ನಿಜವಾದ ಶಿವಾಜಿ ಮಹಾರಾಜರನ್ನು ನಾವು ಮರೆತುಬಿಟ್ಟಿದ್ದೇವೆಯೆ?

ಫೆಬ್ರವರಿ 19, ಈ ಅಪ್ರತಿಮ ವ್ಯಕ್ತಿತ್ವದ ಜನ್ಮದಿನ. ಶಿವಾಜಿ ಬಹಿರಂತರಂಗ ಯುದ್ಧಗಳೆರಡರಲ್ಲೂ ಹೋರಾಟ ನಡೆಸಿದವರು. ಕ್ಷಾತ್ರ ತೇಜ ಮಾತ್ರವಲ್ಲ, ಆಧ್ಯಾತ್ಮಿಕ ಸಾಧನೆ – ಶ್ರದ್ಧೆಯಲ್ಲೂ ಉನ್ನತಿ ಸಾಧಿಸಿದ್ದ ಶಿವಾಜಿ ಪರಿಪಕ್ವತೆಗೊಂದು ಸಾರ್ವಕಾಲಿಕ ನಿದರ್ಶನ. ಈ ನಿಟ್ಟಿನಲ್ಲಿ ನಾವು ಶಿವ್ ಬಾ ಅವರನ್ನು ನೆನೆಯಬೇಕಲ್ಲವೆ? ~ ಚೇತನಾ ತೀರ್ಥಹಳ್ಳಿ

ಶಿವಾಜಿ ಸಮರ್ಥ ರಾಮದಾಸರ ಶಿಷ್ಯರಾಗಿದ್ದರು. ರಾಮದಾಸರ ಚಿಂತನೆಗಳು ಅವರ ಮೇಲೆ ಅಸೀಮ ಪ್ರಭಾವ ಬೀರಿದ್ದವು. ತೀವ್ರ ಆಧ್ಯಾತ್ಮಿಕ ಸೆಳೆತಕ್ಕೆ ಒಳಗಾಗಿದ್ದ ಶಿವಾಜಿ ಒಂದು ಹಂತದಲ್ಲಿ ರಾಜ್ಯಭಾರ ತೊರೆದು ರಾಮದಾಸರ ಶಿಷ್ಯವೃತ್ತಿ ಮಾಡಿಕೊಂಡು ಇದ್ದುಬಿಡುತ್ತೇನೆಂದು ಹೊರಟುಬಿಟ್ಟಿದ್ದರು ಅನ್ನುತ್ತದೆ ಇತಿಹಾಸ. ಆದರೆ, ಕಾಲ ಸಂದರ್ಭಕ್ಕೆ ಶಿವಾಜಿ ರಾಜನಾಗಿ ಮುಂದುವರೆಯುವುದೇ ಹೆಚ್ಚು ಅಗತ್ಯವಾಗಿತ್ತು. ಆದ್ದರಿಂದ ಅವರನ್ನು ತಡೆದ ಗುರು ರಾಮದಾಸರು ಶಿವಾಜಿಗೆ ಕರ್ತವ್ಯ ಬೋಧನೆ ಮಾಡಿ, ಅರಸನಾಗಿ ಆತ ಮಾಡಲೇಬೇಕಿರುವ ಕೆಲಸಗಳ ಬಗ್ಗೆ ತಿಳಿವಳಿಕೆ ನೀಡಿದರು ಕರ್ತವ್ಯ ಪಾಲನೆಗಿಂತ ಶ್ರೇಷ್ಠವಾದ ಧಾರ್ಮಿಕ ಸಾಧನೆಯಿಲ್ಲ ಎಂದು ಮನದಟ್ಟು ಮಾಡಿಕೊಟ್ಟರು.

ಅದರಂತೆ ಮರಳಿ ರಾಜ್ಯ ವರ್ಧನೆಯಲ್ಲಿ ಹಾಗೂ ಪ್ರಜಾರಕ್ಷಣೆಯಲ್ಲಿ ತೊಡಗಿಕೊಳ್ಳುವ ಶಿವಾಜಿ ಅಪಾರ ಯಶಸ್ಸನ್ನೂ ಪಡೆದರು. ಮುಂದೆ ಸಮರ್ಥ ರಾಮದಾಸರ ಮನವೊಲಿಸಿ ತನ್ನ ಆಡಳಿತ ಕೇಂದ್ರಕ್ಕೆ ಸಮೀಪದ ಸಜ್ಜನ ಗಡದಲ್ಲಿ ಅವರಿಗೆ ವಾಸ್ತವ್ಯ ಕಲ್ಪಿಸಿಕೊಟ್ಟು ಗುರುಸೇವೆಯನ್ನು ಅತ್ಯಂತ ಶ್ರದ್ಧೆಯಿಂದ ನಡೆಸಿದರು.

ಶಿವಾಜಿ ಭವಾನಿ ದೇವಿಯ ಅಪ್ರತಿಮ ಭಕ್ತನೂ ಆಗಿದ್ದರು. ಅವರ ಭಕ್ತಿಯ ಕುರಿತು ಅನೇಕ ದಂತಕಥೆಗಳು ಚಾಲ್ತಿಯಲ್ಲಿವೆ. ಆತ ದೇವಿಯನ್ನು ಒಲಿಸಿಕೊಂಡು ‘ಭವಾನೀಖಡ್ಗ’ವನ್ನು ಪಡೆದ ಎನ್ನುವುದು ಅವುಗಳಲ್ಲೊಂದು. ಈ ಖಡ್ಗವನ್ನು ಹಿಡಿದು ರಣಾಂಗಣಕ್ಕಿಳಿದರೆ ಶಿವಾಜಿಗೆ ಸೋಲೇ ಇರುತ್ತಿರಲಿಲ್ಲ ಎನ್ನುತ್ತವೆ ಜನಪದಗಾಥೆಗಳು. ಶಿವಾಜಿ 1661ರಲ್ಲಿ ತುಳಜಾಪುರದಲ್ಲಿ ಭವಾನಿ ದೇವಾಲಯವೊಂದನ್ನು ನಿರ್ಮಿಸಿದ್ದು, ಈ ದೇವಾಲಯದ ಭಿತ್ತಿಯಲ್ಲಿ ದೇವಿಯು ಶಿವಾಜಿಗೆ ಖಡ್ಗ ನೀಡುತ್ತಿರುವ ಚಿತ್ರವನ್ನು ಕೆತ್ತಲಾಗಿದೆ.
ಶಿವಾಜಿಯ ಆಧ್ಯಾತ್ಮಿಕಪ್ರವೃತ್ತಿಗೆ ಆತನ ಸರ್ವಧರ್ಮ ಸಮಭಾವವೇ ಸಾಕ್ಷಿ. ಔರಂಗಜೇಬನಿಗೆ ಬರೆದಿದ್ದ ಎನ್ನಲಾದ ಪತ್ರದಲ್ಲಿ ಶಿವಾಜಿ, `ಆಚಾರ ವಿಚಾರಗಳಲ್ಲಿ ಹಿಂದೂ – ಇಸ್ಲಾಮ್ ಈ ಎರಡು ಧರ್ಮಗಳು ಪರಸ್ಪರ ವಿರುದ್ಧ ಬಣ್ಣಗಳಿದ್ದಂತೆ. ಭಗವಂತನೆಂಬ ಶ್ರೇಷ್ಠ ಕಲಾವಿದ ಈ ಬಣ್ಣಗಳನ್ನು ಕಲೆಸಿ ಅತ್ಯುತ್ತಮ ಚಿತ್ರ ರಚಿಸುತ್ತಾನೆ. ಮಸೀದಿಯಲ್ಲಿ ಆತನನ್ನು ನೀವು ಪ್ರಾರ್ಥನೆಯ ಮೂಲಕ ಕೂಗಿದರೆ, ಮಂದಿರಗಳಲ್ಲಿ ಗಂಟೆ ಜಾಗಟೆಗಳಿಂದ ಆಹ್ವಾನಿಸುತ್ತಾರೆ’ ಎಂದು ಉಭಯ ಧರ್ಮಗಳ ಸಮನ್ವಯತೆಯನ್ನು ಪ್ರತಿಪಾದಿಸಿದ್ದಾರೆ.

ಅಷ್ಟೇ ಅಲ್ಲ, ಶಿವಾಜಿಗೆ ಸೂಫೀ ಪರಂಪರೆಯ ಕಡೆಗೆ ವಿಶೇಷ ಗೌರವವಿತ್ತು. ಶಿವಾಜಿ ಆಗಾಗ ಸೂಫೀ ಸಂತ ಬಾಬಾ ಶರೀಫುದ್ದೀನ್ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಉಲ್ಲೇಖಗಳಿವೆ. ರತ್ನಾಗಿರಿಯ ಹಜ್ರತ್ ಬಾಬಾ ಅವರನ್ನಂತೂ `ದೊಡ್ಡಣ್ಣ’ ಎಂದೇ ಸಂಬೋಧಿಸುತ್ತಿದ್ದರಂತೆ ಶಿವಾಜಿ.

ಶಿವಾಜಿಯ ಗುರುಭಕ್ತಿ, ಧಾರ್ಮಿಕ ಶ್ರದ್ಧೆ ಮತ್ತು ಪರಧರ್ಮ ಸಹಿಷ್ಣುತೆಯಷ್ಟೇ, ಅಥವಾ ಅದಕ್ಕಿಂತ ಹೆಚ್ಚು ಸ್ಮರಿಸಬೇಕಾದ ಅಂಶ ಅವರ ಮಾತೃಭಕ್ತಿ. ತಮ್ಮ ತಾಯಿಯ ಪ್ರತಿ ವಾಕ್ಯವನ್ನೂ ಆಜ್ಞೆಯಂತೆ ಪರಿಪಾಲಿಸುತ್ತಿದ್ದ ಶಿವಾಜಿ ಆದರ್ಶ ಪುತ್ರನಾಗಿ ಇಂದಿಗೂ ಶ್ರೇಷ್ಠ ಉದಾಹರಣೆಯಾಗಿದ್ದಾರೆ.

ಶಿವಾಜಿಯ ಕದನಗಳು, ಯುದ್ಧ, ಶತ್ರುತ್ವ ಯಾವುದಕ್ಕೂ ಯಾವ ಪೂರ್ವಗ್ರಹವೂ ಕಾರಣವಾಗಿರಲಿಲ್ಲ. ಅಂದಿನ ರೂಢಿಯಂತೆ ಯಾವುದೇ ಯೋಗ್ಯ ಯೋಧನಂತೆ, ರಾಜನಂತೆ ತಮ್ಮ ರಾಜ್ಯ ವಿಸ್ತರಣೆ ಮಾಡಿ ಯಶಸ್ವಿಯಾಗಿದ್ದರು ಶಿವಾಜಿ.
ಫೆಬ್ರವರಿ 19, ಈ ಅಪ್ರತಿಮ ವ್ಯಕ್ತಿತ್ವದ ಜನ್ಮದಿನ. ಶಿವಾಜಿ ಬಹಿರಂತರಂಗ ಯುದ್ಧಗಳೆರಡರಲ್ಲೂ ಹೋರಾಟ ನಡೆಸಿದವರು. ಕ್ಷಾತ್ರ ತೇಜ ಮಾತ್ರವಲ್ಲ, ಆಧ್ಯಾತ್ಮಿಕ ಸಾಧನೆ – ಶ್ರದ್ಧೆಯಲ್ಲೂ ಉನ್ನತಿ ಸಾಧಿಸಿದ್ದ ಶಿವಾಜಿ ಪರಿಪಕ್ವತೆಗೊಂದು ಸಾರ್ವಕಾಲಿಕ ನಿದರ್ಶನ. ಈ ನಿಟ್ಟಿನಲ್ಲಿ ನಾವು ಶಿವ್ ಬಾ ಅವರನ್ನು ನೆನೆಯಬೇಕಲ್ಲವೆ?

1 Comment

  1. ಶಿವಾಜಿಯ ಕುರಿತಾದ ಈ ಲೇಖನ ಆತನ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ಉಪಯುಕ್ತ.ಅನೇಕ ಬಾರಿ ಪ್ರಸ್ತುತ ಸಿದ್ಧಾಂತಗಳ ನೆಲೆಗಟ್ಟಿನಲ್ಲಿ ಓದುಗರಿಗೆ ಲಭ್ಯವಾಗುತ್ತಿರುವುದು ಅಪೂರ್ಣಮಾಹಿತಿಗಳು ಮಾತ್ರ . ಲೇಖಕರಿಗೆ ಧನ್ಯವಾದಗಳು.

Leave a Reply