರುತ್ತಾನೆ. ಹೇಗೆ ಆಕಾಶವು ಮಡಿಕೆಯ ಒಳಗೂ ಹೊರಗೂ ಇರುವುದೋ, ಹಾಗೆಯೇ ಅಖಂಡ ಬ್ರಹ್ಮ ಎಲ್ಲದರಲ್ಲಿಯೂ ಇರುವನು.

ತಾತ್ಪರ್ಯ : ಕನ್ನಡಿಯೊಳಗೆ ಪ್ರತಿಬಿಂಬ ಮೂಡಿದೆಯಾದರೆ, ಅದರ ಎದುರಲ್ಲೊಂದು ವಸ್ತು ಇರಲೇಬೇಕು. ಹಾಗೆಯೇ, ಎದುರಿಗೆ ಕನ್ನಡಿ ಇದೆಯಾದರೆ, ಎದುರಲ್ಲೊಂದು ವಸ್ತುವೂ ಇರಬೇಕಾದುದು ಅಗತ್ಯ. ಕನ್ನಡಿಯಲ್ಲಿ ಮೂಡಿರುವ ಪ್ರತಿಬಿಂಬ ಯಥಾವತ್ ವಸ್ತುವೇ ಆಗಿದೆ. ಆದರೂ ಅದು ಸ್ವತಃ ಆ ವಸ್ತುವಲ್ಲ. ಏಕಕಾಲದಲ್ಲಿ ಆ ವಸ್ತು ಕನ್ನಡಿಯ ಒಳಗೂ (ಅಂದರೆ ಪರದೆಯ ಮೇಲೂ) ಹೊರಗೂ ಇದೆ. ಆದರೆ ಕನ್ನಡಿಯಲ್ಲಿ ಮೂಡಿರುವುದು ತಾನೇ ಆಗಿದ್ದರೂ ಅದು ತಾನಲ್ಲ. ಕನ್ನಡಿ ಸ್ವಲ್ಪ ಕದಲಿದರೂ ಸಾಕು. ವಸ್ತುವಿನ ಪ್ರತಿಬಿಂಬ ಇಲ್ಲವಾಗುತ್ತದೆ. ಆದರೆ ಮೂಲದಲ್ಲಿ ವಸ್ತು ಏನಿದೆಯೋ ಅದು ಹಾಗೇ ಇರುತ್ತದೆ. ಯಾವುದು ಇಲ್ಲವಾಗುತ್ತದೆಯೋ ಅದು ಈ ಸೃಷ್ಟಿ. ಯಾವುದು ಮೊದಲೂ ಇತ್ತು, ಅನಂತರದಲ್ಲೂ ಇದೆಯೋ ಅದು ಪರಮಾತ್ಮ. ಅದು ವಸ್ತುವಿನ ಒಳಗೂ ಇದೆ, ಹೊರಗೂ ಇದೆ. ಎಷ್ಟು ಕಾಲ ಸೃಷ್ಟಿಯು ಪ್ರತಿಬಿಂಬಿಸುತ್ತದೆಯೋ ಅಷ್ಟು ಹೊತ್ತು ಆ ಸೃಷ್ಟಿಗೆ ಅಸ್ತಿತ್ವ ಇರುತ್ತದೆ. ಪ್ರತಿಬಿಂಬ ಇಲ್ಲವಾದ ಕ್ಷಣ ಸೃಷ್ಟಿಯೂ ಮಹತ್ವ ಕಳೆದುಕೊಳ್ಳುತ್ತದೆ.

ನಮ್ಮ ದೇಹದಲ್ಲಿ ಪರಮಾತ್ಮನ ಪ್ರತಿಬಿಂಬವಾದ ಆತ್ಮವು ಇರುವವರೆಗೂ ನಮಗೆ ಜೀವ ಇರುತ್ತದೆ. ನಮ್ಮ ದೇಹದಿಂದ ಪ್ರತಿಬಿಂಬ ಕದಲಿದ ಕ್ಷಣ, ಆತ್ಮ ಕದಲಿದ ಕ್ಷಣ ಸಾವು ಸಂಭವಿಸುತ್ತದೆ. ಹಾಗಾದರೆ ಆ ಆತ್ಮ ಎಲ್ಲಿ ಹೋಗುತ್ತದೆ? ಅದು ಕೇವಲ ಪ್ರತಿಬಿಂಬ ಮಾತ್ರವಾಗಿದ್ದರಿಂದ, ಮೂಲವಸ್ತು ಏನಿತ್ತೋ, ಎಲ್ಲಿತ್ತೋ ಅದು ಹಾಗೆಯೇ ಅವಿಚ್ಛಿನ್ನವಾಗಿ ಉಳಿದಿರುತ್ತದೆ. ಪ್ರತಿಬಿಂಬ ಲೀನವಾಗುತ್ತದೆ.
ಅಷ್ಟಾವಕ್ರ ಸೃಷ್ಟಿಯ ಮೂಲಸ್ವರೂಪವನ್ನಿಲ್ಲಿ ಹೇಳುತ್ತಿದ್ದಾನೆ. ಪ್ರತಿಬಿಂಬದಲ್ಲಿರುವುದೂ ಪರಮಾತ್ಮನೇ, ಮೂಲ ವಸ್ತುವೂ ಪರಮಾತ್ಮನೇ ಎಂದು ವಿವರಿಸುತ್ತಿದ್ದಾನೆ.

ಮುಂದುವರಿದು ಹೇಳುತ್ತಾನೆ, ಹೇಗೆ ಆಕಾಶವು ಮಡಿಕೆಯೊಳಗೂ ಹೊರಗೂ ಇರುವುದೋ ಹಾಗೆಯೇ ಅಖಂಡ ಬ್ರಹ್ಮ ಎಲ್ಲದರಲ್ಲೂ ಇರುವನು ಎಂದು.
ಆಕಾಶ ಅಂದರೆ ಅವಕಾಶ, ಸ್ಪೇಸ್. ಆಕಾಶ ಅಂದರೆ ಅನಂತವಾದ ಖಾಲಿ. ಯಾವ ಖಾಲಿಯು ಅನಂತ ಹುಟ್ಟುಗಳಿಗೆ ಕಾರಣವಾಗಬಲ್ಲದೋ ಅಂತಹ ಶೂನ್ಯ. ಯಾವ ಪದಾರ್ಥವನ್ನೂ ತುಂಬಿಸಿರದ ಮಡಿಕೆಯೊಳಗೆ ಏನಿರುತ್ತದೆ? ಖಾಲಿ. ಏನೂ ಇಲ್ಲದಲ್ಲಿ ಏನೋ ಒಂದು ಇರುತ್ತದೆ. ಆ ‘ಏನೋ ಒಂದು’ – ಖಾಲಿ ಅಥವಾ ಆಕಾಶವೇ ಆಗಿರುತ್ತದೆ.
ಮಡಿಕೆಯೊಳಗೆ ಆಕಾಶವಿದೆ, ಮಡಿಕೆಯ ಹೊರಗೂ ಇದೆ. ಭೂಮಿಯ ಮೇಲಿನ ಖಾಲಿಯಲ್ಲೆಲ್ಲ ಇರುವುದು ಆಕಾಶವೇ ತಾನೆ?
ಈಗೊಂದು ಪ್ರಶ್ನೆ. ಏನೂ ಪದಾರ್ಥವಿಲ್ಲದ, ಮುಚ್ಚಿದ ಮಡಿಕೆಗೆ ರಂಧ್ರ ಕೊರೆದರೆ ಏನಾಗುತ್ತದೆ? ಅದರೊಳಗಿನ ಖಾಲಿಯೆಲ್ಲ ಸೋರಿ, ಹೊರಗಿನ ಖಾಲಿಯನ್ನು ಸೇರುತ್ತದೆ! ಮಡಿಕೆಯೊಳಗಿನ ಆಕಾಶವೆಲ್ಲ ಸೋರಿ ಹೊರಗಿನ ಆಕಾಶದಲ್ಲಿ ಲೀನವಾಗುತ್ತದೆ. ರಂಧ್ರದ ಸುರಂಗದ ಮೂಲಕ ಒಳ – ಹೊರಗಿನ ಆಕಾಶಗಳು ಬೆರೆತು ಅನಂತ ಮಾತ್ರವೇ ಉಳಿಯುತ್ತದೆ. ಅಖಂಡ ಆಕಾಶವೇ ತಾನಾಗುತ್ತದೆ.

ಇದನ್ನು ದೇಹದೊಳಗಿನ ಪರಮ ಜೀವದ್ರವ್ಯಕ್ಕೆ ಅನ್ವಯಿಸಿ ನೋಡಿ. ಜೀವವು ದೇಹದಿಂದ ಸೋರಿ ಅನಂತ ಜೀವನಲ್ಲಿ ಲೀನವಾಗುತ್ತದೆ. ಅದು ಮೊದಲೂ ಇತ್ತು, ಅನಂತರದಲ್ಲೂ ಇರುತ್ತದೆ. ದೇಹದೊಳಗೆ ಇರುವಷ್ಟು ಕಾಲ ತನ್ನನ್ನು ಆಕಾರಕ್ಕೆ ಮಿತವಾಗಿಸಿಕೊಂಡು ಆಲೋಚಿಸುತ್ತಾ ಇರುತ್ತದೆ. ಆಕಾರದಿಂದ ಮುಕ್ತಿ ಪಡೆದ ಕ್ಷಣ, ನಿರಾಕಾರದಲ್ಲಿ ಒಂದಾಗಿ, ನಿರಾಕಾರವೇ ತಾನಾಗಿಹೋಗುತ್ತದೆ.

ಆದ್ದರಿಂದ, ಹೇ ಜನಕ ಮಹಾರಾಜ! ಅಂತಹಾ ನಿಶ್ಚಲ ನಿರಾಕಾರವೇ ನೀನೆಂದು ತಿಳಿ. ಕ್ಷುದ್ರ ಆಲೋಚನೆಗಳನ್ನು ಬಿಡು. ಅದನ್ನು ಬಿಡದೆ ನೀನು ಆತ್ಮವಿಚಾರವನ್ನು ಗ್ರಹಿಸಲಾರೆ – ಎಂದು ಅಷ್ಟಾವಕ್ರ ಮುನಿ ಬೋಧಿಸುತ್ತಾನೆ.

(ಒಂದನೇ ಅಧ್ಯಾಯ ಮುಗಿಯಿತು)

8 Comments

  1. Thanks for the Kannada version of Ashtavakra Gita.Please continue it till last.Super article.

  2. ಕನ್ನಡಲ್ಲಿ ಇಂತಹ ಪ್ರಯತ್ನ ನಡೆದದ್ದು ತೀರಾ ಕಡಿಮೆ, ಇಷ್ಟು ಸಮಂಜಸವಾಗಿ, ಅಚ್ಚುಕಟ್ಟಾಗಿ ವ್ಯಾಖ್ಯಾನಿಸಿದ ಹಿರಣ್ಮಯಿಯವರಿಗೂ, ಅವರಿಗೆ ವೇದಿಕೆ ಕಲ್ಪಿಸಿಕೊಟ್ಟ ನೆಚ್ಚಿನ ಅರಳೀಮರಕ್ಕೂ ಹೃತ್ಪೂರ್ವಕ ಧನ್ಯವಾದಗಳು ಹಾಗು ಪ್ರಣಾಮಗಳು. ಎರಡನೇ ಅಧ್ಯಾಯವೂ ಇದೇ ರೀತಿ ಶೀಘ್ರ/ಮುಂದುವರೆಯಲಿ ಎಂದು ಹಾರೈಸುತ್ತೇನೆ

  3. Please accept our thanks and congratulations on the success of your recent series on Ashtavakra Geeta. Thanks again for such uplifting article.

Leave a Reply