ಸೆಕ್ಸ್ ಮನುಷ್ಯನ ಮೂಲಭೂತ ಅವಶ್ಯಕತೆಯಲ್ಲವೆ? | ಯೂಜಿ ಮಾತು

ಸೆಕ್ಸ್ ನ ನಿಗ್ರಹ ಮತ್ತು ಒತ್ತಾಯ ಎರಡೂ ನಿಮ್ಮನ್ನ ಮನುಷ್ಯನ ನ್ಯಾಚುರಲ್ ಸ್ಟೇಟ್ ಗೆ ಕರೆದೊಯ್ಯುವುದಿಲ್ಲ. ಎಲ್ಲಿಯವರೆಗೆ ನೀವು ದೇವರ ಬಗ್ಗೆ ಯೋಚಿಸುತ್ತೀರೋ ಅಲ್ಲಿಯವರೆಗೆ ನಿಮ್ಮೊಳಗೆ ಸೆಕ್ಸ್ ಬಗ್ಗೆ ಆಲೋಚನೆಗಳು ಹುಟ್ಟುತ್ತಲೇ ಇರುತ್ತವೆ : ಯು ಜಿ ಕೃಷ್ಣಮೂರ್ತಿ | ಕನ್ನಡಕ್ಕೆ : ಚಿದಂಬರ ನರೇಂದ್ರ

ಆಹಾರ, ಬಟ್ಟೆ ಮತ್ತು ಮನೆ, ಸೋ ಕಾಲ್ಡ್ ನಾಗರೀಕ ಮನುಷ್ಯನ ಮೂಲಭೂತ ಅವಶ್ಯಕತೆಗಳು. ಇವನ್ನ ನೀವು ಗಳಿಸಬೇಕಾಗಬಹುದು ಅಥವಾ ಯಾರಾದರೂ ಇವನ್ನ ನಿಮಗೆ ಕೊಡಬೇಕಾಗುತ್ತದೆ. ಇವಷ್ಟೇ ನಿಮ್ಮ ಅವಶ್ಯಕತೆಗಳಾದರೆ ಪಡೆದುಕೊಳ್ಳುವುದು ಅಷ್ಟು ಕಷ್ಚವಾಗಲಿಕ್ಕಿಲ್ಲ. ಈ ಅವಶ್ಯಕತೆಗಳನ್ನ ತಿರಸ್ಕರಿಸುವುದು, ತ್ಯಜಿಸುವುದು ಅಧ್ಯಾತ್ಮದ ಲಕ್ಷಣವಲ್ಲ ; ಆದರೆ ಇದಕ್ಕಿಂತ ಹೆಚ್ಚಿನದನ್ನ ಬಯಸುವುದು ಮಾತ್ರ ಬೇರೆ ಬೇರೆ ಹಂತಗಳ ಮಾನಸಿಕ ರೋಗದ ಸ್ಥಿತಿ.

ಹಾಗಾದರೆ ಸೆಕ್ಸ್ ಮನುಷ್ಯನ ಮೂಲಭೂತ ಅವಶ್ಯಕತೆಯಲ್ಲವೆ? ಸೆಕ್ಸ್ , ಮನುಷ್ಯನ ಆಲೋಚನೆಯ ಕೂಸು ; ಜನನಾಂಗಗಳ ಮತ್ತು ಹಾರ್ಮೋನುಗಳ ಸಮತೋಲನ ಬಿಟ್ಟರೆ ಗಂಡು, ಹೆಣ್ಣಿನ ನಡುವೆ ಅಂಥ ಯಾವ ವ್ಯತ್ಯಾಸವೂ ಇಲ್ಲ. ನಾನು ಗಂಡು, ನಾನು ಹೆಣ್ಣು ಎಂದು ಘೋಷಿಸುವುದು ಮನುಷ್ಯನ ‘ಆಲೋಚನೆ’ (thought). ಮನುಷ್ಯನ ಬಯಕೆಗಳನ್ನ, ಇವು ಲೈಂಗಿಕ ಬಯಕೆಗಳು ಎಂದು ನಿರ್ಧಾರ ಮಾಡುವ ಕೆಲಸವೂ ಆಲೋಚನೆಯದ್ದೇ. ಹಾಗು ಸೆಕ್ಸ್ ಗೆ ಬೇಕಾಗುವ ಪ್ರಚೋದನೆಯನ್ನು (build up) ಕಟ್ಚಿಕೊಡುವ ಕೆಲಸವನ್ನೂ ಆಲೋಚನೆಯೇ ಮಾಡುತ್ತದೆ. ಹೆಣ್ಣನ್ನು ನೋಡುವುದಕ್ಕಿಂತ ಮುಟ್ಟುವುದು, ಮುಟ್ಟುವುದಕ್ಕಿಂತ ಅಪ್ಪಿಕೊಳ್ಳುವುದು, ಅಪ್ಪಿಕೊಳ್ಳುವುದಕ್ಕಿಂತ ಮುತ್ತಿಡುವುದು ಹೆಚ್ಚು ಹೆಚ್ಚು ಸುಖ ಎಂದು ತೀರ್ಮಾನಮಾಡಿ ಹೇಳುವುದು ಮನುಷ್ಯನ ಆಲೋಚನೆಯೇ. ಆದರೆ ಮನುಷ್ಯನ ಸಹಜ ಸ್ಥಿತಿಯಲ್ಲಿ (Natural State) ಥಾಟ್ ನ ಈ ಬಿಲ್ಡಪ್ ಗೆ ಅವಕಾಶವಿಲ್ಲ ಹಾಗು ಬಿಲ್ಡಪ್ ಇಲ್ಲದೇ ಸೆಕ್ಸ್ ಕೂಡ ಸಾಧ್ಯವಿಲ್ಲ. ದೇಹಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ದೇಹಕ್ಕೆ ಸೆಕ್ಸ್ ತುಂಬ ಹಿಂಸೆ ಕೊಡುವ ಸಂಗತಿ. ದೇಹ ಬಹುತೇಕ ಶಾಂತ ಸ್ಥಿತಿಯಲ್ಲಿರುವ ಜೀವಿ. ಆಲೋಚನೆ, ತನಗೆ ಸುಖದ ಅನುಭವ ಕೊಡುತ್ತದೆ ಎಂದು ದೇಹವನ್ನು ಅಪಾರ ಒತ್ತಡ ಮತ್ತು ಬಿಡುಗಡೆಗೆ ನೂಕಿದಾಗ ದೇಹಕ್ಕೆ ಹಿಂಸೆ. ಈ ಹಿಂಸೆಯನ್ನ ಸುಖ ಎಂದು ಥಾಟ್ ಅನುವಾದ ಮಾಡಿ ಮನುಷ್ಯನ ಮುಖ್ಯ ಸಮಸ್ಯೆಯೊಂದಕ್ಕೆ ಕಾರಣವಾಗಿದೆ.

ಆದರೆ ಸೆಕ್ಸ್ ನ ನಿಗ್ರಹ ಮತ್ತು ಒತ್ತಾಯ ಎರಡೂ ನಿಮ್ಮನ್ನ ಮನುಷ್ಯನ ನ್ಯಾಚುರಲ್ ಸ್ಟೇಟ್ ಗೆ ಕರೆದೊಯ್ಯುವುದಿಲ್ಲ. ಎಲ್ಲಿಯವರೆಗೆ ನೀವು ದೇವರ ಬಗ್ಗೆ ಯೋಚಿಸುತ್ತೀರೋ ಅಲ್ಲಿಯವರೆಗೆ ನಿಮ್ಮೊಳಗೆ ಸೆಕ್ಸ್ ಬಗ್ಗೆ ಆಲೋಚನೆಗಳು ಹುಟ್ಟುತ್ತಲೇ ಇರುತ್ತವೆ. ಬ್ರಹ್ಮಚರ್ಯವನ್ನ ಪಾಲಿಸುವ ಯಾವ ಧಾರ್ಮಿಕ ಸಾಧಕನನ್ನಾದರೂ ಕೇಳಿ ನೋಡಿ, ಅವನಿಗೆ ನಿದ್ದೆಯಲ್ಲಿ ಲೈಂಗಿಕ ಕನಸುಗಳು ಬೀಳುವುದರ ಬಗ್ಗೆ. ಸೆಕ್ಸ್ ನಲ್ಲಿ ಸಾಧ್ಯವಾಗುವ ಪರಾಕಾಷ್ಠತೆಯ (climax) ಲೈಂಗಿಕ ಅನುಭವ ಒಂದೇ ಮನುಷ್ಯನ ಫಸ್ಟ್ ಹ್ಯಾಂಡ್ ಎಕ್ಸಪೀರಿಯನ್ಸ್. ಬಾಕಿ ಎಲ್ಲ ಮನುಷ್ಯ ಅನುಭವಗಳೂ ಅವನು ಇನ್ನೊಬ್ಬರಿಂದ ಎರವಲು ಪಡೆದದ್ದು (second hand experience). ಹೀಗಿರುವಾಗಲೂ ಯಾಕೆ ಮನುಷ್ಯ ಸೆಕ್ಸ್ ನ ಸುತ್ತ ಇಷ್ಟೊಂದು ನಿಷೇಧಗಳನ್ನ (taboo) ಇಷ್ಟೊಂದು ಬೇಕು ಬೇಡಗಳನ್ನ ಕಟ್ಟಿಕೊಂಡಿದ್ದಾನೆ? ಯಾಕೆ ಸೆಕ್ಸ್ ಸಾಧ್ಯಮಾಡುವ ಆನಂದವನ್ನು ತಿರಸ್ಕರಿಸುತ್ತಾನೆ? ಸ್ವಚ್ಛಂದ ಮತ್ತು ಭೋಗವನ್ನ ಬೆಂಬಲಿಸುತ್ತಿದ್ದೇನೆ ಎಂದಲ್ಲ ಆದರೆ ಸೆಕ್ಸ್ ನ ನಿಗ್ರಹ ಮತ್ತು ನಿಷೇಧಗಳಿಂದ ಯಾವ ಸಾಧನೆಗೂ ಸಹಾಯವಾಗುವುದಿಲ್ಲ.

1 Comment

  1. ಅಧ್ಯಾತ್ಮದ ಬಗೆಗಿನ ವಿಶೇಷ ಲೇಖನಗಳನ್ನು ಪ್ರಕಟಿಸುತ್ತಿರುವ ಅರಳಿಮರ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು.
    ಸಾಧ್ಯವಾದರೆ ಅಲ್ಲಮಪ್ರಭು ಮತ್ತು ಶಿಶುನಾಳ ಶರೀಫರ ಬಗ್ಗೆಯೂ ಲೇಖನಗಳನ್ನು ಪ್ರಕಟಿಸಿ.

Leave a Reply