ಬುದ್ಧ ‘ಇರುವವನು’ ಆಗುವವನಲ್ಲ… | ಓಶೋ ವ್ಯಾಖ್ಯಾನ

‘ಬುದ್ಧತ್ವ’ ಇರುವ ಸ್ಥಿತಿ, ‘ಆಗುವ’ ಪ್ರಕ್ರಿಯೆ ಅಲ್ಲ. ಬುದ್ಧ ಆಗುವುದು ಸಾಧ್ಯವೇ ಇಲ್ಲ. ನೀನು ಬುದ್ಧ ಅಥವಾ ಬುದ್ಧ ಅಲ್ಲ, ಇರುವ ಸ್ಥಿತಿಗಳು ಇವೆರಡೇ... | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

How can you become a Buddha? Either you are, or you are not. How can you become?” asks Osho.

ಒಮ್ಮೆ ಝೆನ್ ಮಾಸ್ಟರ್ ಲಿನ್ ಚೀ ಹತ್ತಿರ ಒಬ್ಬ ಮನುಷ್ಯ ಬಂದು ತನ್ನ ತಳಮಳವನ್ನು ನಿವೇದಿಸಿಕೊಂಡ, “ನಾನು ಸ್ವತಃ ಬುದ್ಧನಾಗಬೇಕಿದೆ ಅದಕ್ಕಾಗಿ ಏನು ಮಾಡಬೇಕು?”

ಈ ಮಾತುಗಳನ್ನ ಕೇಳುತ್ತಿದ್ದಂತೆಯೇ ಲಿನ್ ಚೀ ಕೆಂಡಾಮಂಡಲನಾದ. ತನ್ನ ಕೋಲನ್ನ ಕೈಗೆತ್ತಿಕೊಂಡು ಆ ಮನುಷ್ಯನನ್ನ ಹೊಡೆಯಲು ಧಾವಿಸಿದ. ಗಾಬರಿ ಬಿದ್ದ ಆ ಮನುಷ್ಯ ಅಲ್ಲಿಂದ ಓಡತೊಡಗಿದ. ಆದರೆ ಲಿನ್ ಚೀ ಅಷ್ಟಕ್ಕೇ ಸುಮ್ಮನಾಗಲಿಲ್ಲ, ಆ ಮನುಷ್ಯನನ್ನು ಅಟ್ಟಿಸಿಕೊಂಡು ಹೋದ. ದಾರಿಯಲ್ಲಿ ಈ ದೃಶ್ಯ ನೋಡುತ್ತಿದ್ದ ಒಬ್ಬ ಮನುಷ್ಯ ಲಿನ್ ಚೀ ಯನ್ನ ಪ್ರಶ್ನೆ ಮಾಡಿದ.

“ಲಿನ್ ಚೀ, ನಿನ್ನದು ಅತಿಯಾಯಿತು. ಆ ಮನುಷ್ಯ ಕೇಳಿದ ಪ್ರಶ್ನೆಯಲ್ಲಿ ಅಂಥ ತಪ್ಪೇನಿದೆ? ಆತ ತುಂಬ ಪ್ರಾಮಾಣಿಕ ಮನುಷ್ಯನಂತೆ ಕಾಣುತ್ತಿದ್ದ. ಆತ ಕೇವಲ ಒಂದು ಧಾರ್ಮಿಕ ಪ್ರಶ್ನೆಗೆ ಉತ್ತರ ಬಯಸಿದ್ದ. ನೀನು ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಿತ್ತು. ತುಂಬ ದೂರದಿಂದ ಬಂದಿದ್ದ. ನೀನು ಅವನ ಜೊತೆ ನಡೆದುಕೊಂಡ ಬಗೆ ಅಮಾನವೀಯ.”

“ನನಗೆ ಸಿಟ್ಟು ಬಂತು. ಅವನ ಪ್ರಶ್ನೆಯೇ ಪೂರ್ತಿ ಅಸಂಗತ. ಅವನು ಈಗಾಗಲೇ ಬುದ್ಧನಾಗಿದ್ದಾನೆ. ಮತ್ತೆ ಬುದ್ಧನಾಗಲು ಪ್ರಯತ್ನಿಸಿದ್ದಾದರೆ ಇರುವ ತನ್ನ ಬುದ್ಧತ್ವವನ್ನ ಕಳೆದುಕೊಳ್ಳುತ್ತಾನೆ. ನನ್ನ ಸಿಟ್ಟನ್ನ, ನಾನು ಅವನಿಗೆ ಹೊಡೆದಿರುವ ಏಟನ್ನ ಅವನು ಸಮಾಧಾನದಿಂದ ಅರ್ಥಮಾಡಿಕೊಳ್ಳಬಲ್ಲನಾದರೆ ಆತ ತನ್ನ ಎಲ್ಲ ಪ್ರಯತ್ನಗಳನ್ನ ಕೈಬಿಡುತ್ತಾನೆ. ಹೊಸದಾಗಿ ಸಾಧಿಸುವುದು ಏನೂ ಇಲ್ಲ, ಆತ ತನ್ನ ಹಾಗಿರಬೇಕು ಅಷ್ಟೇ. ಆತ ತಾನು ಏನಿರುವನೋ ಹಾಗಿರಬೇಕು ಅಷ್ಟು ಸಾಕು.“

ತನ್ನ ಒಂದು ಸಾಮಾನ್ಯ ಪ್ರಶ್ನೆಗೆ ಉತ್ತರ ಹೇಳಲಾಗದೇ ತನ್ನನ್ನು ಹೊಡೆಯಲು ಬಂದ ಲಿನ್ ಚೀ ಬಗ್ಗೆ ಆ ಬಡಪಾಯಿ ಸಾಧಕ ಸಿಟ್ಟಾಗಿದ್ದ. ಲಿನ್ ಚೀ ಮೂರ್ಖ ಅವನ ಬಳಿ ನನ್ನ ಪ್ರಶ್ನೆಗೆ ಉತ್ತರ ಇಲ್ಲ ಎಂದು ನಿರ್ಧರಿಸಿ ಆ ಮನುಷ್ಯ ಇನ್ನೊಬ್ಬ ಝೆನ್ ಮಾಸ್ಟರ್ ಬಳಿ ತನ್ನ ಪ್ರಶ್ನೆಯೊಂದಿಗೆ ಹೋದ.

ಈ ಮಾಸ್ಟರ್ ಲಿನ್ ಚೀ ಯ ವಿರೋಧಿ ಎಂದೇ ಹೆಸರಾಗಿದ್ದ. ಅವನ ಮತ್ತು ಲಿನ್ ಚೀ ನಡುವೆ ಆಗಾಗ್ಗೆ ವಾಗ್ವಾದಗಳಾಗುತ್ತಿದ್ದವು. ಲಿನ್ ಚೀ ಯ ವಿರೋಧಿಯಾಗಿದ್ದರಿಂದ ಈ ಮಾಸ್ಟರ್ ಹತ್ತಿರ ತನ್ನ ಪ್ರಶ್ನೆಗೆ ಉತ್ತರ ಇರಬೇಕೆಂದು ತಿಳಿದು ಅವನು ಮಾಸ್ಟರ್ ಹತ್ತಿರ ಹೋಗಿ ತನ್ನ ಪ್ರಶ್ನೆ ಕೇಳಿದ,

“ ಮಾಸ್ಟರ್, ನಾನು ಸ್ವತಃ ಬುದ್ಧನಾಗಬೇಕಿದೆ ಅದಕ್ಕಾಗಿ ಏನು ಮಾಡಬೇಕು? “

“ ಈ ಪ್ರಶ್ನೆಗೆ ಉತ್ತರ ಬಯಸಿ ಈ ಮೊದಲು ಯಾರ ಬಳಿಯಾದರೂ ಹೋಗಿದ್ದಿಯಾ?“ ಮಾಸ್ಟರ್ ಪ್ರಶ್ನೆ ಮಾಡಿದ.

“ ಹೌದು ಮಾಸ್ಟರ್, ಲಿನ್ ಚೀ ಹತ್ತಿರ ಹೋಗಿದ್ದೆ ಆದರೆ ಅವ ಮೂರ್ಖ ಅವನ ಹತ್ತಿರ ನನ್ನ ಪ್ರಶ್ನೆಗೆ ಉತ್ತರ ಇರಲಿಲ್ಲ, ಅವ ನನ್ನ ಹೊಡೆಯಲು ಅಟ್ಟಿಸಿಕೊಂಡು ಬಂದ.“

ಇಂಥ ಉತ್ತರ ಕೇಳುತ್ತಿದ್ದ ಹಾಗೆ ಮಾಸ್ಟರ್ ಭಯಂಕರ ಸಿಟ್ಟಿಗೆದ್ದ, “ ಲಿನ್ ಚೀ ಕೇವಲ ನಿನ್ನ ಹೊಡೆಯಲು ಬೆನ್ನು ಹತ್ತಿದ್ದ, ನಾನು ನಿನ್ನ ಕತ್ತರಿಸಿಬಿಡುತ್ತೇನೆ “ ಮಾಸ್ಟರ್ ಒರೆಯಿಂದ ತನ್ನ ಖಡ್ಗ ಹೊರತೆಗೆದ. ಮಾಸ್ಟರ್ ನ ಈ ರೌದ್ರಾವತಾರ ನೋಡಿ ಆ ಮನುಷ್ಯ ಭಯದಿಂದ ಓಡಿಹೋದ.

ಆ ಮನುಷ್ಯ, ವಾಪಸ್ಸಾಗುವ ದಾರಿಯಲ್ಲಿ ಈ ಘಟನೆ ಹೇಳಿ ತಾನು ಮುಂದೆ ಯಾರನ್ನ ಭೇಟಿಯಾಗಬೇಕೆಂದು ಹಲವರನ್ನು ವಿಚಾರಿಸಿದ. ಎಲ್ಲರೂ ಮತ್ತೇ ಲಿನ್ ಚೀ ಯನ್ನೇ ಭೇಟಿ ಮಾಡು ಎಂದು ಸಲಹೆ ಕೊಟ್ಟರು.

ಆ ಮನುಷ್ಯ ಮತ್ತೆ ಲಿನ್ ಚೀಯ ಹತ್ತಿರ ಬಂದ. “ಮತ್ತೆ ಯಾಕೆ ವಾಪಸ್ ಬಂದೆ ?“ ಲಿನ್ ಚೀ ಪ್ರಶ್ನೆ ಮಾಡಿದ. “ಆ ಮಾಸ್ಟರ್, ನಿನಗಿಂತ ಅಪಾಯಕಾರಿ, ಇನ್ನೊಂದು ನಿಮಿಷ ನಾನು ಅಲ್ಲಿದ್ದರೆ ಅವ ನನ್ನ ಕೊಂದೇ ಬಿಡುತ್ತಿದ್ದ.“

“ನಮ್ಮಿಬ್ಬರ ನಡುವೆ ಒಪ್ಪಂದ ಇದೆ, ನಾವು ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುತ್ತೇವೆ. ಇದು ನಮ್ಮಿಬ್ಬರ ಪಿತೂರಿ. ನೀನು ಬುದ್ಧ ಆಗುವ ಆಸೆ ಬಿಟ್ಟು ಬಿಡು. ನೀನು ಈಗಾಗಲೇ ಬುದ್ಧ. ನೀನು ನಿನ್ನ ಸಹಜ ಸ್ವಭಾವದಂತೆ ಬದುಕು. ಬುದ್ಧ ಇರುವವನು ಆಗುವವನಲ್ಲ “ ಝೆನ್ ಮಾಸ್ಟರ್ ಲಿನ್ ಚೀ ನಕ್ಕುಬಿಟ್ಟ.

ಇದು ಅತ್ಯಂತ ಮಹತ್ವದ ತಿಳುವಳಿಕೆ. ನೀನು ಬದುಕು ಅಷ್ಟೇ. ಯಾವ ‘ಆಗುವ’ ಹಂಬಲಕ್ಕೂ ಬೀಳಬೇಡ. ‘ಬುದ್ಧತ್ವ’ ಇರುವ ಸ್ಥಿತಿ, ‘ಆಗುವ’ ಪ್ರಕ್ರಿಯೆ ಅಲ್ಲ. ಬುದ್ಧ ಆಗುವುದು ಸಾಧ್ಯವೇ ಇಲ್ಲ. ನೀನು ಬುದ್ಧ ಅಥವಾ ಬುದ್ಧ ಅಲ್ಲ, ಇರುವ ಸ್ಥಿತಿಗಳು ಇವೆರಡೇ. ಸಾಮಾನ್ಯ ಕಲ್ಲು, ವಜ್ರ ಆಗುವುದು ಹೇಗೆ ಸಾಧ್ಯ? ಅದು ವಜ್ರ ಹೌದು ಅಥವಾ ಅಲ್ಲ ಇವೆರಡೇ ನಿಜಗಳು. ಇಲ್ಲಿ ‘ಆಗುವಿಕೆ’ ಸಾಧ್ಯವಿಲ್ಲ. ಈಗ ನೀವು ನಿರ್ಧರಿಸಿ. ಈಗ ನೀವು ಏನಾಗಿರುವಿರೋ ಆ ಆಗಿರುವುದನ್ನ ಅರಿತುಕೊಂಡು ಸುಮ್ಮನಾಗಿ, ಆಗುವ ಎಲ್ಲ ಪ್ರಯತ್ನಗಳನ್ನ ಕೈಬಿಡಿ. ಈ ನಿಮ್ಮ ಇರುವಿಕೆಯನ್ನ ನೀವು ಅರ್ಥ ಮಾಡಿಕೊಂಡಾಗ ಎಲ್ಲ ಪ್ರಯತ್ನಗಳನ್ನು ಕೈಬಿಟ್ಟಾಗ ಶೂನ್ಯವನ್ನ ಪ್ರವೇಶ ಮಾಡುವಿರಿ.

ಒಳ್ಳೆಯದು, ಕೆಟ್ಟದ್ದು ಅಂತೇನಿಲ್ಲ. ದಾರಿ ಅಂತ ಯಾವುದಿಲ್ಲ. ದಾರಿ ಇದೆ ಎನ್ನುವುದಾದರೆ ಅಲ್ಲಿ ಯಾವುದೋ ಗುರಿ, ಯಾವುದೋ ಆಗುವಿಕೆಯ ಸಾಧ್ಯತೆ ಇದೆ. ದಾರಿ ಎಂದರೆ ಒಂದಿಷ್ಟು ದೂರ ಪ್ರಯಾಣ ಮಾಡಬೇಕು ಎಂದರ್ಥ. ದಾರಿ ಎಂದರೆ ನಿಮ್ಮ ಇರುವಿಕೆ ಮತ್ತು ಆಗುವಿಕೆಯ ನಡುವೆ ಅಂತರವಿದೆ. ನಾನು ಪ್ರಯಾಣ ಮಾಡಿ ನಿನ್ನ ಮುಟ್ಟುವುದಾದರೆ ದಾರಿ ಬೇಕು, ನೀವು ಪ್ರಯಾಣ ಮಾಡಿ ನನ್ನ ಮುಟ್ಟ ಬಯಸುವಿರಾದರೆ ದಾರಿ ಬೇಕು, ಆದರೆ ನನ್ನನ್ನೇ ನಾನು ತಲುಪಲು ಯಾವ ದಾರಿ ಬೇಕು ? ಇಲ್ಲಿ ಅಂತರದ ಪ್ರಶ್ನೆಯೇ ಇಲ್ಲ, ದಾರಿಯ ಸಾಧ್ಯತೆಯೇ ಇಲ್ಲ, ಯಾವ ಪ್ರಯತ್ನವೂ ಬೇಕಾಗಿಲ್ಲ.

ಝೆನ್ ಎಂದರೆ ನಮ್ಮನ್ನು ನಾವು ತಲುಪುವುದು ಆದ್ದರಿಂದಲೇ ಝೆನ್ Pathless path ಮತ್ತು Gateless gate. ನಮ್ಮನ್ನು ನಾವು ತಲುಪಲು ಯಾವ ಗೇಟ್ ದಾಟಬೇಕಾಗಿಲ್ಲ ಮತ್ತು ಈ ತಿಳುವಳಿಕೆಯೇ ಗೇಟ್ (Gateless gate). ನಮ್ಮನ್ನು ನಾವು ಮುಟ್ಟಲು ನಾವು ಯಾವ ಅಂತರವನ್ನೂ ಕ್ರಮಿಸಬೇಕಿಲ್ಲ, ಯಾವ ದಾರಿಯಲ್ಲೂ ನಡೆಯಬೇಕಿಲ್ಲ ಈ ತಿಳುವಳಿಕೆಯೇ ದಾರಿ (Pathless path).

ಝೆನ್ ನ ಉದ್ದೇಶವೇ ನಿಮ್ಮನ್ನು ನಿಮ್ಮ ನಿಜದಲ್ಲಿ ನೂಕುವುದು ಈ ಕೂಡಲೆ, ಯಾವ ಮುಂದೂಡುವಿಕೆ ಇಲ್ಲದೆ.

Osho, The Grass Grows By Itself – Talks on Zen, Ch 3 (excerpt)

Leave a Reply