ಎಲೆಯುದುರುವ ಸಾಮತಿ: ಓಶೋ

ಎಲೆಯೊಂದು ಕಳಚಿ ಬೀಳುವುದನ್ನು ಕಂಡ ಘಳಿಗೆ ಲಾವೋತ್ಸೇ ಅರಿವು ಪಡೆದ. ಈ ಬಗ್ಗೆ ಓಶೋ ಮಾತು ಇಲ್ಲಿದೆ… । ಕನ್ನಡಕ್ಕೆ: ಚಿದಂಬರ ನರೇಂದ್ರ

ಎಲೆಯೊಂದು, ಒಣಗಿದ ಎಲೆಯೊಂದು ಗಿಡದಿಂದ ಉದುರಿ ಬೀಳುತ್ತಿರುವುದನ್ನ ನೋಡುತ್ತಿದ್ದಂತೆಯೇ ಲಾವೋತ್ಸೇ ಗೆ ಜ್ಞಾನೋದಯವಾಯಿತು.

ಹೀಗೇಕಾಯ್ತು ? ಒಣಗಿದ ಎಲೆಯೊಂದು ಗಾಳಿಯ ರೆಕ್ಕೆಗಳನ್ನೇರಿ, ತನ್ನದೇ ಆದ ಯಾವುದೇ ಅಹಂ, ಆಲೋಚನೆ, ವಿಚಾರಗಳಿಲ್ಲದೇ, ಪೂರ್ತಿಯಾಗಿ ನಿರಾಳವಾಗಿ, ಬೀಸುತ್ತಿರುವ ಗಾಳಿಗೆ ಪೂರ್ತಿಯಾಗಿ ಶರಣಾಗಿ ಮರದಿಂದ ಉದುರಿ ಬೀಳುತ್ತಿರುವ ಕ್ಷಣಚಿತ್ರವನ್ನು ಲಾವೋತ್ಸೇ ಬೆರಗಿನಿಂದ ಗಮನಿಸುತ್ತಾನೆ. ಬಹುಶಃ ಲಾವೋತ್ಸೇ ಆಗ ತಳಮಳದ ಹಾಗು ತನ್ನ ತೀರ ದುರ್ಬಲ ಸ್ಥಿತಿಯಲ್ಲಿರಬೇಕು. ಈ ದೃಶ್ಯವನ್ನು ನೋಡುತ್ತಿದ್ದಂತೆಯೇ ಲಾವೋತ್ಸೇ ತಾನೂ ಒಣಗಿದ ಎಲೆಯಾಗಿ ಹೋದ.

ಲಾವೋತ್ಸೇ ತನ್ನ ಅಹಂ ಪೂರ್ತಿಯಾಗಿ ಬಿಚ್ಚಿಟ್ಟ, ತನ್ನ ಅಂಟಿಕೊಳ್ಳುವ ಸ್ವಭಾವ ಬಿಟ್ಟುಕೊಟ್ಟ, ಯಾವುದು ಒಳ್ಳೆಯದು ಯಾವುದು ಕೆಟ್ಟದು ಎನ್ನುವ ತನ್ನ ವಿಚಾರಗಳನ್ನ ಕಟ್ಟಿ ಹೊರಗೆ ಇಟ್ಟ. ತನ್ನ ಬುದ್ಧಿ-ಮನಸ್ಸುಗಳನ್ನ ತ್ಯಜಿಸಿದ, ಪೂರ್ತಿಯಾಗಿ ಹರಿವಿನ ಭಾಗವಾದ. ಹೀಗೆ ಲಾವೋತ್ಸು ಜ್ಞಾನೋದಯಕ್ಕೆ ತೆರೆದುಕೊಂಡ.

  • ಓಶೋ

ಕಲಿತದ್ದನ್ನು ಬಸಿದು ಖಾಲಿ ಮಾಡಿದಾಗ
ಎದೆ ತಿಳಿಯಾಗುವುದು.
ಸುತ್ತ ಬದುಕಿಗೆ ಸಾಕ್ಷಿಯಾದಾಗ
ಪ್ರಕ್ಷುಬ್ದತೆ ಹೂವಾಗಿ, ಹಣ್ಣಾಗಿ, ಕಳಚಿಕೊಂಡು
ಬೇರಿಗೆ ಶರಣಾಗುವುದು.

ಜಗತ್ತಿನ ಪ್ರತಿ ಬದುಕು ಮೂಲಕ್ಕೆ ಮರಳುತ್ತದೆ
ಮರಳಿದಾಗಲೆ ಅರಳುವುದು ಸಾಧ್ಯ.

ಎಡವಿ ಬಿದ್ದಿದ್ದಾರೆ ಮರಳುವ ಹಾದಿ ಮರೆತವರು,
ನೆನಪಿದ್ದವರು ಮಾತ್ರ
ಸಹಜವಾಗಿ ಸಹಿಷ್ಣುಗಳು, ನಿರಾಸಕ್ತರು,
ಹಿರಿಯಜ್ಜಿಯಂತೆ ಅಂತಃಕರುಣಿಗಳು
ಮಹಾ ರಾಜರಂತೆ ಘನ ಗಂಭೀರರು.

ಅಪರೂಪದ ತಾವೋದಲ್ಲಿ ಮುಳುಗಿದವರು ಮಾತ್ರ
ಬದುಕಿನ ಯಾವ ಸವಾಲಿಗೂ ಸಿದ್ಧರು
ಎದುರಾದರೆ ಸಾವಿಗೂ.

~ ಲಾವೋತ್ಸೇ

Leave a Reply