ಬಸವಣ್ಣನವರನ್ನು ಕ್ರಾಂತಿಯೋಗಿ ಎಂದು ಕರೆಯುವುದೇಕೆ? : ಬಸವ ಜಯಂತಿ ವಿಶೇಷ ಲೇಖನ

ಕಲ್ಯಾಣ ಕ್ರಾಂತಿ, ಜಾತೀಯ ತಾರತಮ್ಯದ ವಿರುದ್ಧ, ಸಂಪ್ರದಾಯಗಳ ಹೇರಿಕೆಯ ವಿರುದ್ಧ, ಆಡಳಿತಗಾರರ ದಬ್ಬಾಳಿಕೆಯ ವಿರುದ್ಧ ನಡೆದ ಕ್ರಾಂತಿಯೇ ಆಗಿತ್ತು. ಈ ಕ್ರಾಂತಿಗೆ ನಾಂದಿ ಹಾಡಿದ ಬಸವಣ್ಣನವರನ್ನು ‘ಕ್ರಾಂತಿಯೋಗಿ’ ಎಂದು ಕರೆಯುವುದರಲ್ಲಿ ಅಚ್ಚರಿ ಏನಿದೆ? | ಚೇತನಾ ತೀರ್ಥಹಳ್ಳಿ


ಹನ್ನೆರಡನೇ ಶತಮಾನ ಜಾತಿ ಮತ್ತು ಲಿಂಗ ತಾರತಮ್ಯಗಳು ತಾಂಡವವಾಡುತ್ತಿದ್ದ ಕಾಲ. ಈ ಸಂಕೀರ್ಣ ಘಟ್ಟದಲ್ಲಿ ಕನ್ನಡದ ನೆಲದಲ್ಲಿ ಹುಟ್ಟಿ ಮಹತ್ತರ ಕ್ರಾಂತಿಗೆ ನಾಂದಿ ಹಾಡಿದ ಶ್ರೇಯ ಬಸವಣ್ಣನಿಗೆ ಸಲ್ಲುತ್ತದೆ.
ಬಸವಣ್ಣ ಬಾಲ್ಯದಲ್ಲಿಯೇ ಬಂಡಾಯದ ಎಲ್ಲ ಲಕ್ಷಣವನ್ನೂ ತೋರ್ಪಡಿಸಿದ್ದರು. ತಮ್ಮ ಉಪನಯನದ ಸಂದರ್ಭದಲ್ಲಿ “ಅಕ್ಕ ನಾಗಮ್ಮನಿಗೆ ಜನಿವಾರ ಏಕಿಲ್ಲ?” ಎಂಬ ಪ್ರಶ್ನೆಯನ್ನು ಮುಂದಿಟ್ಟ ಬಸವಣ್ಣ, ಅಲ್ಲಿಂದ ಮುಂದೆ ಧಾರ್ಮಿಕ – ಆಧ್ಯಾತ್ಮಿಕ ಕ್ಷೇತ್ರದಲ್ಲಿ ತಮ್ಮದೇ ದಾರಿಯನ್ನು ಕಟೆಯುತ್ತಾ ಸಾಗಿದರು.
ಬಸವಣ್ಣನವರು ಕಂಡುಕೊಂಡ ಧರ್ಮ ಕಾಯಕ ಧರ್ಮ. ದಾಸೋಹವೇ ಅದರ ಮುಖ್ಯ ನೇಮ. ಸಮಾನತೆಯೇ ಆಚಾರ. ಬಸವಣ್ಣ ಕಟ್ಟಿಕೊಟ್ಟಿದ್ದು ಜನಸಾಮಾನ್ಯರ ಧರ್ಮವನ್ನು. ಸಂಪ್ರದಾಯಗಳ ಹೆಸರಲ್ಲಿ ಶೋಷಣೆಗೆ ಒಳಗಾಗುತ್ತಿದ್ದ ಸಮುದಾಯಗಳು ಮತ್ತು ಮಹಿಳೆಯರು, ಕಾಯಕ ಜೀವಿಗಳು ಬಸವಣ್ಣನ ಚಿಂತನೆಯ ಕೇಂದ್ರವಾಗಿದ್ದರು. ಸಮಾಜದ ಎಲ್ಲಾ ಸ್ತರದ ವ್ಯಕ್ತಿಗಳನ್ನು ಸಂಘಟಿಸಿ ಪಡೆದ ಸಾಮುದಾಯಿಕ ಶಕ್ತಿಯಿಂದ ಬಸವಣ್ಣ ಪರ್ಯಾಯ ಸಮಾಜವನ್ನೇ ಕಟ್ಟಿದರು. ಈ ಪರ್ಯಾಯ ಸಮಾಜದ ಶರಣಶರಣೆಯರು ಒಗ್ಗೂಡಿ ನಡೆಸಿದ ಕಲ್ಯಾಣ ಕ್ರಾಂತಿ ಒಂದು ಐತಿಹಾಸಿಕ ಕ್ರಾಂತಿ.
ಬಸವಣ್ಣನವರು ಹಾಕಿಕೊಟ್ಟ ಚಿಂತನೆಯ ದಾರಿಯಲ್ಲಿ ನಡೆದ ಚಮ್ಮಾರ ಹರಳಯ್ಯ ಮತ್ತು ಬ್ರಾಹ್ಮಣ ಮಧುವರಸರು ತಮ್ಮ ಮಕ್ಕಳ ಮದುವೆ ಮಾಡಿಸಿ ಅಂತರ್ಜಾತಿಯ ಮದುವೆಗೆ ಮುನ್ನುಡಿ ಬರೆಯುತ್ತಾರೆ. ಅವರ ಈ ನಡೆ ಸುತ್ತಲಿನ ಕುತ್ಸಿತ ಸಮಾಜದ ತಲೆ ಕೆಡಿಸಿ ಬಿಜ್ಜಳ ರಾಜನ ಕಿವಿ ಚುಚ್ಚುವಂತೆ ಮಾಡುತ್ತದೆ. ಅವರ ವಿಕೃತಿಗೆ ಹರಳಯ್ಯ ಮಧುವರಸರು ಶಿಕ್ಷೆ ಅನುಭವಿಸಿ ಜೀವ ತೆತ್ತು ಹುತಾತ್ಮರಾಗುತ್ತಾರೆ. ಇದರ ವಿರುದ್ಧ ದಂಗೆಯೆದ್ದ ಶರಣರ ದಂಡು ಬಿಜ್ಜಳನ ಮೇಲೇರಿ ಹೋಗುತ್ತದೆ. ಬಿಜ್ಜಳನ ಹತ್ಯೆಯೂ ಆಗುತ್ತದೆ.
ಈ ಒಟ್ಟು ದಂಗೆ, ಜಾತೀಯ ತಾರತಮ್ಯದ ವಿರುದ್ಧ, ಸಂಪ್ರದಾಯಗಳ ಹೇರಿಕೆಯ ವಿರುದ್ಧ, ಆಡಳಿತಗಾರರ ದಬ್ಬಾಳಿಕೆಯ ವಿರುದ್ಧ ನಡೆದ ಕ್ರಾಂತಿಯೇ ಆಗಿದೆ. ಈ ಕ್ರಾಂತಿಗೆ ನಾಂದಿ ಹಾಡಿದ ಬಸವಣ್ಣನವರನ್ನು ‘ಕ್ರಾಂತಿಯೋಗಿ’ ಎಂದು ಕರೆಯುವುದರಲ್ಲಿ ಅಚ್ಚರಿ ಏನಿದೆ?
ಇನ್ನು, ತಮ್ಮ ಚಿಂತನಧಾರೆಯನ್ನು ಹಂಚಿಕೊಳ್ಳಲು ಕೂಡ ಬಸವಣ್ಣ ಆರಿಸಿದ್ದು ಕೂಡಾ ಕ್ರಾಂತಿ ಮಾರ್ಗವನ್ನೇ. ಸಂಸ್ಕೃತಕ್ಕೆ ಸೀಮಿತ ಎಂಬಂತಾಗಿದ್ದ ಗಹನ ಅಧ್ಯಾತ್ಮ ತತ್ತ್ವಗಳನ್ನು ಕನ್ನಡದಲ್ಲಿ, ಅದರಲ್ಲೂ ಆಡುನುಡಿಯಲ್ಲಿ, ಅತ್ಯಂತ ಸರಳವಾಗಿ ನಿರೂಪಿಸುವ ಮೂಲಕ ಜನಸಾಮಾನ್ಯರಿಗೂ ಅವನ್ನು ತಲುಪಿಸಿದರು. ಇದಕ್ಕಾಗಿ ಅವರು ಅನುಸರಿಸಿದ್ದು ವಚನ ಸಾಹಿತ್ಯ ಪ್ರಕಾರವನ್ನು. ಬಸವಣ್ಣನವರ ಸಂಪರ್ಕಕ್ಕೆ ಬಂದ ಬಹುತೇಕ ಎಲ್ಲ ಶರಣಶರಣೆಯರೂ ವಚನ ರಚನೆಯ ಮೂಲಕ ತಮ್ಮ ತಿಳಿವನ್ನು ಹಂಚಿಕೊಂಡರು. ಈ ಮೂಲಕ ವಚನಗಳು ಆಧ್ಯಾತ್ಮಿಕ ಲೋಕಕ್ಕೂ ಕನ್ನಡ ಸಾಹಿತ್ಯ ಲೋಕಕ್ಕೂ ಅತ್ಯಮೂಲ್ಯ ಕೊಡುಗೆಗಳಾಗಿ ಪರಿಣಮಿಸಿದವು.
ವಿವಿಧ ಕಾಯಕಗಳ ದಲಿತ, ದಮನಿತ ಹಾಗೂ ಮಹಿಳೆಯರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದ ಬಸವಣ್ಣ, ಅನುಭವ ಮಂಟಪವನ್ನು ಹುಟ್ಟುಹಾಕಿ, ಅಲ್ಲಿ ಪ್ರತಿಯೊಬ್ಬರೂ ತಮ್ಮ ಕಾಣ್ಕೆಗಳನ್ನು ಚರ್ಚಿಸುವ ಅವಕಾಶ ಕಲ್ಪಿಸಿದರು. ಕಾಯಕ ಜೀವಿಗಳಿಗೂ ಆಧ್ಯಾತ್ಮಿಕ ಅರಿವು ಪಡೆಯುವ ಹಕ್ಕು ಇದೆ. ಅದನ್ನು ಅನುಭವಿಸುವ ಹಕ್ಕು ಇದೆ. ಅವರು ನಡೆಸುವ ಕಾಯಕವೇ ತಪಸ್ಸು. ಆ ತಪಸ್ಸಿನಲ್ಲಿ ಪಡೆದ ಫಲವನ್ನು ಹಂಚಿಕೊಳ್ಳುವುದೇ ಶಾಸ್ತ್ರಾರ್ಥ. ಇದು ಬಸವಣ್ಣನವರು ತೋರಿಸಿಕೊಟ್ಟ ಅತ್ಯಂತ ಸರಳ ಮತ್ತು ಸಹಜ ಮಾರ್ಗವಾಗಿತ್ತು.
ಬಸವಣ್ಣನವರು ವಚನಗಳನ್ನು ರಚಿಸಿದ್ದು ತಮ್ಮ ಅರಿವಿನ ಅಭಿವ್ಯಕ್ತಿಯ ವಿಸ್ತರಣೆಯಾಗಿಯೇ ಹೊರತು, ಸಾಹಿತ್ಯ ರಚನೆಯ ಉದ್ದೇಶದಿಂದಲ್ಲ. ತಮ್ಮ ವಚನಗಳ ಮೂಲಕ ಆಗಿನ ಸಮಾಜ ಸುಲಭದಲ್ಲಿ ಅರಗಿಸಿಕೊಳ್ಳಲು ಕಷ್ಟವಾಗುವಂಥ ಸಂಗತಿಗಳನ್ನು ಸರಾಗವಾಗಿಯೇ ಸಾರಿದರು ಬಸವಣ್ಣ.
ಚನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರೂ ಹೊಲದಲ್ಲಿ ಬೆರಣಿಗೆ ಹೋಗಿ
ಸಂಗವ ಮಾಡಿದರು
ಇವರಿಬ್ಬರಿಗೆ ಹುಟ್ಟಿದ ಮಗ ನಾನು ~ ಎಂದು ಹೇಳಿಕೊಳ್ಳುವ ಮೂಲಕ ಜಾತೀಯ ತಾರತಮ್ಯವನ್ನು ತೊಡೆದು ಹಾಕಲು ಯತ್ನಿಸಿದ ಬಸವಣ್ಣನ ನಡೆಯೂ ಕ್ರಾಂತಿಕಾರಕವೇ. ಇಲ್ಲಿ ಕೆಳ ಜಾತಿ ಮತ್ತು ದುಡಿಯುವ ಕೆಳವರ್ಗಗಳ ಗಂಡು ಹೆಣ್ಣಿನ ಅಸಾಂಪ್ರದಾಯಿಕ ಒಕ್ಕೂಡದಿಂದ ತಾನು ಹುಟ್ಟಿದೆನೆಂದು ಹೇಳಿಕೊಂಡಿದ್ದಾರೆ ಬಸವಣ್ಣ. ಈ ಮೂಲಕ ಜಾತಿ, ವರ್ಗ, ಸಂಪ್ರದಾಯ – ಈ ಮೂರೂ ನೆಲೆಗಳಲ್ಲಿನ ಸಂಕುಚಿತತೆಯನ್ನು ಒಂದೇ ಏಟಿಗೆ ಕತ್ತರಿಸಿ ಹಾಕಿದ್ದಾರೆ. ಇದು ಕೇವಲ ಒಂದು ಉದಾಹರಣೆಯಷ್ಟೇ.
ಸರಳವಾಗಿ ಹೇಳಬೇಕೆಂದರೆ, ಬಸವಣ್ಣನ ಒಟ್ಟು ಬದುಕೇ ಒಂದು ಕ್ರಾಂತಿ. ಏಕಕಾಲಕ್ಕೆ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಶಕ್ತಿಯಾಗಿ ಬೆಳೆದ ಬಸವಣ್ಣ ಈ ನಾಡಿನ ಸಾರ್ವಕಾಲಿಕ ಆದರ್ಶ ಎನ್ನುವುದರಲ್ಲಿ ಸಂದೇಹವೇ ಇಲ್ಲ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.