ಅವತಾರಗಳ ಮೂರು ನೀತಿಗಳು : ಧನುರ್ ಉತ್ಸವ ~ 17

ಧನುರ್ ಉತ್ಸವ ವಿಶೇಷ ಸರಣಿಯ ಹದಿನೇಳನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಹದಿನೇಳನೆಯ ದಿನ

ವಸ್ತುಗಳು ತಣ್ಣೀರು ಅನ್ನವನು ಧರುಮದಿಂ ಕರುಣಿಸುವ

ಎಮ್ಮೊಡೆಯ ನಂದಗೋಪಾಲಾ ಏಳು ಎಚ್ಚರಗೊಳ್ಳು

ಹೆಂಗಸರಿಗೆಲ್ಲ ಹೆಗ್ಗಡತಿಯಾದವಳೇ ಕುಲ ಬೆಳಕೇ

ಎಮ್ಮೊಡತಿ ಯಶೋದೆಯೇ ಎಚ್ಚರಗೊಂಡೇಳು

ಆಗಸದ ಮಧ್ಯವನು ಕತ್ತರಿಸಿ ಬೆಳೆದು ಲೋಕವನಳೆದ

ದೇವದೇವನೇ ನಿದ್ರಿಸದೆ ಎಚ್ಚರಗೊಂಡು ಏಳು

ಕೆಂಪಗಿಹ ಹೊನ್ನ ಕಾಲಂದುಗೆಯಡಿಯ ಸಂಪನ್ನನೇ ಬಲದೇವ

ಅನುಜನುಂ ನೀನುಂ ನಿದ್ರಿಸದೆ ಏಳಿ ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂದಿಗವನಲೆ ನಾರಾಯಣಸ್ವಾಮಿ   (ಯಮನ್ ಕಲ್ಯಾಣಿ ರಾಗ – ರೂಪ ತಾಳ)

ಅಂದದ ಉಡುಗೆಗಳನ್ನೂ, ನೀರನ್ನೂ, ಆಹಾರವನ್ನೂ ನಮಗೆ ನೀಡುವ ನಮ್ಮ ನಾಯಕನೇ… ನಂದಗೋಪಾಲ… ಏಳುವಂತವನಾಗು…!

ಎಳೆತಳಿರಿನಂತಹ ಸುಂದರ ವದನವುಳ್ಳ ಸ್ತ್ರೀಯರ ನಾಯಕಿಯೇ ನಮ್ಮ ಕುಲದ ಬೆಳಕೇ..ಯಶೋಧೆಯೇ ಎದ್ದೇಳುವಂತವಳಾಗು…!

ಬಾನಿಗಿಂತಲೂ ಎತ್ತರವಾಗಿ ಬೆಳೆದು ನಿಂತು ಸಕಲ ಲೋಕವನ್ನು ನಿನ್ನ ಪಾದದಿಂದ ಅಳೆದ ಕೃಷ್ಣನೇ… ದೇವಾಧಿದೇವತೆಗಳ ನಾಯಕನೇ ಎದ್ದು ದಯಪಾಲಿಸುವಂತವನಾಗು!

ಕೆಂಜ್ವಾಲೆಯಿಂದ  ಮಾಡಿದ ಬಂಗಾರದ ಕಾಲುಕಡಗವ  ತೊಟ್ಟ ಬಲದೇವನೇ…

ನೀನು ನಿನ್ನ ತಮ್ಮನು ನಿದ್ರೆಯಿಂದ ಎಚ್ಚರಗೊಳ್ಳುವಂತವರಾಗಿ ….

ಎಂದು ಕೃಷ್ಣನೊಂದಿಗೆ, ನಂದಗೋಪನನ್ನೂ, ಯಶೋಧೆಯನ್ನೂ, ಬಲರಾಮನನ್ನೂ ಒಟ್ಟಾಗಿ ಎಬ್ಬಿಸುತ್ತಿದ್ದಾಳೆ ಗೋದೈ ಆಂಡಾಳ್ !

“ಕೆಂಪಗಿಹ ಹೊನ್ನ ಕಾಲಂದುಗೆಯಡಿಯ ಸಂಪನ್ನನೇ ಬಲದೇವ…” ಎಂದು ಯಾರನ್ನು ಇಂದು ಕರೆಯುತ್ತಿದ್ದಾಳೆ ಗೋದೈ ?

ಹಿಂದಿನ ಹಾಡುಗಳಲ್ಲಿ ಕೃಷ್ಣನನ್ನು ಒಂಟಿಯಾಗಿ ನಿದ್ದೆಯಿಂದ ಎಬ್ಬಿಸಲು ಯತ್ನಿಸಿ ಸೋತ ಗೋದೈ, ಇಂದು ನಂದಗೋಪಾಲನನ್ನೂ, ಯಶೋಧೆಯನ್ನೂ ಹಾಡಿ ಎಬ್ಬಿಸುತ್ತಲೇ, ಕೃಷ್ಣನನ್ನೂ ಅವನ ಸಹೋದರ ಬಲರಾಮನನ್ನೂ ಸೇರಿಸಿ ನಿದ್ರೆಯಿಂದ ಎದ್ದೇಳುವಂತೆ ಹೇಳುತ್ತಿದ್ದಾಳೆ.

ದೇವಕಿ ಎಂಬ ಒಂದೇ ತಾಯಿಗೆ ಹುಟ್ಟಿದವರೇ ಬಲರಾಮನು, ಕೃಷ್ಣನು. ಇಬ್ಬರೂ ಅವತಾರ ಪುರುಷರಾದರೂ ಇಬ್ಬರ ಗುಣದಲ್ಲಿ ಎಷ್ಟೊಂದು ಭಿನ್ನತೆ…!

ಶ್ವೇತವರ್ಣನಾಗಿ ಅವತಾರ ತಾಳಿ, ನೀಲಾಂಬರನಾಗಿ ಬೆಳೆದವನು ಬಲರಾಮ, ಕರಿಯ ಬಣ್ಣಹೊಂದಿ, ಹಳದಿ ತೊಟ್ಟು ಪೀತಾಂಬರನಾಗಿ ಬಂದವನು ಕೃಷ್ಣ.

ಕೃಷ್ಣನ ಧ್ವಜ ಗರುಡ ಧ್ವಜವಾದರೆ, ತಾಳೆಯ ಧ್ವಜ ಹೊತ್ತವನು ಬಲರಾಮ.

ಬಲರಾಮ ತನ್ನ ಕೈಯಲ್ಲಿ ನೇಗಿಲನ್ನು ಹಿಡಿದಿರಲು, ಕೃಷ್ಣನ ಕರದಲ್ಲಿ ಶೋಭಿಸಿದ್ದು  ಗಾನ ನುಡಿಸುವ ಕೊಳಲು.

ಕೋಪಿಷ್ಟ ಬಲರಾಮ; ಕೃಷ್ಣನೋ ಸಮದಾನಿ.

ಬಣ್ಣದಲ್ಲೂ ಆಕಾರದಲ್ಲೂ, ಬದುಕುವ ರೀತಿಯಲ್ಲೂ ಇಬ್ಬರ ನಡುವೆ ವ್ಯತ್ಯಾಸಗಳು ಹಲವಿದ್ದರೂ, ಇಬ್ಬರ ನಡುವೆ ಒಂದು ಹೋಲಿಕೆ ಇತ್ತು. ಅಣ್ಣನ ಮೇಲೆ ತಮ್ಮನಿಗೂ, ತಮ್ಮನ ಮೇಲೆ ಅಣ್ಣನಿಗೂ ಇದ್ದ ಅಪರಿಮಿತವಾದ ಪ್ರೀತಿ….!

ಬಲರಾಮ ಕೃಷ್ಣನೊಂದಿಗೆ ಸೇರಿ ಸಂಹರಿಸಿದ ವೈರಿಗಳ ಸಂಖ್ಯೆ ಹೇಗೆ ಹೇರಳವೋ, ಅದೇ ರೀತಿಯಲ್ಲಿ ಬಲರಾಮ ಒಂಟಿಯಾಗಿ ನಿಂತು ಕೊಂದ ವೈರಿಗಳ ಸಂಖ್ಯೆಯೂ ದಾರಾಳವಾಗಿತ್ತು. ಅದನ್ನು ಮೈಂದ ವಧೆಯೊಂದಿಗೆ ಪ್ರಾರಂಭಿಸೋಣ  ಬನ್ನಿರಿ….

ನರಕಾಸುರ ಸಂಹಾರ ಮುಗಿಸಿ, ಜಯಶಾಲಿಯಾಗಿ ಹಿಂತಿರುಗಿದ ಕೃಷ್ಣನನ್ನು ಗೋಕುಲ ಸಂಭ್ರಮದಿಂದ ಕೊಂಡಾಡಲು ಕೋಲಾಹಲವಾಗಿ ಸಜ್ಜಾಗಿದ್ದ ಸಮಯದಲ್ಲಿ ಆ ನರಕಾಸುರನ ಗೆಳೆಯನೂ, ವಾನರ ಸೇನೆಯ ನಾಯಕನೂ ದ್ವಿವಿದನ ಸಹೋದರನೂ ಆದ ಮೈಂದ ಎಂಬ ವಾನರ ಅಸುರನೊಬ್ಬ, ತನ್ನ ಗೆಳೆಯನನ್ನು ಕೊಂದದ್ದರಿಂದ ಕಟುಕೋಪದಿಂದ ಕೃಷ್ಣನನ್ನು ಕೊಲ್ಲುವುದಾಗಿ ಹೇಳಿ ಹಲವು ಅಟ್ಟಹಾಸಗಳನ್ನು ಮಾಡಲು ತೊಡಗುತ್ತಾನೆ.

ಗೋವರ್ಧನಗಿರಿಯಲ್ಲಿ ವಾಸವಿದ್ದ ಮಾನವರನ್ನು, ತಪಸ್ಸು ಮಾಡುತ್ತಿದ್ದ ಮಹರ್ಷಿಗಳನ್ನು ಹೊಡೆದುಬಡಿದು ಹಿಂಸೆ, ಉಪಟಳ ಮಾಡಿ ಬಂದನು. ಆ ಸಮಯ ಅಲ್ಲಿಗೆ ಬಂದ ಬಾಲಕ ಬಲರಾಮ ತೊಟ್ಟಿದ್ದ ರೇಷ್ಮೆ ಪೀತಾಂಬರವನ್ನು ಎಳೆದು ಹರಿದು ಎಸೆದನು. ಒಂದು ಮರವನ್ನು ಬೇರುಸಮೇತ ಕಿತ್ತು ಬಲರಾಮನ ಜತೆಯಲ್ಲಿದ್ದ ಗೋಪಿಯರನ್ನು ಹೊಡೆದು ಅಟ್ಟಿಸಿದನು. ಅದರಿಂದ ಕೋಪಗೊಂಡ ಬಲರಾಮ, ತನ್ನ ಬರಿಗೈಯಿಂದ ಅವನನ್ನು ಬಳಸಿ ಅಪ್ಪಳಿಸಿ  ಗೆದ್ದನಂತೆ.

ಮುಂದೊಂದು ದಿನ ಗೋಕುಲದ ಬಾಲಕನಂತೆ ವೇಷ ಧರಿಸಿ ಬಂದ ಪ್ರಲಂಬಸುರ ಎಂಬ ಅಸುರ, ಯಾದವ ಬಾಲಕರೊಂದಿಗೆ ಆಟವಾಡುತ್ತಿದ್ದ ಬಲರಾಮನನ್ನು ತೋಳಿನಲ್ಲಿ ಹೊತ್ತುಕೊಂಡು ಹೋಗಿ ಕೊಲ್ಲಲು ಯತ್ನಿಸಿದನು.  ಬಲರಾಮನು ತನ್ನ ಕೈಬಲದಿಂದಲೇ ಪ್ರಲಂಬನನ್ನು ಅಳಿಸಿದನಂತೆ.

ನಂತರ ತಮ್ಮ ಕೃಷ್ಣನೊಂದಿಗೆ ಸೇರಿಕೊಂಡು ಧೇನುಕಾಸುರ, ಶಕತಸುರ, ಅರಿಷ್ಟಸುರ ಎಂಬ ಕಂಸನ ರಕ್ಕಸರೆಲ್ಲರನ್ನೂ ಜಯಗಳಿಸಿದ್ದಲ್ಲದೆ, ಮಥುರಾದಲ್ಲಿ ನಡೆದ ಮಲ್ಲಯುದ್ಧದಲ್ಲಿ ಮುಷ್ಟಿಕನನ್ನು ಗೆದ್ದು, ಕೃಷ್ಣನ ಕಂಸ ವಧೆಗೆ ಜತೆಯಾಗಿದ್ದವನೂ ಈ ಬಲರಾಮನೇ.

ಕಂಸನನ್ನು ಕೃಷ್ಣ ಅಳಿಸಿದಂತೆಯೇ, ಯದು ವಂಶವನ್ನು ಅಳಿಸಲು ಬಂದ ಕಂಸನ ಮಾವನಾದ ಜರಾಸಂಧನನ್ನು ನೇಗಿಲಿನೊಂದಿಗೆ ಯುದ್ಧಮಾಡಿ, ಗೆದ್ದವನೂ ಈ ಬಲರಾಮನೇ.

ಅಷ್ಟೊಂದು ಬಲವೂ, ಪರಾಕ್ರಮವೂ ತುಂಬಿದ ಒರಟು ಯುದ್ಧವೀರ ಬಲರಾಮ ಎಂದರೂ ತಮ್ಮ ಎಂದು ಬಂದಾಗ, ವಾತ್ಸಲ್ಯದಿಂದ ಕರಗಿಹೋಗುತ್ತಾನೆ ಈ ಬಲರಾಮ.

ಕೃಷ್ಣ ರುಕ್ಮಿಣಿಯನ್ನು ಪ್ರೀತಿಸುವುದು ತಿಳಿದಾಗ ಮೊದಲು ಕೃಷ್ಣನ ಪ್ರೀತಿಗೆ ಬೆಂಬಲ ನೀಡಿದ್ದು ಬಲರಾಮ. ಅವರ ಪ್ರೀತಿಯನ್ನು ವಿರೋಧಿಸಿದ ರುಕ್ಮಿಣಿಯ ಸಹೋದರ ರುಕ್ಮಿಯೊಂದಿಗೆ ಕಾದಾಡಿ, ಇಬ್ಬರಿಗೂ ವಿವಾಹ ಮಾಡಿಸಿದವನು ಬಲರಾಮ.

ಮುಂದೆ ಕುರುಕ್ಷೇತ್ರ ಯುದ್ಧದಲ್ಲಿ, ಬಂದುಗಳು ಯಾರ ಪರವೂ ವಹಿಸಲಾಗದೆ ಹೋದಾಗ, ಮಧ್ಯಸ್ಥಿಕೆ ಕಾಯಲು ತೀರ್ಥಯಾತ್ರೆ ಹೋರಟರೂ, ಕೃಷ್ಣನ ಗೆಲುವಿಗಾಗಿ ಪ್ರತಿಕ್ಷಣವೂ ಬಲರಾಮ ಪ್ರಾರ್ಥನೆ ಮಾಡಿದವನು.

ಬಲರಾಮ, ತನ್ನ ಸಹೋದರ ಕೃಷ್ಣನನ್ನು ಬಿಟ್ಟು, ಒಂದು ಕ್ಷಣವೂ ಅಗಲಿರಲಿಲ್ಲ. ಮರೆತೂ ಹೋಗಲಿಲ್ಲ ಎಂದು ಸದಾ ಹೆಮ್ಮೆಯಿಂದ ಹೇಳುಕೊಳ್ಳುವವನು.  

ಕೃಷ್ಣನ ಮೇಲೆ ಯಾಕೆ ಅಷ್ಟೊಂದು ಪ್ರೀತಿ ಬಲರಾಮನಿಗೆ…? ಯಾವ ಜನ್ಮದಲ್ಲಿ ತೊಡಗಿದ್ದು ಈ ವಾತ್ಸಲ್ಯದ ನಂಟು…?

ಕ್ಷೀರಸಮುದ್ರದಲ್ಲಿ ಶಯನಿಸಿರುವ ಶ್ರೀಮನ್ ನಾರಾಯಣನ ಸುಪ್ಪತ್ತಿಗೆಯಾದ, ಆದಿಶೇಷ ವಿಷ್ಣುವನ್ನು ಆಗಲಿ ಇರಲು ಇಚ್ಛಿಸದೆ ಕೃಷ್ಣಾವತಾರದಲ್ಲಿ ಬಲರಾಮನಾಗಿಯೂ, ಅದಕ್ಕೆ ಮೊದಲಿನ ರಾಮಾವತಾರದಲ್ಲಿ ಲಕ್ಷ್ಮಣನಾಗಿಯೂ ಅವತಾರ ತಾಳಿದ ಎಂದು ಪುರಾಣಗಳು ಹೇಳುತ್ತವೆ.

ರೋಗ ನಿರೋಧಕ, ರಕ್ಷಣೆ ಮತ್ತು ಶಾಂತಿಯ ಗುರುತಾಗಿ ನಮ್ಮ ವೈದ್ಯಕೀಯ ಚಿಹ್ನೆಯಾದ Caduceus –ಕ್ಯಾಡ್ಯುಸೆಸ್- ‘ಸರ್ಪದಂಡ’- ವೈದ್ಯಕೀಯ ಪ್ರತೀಕ/ಲಾಂಛನ) ಒಂದು ದಂಡದಲ್ಲಿ ಸುತ್ತಿಹಾಕಿಕೊಂಡಿರುವ ಎರಡು ಹಾವುಗಳು, ಅದಕ್ಕೆ ಮೇಲೆ ರೆಕ್ಕೆ ಬಿರಿದ ಗರುಡ ಇರುವುದನ್ನು ನೀವು ಗಮನಿಸಿರಬಹುದು. ಅದೇ ರೀತಿ ಶ್ರೀಮನ್ ನಾರಾಯಣನೊಂದಿಗೆ ಸದಾ ಜತೆಗಿರುವ ಆದಿಶೇಷ, ಗರುಡ ಎಂಬುದನ್ನೂ ಅವರೇ ಕಾಯುವ ದೇವರು ಎಂಬುದೂ  ನಮ್ಮನ್ನು ವಿಸ್ಮಯಕ್ಕೆ ಒಳಗಾಗಿಸುವ ಹೋಲಿಕೆ!

ಹೀಗೆ ಕೊಡೆಯಾಗಿ ನಿಂತು, ಉಳಿದವರ ನೆರಳೂ ಸಹ ತನ್ನ ನಾಯಕನ ಮೇಲೆ ಬೀಳದಂತೆ ನೋಡಿಕೊಂಡ ಈ ಆದಿಶೇಷ ಲಕ್ಷ್ಮಣನೇ, ರಾಮಾವತಾರದಲ್ಲಿ ರಾಮ ವನವಾಸಕ್ಕೆ ಸಿದ್ದವಾದಾಗ, ಅವನಿಗೆ ಮೊದಲೇ, ತಾನು ಮರದ ಪಾದುಕೆ ಧರಿಸಿ ನಿಂತನಂತೆ.

ರಾಮ ಸಹ ತನ್ನ ಪತ್ನಿ ಸೀತೆಯೊಂದಿಗೆ ವನ ಸೇರಿದನು. ಆದರೇ ಲಕ್ಷ್ಮಣನೋ ತನ್ನ ಸಹೋದರನನ್ನು ರಕ್ಷಿಸಲು, ತನ್ನ ಪತ್ನಿಯನ್ನು ಆಗಲಿ ಬಂದನು. ಲಕ್ಷ್ಮಣ ಎಂಬ ಆದಿಶೇಷನ ಭಕ್ತಿಯನ್ನು ಹೇಳಲು ಇಂತಹ ಹಲವು ಉದಾಹರಣೆಗಳು ಇದ್ದರೂ, ಕೇಳಿದ ಕೂಡಲೇ ಪುಳಕಗೊಳಿಸುವ ಯುದ್ಧಕಾಂಡದ ಸನ್ನಿವೇಶ ಒಂದಿದೆ.

ರಾಮ ರಾವಣನೊಂದಿಗೆ ಯುದ್ಧ ಮಾಡುವಾಗ, ರಾವಣ ತಕ್ಷಣ ಯುದ್ದಕ್ಕೆ ಖುದ್ದಾಗಿ ಬರಲಿಲ್ಲ. ಒಬ್ಬ ಸಾಮಾನ್ಯ ಮಾನವ ರಾಜ ತಾನೇ ಎಂದು ತನ್ನ ಪರವಾಗಿ ಯುದ್ಧವನ್ನು ನಡೆಸಲು ಹಲವರನ್ನು ಕಳುಹಿಸಿಕೊಟ್ಟನು. ಹಾಗೆ ಯುದ್ಧಕ್ಕೆ ಬಂದವರಲ್ಲಿ ಒಬ್ಬ ಇಂದ್ರಜಿತ್. ಶೌರ್ಯದಲ್ಲಿ ಶ್ರೇಷ್ಟನಾದ ಇಂದ್ರಜಿತನನ್ನು ಯುದ್ಧದಲ್ಲಿ ಯಾರಿಂದಲೂ ಸುಲಭವಾಗಿ ಗೆಲ್ಲಲಾಗಲಿಲ್ಲ. ಎಲ್ಲ ಪ್ರಯತ್ನಗಳೂ ಯುಕ್ತಿಗಳೂ ವ್ಯರ್ಥವಾಗಿ, ಮಂತ್ರ, ತಂತ್ರಗಳಿಂದಲೂ ಜಯಿಸಲಾಗದ ಇಂದ್ರಜಿತನನ್ನು ಲಕ್ಷ್ಮಣ ಯುದ್ಧದಲ್ಲಿ ಸೋಲಿಸುತ್ತಾನೆ.

ಇಂದ್ರಜಿತ್ ಯುದ್ಧದಲ್ಲಿ ಸೋತ ಸುದ್ಧಿ ತಿಳಿದ ವಿಭೀಷಣ ಅವನನ್ನು ಗೆದ್ದದ್ದು ಲಕ್ಷ್ಮಣ ಎಂಬ ಸುದ್ಧಿಯನ್ನು ಕೇಳಿದಾಗ ವಿಸ್ಮಯದಿಂದ ಲಕ್ಷ್ಮಣನನ್ನು ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡು ಕೈಜೋಡಿಸಿ ನಿಲ್ಲುತ್ತಾನೆ.

ಅದನ್ನು ಕಂಡ ರಾಮ…”ವಿಭೀಷಣ ! ಯಾಕೆ ಲಕ್ಷ್ಮಣನಿಗೆ ಹೀಗೆ ಆಶ್ಚರ್ಯದಿಂದ ಕೈಮುಗಿಯುತ್ತಿದ್ದೀಯಾ? ಏನು ಕಾರಣ?” ಎಂದು ಕೇಳಲು, ವಿಭೀಷಣ ಆಗ, “ಹದಿನಾಲ್ಕು ವರ್ಷಗಳು ನಿದ್ದೆ, ಆಹಾರವಿಲ್ಲದೆ ಇದ್ದವನೊಬ್ಬನಿಂದಲೇ, ತಾನು ಕೊಲ್ಲಲ್ಪಡಬೇಕೆಂದು ವರ ಪಡೆದು ಬಂದವನು ಇಂದ್ರಜಿತ್. ಹಾಗೊಂದು ವರಪಡೆದು ಬಂದವನ ಕೊಂದದ್ದು ಲಕ್ಷ್ಮಣ ಎಂದಾಗ ಹದಿನಾಲ್ಕು ವರ್ಷಗಳು ಆಹಾರವಿಲ್ಲದೆ, ನಿದ್ರೆಯಿಲ್ಲದೆ ನಮ್ಮೆದುರು ನಿಂತಿರುವ ಲಕ್ಷ್ಮಣನನ್ನು ವಂದಿಸಲೇ  ಬೇಕಲ್ಲವೇ !”  ಎಂದು ಮರ್ಯಾದೆಯಿಂದ ಹೇಳುತ್ತಾನೆ.

“ಹದಿನಾಲ್ಕು ವರ್ಷಗಳು ನನ್ನೊಂದಿಗೆ ಇದ್ದೇ. ನೀನು ನಿದ್ರೆಮಾಡಿದ್ದು ನೋಡಿರಲಿಲ್ಲ ಲಕ್ಷ್ಮಣ. ಆದರೆ ಉಣದೆಯೂ ಇದ್ದೆಯೇ?” ಎಂದು ರಾಮ ಆಶ್ಚರ್ಯದಿಂದ ಕೇಳಿದಾಗ, ಲಕ್ಷ್ಮಣ ನಗುತ್ತಾ ಉತ್ತರಿಸುತ್ತಾನೆ.

“ಅಣ್ಣ! ತಮ್ಮನ್ನೂ ಸೀತಾ ಮಾತೆಯನ್ನೂ ರಕ್ಷಿಸಲು, ಹಗಲು ಮಾತ್ರವಲ್ಲ ರಾತ್ರಿಯಲ್ಲೂ ನಿದ್ರಿಸಲಿಲ್ಲ. ತಮ್ಮೊಂದಿಗೆ ನಾನು ಕಾಡಿಗೆ ಹೊರಡುವಾಗ ಸುಮಿತ್ರಾ ಮಾತೆ ನನ್ನ ಬಳಿ, “ಕಾಡಿನಲ್ಲಿ ಆಹಾರ ಸಾಕಾಗುತ್ತದೆಯೇ ತಿಳಿಯದು. ಆದ್ದರಿಂದ ನಿನ್ನ ಅಣ್ಣನೂ, ಅತ್ತಿಗೆಯೂ ಆಹಾರ ಸೇವಿಸಿದಮೇಲೆ, ಆ ಎಲೆಯಲ್ಲಿ ಉಳಿಯುವುದನ್ನು ಮಾತ್ರವೇ ನೀನು ಉಣಬೇಕು…” ಎಂದು ಹೇಳಿ ಕಳುಹಿಸಿದಳು. ಆದರೆ ತಾವು ಉಂಡ ಎಂಜಲು ಎಲೆಯನ್ನು ತನ್ನ ಮೈದುನ ತೆಗೆಯಬಾರದೆಂಬ ಒಳ್ಳೆಯ ಭಾವನೆಯಿಂದ ತಾವು ಉಂಡ ನಂತರ, ಎಲೆಯನ್ನು ಅತ್ತಿಗೆಯೇ ತೆಗೆದುಹಾಕಿ, ಸ್ವಚ್ಛ ಮಾಡುತ್ತಿದ್ದರು. ಆದ್ದರಿಂದ ತಾವು ತಿಂದ ಪ್ರಸಾದವನ್ನು ಉಣುವ ಭಾಗ್ಯವೂ ನನಗೆ ದೊರಕಲಿಲ್ಲ…” ಎನ್ನುತ್ತಾನೆ.

ಹದಿನಾಲ್ಕು ವರ್ಷಗಳು ತನ್ನೊಂದಿಗೆ ಉಣದೆ, ನಿದ್ರಿಸದೆ ಇದ್ದು ತನಗಾಗಿಯೇ ಜೀವಿಸಿದ ತಮ್ಮನ ಪ್ರೀತಿಯನ್ನು ಅರಿತ ರಾಮಪ್ರಭು ಕಣ್ಣೀರಿನೊಂದಿಗೆ ಅವನನ್ನು ಆಲಿಂಗಿಸಿಕೊಂಡನಂತೆ.

ತನ್ನ ಅವತಾರಗಳಲ್ಲಿ ಶೇಷತ್ವಮ್, ಪಾರತಂತ್ರಿಯಂ, ಪಾರತಂತ್ರಿಯಕಾಷ್ಟಂ ಎಂಬ ಮೂರು ಬಗೆಯ ನೀತಿಗಳನ್ನು ಭಗವಂತ ಉಪದೇಶಿಸುತ್ತಾನೆ.

ಅದರಲ್ಲಿ ರಾಮಾವತರದಲ್ಲಿ, ಲಕ್ಷ್ಮಣ ರಾಮನಿಗೆ ಮಾಡಿದ ಧರ್ಮದ ಹೆಸರು ಶೇಷತ್ವಮ್. ಹಗಲೂ ರಾತ್ರಿ ಎಚ್ಚರಿಕೆಯಿಂದ, ಜತೆಯಿದ್ದು ತನ್ನನ್ನು ಅರ್ಪಿಸಿ ಸಹಾಯ ಮಾಡುವುದೇ ಶೇಷತ್ವ. ಹೀಗೆ ರಾಮಾವತಾರದಲ್ಲಿ ತನ್ನೊಂದಿಗೆ ಅಗಲದೆ, ತಮ್ಮನಾಗಿ ನಿಂತು ಯಾವ ಪ್ರತಿ ಉಪಕಾರವನ್ನೂ ನಿರೀಕ್ಷಿಸದೆ ಸದಾ ಜತೆ ನಿಂತ ಲಕ್ಷ್ಮಣನ ಸೇವೆಗೆ ಉತ್ತರವಾಗಿಯೇ ತಾನು ಏನು ಮಾಡುವುದು ಎಂದು ಆತಂಕಗೊಂಡ ಪರಂದಾಮ, ಅದೇ ರೀತಿಯಲ್ಲಿ ಅವನಿಗೆ ತಾನೂ ಸೇವೆ ಸಲ್ಲಿಸಿ ವಿಶೇಷ ಗೌರವ ನೀಡಬೇಕೆಂದು ಕೃಷ್ಣಾವತಾರದಲ್ಲಿ, ಅದೇ ಲಕ್ಷ್ಮಣನನ್ನು ತನ್ನ  ಅಣ್ಣ ಬಲರಾಮನಾಗಿ ಸೃಷ್ಟಿಸಿ, ಅವನಿಗೆ ಸೇವೆ ಮಾಡಿ ಪಾದಪೂಜೆ ಸಲ್ಲಿಸಿ, ತನ್ನ ಋಣವನ್ನು ತೀರಿಸಿಕೊಂಡನಂತೆ.

“ದೇವಮೇವಾಪರೇ  ಯಜ್ಞಮ್ ಯೋಗಿನಾ; ಪ್ರಿಯೂಬಾಸತೇ…” ಎನ್ನುತ್ತದೆ ಭಗವತ್ ಗೀತೆ !

ದೈವ ಪೂಜೆಯನ್ನು ಯಜ್ಞವಾಗಿ ಭಾವಿಸಿ ತನ್ನನ್ನೇ ಭಗವಂತನ ಬಳಿ ಸಮರ್ಪಣೆ ಮಾಡುವವನನ್ನು ತನ್ನೊಂದಿಗೆ ಸೇರಿಸಿ ಸುಲಭವಾಗಿ ಮೋಕ್ಷ ನೀಡುವವನು ಭಗವಂತ ಎಂಬುದು ಇದಕ್ಕೆ ಅರ್ಥ.

ತನ್ನನ್ನು ಕಾಯಾ, ವಾಚಾ, ಮನಸಾ ಎಂಬ ಇಂದ್ರಿಯಗಳನ್ನೆಲ್ಲಾ ನಿಗ್ರಹಿಸಿ ತನ್ನನ್ನು ಅರ್ಪಿಸಿದ ಲಕ್ಷ್ಮಣನಿಗೆ ತನ್ನ ಹತ್ತು ಅವತಾರಾಗಳಲ್ಲಿ ಎಂಟನೆಯ ಅವತಾರದಲ್ಲಿ ಲಕ್ಷ್ಮಣನ್ನೂ ಬಲರಾಮನನ್ನಾಗಿಸಿ ಉಡುಗೊರೆಯಾಗಿ ನೀಡಿದವನು ವಿಷ್ಣುವೇ.

“ಹೀಗೆ ತನಗೆ ಸೇವೆ ಸಲ್ಲಿಸುವುವರನ್ನು ಗೌರವಿಸಿ, ತಾನೇ ಅವರಿಗೆ ಸೇವೆ ಮಾಡುವ ಉನ್ನತ ಮನಸ್ಸುಳ್ಳವನನ್ನು, ಸರಳವಾದವನನ್ನು, ಎಲ್ಲರಿಗೂ ಇಷ್ಟವಾಗಿ ಇರುವ ಕೃಷ್ಣನನ್ನು ಪೂರ್ಣ ಮನಸ್ಸಿನಿಂದ ಪೂಜಿಸಿ, ಅವನ ದಯೆಯನ್ನು ಪಡೆಯೋಣ ಬನ್ನಿರಿ!” ಎಂದು ಹದಿನೇಳನೇಯ ದಿನದಂದು ಕರೆಯುತ್ತಾಳೆ ಗೋದೈ ಆಂಡಾಳ್….!

                                                                  ***

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply