ಅರಿವು ಹದ ಬೆರೆತ ಭಕ್ತ ಶ್ರೇಷ್ಠ : ಕನಕ ದಾಸರು

ಕನಕದಾಸರ ಬಗ್ಗೆ ನಾವು ಬಹುವಾಗಿ ಕೇಳಿರುವ ಕಥೆಗಳು ಮೂರು. ಮೊದಲನೆಯದು, ‘ದೇವರು ಇಲ್ಲದೆ ಇರುವಲ್ಲಿ ಬಾಳೆಹಣ್ಣು ತಿನ್ನುವ’ ಕಥೆ. ಎರಡನೆಯದು, ‘ಕೋಣ .. ಕೋಣ.. ಎಂದು ಜಪಿಸಿ ಕೋಣವೇ ಪ್ರತ್ಯಕ್ಷವಾದ ಕಥೆ. ಮತ್ತು ಮೂರನೆಯದು, ಸಾಕ್ಷಾತ್ ಉಡುಪಿ ಕೃಷ್ಣ ತಿರುಗಿ ದರ್ಶನ ನೀಡಿದ ಕಥೆ. ಸೂಕ್ಷ್ಮವಾಗಿ ಗಮನಿಸಿದರೆ, ಈ ಮೂರೂ ಕಥೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ ~ ಗಾಯತ್ರಿ


‘ಬಾಡ’ದ ತಿಮ್ಮಪ್ಪ ನಾಯಕ ಕಾಗಿನೆಲೆಯ ಕನಕದಾಸರಾದ ಕತೆ ನಮಗೆಲ್ಲ ತಿಳಿದಿದೆ. ದಾಸಶ್ರೇಷ್ಠ, ಉತ್ತಮ ಕವಿ, ಕರ್ನಾಟಕ ಸಂಗೀತಕ್ಕೆ ಮಹತ್ವದ ಕಾಣಿಕೆಯನ್ನಿತ್ತ ಸಾಧಕ, ಎಲ್ಲಕ್ಕಿಂತ ಮುಖ್ಯವಾಗಿ ಜ್ಞಾನಭಕ್ತಿಯ ಸಾಕಾರ ರೂಪ ಕನಕದಾಸರು.

ಕನಕದಾಸರ ಬಗ್ಗೆ ನಾವು ಬಹುವಾಗಿ ಕೇಳಿರುವ ಕಥೆಗಳು ಮೂರು. ಮೊದಲನೆಯದು, ‘ದೇವರು ಇಲ್ಲದೆ ಇರುವಲ್ಲಿ ಬಾಳೆಹಣ್ಣು ತಿನ್ನುವ’ ಕಥೆ. ಎರಡನೆಯದು, ‘ಕೋಣ .. ಕೋಣ.. ಎಂದು ಜಪಿಸಿ ಕೋಣವೇ ಪ್ರತ್ಯಕ್ಷವಾದ ಕಥೆ. ಮತ್ತು ಮೂರನೆಯದು, ಸಾಕ್ಷಾತ್ ಉಡುಪಿ ಕೃಷ್ಣ ತಿರುಗಿ ದರ್ಶನ ನೀಡಿದ ಕಥೆ.

ಸೂಕ್ಷ್ಮವಾಗಿ ಗಮನಿಸಿದರೆ, ಈ ಮೂರೂ ಕಥೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಇವು ಮೂರೂ ಭಗವಂತನ ಸರ್ವವ್ಯಾಪಕತೆಯನ್ನೂ ಕನಕರಿಗೆ ಅದರ ಕುರಿತು ಇದ್ದ ಅರಿವನ್ನೂ ಸಾರುತ್ತವೆ. ಇದನ್ನು ಸರಳವಾಗಿ ಹೇಳುವುದಾದರೆ; ‘ಭಗವಂತ ಎಲ್ಲೆಡೆ ಇದ್ದಾನೆ’, ‘ಭಗವಂತ ಎಲ್ಲದರಲ್ಲೂ ಇದ್ದಾನೆ’, ಮತ್ತು ‘ಎಲ್ಲೆಡೆಯಲ್ಲೂ ನಿಹಿತವಾಗಿರುವ ಭಗವಂತನನ್ನು ಜಾಗೃತಗೊಳಿಸಿ ಸಾಕ್ಷಾತ್ಕರಿಸಿಕೊಳ್ಳಬಹುದು’ – ಎಂಬ ಮೂರು ಹೊಳಹುಗಳು ಈ ಕಥೆಗಳಿಂದ ದೊರೆಯುತ್ತವೆ.
ಕನಕ, ಗುರುಗಳು ‘ಯಾರೂ ಇಲ್ಲದಲ್ಲಿ ಬಾಳೆ ಹಣ್ಣು ತಿನ್ನಿ’ ಅಂದಾಗ ಅದನ್ನು ತಿನ್ನದೆ ಇಟ್ಟುಕೊಂಡಿರುತ್ತಾನೆ. ಕಾರಣ ಕೇಳಿದರೆ, ‘ದೇವರು ಎಲ್ಲಡೆ ಇದ್ದಾನಲ್ಲ, ಇದ್ದ ಮೇಲೆ ನೋಡುತ್ತ ಇರುವುದು ಖಾತ್ರಿ. ಇನ್ನು ತಿನ್ನುವುದು ಹೇಗೆ!?” ಎಂಬ ಮರುಪ್ರಶ್ನೆ.

ಕನಕನ ಈ ತಿಳಿವಳಿಕೆಯೇ ಮುಂದೆ ಆತನಿಗೆ ಯಾರೋ ಒಬ್ಬರು ‘ಕೋಣ… ಕೋಣ…’ ಎಂದು ಜಪಿಸು, ಭಗವಂತ ಪ್ರತ್ಯಕ್ಷನಾಗುತ್ತಾನೆ ಎಂದಾಗ ಅದನ್ನು ನಂಬುವಂತೆ ಮಾಡಿದ್ದು. ಕನಕ ನನಗೆ ಮಂತ್ರ ನೀಡಿ ಎಂದು ಕೇಳಿಕೊಂಡಾಗ ಸೊಕ್ಕಿನ ಮನುಷ್ಯನೊಬ್ಬ ‘ಕೋಣ’ ಮಂತ್ರ ಕೊಡುತ್ತಾನೆ. ಅದನ್ನೇ ಅನುಸರಿಸಿ ‘ಕೋಣ ಜಪ’ ಮಾಡತೊಡಗಿದ ಕನಕನೆದುರು ನಿಜವಾಗಿಯೂ ಒಂದು ಕೋಣ ಬಂದು ನಿಲ್ಲುತ್ತದೆ. ಈ ಮೂಲಕ, ಕನಕ ‘ಎಲ್ಲೆಲ್ಲಿಯೂ ಇರುವ ಭಗವಂತ, ಎಲ್ಲ ಜೀವಿಗಳಲ್ಲೂ ಇರುತ್ತಾನೆ’ ಎಂಬ ತಿಳಿವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.

ಇದರ ಮುಂದಿನ ಹಂತ, ಹೀಗೆ ಎಲ್ಲೆಡೆ, ಎಲ್ಲದರಲ್ಲೂ ಇರುವ ಭಗವಂತನನ್ನು ಜಾಗೃತಗೊಳಿಸುವುದು. ಢಂಬಾಚಾರಿ ದುರುಳರು ದೇಗುಲದ ಎದುರು ಕಟ್ಟಿ ಹಾಕಿ ಚಾಟಿಯಿಂದ ಬೀಸಿ ಹೊಡೆಯುವಾಗ ಕನಕ ಆರ್ದ್ರನಾಗಿ ‘ಕೃಷ್ಣಾ’ ಎಂದು ಕರೆಯುತ್ತಾನೆ. ಅದರಲ್ಲಿ ಸಂಪೂರ್ಣ ಶರಣಾಗತಿ, ಕರೆದರೆ ಬಂದೇ ಬರುತ್ತಾನೆ ಎಂಬ ನಂಬಿಕೆ, ಕೃಷ್ಣ ಎಲ್ಲ ಜಡ – ಚೇತನದಲ್ಲೂ ನೆಲೆಸಿದ್ದಾನೆ, ಆತ ಉಪಸ್ಥಿತನಿಲ್ಲದ ವಸ್ತುವೇ ಇಲ್ಲ ಎಂಬ ತಿಳಿವುಗಳು ಮೇಳೈಸಿ ಕಲ್ಲಿನೊಳಗೆ ಕೃಷ್ಣ ಜಾಗೃತನಾಗುವಂತೆ ಮಾಡುತ್ತವೆ. ವಿಗ್ರಹ ತಿರುಗುತ್ತದೆ.

ಈ ಮೂರು ಕಥನಗಳು ಭಕ್ತಿಗೆ ಅರಿವು ಹದ ಬೆರೆತು ಸಾಕ್ಷಾತ್ಕಾರ ಪಡೆಯುವ ಮಾರ್ಗಕ್ಕೆ ಅತ್ಯುತ್ತಮ ನಿದರ್ಶನ. ಇಂದಿಗೂ ಕನಕ ದಾಸರು ಜನಮಾನಸದಲ್ಲಿ ನೆಲೆಸಿರುವುದು ಈ ಹೊಳಹುಗಳ ಹೊಳಪಿನಿಂದಲೇ.

ಇಂದು ಕನಕ ಜಯಂತಿ. ಕನಕ ದಾಸರಂತೆಯೇ ಜ್ಞಾನ, ಭಕ್ತಿ, ವಿವೇಕಗಳನ್ನು ಹೊಂದುವ ಕೊನೆಪಕ್ಷ ಬಯಕೆ ನಮ್ಮಲ್ಲಿ ಮೂಡಲಿ. ಇದು ನಮ್ಮ ಆಶಯ.

Leave a Reply