ಪಾವೈ ನೋಂಬು । ಧನುರ್ ಉತ್ಸವ ~ 1

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವದ ಮೊದಲ ದಿನ

ಮಾರ್ಗಶಿರ  ತಿಂಗಳಲಿ ಚಂದ್ರ ತುಂಬಿದೀ ಶುಭದಿನಗಳಲಿ

ಮೀಯ ಬಯಸುವರೆಲ್ಲ ಹೊರಡಿರೈ ಅಂದ ಭೂಷಣಿಯರೇ

ಐಸಿರಿಯು ತುಂಬಿರುವ ಗೋಕುಲದ ಅಂದ ಕಿರುಬಾಲೆಯರೇ

ಹರಿತ ಶೂಲವ ಹಿಡಿದು ದುಷ್ಟ ನಿಗ್ರಹ ನಿರತ ನಂದಗೋಪನ ಮಗನ

ಕಾಂತಿ ತುಂಬಿಹ ಕಣ್ಣು ಯಶೋದೆಯಾ  ಮರಿ ಸಿಂಹದಂತಿರುವ

ಮೇಘ ದೇಹದ ಕೆಂಪು ಕಣ್ಣಿನ ಸೂರ್ಯ ಚಂದ್ರರ ಹೋಲ್ವ ಮೊಗದವನು

ನಾರಾಯಣನೇ ನನಗೆ ಇಷ್ಟಾರ್ಥವನು ತರುವ

ಜಗಹೊಗಳೆ ವ್ರತವ ಕೈಗೊಳ್ಳೆ ನಮ್ಮೀ ಪವಿತ್ರ ವ್ರತವೂ ಸಾರ್ಥಕವು

-ಬಿಂದಿನಗವಲೆ ನಾರಾಯಣಸ್ವಾಮಿ  (ಬಿಲಹರಿ ರಾಗ – ಆಟ ತಾಳ)

“ಇದು ಕುಳಿರ್ ಬೀಸುವ ಧನುರ್ ಮಾಸ. ತುಂಬು ಪೌರ್ಣಮಿ ದಿನ….

ಸಿರಿಯೂ, ಸಂಪದವೂ ನೆರೆದ ಗೋಕುಲವ ರಕ್ಷಿಸುವವನು ನಂದಗೋಪಾಲ. ಅವನ ಪ್ರೀತಿಯ ಮಡದಿ ಯಶೋಧೆ. ಇವರಿಬ್ಬರ ಮಗನಾದ, ಮರಿ ಸಿಂಹದಂತಹ ಕೃಷ್ಣನ ಹೊಗಳಿ ಹಾಡೋಣ ಬನ್ನಿರೀ…!

ಕೆಂಪು ಕಣ್ಣುಗಳನ್ನೂ, ಪ್ರಕಾಶಮಾನವಾದ ಮುಖವನ್ನೂ ಉಳ್ಳ ಆ ನಾರಾಯಣನು, ನಮಗೆ ಇಷ್ಟಾರ್ಥವನು ನೀಡಲು ಕಾದಿರುವನು. ಆ ನೀಲಿ ಬಣ್ಣದ ಕೃಷ್ಣನನ್ನು ಹೊಗಳಿ ನಾವು ಹಾಡಲು, ನಮ್ಮ ಸಂಗೀತವ ಕೇಳಿ ಈ ಜಗದಲ್ಲಿ ಸರ್ವರೂ ವಿಸ್ಮಯಿಸಲಿ. ಬನ್ನಿರಿ ಸಖಿಯರೇ….!”

ಎಂದು ಗೋದೈ, ಧನುರ್ ಮಾಸದ ಮೊದಲ ದಿನವಾದ ಅಂದು ಗೋಕುಲದ ಸ್ತ್ರೀಯರೆಲ್ಲರನು ಹಾಡಲು ಆಹ್ವಾನಿಸುತ್ತಾಳೆ.  

ಹರಿತ ಶೂಲವ ಹಿಡಿದು ದುಷ್ಟ ಸಂಹಾರ ಮಾಡುವವನು ನಂದಗೋಪಾಲನ ಕುಮಾರ….” ಎನ್ನುತ್ತಾಳೆ ಗೋದೈ.

ದನ ಕಾಯುವ ಹುಡುಗ ಕೃಷ್ಣ ….. ಮಾಯಗಾರ…..

ಅವನ ತಂದೆ ನಂದಗೋಪನೋ ಗೋಕುಲದ ನಾಯಕ!

ದನ ಕಾಯುವ ಅವನ ಕೈಗಳಲ್ಲಿ ಕೋಲಿರಬಹುದು.

ಆದರೆ ಹರಿತವಾದ ಶೂಲ ಎನ್ನುತ್ತಾಳಲ್ಲ ಗೋದೈ? ಇಲ್ಲಿ ಶೂಲಕ್ಕೆ ಏನು ಕೆಲಸ??

“ಧರ್ಮ ಅಳಿದು ಅಧರ್ಮ ಎಲ್ಲ ಕಡೆ ತಲೆ ಎತ್ತುತ್ತದೋ, ಅಲ್ಲಿ ನಾನು ಅವತಾರ ತಾಳುತ್ತೇನೆ….” ಎಂದು ಗೀತೆಯಲ್ಲಿ ಪಾಠ ಹೇಳಿದ ಕೃಷ್ಣ, ದುಷ್ಟ ಅಸುರನಾದ ಕಂಸನನ್ನು ಕೊಲ್ಲಲು, ದೇವಕಿಯ ಹೊಟ್ಟೆಯಲ್ಲಿ ಎಂಟನೇಯ ಮಗುವಾಗಿ ಹುಟ್ಟಿ, ಯಶೋಧೆಯ ಬಳಿ ಬೆಳೆಯುತ್ತಾನೆ.

ಜಗವನ್ನೆಲ್ಲ ರಕ್ಷಿಸುವ ದೇವನಾದ ಕೃಷ್ಣನಿಗೆ ಶಿಶು ಪರ್ವದಲ್ಲಿ, ಅಸುರ ಕಂಸನಿಂದ ಎಷ್ಟೊಂದು ಆಪತ್ತುಗಳು…?

ಮಗು ಹಸಿವಿನಲ್ಲಿ ಅತ್ತರೇ, “ನಾನು ಹಾಲುಣಿಸುತ್ತೇನೆ…” ಎಂದು ತನ್ನ ಮೊಲೆಗೆ ವಿಷ ಸವರಿಕೊಂಡು ಬರುತ್ತಾಳೆ ಪೂತನಿ ಎಂಬ ರಾಕ್ಷಸಿ.

ಮಗು ತೊಟ್ಟಿಲಲ್ಲಿ ನಿದ್ರಿಸುವಾಗ, ಅವನನ್ನು ಕೊಲ್ಲಲು ಶಕಟಾಸುರ ಎಂಬ ರಾಕ್ಷಸ ಬಂಡಿಯ ರೂಪದಲ್ಲಿ ತೊಟ್ಟಿಲಲ್ಲಿ ಮಲಗಿರುವ ಮಗುವಿನ ಮೇಲೆ ಹರಿಯಲು ಮುಂದಾಗುತ್ತಾನೆ.

ಮಗು ತೆವಳುವಾಗ, ಸುಳಿಗಾಳಿಯಾಗಿ ತೃಣಾವರ್ತ ಮಗುವನ್ನು ಎತ್ತೊಯ್ಯಲು ಕಾಯುತ್ತಿರುತ್ತಾನೆ.

ಮಗು ಎದ್ದು ನಡೆದರೆ, ಹಕ್ಕಿಯ ರೂಪದಲ್ಲಿ ಬಕ, ಹಾವಿನ ರೂಪದಲ್ಲಿ ಅಕಾ ಸಂಹಾರಕ್ಕೆ  ಕಾಯುತ್ತಿರುತ್ತಾರೆ.

ಕೃಷ್ಣನನ್ನು ಕೊಲ್ಲಲು ಕಂಸ ಹೀಗೆ ಒಬ್ಬೊಬ್ಬರನ್ನು ಧ್ವಂಸ ಕಾರ್ಯಕ್ಕೆ ತೊಡಗಿಸುತ್ತಾನೆ.  ಇನ್ನೂ ಎಷ್ಟು ಆಪತ್ತುಗಳು ಈ ಶಿಶುವಿಗೆ ಕಾದಿದೆಯೋ…?  ಎಂದು ಭೀತಿಗೊಳ್ಳುವ ತಂದೆ ನಂದಗೋಪನು, ತನ್ನ ಮಗ ಕೃಷ್ಣನನ್ನು ರಕ್ಷಿಸುವುದಕ್ಕಾಗಿ ದನ ಕಾಯುವ ಕೋಲನ್ನು ದೂರ ಎಸೆದು,  ಹರಿತವಾದ ಶೂಲವನ್ನು ಕೈಗೆತ್ತಿಕೊಂಡು ಕಾವಲಿಗೆ ನಿಂತನಂತೆ.

ಲೋಕವನ್ನು ರಕ್ಷಿಸಲು ಹುಟ್ಟಿದ ಕೃಷ್ಣನನ್ನು, ತಾನು ರಕ್ಷಿಸುವುದಾಗಿ ಭಾವಿಸಿ ತನ್ನ ಕೈಗಳಲ್ಲಿ ಹರಿತವಾದ ಶೂಲವನ್ನು ಹಿಡಿದು ನಿಲ್ಲುತ್ತಾನೆ ಕರ್ತವ್ಯ ಶೀಲನಾದ ತಂದೆ ನಂದಗೋಪ.

ನಿಜವಾಗಲೂ ತನ್ನನ್ನು ಕೊಲ್ಲಲು ಬಂದ ಅಸುರರನ್ನೆಲ್ಲಾ ತಾನೇ ಕೊಂದು ಮುಗಿಸಿದನಲ್ಲ ಕೃಷ್ಣ? ಹಾಗಿರುವಾಗ ಅವನನ್ನು, ನಂದಗೋಪನ ಹರಿತವಾದ ಶೂಲ ಕಾಯುವುದೇನು….?

ಲೋಕಕ್ಕೆಲ್ಲಾ ಅನ್ನ ನೀಡಿ ಹಸಿವನ್ನು ನೀಗಿಸುವ ಪರಂದಾಮನಾದ ಕೃಷ್ಣ, ತನ್ನ ಹಸಿವನ್ನು ಹಿಂಗಿಸುವುದಾಗಿ ಭಾವಿಸಿ, ತನ್ನ ಭಕ್ತರು ಸಮರ್ಪಿಸುವ ನೈವೇದ್ಯಗಳನ್ನು ಅವರ ಮನಸ್ಸು ನೋಯದಂತೆ ಸ್ವೀಕರಿಸುವಂತೆಯೇ, ತನ್ನ ತಂದೆಯ ಪ್ರೀತಿಯನ್ನೂ ಹಾಗೆಯೇ ಒಪ್ಪಿಕೊಳ್ಳುತ್ತಾನೆ. ಭಕ್ತರು ಮನ ನೊಂದುಕೊಳ್ಳುವುದನ್ನು ಬಯಸದ ಕೃಷ್ಣ, ತನ್ನ ತಂದೆ ಮನ ನೋಯುವುದನ್ನು ಬಯಸುತ್ತಾನೆಯೇ…?

ಆಲೋಚಿಸಿ ನೋಡಿದರೆ ಇಂತಹ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ.

ತನ್ನ ತಂಗಿ ದೇವಕಿಯ ಎಂಟನೇಯ ಮಗುವಿನಿಂದಲೇ ಆಪತ್ತು ಎಂದಿದ್ದರೂ, ಕಂಸ ಯಾಕೆ ಉಳಿದ ಎಲ್ಲ ಮಕ್ಕಳನ್ನೂ ಕೊಲ್ಲಬೇಕು…?

ಮಕ್ಕಳನ್ನು ಕೊಲ್ಲುವುದರ ಬದಲಿಗೆ ದೇವಕಿಯನ್ನೇ ಕೊಂದಿದ್ದರೆ ಕಂಸ ಉಳಿದಿರಬಹುದಿತ್ತಲ್ಲಾ?

ಅಥವಾ ಗಂಡ ಹೆಂಡತಿಯನ್ನು ಪ್ರತ್ಯೇಕವಾಗಿ ಸೆರೆಯಲ್ಲಿಟ್ಟಿದ್ದರೆ ಮಗು ಹುಟ್ಟಿರಲಾರದಲ್ಲಾ?

ಯಾಕೆ ಇವನ್ನೆಲ್ಲಾ ಮಾಡಲಿಲ್ಲ?

ಕಂಸ ಕೊಲ್ಲುತ್ತಾನೆ ಎಂದು ತಿಳಿದಿದ್ದರೂ ದೇವಕಿ ಯಾಕೆ ಮಕ್ಕಳು ಹೆರುವುದನ್ನು ನಿಲ್ಲಿಸಲಿಲ್ಲ?

ಇವೆಲ್ಲಕ್ಕಿಂತಲೂ ಹೆಚ್ಚಾಗಿ, ಭಗವಂತನ ಅವತಾರವಾಗಿ ಕೃಷ್ಣ ಇದ್ದರೂ, ಯಾಕೆ ಹುಟ್ಟಿನಿಂದಲೇ ಅಲ್ಪ ಮಾನವರಂತೆ ದ್ವೇಷ ಸಾಧಿಸುವ ಭಾವನೆಯೊಂದಿಗೆ ಇದ್ದನು?

ಹೀಗೆ ಇನ್ನೂ ಹಲವಾರು ಪ್ರಶ್ನೆಗಳಿದ್ದರೂ, ಅವುಗಳಿಗೆ ಉತ್ತರವೂ ಅಲ್ಲೇ ದೊರಕುತ್ತದೆ.

ದಂಪತಿಗಳನ್ನು ಬೇರ್ಪಡಿಸುವುದು ಧರ್ಮ ವಿಧಿಗಳಂತೆ ಮಹಾ ಪಾಪದ ಕೆಲಸ ಎಂದು ಚೆನ್ನಾಗಿ ಅರಿತಿದ್ದ ಕಂಸ, ದೇವಕಿ, ವಾಸುದೇವರನ್ನು ಆಗಲಿಸದೆ ಒಂದೇ ಸೆರೆಯಲ್ಲಿ ಬಂಧಿಸಿಟ್ಟನಂತೆ. ಮತ್ತು ತನ್ನ ತಂಗಿಯ ಮೇಲಿನ ವಾತ್ಸಲ್ಯದಿಂದ ದೇವಕಿಯನ್ನು ಕೊಲ್ಲದ ಅದೇ ಕಂಸ, ತನ್ನ ಪ್ರಾಣದ ಮೇಲಿದ್ದ ಆಸೆಯಿಂದ, ದೇವಕಿಯ ಮಕ್ಕಳಲ್ಲಿ ಎಂಟನೇಯದು ಮಾತ್ರವಲ್ಲ, ಯಾವುದು ತನ್ನನ್ನು ಕೊಲ್ಲುತ್ತದೆ ಎಂದು ಅರಿಯದಿದ್ದುದರಿಂದ ಎಲ್ಲ ಮಕ್ಕಳನ್ನೂ  ಅವು ಜನಿಸಿದ ಕೂಡಲೇ ಗೋಡೆಗೆ ಬಡಿದು ಕೊಂದಿದ್ದಾನೆ.

ಎಂಟನೇಯ ಮಗುವಲ್ಲವೇ ಸಾಯಬೇಕು?

ಉಳಿದ ಮಕ್ಕಳನ್ನು ಬಿಟ್ಟು ಬಿಡುತ್ತಾನೆ ಎಂಬ ನಂಬಿಕೆ ಪ್ರತಿಸಲ ಸುಳ್ಳಾಗಲು, ಕಾರಗೃಹವನ್ನು ಬಿಟ್ಟು ಹೊರಗೆ ಹೋಗಲು ಆಗದೆ, ತಾನು ಹೆತ್ತ ಮಕ್ಕಳೆಲ್ಲರನ್ನೂ ತನ್ನ ಕಣ್ಣ ಮುಂದೆಯೇ ಕೊಂದ ಅಣ್ಣನನ್ನು, ಆ ರಕ್ತದ ಕಲೆಗಳನ್ನು ಮಾತ್ರವೇ ನೋಡುತ್ತಿದ್ದವಳಿಗೆ, ಅಣ್ಣನೇ ಆದರೂ ಸೇಡು ತೀರಿಸಿಕೊಳ್ಳುವ ಭಾವನೆಯ ಹೊರತು ಬೇರೇನು ಮನಸ್ಸಿನಲ್ಲಿ ಇರಲು ಸಾಧ್ಯ?

ಅಂತಹ ಹಗೆ ತೀರಿಸಿಕೊಳ್ಳುವ ಭಾವನೆಗಳು ತೀವ್ರವಾಗಿರುವಾಗ  ಎಂಟನೇಯ ಗರ್ಭವಾದ ಕೃಷ್ಣನಿಗೂ ಅದೇ ದ್ವೇಷ ಸಾಧಿಸುವ ಭಾವನೆ ಅಲ್ಲವೇ ಇರುತ್ತದೆ…?

ತಾಯಿಯ ಭಾವನೆಗಳು ಮಗುವಿಗೂ ರವಾನೆಯಾಗುತ್ತವೆ ಎಂಬುದನ್ನು, ವಂಶವಾಹಿನಿಗಳ ನೆನಪಿನ ಶಕ್ತಿ ತಾಯಿಯ ಜೀವನ ಪದ್ಧತಿಯಿಂದ ಬದಲಾಯಿಸಬಹುದು ಎಂಬುದನ್ನು, ಅಂದೇ ಕೃಷ್ಣನ ಕಥೆ ನಮಗೆ ತಿಳಿಸಿದೆ. ಅದನ್ನೇ ಇಂದು Epigenetic ಎಂದು ಹೆಸರಿಟ್ಟು ವಿಸ್ಮಯಿಸುತ್ತಾರೆ ವೈದ್ಯಕೀಯ ಸಂಶೋದಕರು.

ಕಾರಾಗೃಹದಲ್ಲಿ ತನ್ನ ಬದುಕಿನ ಹೆಚ್ಚಿನ ಭಾಗವನ್ನು ಕಳೆದ ದೇವಕಿಗೆ, ತನ್ನ ಅಣ್ಣನ ಮೇಲೆ ಸೇಡು ತೀರಿಸಿಕೊಳ್ಳುವ ವಂಶವಾಹಿನಿ ಇಲ್ಲದಿರಬಹುದು ಆದರೂ Epigenetic ಎಂಬ ತನ್ನ ಜೀವನ ಪದ್ಧತಿಯ ವಂಶವಾಹಿನಿಗಳು, ಗರ್ಭದಲ್ಲಿ ರೂಪಗೊಂಡಿದ್ದರಿಂದಲೋ ಏನೋ, ತನ್ನ ಸೋದರ ಮಾವನ ಮೇಲೆ ಸೇಡು ತೀರಿಸಿಕೊಳ್ಳುವ ಭಾವನೆಯೊಂದಿಗೆ ಅವತಾರ ತಾಳಿದನು ಕೃಷ್ಣ.

ಗರ್ಭದ ಕಾಲದಲ್ಲಿ ತಾಯಿಯ ಭಾವನೆಗಳು ಮಗುವಿನ ಗುಣದ ಮೇಲೂ ಪ್ರಭಾವ ಬೀರುತ್ತದೆ ಎಂಬುದಕ್ಕೆ, ದೇವರ ಅವತಾರವಾದ ಕೃಷ್ಣ ಹೀಗೆ ಸೇಡು ತೀರಿಸಿಕೊಳ್ಳುವ ಭಾವನೆಯಿಂದ ಹುಟ್ಟಿದ್ದು ಒಂದು ಸಾಕ್ಷಿಯಾದರೆ, ಅದಕ್ಕೆ ತದ್ವಿರುದ್ಧವಾಗಿ, ಅಸುರ ಹಿರಣ್ಯನ ಮಗನಾದ ಪ್ರಹಲ್ಲಾದ ಅಹಿಂಸಾವಾದಿಯಾಗಿ ಹುಟ್ಟಿದ್ದು ಮತ್ತೊಂದು ಸಾಕ್ಷಿ.

ತನ್ನ ಅಣ್ಣ ಹಿರಣ್ಯಾಕ್ಷನನ್ನು ಕೊಂದ ನಾರಾಯಣನ ಮೇಲೆ ಸೇಡು ತೀರಿಸಿಕೊಳ್ಳಲು ಮಹಾ ತಪಸ್ಸೊಂದನ್ನು ಕೈಗೊಳ್ಳುತ್ತಾನೆ ಅಸುರ ಹಿರಣ್ಯ. ಅವನ ಹೆಂಡತಿ ಕಯಾದುದೇವಿ ಆ ಸಮಯ ಗರ್ಭ ಧರಿಸಿದ್ದಳು. ಅವಳನ್ನು ಕೊಂದರೆ ಹಿರಣ್ಯನ ವಂಶವನ್ನೇ ಅಳಿಸಿಬಿಡಬಹುದೆಂದು ಇಂದ್ರ ಅವನ ಅರಮನೆಗೆ ಬರುತ್ತಾನೆ. ಹಿರಣ್ಯ ವಧೆ ನರಸಿಂಹಾವತಾರದಿಂದ ನಡೆಯಬೇಕಾಕಿರುವುದನ್ನು ಅರಿತಿದ್ದ ನಾರದ, ಇಂದ್ರನ ತಂತ್ರವನ್ನು ಕೆಡವಿ, ಕಯಾದುದೇವಿಗೆ ತನ್ನ ಕುಟೀರದಲ್ಲಿ ಆಶ್ರಯ ನೀಡುತ್ತಾನೆ.

ತನ್ನೊಂದಿಗೆ ಕುಟೀರದಲ್ಲಿ ಇದ್ದಷ್ಟು ಕಾಲ ಅವಳಿಗೆ ಶ್ರೀಮನ್ ನಾರಾಯಣನನ ಮಂತ್ರವನ್ನೂ, ನಾರಾಯಣನ ಕಥೆಗಳನ್ನೂ ನಾರದ ಮುನಿ ಹೇಳಿಕೊಡಲು, ಗರ್ಭದಲ್ಲಿಯೇ ಅದನ್ನು ಕೇಳಿ ಬೆಳೆದ ಮಗುವಾದ ಪ್ರಹ್ಲಾದ, ಹುಟ್ಟುವಾಗಲೇ ನಾರಾಯಣ ಭಕ್ತನಾಗಿ ಹುಟ್ಟುತ್ತಾನೆ.

ಅಸುರನ ಮಗನಾದರೂ, ಶ್ರೀಮನ್ ನಾರಾಯಣನೇ ತನ್ನ ದೇವರೆಂದು, ಎಲ್ಲೆಲ್ಲೂ ಇರುವ ತನ್ನ ದೇವರಾದ ನಾರಾಯಣ ತನ್ನನ್ನು ಕಾಪಾಡುತ್ತಾನೆ ಎಂದು ಅಚಲವಾಗಿ ನಂಬಿದ್ದಲ್ಲದೆ, ತನ್ನ ತಂದೆಯನ್ನು ಪ್ರಹ್ಲಾದ ವಿರೋಧಿಸಲು ಕಲಿತುಕೊಂಡದ್ದು ಗರ್ಭಕೋಶದಲ್ಲಿ ಕಲಿತುಕೊಂಡ ಪಾಠದಿಂದ ಅಲ್ಲವೇ…?

ದೇವರ ಅವತಾರ ಕೊಲ್ಲುವ ಭಾವನೆಯಿಂದ ಹುಟ್ಟಿದ್ದು, ಅಸುರನ ಮಗು ಅಹಿಂಸಾವಾದಿಯಾಗಿ ಹುಟ್ಟಿದ್ದು ಅವರು ಗರ್ಭ ಧರಿಸಿರುವಾಗ ಉಂಟಾದ ಅವರ ತಾಯಿಯ ಭಾವನೆಗಳ ಪ್ರಭಾವದಿಂದ ಎಂಬುದು ತಿಳಿಯುತ್ತದೆ.  

ಆದ್ದರಿಂದಲೇ, ಗರ್ಭ ಕಾಲದಲ್ಲಿ, ಗರ್ಭ ಧರಿಸಿದ ತಾಯಿಯ ಬಳಿ ‘ಒಳ್ಳೆಯದನ್ನೇ ನೋಡು ! ಒಳ್ಳೆಯದನ್ನೇ ಕೇಳು! ಒಳ್ಳೆಯದನ್ನೇ ಧ್ಯಾನಿಸು! ಒಳ್ಳೆಯದನ್ನೇ ಮಾತನಾಡು! ಆಗಲೇ ಹುಟ್ಟುವ ಮಗು ಒಳ್ಳೆಯವನಾಗಿಯೇ ಹುಟ್ಟುತ್ತಾನೆ ಎಂದು ಹಿರಿಯರು ಹೇಳುತ್ತಾರೆ. ಈಗಿನ ವೈದ್ಯಕೀಯ ಸಂಶೋಧನೆಗಳೂ ಸಹ ಇದನ್ನೇ ದೃಢ ಪಡಿಸುತ್ತವೆ.

ದೇವರು ತನ್ನ ಭಕ್ತರನ್ನು ಸದಾ ಕಾಪಾಡುತ್ತಾನೆ. ದುಷ್ಟರು ಹೇಗಿದ್ದರೂ ಶಿಕ್ಷೆಗೆ ಒಳಗಾಗುತ್ತಾರೆ…! ಎಂಬ ಸತ್ಯವನ್ನು ದೃಢ ಪಡಿಸಲು, ಕೇಡು ನೆನಸುವವನು ಅದಕ್ಕೆ ತಕ್ಕ ಫಲವನ್ನು ಅನುಭವಿಸಿಯೇ ತೀರುತ್ತಾನೆ ಎಂಬ  ನೀತಿಯನ್ನು ಜಗತ್ತಿಗೆ ತಿಳಿಸಲು ಕೃಷ್ಣ ಮಾನವ ಅವತಾರ ತಾಳಿ, ಅಸುರ ಕಂಸನನ್ನು ಕೊಂದನು ಎಂದೇ ಅರ್ಥಮಾಡಿಕೊಳ್ಳಬೇಕಾಗುತ್ತದೆ…!

ಕಂಸನನ್ನು ಸಂಹಾರ ಮಾಡುವ ಉದ್ದೇಶದಿಂದ ಹುಟ್ಟಿದ್ದರೂ ಜೀವನವೆಲ್ಲಾ ಕರುಣೆಯಿಂದಲೂ, ಪ್ರೀತಿಯಿಂದಲೂ ಬೆಳೆದವನಲ್ಲವೇ ಕೃಷ್ಣ…?

ಆ ಕೃಷ್ಣನನ್ನು ಕಾರ್ಮೇಘ ಬಣ್ಣದವನನ್ನು ಪ್ರೀತಿಯಿಂದ ಭಕ್ತಿಯಿಂದ, ಪ್ರೇಮದಿಂದ ಶರಣಾದರೆ ಅವನು “ಮೋಕ್ಷ ಎಂಬ ಇಷ್ಟಾರ್ಥವನ್ನು” ನಮಗೆ ಕರುಣಿಸುತ್ತಾನೆ…!

“ತಿಂಗಳಲ್ಲಿ ನಾನು ಧನುರ್ ಎಂಬುವನನ್ನು, ಬಯಸಿ ಬಂದ ಎಲ್ಲರ ಮನ ತಣಿಸುವ ನಾರಾಯಣನನ್ನು, ಕಾಲ ಕೈಮೀರುವ ಮುನ್ನ ನಾವೂ ಕೈ ಜೋಡಿಸಿ ನಮಸ್ಕರಿಸೋಣ. ಬನ್ನಿ ಸಖಿಯರೇ…!” ಎಂದು ತನ್ನ ಮೊದಲ ದಿನದ ‘ಪಾವೈ ನೋಂಬು’ (ತಮಿಳಿನಲ್ಲಿ ಪಾವೈ ನೋಂಬು-ಇದನ್ನು ಕನ್ನಡದ ಆಡು ಭಾಷೆಯಲ್ಲಿ ಗೋದಾವ್ರತ ಎಂದೂ ಹೇಳುತ್ತಾರೆ)  ಧನುರ್ ಮಾಸದ ಹುಣ್ಣಿಮೆಯಂದು ಪ್ರಾರಂಭಿಸುತ್ತಾಳೆ ಗೋದೈ ಆಂಡಾಳ್….!

                                                                        

Leave a Reply