ಪ್ರಶ್ನೆ ಕೇಳುವವರ ಶ್ರದ್ಧೆ ಮತ್ತು ಉತ್ತರ ಬಲ್ಲವರ ವಿನಯ : ಷಟ್ ಪ್ರಶ್ನೋಪನಿಷತ್ತಿನ ಮಹತ್ವದ ಕಾಣ್ಕೆ

ಪಿಪ್ಪಲಾದರನ್ನು ಪ್ರಶ್ನಿಸುವ ಋಷಿಗಳೇನು ಸಾಮಾನ್ಯದವರಲ್ಲ. ಅವರೇನೂ ಅಜ್ಞರಲ್ಲ, ಅಥವಾ ಕಲಿಕಾ ಹಂತದಲ್ಲಿರುವವರಲ್ಲ ಅವರೆಲ್ಲರೂ ವಿವಿಧ ಹಿನ್ನೆಲೆಗಳಿಂದ ಬಂದ ಜಿಜ್ಞಾಸುಗಳು, ಪ್ರಾಜ್ಞರು. ಈ ಋಷಿಗಳು ಹೊತ್ತು ತರುವ ಪ್ರಶ್ನೆಗಳೂ ಏನು ಸಾಮಾನ್ಯದವಲ್ಲ. ಸೃಷ್ಟಿಯಿಂದ ಹಿಡಿದು ಜೀವ ವಿಕಾಸ, ಆತ್ಮತತ್ತ್ವಗಳವರೆಗಿನ ಪ್ರಚಂಡ ಪಶ್ನೆಗಳವು. ಇವಕ್ಕೆಲ್ಲ ಉತ್ತರ ನೀಡುವ ಪಿಪ್ಪಲಾದರ ಜ್ಞಾನವನ್ನೊಮ್ಮೆ ಊಹಿಸಿ! | ಗಾಯತ್ರಿ

ಅಥರ್ವವೇದದಲ್ಲಿ ಅಥರ್ವ ವೇದೋಪನಿಷತ್ತು, ಮಂಡೂಕ ಉಪನಿಷತ್ತು ಮತ್ತು ಷಟ್‌ ಪ್ರಶ್ನ ಉಪನಿಷತ್ತುಗಳೆಂಬ ಮೂರು ಉಪನಿಷತ್ತುಗಳಿವೆ. ಷಟ್‌ ಪ್ರಶ್ನೆ ಉಪನಿಷತ್ತನ್ನು “ಪ್ರಶ್ನೋಪನಿಷತ್ತು’ ಎಂದು ಕರೆಯುವುದೇ ಹೆಚ್ಚು ಪ್ರಚಲಿತ. ಆರು ಖುಷಿಗಳು ಕೇಳುವ ಆರು ಪ್ರಶ್ನೆಗಳಿಗೆ ಪಿಪ್ಪಲಾದರು ಕೊಡುವ ಉತ್ತರವನ್ನು ಇಲ್ಲಿ ಆರು ಅಧ್ಯಾಯ ರೂಪದಲ್ಲಿ ಕಾಣಬಹುದು.

ಎಲ್ಲಾ ಉಪನಿಷತ್ತುಗಳಲ್ಲೂ ಪ್ರಶ್ನೆಗಳು ಸಾಮಾನ್ಯ. ಪ್ರಶ್ನೋತ್ತರ ಸಂವಾದ ರೂಪದ ನಿರೂಪಣೆಯೇ ಉಪನಿಷತುಗಳ ವೈಶಿಷ್ಟ್ಯವೂ. ಆದರೆ ಷಟ್‌ ಪ್ರಶ್ನಉಪನಿಷತ್ತಿನಲ್ಲಿ ಋಷಿಗಳ ಪ್ರಶ್ನೆಗಳಿಗೆ ಪಿಪ್ಪಲಾದರು ಕೊಡುವ ಉತ್ತರಕ್ಕೆ ಹೆಚ್ಚಿನ ಪ್ರಾಶಸ್ತ್ಯ. ದೇಶದ ಬೇರೆಬೇರೆ ಕಡೆಯಿಂದ ಮಹಾ ವಿದ್ವಾಂಸರಾದ ಆರು ಮಂದಿ ಖುಷಿಗಳು ತಮ್ಮ ಪ್ರಶ್ನೆಗೆ ಉತ್ತರ ಕೊಡಬಲ್ಲ ಯೋಗ್ಯ ಗುರುವನ್ನು ಅರಸುತ್ತಾ ಹೊರಡುತ್ತಾರೆ. ಈ ಹುಡುಕಾಟದಲ್ಲಿ ಅವರಿಗೆ ಸಮರ್ಥರೆಂದು ತೋರುವುದು ಮಹಾ ಜ್ಞಾನಿ ಮಹರ್ಷಿ ಪಿಪ್ಪಲಾದರು. ಸುಕೇಶ, ಸತ್ಯಕಾಮ, ಸೌರ್ಯಾಯಣೀ, ಆಶ್ವಲಾಯನ, ವೈದರ್ಭೀ ಮತ್ತು ಕಬಂಧೀ ಈ ಆರು ಋಷಿಗಳ ಹೆಸರು.
ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೊಂದಿದೆ. ಪಿಪ್ಪಲಾದರನ್ನು ಪ್ರಶ್ನಿಸುವ ಋಷಿಗಳೇನು ಸಾಮಾನ್ಯದವರಲ್ಲ. ಅವರೇನೂ ಅಜ್ಞರಲ್ಲ, ಅಥವಾ ಕಲಿಕಾ ಹಂತದಲ್ಲಿರುವವರಲ್ಲ ಅವರೆಲ್ಲರೂ ವಿವಿಧ ಹಿನ್ನೆಲೆಗಳಿಂದ ಬಂದ ಜಿಜ್ಞಾಸುಗಳು, ಪ್ರಾಜ್ಞರು.

ಈ ಆರು ಋಷಿಗಳಲ್ಲಿ ಮೊದಲನೆಯವನು ಸುಕೇಶ. ಈತ ಭಾರದ್ವಾಜ ಮಹರ್ಷಿಗಳ ಮಗ. ಈತ ಕೂಡ ತಂದೆಯಂತೆಯೇ ಮಹಾನ್‌ ತತ್ತ್ವಜ್ಞಾನಿ, ಜ್ಞಾನ ಪಿಪಾಸು. ಎರಡನೆಯ ಖುಷಿ ಸತ್ಯಕಾಮ. ಈತನ ಹೆಸರೇ ಹೇಳುವಂತೆ ಸತ್ಯವನ್ನು ಅರಿಯುವ ತೀವ್ರ ಹಂಬಲವುಳ್ಳವನು. ಈ ಆರು ಋಷಿಗಳ ಹೆಸರು ಉಲ್ಲೇಖಿಸುವ ಶ್ಲೋಕದಲ್ಲಿ ಶೈಬ್ಯಶ್ಚಸತ್ಯಕಾಮಃ ಎಂದು ಹೇಳಲಾಗಿರುವುದರಿಂದ ಈತ ಸತ್ಯಕಾಮ ಜಾಬಾಲನಲ್ಲ. ಸತ್ಯಕಾಮ ಜಾಬಾಲ ಉಪನಿಷತ್ತಿನಲ್ಲಿ ಕಾಣಬರುವ ಮತ್ತೊಬ್ಬ ಶ್ರೇಷ್ಟ ಋಷಿಯ ಹೆಸರು. ಪ್ರಶ್ನೋಪನಿಷತ್ತಿನ ಸತ್ಯಕಾಮ ಶಿಬಿ ಎನ್ನುವವನ ಮಗ. ಅಂದಿನ ದಿನಗಳ ರೂಢಿ ಗಮನಿಸಿದರೆ ಶಿಬಿ ಅನ್ನುವ ಹೆಸರನ್ನು ಸಾಮಾನ್ಯವಾಗಿ ಕ್ಷತ್ರಿಯ ಕುಲದವರು ಇರಿಸಿಕೊಳ್ಳುತ್ತಿದ್ದರು. ಆದ್ದರಿಂದ ಶಿಬಿಪುತ್ರನಾದ (ಶೈಬ್ಯ – ಶಿಬಿಯ ಮಗ) ಸತ್ಯಕಾಮ ಕೂಡ ಕ್ಷತ್ರಿಯ ವಂಶದವನು ಅಥವಾ ರಾಜ ಮನೆತನದವನು. ಎಂದು ತಿಳಿಯಬಹುದು. ಮೂರನೆಯ ಋಷಿ ಸೌರ್ಯಾಯಣೀ ಹೆಸರೇ ಸೂಚಿಸುವಂತೆ ಸೂರ್ಯಾಯಣನ ಮಗ. (ಸೂರ್ಯಾಯಣ = ಸೂರ್ಯನ ಮಗ; ಸೌರ್ಯಾಯಣೀ = ಸೂರ್ಯಾಯಣನ ಮಗ). ಗಾರ್ಗ್ಯ ಗೋತ್ರದ ಈತ ಒಬ್ಬ ರಾಜರ್ಷಿ. ನಾಲ್ಕನೆಯ ಆಶ್ವಲಾಯನನು ಅಶ್ವಾಲಯ ಗೋತ್ರಜ. ಈತ ಕೋಸಲ ದೇಶದ ಅರಸನ ಮಗ. ಐದನೆಯವನಾದ ವೈದರ್ಭಿಯು ಭಾರ್ಗವ ಗೋತ್ರದವನಾಗಿದ್ದು, ವಿದರ್ಭ ದೇಶದ ರಾಜ ವಂಶಸ್ಥ. ಆರನೆಯ ಖುಷಿ ಕಬಂಧಿಯು ಇಂದ್ರಿಯ ನಿಗ್ರಹ ಕುರಿತಂತೆ ಅಪಾರ ಸಾಧನೆ ಮಾಡಿದ್ದರಿಂದ ಆ ಹೆಸರು ಪಡೆದುಕೊಂಡಿದ್ದವನು. ಈತ ಕತ್ಯ ಎಂಬ ಋಷಿಯ ಮಗ.

ಈ ಋಷಿಗಳು ಹಲವಾರು ವರ್ಷಗಳ ಕಾಲ ತಮ್ಮತಮ್ಮ ಅರಿವಿನ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ, ಸಾಕಷ್ಟು ಜನರಿಗೆ ಮಾರ್ಗದರ್ಶನವನ್ನೂ ಮಾಡಿದ್ದವರು. ಆದರೆ ಸ್ವತಃ ತಮ್ಮ ಅಧ್ಯಯನವೇ ಅಪೂರ್ಣವಾಗಿದೆ ಎಂದು ಮನಗಂಡ ಈ ಸಾಧಕರು ಅದನ್ನು ಪರಿಸಹರಿಸಬಲ್ಲ ಗುರುವಿಗಾಗಿ ಅರಸುತ್ತಾ ದೇಶದ ಉದ್ದಗಲ ಅಲೆದಾಡಿದರು. ಇದು ಜ್ಞಾನಿಗಳ ಲಕ್ಷಣ. ಯಾರು ಎಲ್ಲವನ್ನು ಅರಿತಿದ್ದೂ ಅರಿತಿದ್ದೇನೆ ಎಂಬ ಅಹಂಭಾವವಿಲ್ಲದೆ ಮತ್ತಷ್ಟು ಕಲಿಕೆಗೆ ತನ್ನಲ್ಲಿ ಜಾಗ ಇರಿಸಿಕೊಳ್ಳುತ್ತಾನೋ ಆತನೇ ನಿಜವಾದ ಜ್ಞಾನಿ. ಇವರಲ್ಲಿ ಅಹಂಕಾರಕ್ಕೆ ತಾವಿಲ್ಲ, ವಿನಯವನ್ನೆ ಭೂಷಣವಾಗಿ ಇವರು ಧರಿಸಿರುತ್ತಾರೆ.
ಈ ಆರು ಋಷಿಗಳಾದರೂ ತಾವು ವರ್ಷಾನುವರ್ಷಗಳಿಂದ ಮಥನ ನಡೆಸುತ್ತಿರುವ ಸಂಗತಿಯು ಉತ್ತರದ ನವನೀತ ಹೊಮ್ಮಿಸದೆ ಹೋದಾಗ ಅದನ್ನು ಬಲ್ಲವರಿಂದ ಕೇಳಿ ತಿಳಿಯಲು ಹೊರಟರು. ಜನಸಾಮಾನ್ಯರಲ್ಲಿ ಬಹುತೇಕ ಮಂದಿಗೆ ತಮಗೆ ತಿಳಿದಿಲ್ಲ ಅನ್ನುವುದೇ ಗೊತ್ತಿರುವುದಿಲ್ಲ. ನಾವು ಎಲ್ಲವನ್ನೂ ಬಲ್ಲವರೆಂದೂ ತಾವು ಯಾರಿಂದಲೂ ಏನನ್ನೂ ತಿಳಿದುಕೊಳ್ಳಬೇಕಾಗಿಲ್ಲವೆಂದೂ ಯೋಚಿಸುತ್ತೇವೆ. ಆದರೆ ಪ್ರಾಜ್ಞರೂ ದ್ರಷ್ಟಾರರೂ ಆಗಿದ್ದ ಆ ಆರು ಋಷಿಗಳು ತಮ್ಮಲ್ಲಿ ಎದ್ದ ಪ್ರಶ್ನೆಯನ್ನು ಹೊತ್ತುಕೊಂಡು ಪಿಪ್ಪಲಾದರ ಬಳಿಗೆ ಬರುತ್ತಾರೆ. ಉತ್ತರಕ್ಕಾಗಿ ಪ್ರಾರ್ಥಿಸುತ್ತಾರೆ.

ಈ ಋಷಿಗಳು ಹೊತ್ತು ತರುವ ಪ್ರಶ್ನೆಗಳೂ ಏನು ಸಾಮಾನ್ಯದವಲ್ಲ. ಸೃಷ್ಟಿಯಿಂದ ಹಿಡಿದು ಜೀವ ವಿಕಾಸ, ಆತ್ಮತತ್ತ್ವಗಳವರೆಗಿನ ಪ್ರಚಂಡ ಪಶ್ನೆಗಳವು. ಇವಕ್ಕೆಲ್ಲ ಉತ್ತರ ನೀಡುವ ಪಿಪ್ಪಲಾದರ ಜ್ಞಾನವನ್ನೊಮ್ಮೆ ಊಹಿಸಿ. ತಮ್ಮ ಈ ಪ್ರಶ್ನೆಗಳಿಗೆ ಉತ್ತರ ನೀಡಲು ಈ ವ್ಯಕ್ತಿಯೇ ಸರಿಯಾದವನು ಎಂದು ಆರೂ ಋಷಿಗಳೂ ಒಕ್ಕೊರಲಿನಿಂದ ನಿರ್ಧರಿಸಿದರು ಎಂದರೆ, ಅವರು ಪಿಪ್ಟಲಾದರನ್ನು ಅದೆಷ್ಟು ಬಗೆಯಿಂದ ಪರೀಕ್ಷಿಸಿರಬೇಡ!

ಅತ್ತ ಪಿಪ್ಪಲಾದರೂ ಯಾರೋ ತಮ್ಮನ್ನು ಅರಸಿ ಬಂದಿದ್ದಾರೆ ಎಂದಕೂಡಲೆ ಗುರುವಿನಂತೆ ಬೋಧನೆಗೆ ಕುಳಿತುಬಿಡಲಿಲ್ಲ. ಮೇಧಾವಿಗಳಾದ ಋಷಿಗಳು ತಮ್ಮಲ್ಲಿಗೆ ಬಂದು ಉತ್ತರಕ್ಕಾಗಿ ವಿನಂತಿಸಿದಾಗ ಅವರು ವಿನೀತ ಭಾವ ಪ್ರದರ್ಶಿಸುತ್ತಾ, “ಒಂದು ಸಂವತ್ಸರ ನಮ್ಮ ಆಶ್ರಮದಲ್ಲಿ ಬ್ರಹ್ಮಚರ್ಯದಿಂದ, ತಪಸ್ಸನ್ನಾಚರಿಸಿಕೊಂಡು, ಶ್ರದ್ಧೆಯಿಂದ, ಸ್ವಾಧ್ಯಾಯದಲ್ಲಿ ತೊಡಗಿಕೊಂಡು ಇರಿ. ಅನಂತರ ನಿಮ್ಮ ಪ್ರಶ್ನೆಗಳನ್ನು ಕೇಳಿ. ನನಗೆ ತಿಳಿದಿದ್ದರೆ ಉತ್ತರಿಸುತ್ತೇನೆ” ಅನ್ನುತ್ತಾರೆ ಪಿಪ್ಪಲಾದರು.

ಆ ದಿನಗಳ ರೂಢಿಯೇ ಹಾಗಿತ್ತು. ಗುರುಗಳು ಶಿಷ್ಯರನ್ನು ಪರೀಕ್ಷಿಸುವಂತೆಯೇ ಶಿಷ್ಯನೂ ಗುರುವನ್ನು ಒರೆಗೆ ಹಚ್ಚುತ್ತಿದ್ದ. ಷಟ್‌ ಋಷಿಗಳು ವಿಧವಿಧವಾಗಿ ಪರಿಶೀಲಿಸಿ ಪಿಪ್ಪಲಾದರನ್ನು ತಮ್ಮ ಜಿಜ್ಞಾಸೆ ಕೊನೆಗೊಳಿಸಬಲ್ಲ ಸಮರ್ಥರೆಂದು ಒಪ್ಪಿಕೊಂಡರು. ಅಂತೆಯೇ ತಮ್ಮಲ್ಲಿ ಪ್ರಶ್ನೆ ತಂದಿರುವ ಋಷಿಗಳು ಉತ್ತರ ಪಡೆಯಲು ಎಷ್ಟು ಅರ್ಹರು ಎನ್ನುವುದನ್ನು ಪಿಪ್ಪಲಾದರೂ ತಿಳಿಯಬೇಕಿತ್ತು. ಅದಕ್ಕಾಗಿ ಅವರು ಋಷಿಗಳ ಚರ್ಯೆಗಳನ್ನು ಗಮನಿಸುವುದು ಅಗತ್ಯವಾಗಿತ್ತು.
ಉತ್ತರ ಕೊಡುವವರಿಗೆ ಎಷ್ಟು ಅರ್ಹತೆ ಇರಬೇಕೋ ಪಡೆಯುವವರಿಗೂ ಅಷ್ಟೇ ಅರ್ಹತೆ ಇರಬೇಕಾಗುತ್ತದೆ ಎನ್ನುವುದನ್ನು ಪಿಪ್ಪಲಾದರ ಈ ವರ್ತನೆಯು ತಿಳಿಸಿಕೊಡುತ್ತದೆ.

ಬ್ರಹ್ಮವೆಂದರೆ ಅಂಗಡಿಯಲ್ಲಿ ಸಿಗುವ ಮಿಠಾಯಿಯಂತೆ ಅಂದುಕೊಂಡಿರುವ ವ್ಯಕ್ತಿಯೊಬ್ಬ ಬಂದು “ನನಗೆ ಬ್ರಹ್ಮ ಬೇಕು. ಹಾಗೆಂದರೇನು ತಿಳಿಸಿಕೊಡಿ. ಅದು ಎಲ್ಲಿಸಿಗುತ್ತದೆ?” ಎಂದು ಕೇಳಿದರೆ ಉತ್ತರ ಕೊಡಲಾಗುತ್ತದೆಯೆ? ಆ ಆಸಕ್ತನಿಗೆ ಬ್ರಹ್ಮದ ಬಗ್ಗೆ ಹೇಳಿದರೂ ಅರ್ಥವಾಗುತ್ತದೆಯೆ?

ನಮ್ಮ ಇಂದಿನ ಶಿಕ್ಷಣ ಪದ್ಧತಿಯ ನ್ಯೂನತೆಗಳ ಬಗ್ಗೆ ಶಿಕ್ಷಣ ತಜ್ಞರು ಹಾಗೂ ಕಾಳಜಿಯುಳ್ಳ ಪೋಷಕರು ಇಂಥದೇ ಪ್ರಶ್ನೆಗಳನ್ನು ಎತ್ತುತ್ತಾರೆ. ಸಿಲಬಸ್‌ನಲ್ಲಿ ಏನಿದೆಯೋ ಅದನ್ನು ಎಲ್ಲರೂ ಓದಲೇ ಬೇಕು. ಗಣಿತವನ್ನು ಮಿಠಾಯಿ ಲೆಕ್ಕ ಅಂದುಕೊಂಡವರೂ ಸಹ, ಅಂಕೆಗಳ ಆಟ ಅಂದುಕೊಂಡವರೂ ಸಹ…. ಸಹಜವಾಗಿಯೇ ಯಾರಿಗೆ ಏನು ದಕ್ಕಬೇಕೋ ಅದೇ ದಕ್ಕುವುದು. ಈ ಕಾರಣದಿಂದಲೇ ಒಂದೇ ಬಗೆಯ ಪಾಠ ಕೇಳಿದರೂ ವಿದ್ಯಾರ್ಥಿಗಳು ಪಡೆಯುವ ಅಂಕದಲ್ಲಿ ವ್ಯತ್ಯಾಸ ಕಂಡುಬರುವುದು. ವಿದ್ಯಾರ್ಥಿ/ನಿಯೊಬ್ಬರು ಕಡಿಮೆ ಅಂಕ ತೆಗೆದ ಮಾತ್ರಕ್ಕೆ ಅವರು ದಡ್ಡರು ಎಂದರ್ಥವಲ್ಲ. ಜಗತ್ತಿನಲ್ಲಿ ದಡ್ಡರು ಯಾರೂ ಇಲ್ಲ. ಆದರೆ ಅವರ ಕಲಿಕೆಯ ವಿಷಯ ಅದಲ್ಲ ಎಂದು. ಅವರ ಆಸಕ್ತಿ ಬೇರೆಯೇ ಇದೆ ಎಂದು.

ಪಿಪ್ಪಲಾದರು ಋಷಿಗಳು ತಂದಿರುವ ಪ್ರಶ್ನೆಯನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು ಎಂದು ಗಮನಿಸಲು ಬಯಸಿದ್ದರು. ವಿದ್ಯಾರ್ಥಿಯ ಮನೋಧರ್ಮ ಅರ್ಥವಾದರೆ ಶಿಕ್ಷಕನಿಗೆ ಪಾಠ ಮಾಡುವುದು ಸುಲಭವಾಗುತ್ತದೆ. ವಿದ್ಯಾರ್ಥಿ ತನ್ನ ಪ್ರಶ್ನೆಯನ್ನು ಯಾವ ಆಯಾಮದಿಂದ ಕೇಳುತ್ತಿದ್ದಾನೆ? ಬ್ರಹ್ಮದ ಬಗ್ಗೆ ಮಾತಾಡುವಾಗ ಅವನು ಚತುರ್ಮುಖನ ಬಗ್ಗೆ ಮಾತಾಡುತ್ತಿದ್ದಾನೋ ಅಥವಾ ಸಕಲ ಜೀವರಾಶಿಯ ಮೂಲಸ್ರೋತ ಪರಬ್ರಹ್ಮದ ಬಗ್ಗೆಯೋ?
ಇದನ್ನು ತಿಳಿಯಬೇಕು ಎಂದರೆ ಗುರು – ಶಿಷ್ಯರ ನಡುವೆ ಸಂಪರ್ಕ ಏರ್ಪಡಬೇಕು. ಅಂತಹ ಸಂಪರ್ಕಕ್ಕಾಗಿ ಪಿಪ್ಪಲಾದರು ಒಂದು ಸಂವತ್ಸರ ಕಾಲ (ವರ್ಷ ಕಾಲ) ಅವರನ್ನು ತಮ್ಮ ಆಶ್ರಮದಲ್ಲಿರಲು ಹೇಳಿದರು. ಅಷ್ಟೇ ಅಲ್ಲ ಹಾಗೆ ಇದ್ದನಂತರವೂ ಅವರಲ್ಲಿ ಪ್ರಶ್ನೆಗಳಿದ್ದರೆ ಅವನ್ನು ಕೇಳಬಹುದೆಂದರು.

ಇಲ್ಲಿ ಮತ್ತೂ ಒಂದು ಸ್ವಾರಸ್ಯ ಗಮನಿಸಿ. ಒಂದು ವರ್ಷ ಕಾಲ ತನ್ನ ಆಶ್ರಮದಲ್ಲಿರಲು ಋಷಿಗಳಿಗೆ ಹೇಳುವ ಪಿಪ್ಪಲಾದರು “ಅನಂತರವೂ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ಕೇಳಬಹುದು” ಅನ್ನುತ್ತಿದ್ದಾರೆ. ಅದೂ ಸರಿಯೇ… ಕೆಲವೊಮ್ಮೆ ಪ್ರಶ್ನೆಗಳು ತಾತ್ಕಾಲಿಕವಾಗಿರುತ್ತವೆ. ಅವು ಆಯಾ ಸಮಯ ಸಂದರ್ಭಾನುಸಾರ ಹುಟ್ಟಿಕೊಂಡಿರುತ್ತವೆ. ಮತ್ತು ಕೆಲವೊಮ್ಮೆ ನಮ್ಮಲ್ಲಿ ಎದ್ದ ಪ್ರಶ್ನೆಗೆ ವ್ಯತಿರಿಕ್ತವಾದ ಮತ್ತೊಂದು ಪ್ರಶ್ನೆ ಹುಟ್ಟಿಕೊಳ್ಳಲೂಬಹುದು. ಅಥವಾ ಹೀಗೂ ಆಗಬಹುದು, ವರ್ಷಗಟ್ಟಲೆ ನಮ್ಮನ್ನು ಕಾಡುವ ಪ್ರಶ್ನೆಗೆ ಯಾವುದೋ ಒಂದು ಕ್ಷಣದಲ್ಲಿ ನಮಗೇ ಉತ್ತರ ಗೋಚರಿಸಬಹುದು.

ಮಹರ್ಷಿ ಪಿಪ್ಪಲಾದರಿಗೆ ತಾವೇ ಶ್ರೇಷ್ಠ ಎನ್ನುವ ಅಹಂಭಾವ ಕೊಂಚವೂ ಇಲ್ಲ. ನಾನೊಬ್ಬನೇ ಉತ್ತರ ಕೊಡಲು ಸಮರ್ಥನಿದ್ದೇನೆ ಎಂದವರು ಯೋಚಿಸುತ್ತಿಲ್ಲ. ಆ ಋಷಿಗಳು ಇನ್ನೂ ಒಂದು ಕಾಲ ಪ್ರಯತ್ನಿಸಲಿ, ಸ್ವತಃ ಉತ್ತರ ಕಂಡುಕೊಳ್ಳುವುದಾದರೆ ಕಂಡುಕೊಳ್ಳಲಿ ಎನ್ನುವುದು ಅವರ ಇಂಗಿತವಾಗಿತ್ತು. ಹಾಗೆಯೇ ಅವರು “ನನಗೆ ತಿಳಿದಿದ್ದರೆ ನಾನು ಉತ್ತರಿಸುತ್ತೇನೆ” ಎನ್ನುತ್ತಾರೆ. ಎಂತಹ ವಿನಯವಂತಿಕೆ! “ ಋಷಿಗಳು ನನ್ನನ್ನು ಹುಡುಕಿಕೊಂಡು ಬಂದು ಪ್ರಶ್ನೆ ಕೇಳುತ್ತಿದ್ದಾರೆ, ನಾನು ಎಂತಹಾ ಜ್ಞಾನಿ” ಎಂದು ಅವರು ಬೀಗಲಿಲ್ಲ. ಬದಲಿಗೆ ಅವರು ತೋರಿದ ಗೌರವಕ್ಕೆ ಪ್ರತಿವಂದಿಸಿ, “ನನಗೆ ತಿಳಿದಿದ್ದರೆ. ಉತ್ತರಿಸುತ್ತೇನೆ” ಎನ್ನುತ್ತಾರೆ.

ಕಲಿಯುವ ಶಿಷ್ಯನಲ್ಲಷ್ಟೆ ವಿನಯವಂತಿಕೆ ಇದ್ದರೆ ಸಾಲದು, ಕಲಿಸುವ ಗುರುವಿನಲ್ಲೂ ಅದು ಇರಬೇಕು ಅನ್ನುವುದನ್ನು ಪಿಪ್ಪಲಾದರು ಸ್ವತಃ ನಡವಳಿಕೆಯಿಂದ ತೋರಿಸಿಕೊಡುತ್ತಾರೆ. ಇದು ಬಲ್ಲವರ ನಡೆ. ಅವರೆಂದಿಗೂ ತಾವು ಬಲ್ಲಿದರೆಂದು ತೋರಿಸಿಕೊಳ್ಳುವುದಿಲ್ಲ. ತೋರ್ಪಡಿಕೆಯಿರಲಿ, ಸ್ವತಃ ಅಂದುಕೊಳ್ಳುವುದೂ ಇಲ್ಲ.

ಪ್ರಶ್ನೋತ್ತರಗಳು ತಿಳಿವಿನ ಕೋಟೆಯ ಹೆಬ್ಬಾಗಿಲಿನಂತೆ. ಸರಿಯಾದ ಉತ್ತರ ದೊರೆತರೆ ಆ ಹೆಬ್ಬಾಗಿಲು ತೆರೆದುಕೊಳ್ಳುತ್ತದೆ. ಆದರೆ ಅದಕ್ಕಿಂತ ಮುಖ್ಯ ಸರಿಯಾದ ಪ್ರಶ್ನೆಯನ್ನು ಕೇಳುವುದು. ಉತ್ತರವೇನೋ ಇದೆ. ಜ್ಞಾನ ಸರ್ವವ್ಯಾಪಿಯಾದುದು. ಅದು ಎಲ್ಲೆಡೆ ಇದೆ. ಪ್ರತಿಯೊಂದು ವಸ್ತುವಿನಲ್ಲೂ ಜ್ಞಾನ ಅಡಗಿಕೊಂಡಿದೆ. ಅದು ಮರದೊಳಗಿನ ಕಿಚ್ಚಿನಂತೆ ಸುಪ್ತವಾಗಿದೆ. ಆ ಕಿಚ್ಚನ್ನು ಹೊತ್ತಿಸಲು, ಸರ್ವವ್ಯಾಪಿಯಾಗಿರುವ ಜ್ಞಾನವನ್ನು ಪಡೆಯಲು, ಉತ್ತರವನ್ನು ಪಡೆಯಲು, ನಾವು ಸೂಕ್ತವಾದ ಪ್ರಶ್ನೆಯನ್ನು ಕೇಳಬೇಕು. ಮರದಲ್ಲೇನೋ ಮಾವಿನ ಹಣ್ಣುಗಳು ತೂಗುತ್ತಿವೆ. ಅವನ್ನು ಬೀಳಿಸಲು ಚೂಪಾದ, ಸರಿಯಾದ ಕಲ್ಪನ್ನೆ ತೂರಬೇಕು. ಕಲ್ಲು ತೂರುವವನ ರಟ್ಟೆಯೂ ಗಟ್ಟಿಯಿರಬೇಕು, ಆತನ ನೋಟವೂ ಸೂಕ್ಷ್ಮವಿರಬೇಕು. ಆತನಲ್ಲಿ ಏಕಾಗ್ರತೆ ಇರಬೇಕು. ಸರಿಯಾದ ಗುರಿ ಹಿಡಿದೇ ತೂರಬೇಕು. ಆಗ ಮಾತ್ರ ಆತನಿಗೆ ಹಣ್ಣು ಸಿಗುವುದು.

ಪಿಪ್ಪಲಾದರು ಇಲ್ಲಿ ಜ್ಞಾನದತ್ತ ಕೊಂಡೊಯ್ಯುವ ದಾರಿಯಾಗಿದ್ದಾರೆ. ಅವರು ಮಾವಿನ ಹಣ್ಣುಗಳತ್ತ ತೋರುವ ಬೆರಳಿನಂತೆ. ಷಟ್‌ ಋಷಿಗಳು ಫಲದ ಆಸೆ ಹೊತ್ತವರು. ಅವರ ಆಯ್ಕೆಗಳೆಲ್ಲವೂ ಅವರನ್ನು ಅದರತ್ತ ಕರೆದೊಯ್ಯುತ್ತವೆ, ತಮ್ಮ ಗುರಿ ಸಾಧಿಸುತ್ತವೆ. ಪರಿಣಾಮವಾಗಿ ತಮ್ಮ ಪಶ್ನೆಗಳಿಗೆ ಅವರು ಸೂಕ್ತ ಉತ್ತರಗಳನ್ನೂ ಪಡೆಯುತ್ತಾರೆ.

ಈ ಪ್ರಶ್ನೋತ್ತರಗಳೇ ಷಟ್‌ ಪ್ರಶ್ನ ಉಪನಿಷತ್ತಿನಲ್ಲಿ ಅಡಕಗೊಂಡು ಇಂದಿಗೂ ಜ್ಞಾನದೀವಿಗೆಗಳಾಗಿ ಬೆಳಗುತ್ತಿವೆ.

Leave a Reply