ಎರಡು ಸೂಫಿ ಕಥೆಗಳು

ಇಳಿ ಬೆಳಗಿನ ಓದಿಗೆ ಎರಡು ಸೂಫಿ ಕಥೆಗಳು | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಸೂರ್ಯ ಮತ್ತು ಗುಹೆ

ಒಂದು ದಿನ ಸೂರ್ಯ ಮತ್ತು ಗುಹೆ ಮಾತಿಗಿಳಿದವು. ಸೂರ್ಯನಿಗೆ ಗುಹೆ ಹೇಳಿದ ‘ಕತ್ತಲು ಮತ್ತು ತೇವ’ ಅರ್ಥ ಆಗಲಿಲ್ಲ, ಗುಹೆಗೆ ಸೂರ್ಯ ಹೇಳಿದ ‘ ಬೆಳಕು ಮತ್ತು ಸ್ಪಷ್ಟತೆ ‘ ಅರ್ಥವಾಗಲಿಲ್ಲ. ಹಾಗಾಗಿ ಸೂರ್ಯ ಮತ್ತು ಗುಹೆ ಜಾಗ ಬದಲಿಸಿಕೊಂಡು ನೋಡಲು ನಿರ್ಧರಿಸಿದರು.

ಗುಹೆ, ಸೂರ್ಯನ ಜಾಗಕ್ಕೆ ಹೋಗಿ ಅವನ ಜಾಗದಲ್ಲಿ ನಿಂತು ಜಗತ್ತನ್ನು ನೋಡಿ ಉದ್ಗಾರ ಮಾಡಿತು,

“ ಎಂಥ ಅದ್ಭುತ ಇದು, ಈ ದೃಶ್ಯವನ್ನು ವರ್ಣಿಸುವುದು ನನ್ನಿಂದ ಸಾಧ್ಯವಿಲ್ಲ. “

ನಂತರ ಸೂರ್ಯ, ಗುಹೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ ಗಮನಿಸಿ ಮಾತನಾಡಿದ,

“ ಅಯ್ಯೋ ನನಗೆ ಯಾವ ವ್ಯತ್ಯಾಸವೂ ಕಾಣುತ್ತಿಲ್ಲ. “


ಸ್ವರ್ಗದ ಹಣ್ಣು

ಸ್ವರ್ಗದ ಹಣ್ಣಿನ ಬಗ್ಗೆ ಕೇಳಿ ತಿಳಿದುಕೊಂಡಿದ್ದ ಹೆಂಗಸೊಬ್ಬಳು ಅದನ್ನು ಪಡೆಯ ಬಯಸಿ, ಸಬರ್ ಎನ್ನುವ ಹೆಸರಿನ ದರ್ವೇಶಿಯೊಬ್ಬನನ್ನು ಭೇಟಿಯಾಗಿ ತನ್ನ ಬಯಕೆಯನ್ನು ಅವನ ಎದುರಿಗೆ ಹೇಳಿಕೊಂಡಳು.

“ ಈ ಸ್ವರ್ಗದ ಹಣ್ಣನ್ನು ಪಡೆಯುವ ಬಗೆ ಹೇಗೆ? ಎಲ್ಲಿ ಸಿಗಬಹುದು ಈ ಹಣ್ಣು? ಈ ಹಣ್ಣನ್ನು ಪಡೆದು ನಾನು ಜ್ಞಾನಿಯಾಗಬೇಕು. “

“ ನನ್ನ ಬಳಿಯೇ ಶಿಷ್ಯವೃತ್ತಿ ಮಾಡು ಆ ಹಣ್ಣು ಪಡೆಯಲು ಕನಿಷ್ಠ ೩೦ ವರ್ಷವಾದರೂ ನೀನು ಸಾಧನೆ ಮಾಡಬೇಕು. ಇಲ್ಲವಾದರೆ ದಣಿವಾಗದಂತೆ ಜಗತ್ತನ್ನು ಸುತ್ತು, ಬೇರೆ ಸೂಫಿಗಳನ್ನ, ದರ್ವೇಶಿಗಳನ್ನ ಭೇಟಿಯಾಗಿ ಸಂವಾದ ಮಾಡು”

ಸಬರ್ ಆ ಹೆಂಗಸಿಗೆ ಸಲಹೆ ನೀಡಿದ.

ಮೂವತ್ತು ವರ್ಷ ಕಾಯಲು ಸಿದ್ಧಳಿರದ ಆ ಹೆಣ್ಣು ಮಗಳು ಜಗತ್ತು ಸುತ್ತಿದಳು, ಸೂಫಿಗಳನ್ನ, ದರ್ವೇಶಿಗಳನ್ನ, ವಿಜ್ಞಾನಿಗಳನ್ನ, ಕಲಾವಿದರನ್ನ ಭೇಟಿಯಾಗಿ ಚರ್ಚೆ ಮಾಡಿದಳು. ಅವಳ ಈ ಹುಡುಕಾಟದಲ್ಲಿ ೩೦ ವರ್ಷ ಕಳೆದು ಹೋದವು.

ಕೊನೆಗೊಮ್ಮೆ ಆಕೆಗೆ ಒಂದು ಗಾರ್ಡನ್ ಕಾಣಿಸಿತು. ಆ ಗಾರ್ಡನ್ ಲ್ಲಿ ಸ್ವರ್ಗದ ಮರ ದಿವ್ಯವಾಗಿ ಅರಳಿ ನಿಂತಿತ್ತು. ಆ ಮರದಲ್ಲಿ ಸ್ವರ್ಗದ ಹಣ್ಣನ್ನು ಕಂಡ ಆ ಮಹಿಳೆ ಮರದ ಮಾಲಿಕನಿಗಾಗಿ ಅತ್ತಿತ್ತ ಹುಡುಕಾಡಿದಾಗ, ಆ ಗಾರ್ಡನ್ ನ ಮಾಲಿಕ ಬೇರಾರು ಅಲ್ಲ ಅವಳು ಮೊದಲು ಭೇಟಿಯಾದ ದರ್ವೇಶಿ ಸಬರ್ ಎಂದು ಗೊತ್ತಾಗಿ, ಆಕೆ ಅವವನ್ನು ಕುತೂಹಲದಿಂದ ಮಾತನಾಡಿಸಿದಳು.

“ ಈ ಗಾರ್ಡನ್ ನ ಮಾಲಿಕ ನೀನೇ ಎಂದು ಮೊದಲು ಭೇಟಿಯಾದಾಗ ಯಾಕೆ ಹೇಳಲಿಲ್ಲ? “

“ ಆಗ ಹೇಳಿದ್ದರೆ ನೀನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ ಮತ್ತು ನಿನ್ನ ಸಾಧನೆ ಪೂರ್ಣ ಆಗಿರಲಿಲ್ಲ. ಮೇಲಾಗಿ ಈ ಮರ ಹಣ್ಣು ಬಿಡುವುದು ಮೂವತ್ತು ವರ್ಷಗಳಲ್ಲಿ ಒಮ್ಮೆ ಮಾತ್ರ. “

ದರ್ವೇಶಿ ಸಬರ್ ಆ ಹೆಂಗಸಿಗೆ ತಿಳಿಸಿ ಹೇಳಿದ.

Leave a Reply