ಹರಿದಾಸರ ಅಂಕಿತಗಳು- ಒಂದು ಜಿಜ್ಞಾಸೆ

ಹರಿದಾಸರ ಪದ್ಯಗಳನ್ನು ಗುರುತಿಸುವಲ್ಲಿ ಅಂಕಿತಗಳು ತುಂಬಾ ಸಹಕಾರಿ ಎಂಬುದು ನಿರ್ವಿವಾದದ ಸಂಗತಿ. ಅಂಕಿತಗಳನ್ನು ಆಧಾರವಾಗಿಸಿ ಪದ್ಯಗಳ ರಚನಾಕಾರರನ್ನು ಗುರುತಿಸುವಾಗ – ಬೇರೆ,ಬೇರೆ ಪಠ್ಯಗಳನ್ನು/ಆಕರಗಳನ್ನು ತಜ್ಞರು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಜೊತೆಗೆ ಕೀರ್ತನೆಯಲ್ಲಿ ಬಳಕೆಯಾದ ಸಾಹಿತ್ಯ,ಹರಿದಾಸರ ಜೀವನ ಹಿನ್ನೆಲೆ ಇವುಗಳನ್ನು ತಿಳಿಯಲು ಕೂಡಾ ನೆರವಾಗಬಲ್ಲವು… । ನಾರಾಯಣ ಬಾಬಾನಗರ, ವಿಜಯಪುರ

ಹರಿದಾಸರ ರಚನೆಗಳಲ್ಲಿ ಬಳಸುವ ಅಂಕಿತ ಅಥವಾ ಮುದ್ರಿಕೆಗೆ ಮಹತ್ತರವಾದ ಸ್ಥಾನವಿದೆ ಎಂಬುದು ಅತ್ಯಂತ ಸ್ಪಷ್ಟ. ಅಂಕಿತದ ಕುರಿತು ಶ್ರೀ ಪುರಂದರದಾಸರು ತಮ್ಮ ಒಂದು ಕೀರ್ತನೆಯಲ್ಲಿ 
ಅಂಕಿತವಿಲ್ಲದ ದೇಹ ನಿಷೇಧ
ಅಂಕಿತವಿಲ್ಲದ ಕಾವ್ಯ ಶೋಭಿಸದು
ಅಂಕಿತವಿಲ್ಲದಿರಬಾರದೆಂದು ಚ
ಕ್ರಾಂಕಿತವನ್ನು ಮಾಡಿ ಎನ್ನಂಗಕ್ಕೆ
ಪಂಕಜನಾಭ ಪುರಂದರವಿಠಲನ್ನ
ಅಂಕಿತ ಎನಗಿತ್ತು ಗುರುವ್ಯಾಸ ಮುನಿರಾಯಾ
ಎಂದಿದ್ದಾರೆ.

ಹರಿದಾಸ ಸಾಹಿತ್ಯವನ್ನು ಅವಲೋಕಿಸಿದಾಗ ಸಾಮಾನ್ಯವಾಗಿ ಗುರುಗಳಾದವರು ಶಿಷ್ಯನನ್ನು ಹರಸಿ ಅಂಕಿತವನ್ನು ಪ್ರದಾನ ಮಾಡುತ್ತಾರೆ. ಈ ಸಂದರ್ಭದಲ್ಲಿ ಗುರುಗಳು ಅಂಕಿತ ಪ್ರದಾನ ಮಾಡಿದ್ದಕ್ಕೆ ಕೀರ್ತನೆ ಬರೆದರೆ,ಶಿಷ್ಯ ಅಂಕಿತ ಪಡೆದದ್ದನ್ನು ಕೀರ್ತನೆಗಳಲ್ಲಿ ಉಲ್ಲೇಖಿಸಿದ ಉದಾಹರಣೆಗಳಿವೆ.
ಇನ್ನು ಕೆಲವು ಅಂಕಿತಗಳು ಸ್ವಪ್ನದಲ್ಲಿ ದೊರಕಿದವುಗಳು. ಶ್ರೀ ಜಗನ್ನಾಥದಾಸರಿಗೆ ಅಂಕಿತ ದೊರಕಿದ್ದು-ಕಲ್ಲಿನ ಮೇಲೆ ಬರೆದದ್ದು-ಭಗವಂತನ ಕೃಪೆಯಿಂದ.
ಶ್ರೀ ಗೋಪಾಲದಾಸರು ಮೊದಲು ಒಂದು ಅಂಕಿತದಿಂದ ಕೀರ್ತನೆಗಳನ್ನು ರಚಿಸಲು ಪ್ರಾರಂಭಿಸಿದವರು ಅನಂತರ ಶ್ರೀವಿಜಯರಾಯರು ನೀಡಿದ ಅಂಕಿತದಿಂದ ಬರೆಯಲು ಪ್ರಾರಂಭಿಸಿದರು. ಕೆಲವು ಹರಿದಾಸರಿಗೆ ಅಂಕಿತಗಳು ಭಗವಂತನ ಪ್ರೇರಣೆಯಿಂದ ಹೊಳೆದವುಗಳು. ಕೆಲವರಿಗೆ ಅಂಕಿತ ಕೊಟ್ಟಿದ್ದು ಯಾರು ? ಸ್ಪಷ್ಟ ಮಾಹಿತಿಗಳು ದೊರಕವು.

ಕೀರ್ತನೆ,ಮುಂಡಿಗೆ,ಉಗಾಭೋಗದಂತಹ ರಚನೆಗಳಲ್ಲಿ ಒಂದು ಬಾರಿ ಬಳಕೆಯಾಗುವ ಅಂಕಿತ,ಸುಳಾದಿಯಂತಹ ರಚನೆಗಳಲ್ಲಿ ಪ್ರತಿ ನುಡಿಯ ಕೊನೆಗೆ ಬಳಕೆಯಾಗುತ್ತದೆ. ಅಂಕಿತ ರಚನೆಗಳ ಕೊನೆಯ ಭಾಗದಲ್ಲಿ ಅಥವಾ ನುಡಿಯಲ್ಲಿ ಮಾತ್ರ ಬಳಕೆಯಾಗುತ್ತವೆ ಎಂತೇನೂ ಇಲ್ಲ, ಪದ್ಯದ ಪಲ್ಲವಿಯಲ್ಲಿಯೂ ಬಳಕೆಯಾಗಬಹುದು.

ಬಹುತೇಕ ಹರಿದಾಸರ ಅಂಕಿತಗಳಲ್ಲಿ ‘ ವಿಠಲ ‘ ಶಬ್ದ ಬಳಕೆ ಇದೆ. ಇದಕ್ಕೆ ಹಲವು ಅಪವಾದಗಳೂ ಇಲ್ಲದಿಲ್ಲ. ಹರಿದಾಸರ ಮೂಲ ಹೆಸರು ಅಂಕಿತವಾಗಿ ಬಳಕೆಯಾದದ್ದು ತುಂಬಾ ಕಡಿಮೆ. ಹೆಚ್ಚಿನ ಬಾರಿ ದಾಸರ ಮೂಲ ಹೆಸರು ಬೇರೆ ಇರುತ್ತದೆ,ಅವರು ಬಳಕೆ ಮಾಡುವ ಅಂಕಿತ ಬೇರೆ ಇರುತ್ತದೆ. ಅಂಕಿತ ನೀಡುವುದು ಗುರುಗಳು. ಉಪಾಸನೆಮಾಡುವ ದೇವರನ್ನು ಸ್ಮರಿಸಲು ಗುರುಗಳು ಅಂಕಿತ ನೀಡುವ ಪದ್ಧತಿ ಜಾರಿ ಬಂದಿದ್ದರಿಂದಲೊ ಏನೊ ಮೂಲ ಹೆಸರು ಮತ್ತು ಅಂಕಿತ ಭಿನ್ನವಾಗುತ್ತಾ ಬಂದಿರಲು ಸಾಕು. ಯಾರಿಗೆ ಅಂಕಿತ ನೀಡಬೇಕಿರುತ್ತದೆಯೊ ಅವರ ಸಾಧನೆಯನ್ನೂ ಗುರುಗಳು ಅವಲೋಕಿಸಿ ಅಂಕಿತ ನೀಡುವ ಪದ್ಧತಿ ಬೆಳೆದು ಬಂದಿರಲು ಸಾಕು. ಉದಾಹರಣೆಗೆ ಶ್ರೀಗೋಪಾಲದಾಸರ ಮೂವರು ತಮ್ಮಂದಿರುಗಳಲ್ಲಿ ಶ್ರೀ ಶ್ರೀನಿವಾಸದಾಸರ ( ಸಾಮಾನ್ಯವಾಗಿ ಶೀನಪ್ಪ ಎಂತಲೇ ಕರೆಯುವುದು ರೂಢಿಯಲ್ಲಿತ್ತು ) ಅಂಕಿತ ಗುರುಗೋಪಾಲ ವಿಠಲ. ಶ್ರೀ ಶ್ರೀನಿವಾಸದಾಸರಿಗೆ ಅಂಕಿತ ನೀಡಿದ್ದು ಅವರ ಅಣ್ಣಂದಿರಾದ ಶ್ರೀ ಗೋಪಾಲದಾಸರು.
ಶ್ರೀಪುರಂದರದಾಸರ ಒಬ್ಬ ಮಗನ ಅಂಕಿತ ಗುರುಪುರಂದರವಿಠಲ. ಬಹುಶಃ ಪುರಂದರದಾಸರ ಕಾಲದಿಂದ- ಮೊದಲು ಬಳಕೆ ಇದ್ದ ಅಂಕಿತಗಳ ಜೊತೆ-ಗುರು,ತಂದೆ- ಇತ್ಯಾದಿ ವಿಶೇಷಣಗಳ ಬಳಕೆಯಾಗಿ ಅದೇ ಹೊಸತಾದ ಅಂಕಿತಗಳಾಗಿ ಬಳಕೆಗೆ ಬಂದಿರಲು ಸಾಕು. ಉದಾಹರಣೆಗೆ ಗುರುಗೋಪಾಲ ವಿಠಲ,ತಂದೆಗೋಪಾಲ ವಿಠಲ,ತಂದೆಮುದ್ದುಮೋಹನ ವಿಠಲ ಇತ್ಯಾದಿ. ಅಂಕಿತ ನೀಡಿದವರು ತಮ್ಮ ಗುರುಗಳ ಸ್ಮರಣೆ ಮುಂದಿನ ಪೀಳಿಗೆಯಲ್ಲಿ ಮುಂದುವರೆಯಲು ಎಂಬುದಾಗಿರಬಹುದೆ? ಶ್ರೀ ಮೋಹನದಾಸರ ಮಗನ ಹೆಸರು ಶ್ರೀ ಗುರುರಾಯದಾಸ ( ವೆಂಕಪ್ಪದಾಸ ಎಂತಲೂ ಹೆಸರು ) ಇವರ ಅಂಕಿತ ತಂದೆಮೋಹನ ವಿಠಲ. ತಂದೆಮೋಹನ ವಿಠಲರ ಶಿಷ್ಯರೆಂದು ಹೇಳುವ ಶ್ರೀದಾಸಪ್ಪರ ಅಂಕಿತ ಗುರುಮೋಹನ ವಿಠಲ. ಅಂದರೆ ತಂದೆಮೋಹನ ವಿಠಲ ಮತ್ತು ಗುರುಮೋಹನ ವಿಠಲ ಎರಡೂ ಬೇರೆ,ಬೇರೆ ದಾಸರ ಅಂಕಿತಗಳೆಂಬುದನ್ನು ಗಮನಿಸಿ. ಎರಡೂ ಅಂಕಿತಗಳು ಒಬ್ಬ ದಾಸರದ್ದೇ ಅಲ್ಲ.

ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಅಂಕಿತಗಳಿಂದಲೇ ಹೆಚ್ಚು ಪರಿಚಿತರಾಗಿ ದಾಸರ ಮೂಲ ಹೆಸರೇ ಹಿನ್ನೆಲೆಗೆ ಸರಿದುಕೊಂಡಿದ್ದು. ‘ ಪ್ರಾಣೇಶವಿಠಲ ’ ಎಂಬುದು ಅಂಕಿತ.ಇದರಿಂದ ಶ್ರೀಪ್ರಾಣೇಶದಾಸರೆಂದೇ ಹೆಚ್ಚು ಪ್ರಚಲಿತರಾದವರು ಶ್ರೀಯೋಗೀಂದ್ರರಾಯರು. ಶ್ರೀಯೋಗೀಂದ್ರರಾಯರು ಹೆಸರಿಕ್ಕಿಂತಲೂ ಹೆಚ್ಚು ಜನಜನಿತವಾದದ್ದು ಶ್ರೀಪ್ರಾಣೇಶದಾಸರೆಂಬುದು.

ಭಿನ್ನವಾದ ಅಂಕಿತಗಳಿಂದ ಒಬ್ಬ ಹರಿದಾಸರು ಕೃತಿಗಳನ್ನು ರಚಿಸಿದ್ದಿದೆಯಾ? ಎಂಬುದನ್ನು ಹುಡುಕಿದರೆ ಇದಕ್ಕೆ ಉತ್ತರ- ತುಂಬಾ ವಿರಳ. ಶ್ರೀ ತುಪಾಕಿ ವೆಂಕಟರಮಣಾಚಾರ್ಯರು ವೆಂಕಟಾಚಲವಾಸ,ಶೇಷಶಿಖರನಿವಾಸ, ನಾಗಗಿರಿನಾಥ ಮುಂತಾದ ಅಂಕಿತಗಳಿಂದ ಕೀರ್ತನೆಗಳನ್ನು ರಚಿಸಿದ್ದಾರೆ. ಅವೆಲ್ಲ ಅಂಕಿತಗಳು ಶ್ರೀ ಶ್ರೀನಿವಾಸದೇವರ ಕುರಿತಾಗಿರುವುಗಳೇ ಆಗಿವೆ. ಶ್ರೀ ವ್ಯಾಸರಾಜ ತೀರ್ಥರ ಅಂಕಿತಗಳನ್ನು ಗಮನಿಸಿದಾಗ –ಸಿರಿಕೃಷ್ಣ, ಶ್ರೀಕೃಷ್ಣ, ಉಡುಪಿಕೃಷ್ಣ, ಕೃಷ್ಣ-ಇಷ್ಟು ವೈವಿಧ್ಯ ಎನಿಸಿದಾಗಲೂ ಸಾಮ್ಯತೆ ಇರುವುದನ್ನು ಗಮನಿಸಿ.

ಜನಮಾನಸದಲ್ಲಿ ಕೆಲವು ಪದ್ಯಗಳು ಜನಪ್ರಿಯವಾದಂತೆಲ್ಲಾ ಭಾವುಕ ಜನರು ತಮಗೆ ಪ್ರಿಯರಾದ ಹರಿದಾಸರ ಅಂಕಿತಗಳಿಂದಲೂ ಹಾಡಲೂ ತೊಡಗಿದರು. ಉದಾಹರಣೆಗೆ ಪುರಂದರದಾಸರ ಪದ್ಯಗಳಿಗೆ ಕನಕದಾಸರ ಅಂಕಿತಗಳನ್ನು ಸೇರಿಸಿರಬಹುದು ಅಥವಾ ಕನಕದಾಸರ ಪದ್ಯಗಳಿಗೆ ಪುರಂದರದಾಸರ ಅಂಕಿತಗಳನ್ನು ಸೇರ್ಪಡೆ ಮಾಡಿ ಜನಪ್ರಿಯಗೊಳಿಸಿರಬಹುದು. ಹಾಗೆನೆ ಜನಸಾಮಾನ್ಯರೇ ಪದ್ಯಗಳನ್ನು ರಚಿಸಿ ಕೊನೆಗೆ ಯಾರದಾದರೂ ದಾಸರ ಅಂಕಿತಗಳನ್ನು ಸೇರಿಸಿ, ಅಂತಹ ರಚನೆಗಳು ಹರಿದಾಸರದ್ದು ಎಂದು ಬಿಂಬಿಸಿದ್ದಕ್ಕೂ ಸಾಕಷ್ಟು ಉದಾಹರಣೆಗಳಿವೆ. ಆದರೆ ಇಂತಹ ರಚನೆಗಳಲ್ಲಿ ಹರಿದಾಸರ ರಚನೆಗಳಿಗಿರುವ ಪ್ರಾಸ ಮುಂತಾದ ಲಕ್ಷಣಗಳಿಲ್ಲದೆ ಇರುವುದು. ಇಂತಹ ಸಂದರ್ಭಗಳಲ್ಲಿ ಇನ್ನೊಂದು ಅಚಾತುರ್ಯವೂ ಆದದ್ದಿದೆ – ಒಬ್ಬ ಹರಿದಾಸರ ಪದ್ಯಗಳಿಂದ ಕೆಲವು ಶಬ್ದಗಳನ್ನು ಆಯ್ಕೆಮಾಡಿಕೊಂಡು ಇನ್ನಿಷ್ಟು ಶಬ್ದಗಳನ್ನು ಸೇರಿಸಿ, ಪದ್ಯವನ್ನು ರಚಿಸಿ ಇದು ಇಂತಹ ದಾಸರ ರಚನೆಯೆಂದು ಬಿಂಬಿಸುವುದು. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಒಬ್ಬ ಹರಿದಾಸರ ರಚನೆಗಳಿಂದಲೇ ಅಲ್ಲೊಂದು, ಇಲ್ಲೊಂದು ಶಬ್ದವನ್ನು ತೆಗೆದುಕೊಂಡು ಹೊಸ ಪದ್ಯವೆಂದು ರೂಪಿಸಿಬಿಡುವುದು. ಅದನ್ನು ಗಮನಿಸಿದವರು ಏನನ್ನೂ ಆಲೋಚಿಸದೆ ಅದೊಂದು ಹೊಸ ಪದ್ಯವೆಂದುಕೊಂಡು ಅಪ್ರಕಟಿತ ಪದ್ಯದ ಹೆಸರಿನಲ್ಲಿ ಪ್ರಕಟಿಸುವಂತಹ ಕೆಲಸಗಳೂ ನಡೆದ ಉದಾಹರಣೆಗಳಿವೆ. ಇಂತಹ ಸಂದರ್ಭಗಳಲ್ಲಿ ತಜ್ಞರು ಆದ ಅಚಾತುರ್ಯಗಳನ್ನು ಪರಿಶೀಲಿಸಿ ಸರಿಪಡಿಸಬೇಕು.

ಇನ್ನು ವಿಷಯ ಸಂಗ್ರಹದ ಕೊರತೆಯಿಂದ ಆಗುವ ದೋಷಗಳನ್ನು ನೋಡೋಣ. ಮಹಿಪತಿ ಹೆಸರಿನ ಮೂವರು ಸಂತರು ಭಾರತದಲ್ಲಿ ಆಗಿ ಹೋಗಿದ್ದಾರೆ. ಗ್ವಾಲಿಯರ್ ದಲ್ಲಿ ಆಗಿ ಹೋದ ಮಹಿಪತಿ ಸಂತರ ಪದ್ಯವನ್ನು ಕಾಖಂಡಕಿ ಮಹಿಪತಿದಾಸರ ಹೆಸರಿನಲ್ಲಿ ಮುದ್ರಣಗೊಳಿಸಿದ ಉದಾಹರಣೆಯೂ ಇದೆ.
ಉತ್ತರಾದಿಮಠದ ಪೀಠವನ್ನು ಆಳಿದ ಯತಿಶ್ರೇಷ್ಠರು ಶ್ರೀ ಸತ್ಯಬೋಧತೀರ್ಥರು. ಇವರನ್ನು ಸ್ತುತಿಸಿ ಶ್ರೀಗೋಪಾಲದಾಸರು ಮತ್ತು ಅವರ ತಮ್ಮಂದಿರು ಕೀರ್ತನೆಯೊಂದನ್ನು ರಚಿಸಿದಾಗ ಕೀರ್ತನೆಯ ಕೊನೆಗೆ ಅಂಕಿತ: ಶ್ರೀ ಗೋಪಾಲ ವಿಠಲ ಎಂದು ಬಳಕೆಯಾಯಿತು ಎಂಬುದನ್ನು ಗಮನಿಸಿ ಅಂದರೆ ಕೀರ್ತನೆಯೊಂದನ್ನು ಹಲವರು ರಚಿಸಿ ಒಬ್ಬರ ಅಂಕಿತ ಬಳಕೆಯಾಗಿದ್ದು.

ಇವೆಲ್ಲವುಗಳನ್ನು ಗಮನಿಸಿದಾಗ ಹರಿದಾಸರ ಪದ್ಯಗಳನ್ನು ಗುರುತಿಸುವಲ್ಲಿ ಅಂಕಿತಗಳು ತುಂಬಾ ಸಹಕಾರಿ ಎಂಬುದು ನಿರ್ವಿವಾದದ ಸಂಗತಿ. ಅಂಕಿತಗಳನ್ನು ಆಧಾರವಾಗಿಸಿ ಪದ್ಯಗಳ ರಚನಾಕಾರರನ್ನು ಗುರುತಿಸುವಾಗ – ಬೇರೆ,ಬೇರೆ ಪಠ್ಯಗಳನ್ನು/ಆಕರಗಳನ್ನು ತಜ್ಞರು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಜೊತೆಗೆ ಕೀರ್ತನೆಯಲ್ಲಿ ಬಳಕೆಯಾದ ಸಾಹಿತ್ಯ,ಹರಿದಾಸರ ಜೀವನ ಹಿನ್ನೆಲೆ ಇವುಗಳನ್ನು ತಿಳಿಯಲು ಕೂಡಾ ನೆರವಾಗಬಲ್ಲವು.

ಈಗ ಇನ್ನೊಂದು ಮಗ್ಗಲಿನತ್ತ ಹೊರಳೋಣ.
ಶ್ರೀ ಮಹಿಪತಿರಾಯರದ್ದು 14 ಅಂಕಿತಗಳೆಂದು ಪಟ್ಟಿ ಮಾಡಲಾಗುತ್ತದೆ.
1. ಮಹಿಪತಿ 2.ದೀನಮಹಿಪತಿ 3.ತರಳಮಹಿಪತಿ 4.ದಾಸಮಹಿಪತಿ 5.ಮೂಢಮಹಿಪತಿ 6.ನರಕೀಟಕ ಮಹಿಪತಿ 7. ಬಾಲಕ ಮಹಿಪತಿ 8.ಚಿಣ್ಣಮಹಿಪತಿ 9.ಕಂದಮಹಿಪತಿ 10.ಚಿಣ್ಣಕಿಂಕರ ಮಹಿಪತಿ 11.ಪುತ್ರಮಹಿಪತಿ 12. ಮಹಿಪತಿಗುರು 13.ಮಹಿಪತಿತಂದೆ 14. ಮಹಿಪೆಮ್ಮ. ಮೇಲ್ಕಾಣಿಸಿದ ಅಂಕಿತಗಳಲ್ಲಿ ಅತಿ ಹೆಚ್ಚು ಬಳಕೆಯಾದದ್ದು ಮಹಿಪತಿ ಎಂಬುದು ( ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯು ಪ್ರಕಟಿಸಿದ ಶ್ರೀಮಹಿಪತಿರಾಯರ ಕೀರ್ತನೆಗಳು- ಪುಸ್ತಕ ಗಮನಿಸಿ ). ಅಲ್ಲೊಂದು ಇಲ್ಲೊಂದು ಪದ್ಯಗಳಲ್ಲಿ ಮಾತ್ರ ದಾಸ,ಮೂಢ,ತರಳ,ದೀನ ಎಂಬ ವಿಶೇಷಣಗಳು ಸೇರಿಕೊಂಡಿವೆ. ಹೀಗೆ ಬೇರೆ,ಬೇರೆ ವಿಶೇಷಣ ಸೇರ್ಪಡೆಯಾದದ್ದನ್ನೂ ಪ್ರತ್ಯೇಕವಾಗಿ ಒಂದು ಅಂಕಿತವೆಂದು ಪರಿಗಣಿಸುವುದು ಎಷ್ಟು ಔಚಿತ್ಯ? ಶ್ರೀಕನಕದಾಸರ ಅಂಕಿತ ಆದಿಕೇಶವ ಎಂದು ಗುರುತಿಸಲಾಗಿದೆಯಲ್ಲ?. ಶ್ರೀಕನಕದಾಸರ ಪದ್ಯಗಳಲ್ಲಿ ‘ ಮುದ್ದು ಶ್ರೀ ಆದಿಕೇಶವ’, ‘ ಸಿರಿಯಾದಿಕೇಶವ ’, ‘ ದೀನರಕ್ಷಕಾದಿಕೇಶವ ‘, ‘ ವರಕಾಗಿನೆಲೆಯಾದಿಕೇಶವ ‘, ಹೀಗೆಲ್ಲ ಪ್ರಸ್ತಾಪಗಳಿವೆ. ಇವುಗಳನ್ನೂ ಅಂಕಿತಗಳೆಂದು ಪರಿಗಣಿಸಲಾದೀತೆ? ಪರಿಗಣಿಸಿದರೆ ಅದೆಷ್ಟು ಉದ್ದದ ಪಟ್ಟಿಯಾದೀತು!. ಹೀಗಾಗಿ ಶ್ರೀ ಮಹಿಪತಿರಾಯರ ಪದ್ಯಗಳ ಅಂಕಿತ ‘ ಮಹಿಪತಿ ‘ ಎಂಬುದು ಮಾತ್ರ ಹೆಚ್ಚು ವಾಸ್ತಕವೆನಿಸುತ್ತದೆ.

ಶ್ರೀಮಹಿಪತಿರಾಯರ ಸುತ ಶ್ರೀ ಕೃಷ್ಣರಾಯರ ಅಂಕಿತಗಳನ್ನು 21 ಎಂದು ಪಟ್ಟಿ ಮಾಡುತ್ತಾರೆ.
1 ಮಹಿಪತಿನಂದನ 2.ಮಹಿಪತಿಕಂದ 3.ಮಹಿಪತಿಸುತ.4. ಮಹಿಪತಿಸುತಪ್ರಭು 5. ಮಹಿಪತಿನಂದಕೈವಾರಿ 6. ಮಹಿಪತಿಚಿನ್ನಪ್ರಭು 7.ಮಹಿಪತಿಜ 8.ಮಹಿಪತಿ ಅಣುಗ 9. ಬಾಬಾಮಹಿಪತಿಪ್ರಭು 10. ಗುರುಮಹಿಪತಿಪ್ರಭು 11 ಗುರುಮಹಿಪತಿ 12. ಗುರುವರ ಮಹಿಪತಿ 13. ಗುರುವರ ಮಹಿಪತಿ ನಂದನ 14. ತಂದೆ ಮಹಿಪತಿ 15. ತಂದೆ ಮಹಿಪತಿ ನಂದನ 16. ತಂದೆಗುರುವರ ಮಹಿಪತಿ 17. ತಂದೆ ಮಹಿಪತಿ ನಂದನ ಪ್ರಾಣ 18.ತಂದೆ ಮಹಿಪತಿ ನಂದನ ಸಾರಥಿ 19. ತಂದೆ ಮಹಿಪತಿ ಕಂದ 20. ತಂದೆ ಮಹಿಪತಿ ಬಾಲ 21. ತಂದೆ ಮಹಿಪತಿ ಸುತ .
ಈ ಪಟ್ಟಿ ನೋಡಿದಾಗ ಕನ್ನಡ ಹರಿದಾಸ ಸಾಹಿತ್ಯಕ್ಕೆ ಇದು ದಾಖಲೆಯೇ ಸರಿ ಎಂದು ಒಮ್ಮೆ ಅನಿಸಬಹುದು. ಆದರೆ ಶ್ರೀ ಗುರುದೇವ ರಾನಡೆಯವರು ತಮ್ಮ ಉಪನ್ಯಾಸಕ್ಕೆ ತಂದೆ ಮಹಿಪತಿ ಮತ್ತು ಗುರು ಮಹಿಪತಿ ಅಂಕಿತಗಳ ಪದ್ಯಗಳನ್ನು ಉಲ್ಲೇಖಿಸಿದಾಗ ಎರಡೂ ಪದ್ಯಗಳನ್ನು ಶ್ರೀ ಮಹಿಪತಿರಾಯರ ಒಬ್ಬನೇ ಮಗ ಬರೆದದ್ದೊ ಅಥವಾ ಇನ್ನೊಬ್ಬ ಮಗನ ರಚನೆಯೂ ಇರಬಹುದಾ? ಎಂದದ್ದನ್ನು ಗಂಭೀರವಾಗಿ ಪರಿಗಣಿಸಬೇಕು. ( ಧಾರವಾಡ ವಿಶ್ವವಿದ್ಯಾಲಯದಲ್ಲಿ ಮಾಡಿದ ಉಪನ್ಯಾಸ ಸರಣಿಗಳು. ಶ್ರೀ ಮಹಿಪತಿರಾಯರಿಗೆ ಶ್ರೀ ಕೃಷ್ಣರಾಯರು ಮತ್ತು ಶ್ರೀ ದೇವರಾಯರು ಎಂಬ ಇಬ್ಬರು ಮಕ್ಕಳು). ಕರ್ನಾಟಕದಲ್ಲಿ ದಾಸಸಾಹಿತ್ಯದಲ್ಲಿ ಕೃತಿಕಾರರೊಬ್ಬರು ತಮ್ಮ ಕೃತಿಗಳಲ್ಲಿ ‘ ಗುರು’ ಮತ್ತು ‘ತಂದೆ’ ಎಂಬ ಎರಡೂ ಅಂಕಿತ ವಿಶೇಷಣಗಳನ್ನು ಬಳಸಿ ಕೃತಿಗಳನ್ನು ರಚಿಸಿದ ಉಲ್ಲೇಖಗಳು ಸದ್ಯದ ಮಟ್ಟಿಗೆ ಲಭ್ಯವಿಲ್ಲ. ಯಾಕೆ ಒಬ್ಬರೇ ಒಂದಕ್ಕಿಂತ ಹೆಚ್ಚು ಅಂಕಿತಗಳನ್ನು ಬಳಸಿಲ್ಲ? ಅಂಕಿತವೆಂಬುದು ಒಂದರ್ಥದಲ್ಲಿ ಒಬ್ಬ ಉಪಾಸ್ಯದೇವರನ್ನು ಅನುಸರಿಕೊಂಡು ಬಂದಂತೆನಾ? ಸಂಪ್ರದಾಯ, ಹರಿದಾಸಪರಂಪರೆ,ಧಾರ್ಮಿಕ ಪದ್ಧತಿಗಳ ಹಿನ್ನೆಲೆಯಲ್ಲಿ ತಜ್ಞರು ಬೆಳಕು ಚೆಲ್ಲಬೇಕು.

ಶ್ರೀಮಹಿಪತಿರಾಯರ ವಂಶಜರಲ್ಲಿ ಸುಮಾರು 85 ಅಂಕಿತಗಳು ದೊರಕುತ್ತವೆ. ಸರಿಯಾಗಿ ಹುಡುಕಿದರೆ ಅವರ ವಂಶಜರಲ್ಲಿ ಕೀರ್ತನೆಗಳನ್ನು ರಚಿಸಿದವರ ಸಂಖ್ಯೆಯೂ ಹೆಚ್ಚುವುದರಲ್ಲಿ ಸಂದೇಹವಿಲ್ಲ.
ಒಂದೇ ಅಂಕಿತವಿಟ್ಟುಕೊಂಡು ಪದ್ಯಗಳನ್ನು ಬೇರೆ,ಬೇರೆಯವರು ರಚಿಸಿದ ಉದಾಹರಣೆಗಳೂ ಇವೆ. ಶ್ರೀನಿವಾಸ ವಿಠಲ ಎಂಬ ಅಂಕಿತದಿಂದ ರಚಿಸಿದವರ ಸಂಖ್ಯೆ 03 ಎಂದು ಗುರುತಿಸಲಾಗಿದೆ. ಹೀಗಿದ್ದಾಗ ಗೊಂದಲ ಉಂಟಾಗದೇ ಇರಲು ಸಾಧ್ಯವೇ?

ಕೆಲವು ಅಂಕಿತಗಳು ಯಾರ ರಚನೆಗಳು ಎಂಬುದು ಗೊತ್ತಾಗದೆ ಸಂದಿಗ್ಧವಾಗಿಯೆ ಉಳಿದ ಉದಾಹರಣೆಗಳು ಇವೆ. ಧೀರಕೃಷ್ಣ ಒಡೆಯ ಅಂಕಿತದ ಪದ್ಯಗಳು ಲಭ್ಯವಿದ್ದು, ಅವುಗಳ ರಚನಾಕಾರರ ಖಚಿತತೆ ಸಿಕ್ಕಿಲ್ಲ. ಕೆಲವು ಹರಿದಾಸರ ಬದುಕಿನ ಘಟನೆಗಳು ದೊರಕಿದ್ದು ಅದರ ಹಿನ್ನೆಲೆಯಲ್ಲಿ ಅವರು ಪದ್ಯಗಳನ್ನು ರಚಿಸಿರಬಹುದು ಎಂತನಿಸುತ್ತದೆ ಆದರೆ ಗುರುತಿಸಲು ಆಗಿಲ್ಲ.
ಹೀಗೆ ಹರಿದಾಸ ಸಾಹಿತ್ಯದ ಭಾಂಡಾರ ಅಗಣಿತ ಗಣಿ. ಹುಡುಕಿದಷ್ಟೂ ಮುತ್ತು-ರತ್ನಗಳು ಸಿಗುತ್ತಹೋಗುತ್ತವೆ. ಕನ್ನಡ ಸಾಹಿತ್ಯ ಪರಂಪರೆಯ ಅಪರೂಪದ ಸಾಂಸ್ಕೃತಿಕ ಘಮವದು. ಅವುಗಳ ಅಧ್ಯಯನ,ಹುಡುಕಾಟ,ರಕ್ಷಣೆ, ಮುಂದಿನ ಪೀಳಿಗೆಗೆ ವರ್ಗಾವಣೆಯ ಜವಾಬ್ದಾರಿ ಎಲ್ಲ ಕನ್ನಡ ಮನಸ್ಸುಗಳದ್ದು.





1 Comment

Leave a Reply